ಒಡಿಯೂರು ಶ್ರೀ ಗುರುದೇವ ದತ್ತ ಸಂಸ್ಥಾನಮ್ ನ ಒಡಿಯೂರು ಶ್ರೀ ವಿವಿಧೋದ್ದೇಶ ಸೌಹಾರ್ದ ಸಹಕಾರಿ ಸಂಘದ ನೂತನ ಅಧ್ಯಕ್ಷರಾಗಿ ಲೋಕನಾಥ ಜಿ ಶೆಟ್ಟಿಯವರು ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಶ್ರೀ ಗುರುದೇವದತ್ತ ಸಂಸ್ಥಾನದ ಜ್ಞಾನಮಂದಿರದಲ್ಲಿ ಉಪಾಧ್ಯಕ್ಷ ಲಿಂಗಪ್ಪಗೌಡ ಪನೆಯಡ್ಕ ಅವರ ಅಧ್ಯಕ್ಷತೆಯಲ್ಲಿ ನಡೆದ ಆಡಳಿತ ಮಂಡಳಿ ಸಭೆಯಲ್ಲಿ ರಿಟರ್ನಿಂಗ್ ಅಧಿಕಾರಿ, ಸಂಘದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ದಯಾನಂದ ಶೆಟ್ಟಿ ಬಾಕ್ರಬೈಲ್ ನೇತೃತ್ವದಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು. ಲೋಕನಾಥ ಜಿ ಶೆಟ್ಟಿಯವರು ಭಾರತೀ ಬಿಲ್ಡರ್ ಸಂಸ್ಥೆಯ ಆಡಳಿತ ನಿರ್ದೇಶಕರಾಗಿದ್ದಾರೆ. ಕೊಡಿಯಾಲ್ ಬೈಲ್ ಅರಸು ಪುಲಂದಾಯ ದೈವಸ್ಥಾನ, ಬಿಜೈ ಕೋರ್ದಬ್ಬು ದೈವಸ್ಥಾನ, ನಾಗಬ್ರಹ್ಮ ಕಲ್ಲುರ್ಟಿ ಕಲ್ಕುಡ ದೈವಸ್ಥಾನದ ಆಡಳಿತ ಮುಖ್ಯಸ್ಥರಾಗಿರುವ ಇವರು, ಸಹಕಾರಿಯ ನಿರ್ದೇಶಕರಾಗಿ, ಒಡಿಯೂರು ಶ್ರೀ ಸಂಸ್ಥಾನದ ಗ್ರಾಮೋತ್ಸವ ಸಮಿತಿ ಕಾರ್ಯಾಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.
ಶ್ರೀ ಗುರುದೇವಾನಂದ ಸ್ವಾಮೀಜಿ ಅವರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನೂತನ ಅಧ್ಯಕ್ಷರನ್ನು ಹಾಗೂ ನಿರ್ದೇಶಕರನ್ನು ಅಭಿನಂದಿಸಿ ಆಶೀರ್ವಚನ ನೀಡಿ, ಲೋಕನಾಥ ಜಿ ಶೆಟ್ಟಿ ಅವರ ನಿಷ್ಕಲ್ಮಶ ಸೇವೆ, ಶುದ್ಧ ನಡತೆಯೇ ಅವರನ್ನು ಇಷ್ಟು ಎತ್ತರಕ್ಕೆ ಬೆಳೆಸಿದೆ ಎಂದರು. ಸಾದ್ವಿ ಶ್ರೀ ಮಾತಾನಂದಮಯಿಯವರು ಮಾತನಾಡಿ, ಸಂಘಕ್ಕೆ ಸಹಕಾರ ಮಾಣಿಕ್ಯ ಪ್ರಶಸ್ತಿ ಬಂದಿರುವುದು ಶುಭ ಸೂಚಕ ಎಂದರು. ನಿರ್ದೇಶಕರಾದ ವೇಣುಗೋಪಾಲ ಮಾರ್ಲ, ಗಣಪತಿ ಭಟ್ ಸೇರಾಜೆ, ಕೆ ಸೋಮಪ್ಪ ನಾಯಕ್, ಕೆ ಮೋನಪ್ಪ ಪೂಜಾರಿ, ಎನ್ ಜಯಪ್ರಕಾಶ್ ರೈ, ಅಶೋಕ್ ಕುಮಾರ್ ಯು.ಎಸ್, ತಾರನಾಥ ಶೆಟ್ಟಿ, ಗಣೇಶ್ ಅತ್ತಾವರ, ಭವಾನಿಶಂಕರ ಶೆಟ್ಟಿ, ಶಾರದಾಮಣಿ ರೈ, ಸರಿತಾ ಅಶೋಕ್, ದೇವಪ್ಪ ನಾಯ್ಕ್ ಯು, ಕರುಣಾಕರ ಉಚ್ಚಿಲ್ ಉಪಸ್ಥಿತರಿದ್ದರು.





















































































































