‘ಯಕ್ಷಾಂಗಣ ಮಂಗಳೂರು’ ಯಕ್ಷಗಾನ ಚಿಂತನ – ಮಂಥನ ಮತ್ತು ಪ್ರದರ್ಶನ ವೇದಿಕೆ ನೇತೃತ್ವದಲ್ಲಿ ಮಂಗಳೂರು ವಿಶ್ವ ವಿದ್ಯಾನಿಲಯದ ಡಾ| ದಯಾನಂದ ಪೈ, ಸತೀಶ್ ಪೈ ಯಕ್ಷಗಾನ ಅಧ್ಯಯನ ಕೇಂದ್ರ ಮತ್ತು ಕರ್ನಾಟಕ ಯಕ್ಷಭಾರತಿ ಪುತ್ತೂರು ಸಹಯೋಗದಲ್ಲಿ ನವೆಂಬರ್ 22 ರಂದು ಮಂಗಳೂರಿನ ಹಂಪನಕಟ್ಟೆ ವಿಶ್ವವಿದ್ಯಾನಿಲಯ ಕಾಲೇಜು ರವೀಂದ್ರ ಕಲಾಭವನದಲ್ಲಿ ಕರ್ನಾಟಕ ರಾಜ್ಯೋತ್ಸವ ಕಲಾ ಸಂಭ್ರಮವಾಗಿ ಆಚರಿಸಲಾಗುವ ಹದಿನಾಲ್ಕನೇ ವರ್ಷದ ನುಡಿಹಬ್ಬ ‘ಯಕ್ಷಗಾನ ತಾಳಮದ್ದಲೆ ಸಪ್ತಾಹ -2026’ ಕಾರ್ಯಕ್ರಮವು ಉದ್ಘಾಟನೆಗೊಂಡಿತು. ಈ ಕಾರ್ಯಕ್ರಮವನ್ನು ಉದ್ಘಾಟಿಸಿದ ಹಿರಿಯ ವಿದ್ವಾಂಸ, ಯಕ್ಷಗಾನ ಅರ್ಥಧಾರಿ ಡಾ| ಎಂ. ಪ್ರಭಾಕರ ಜೋಶಿಯವರು ಮಾತನಾಡಿ, ವಿಭಿನ್ನ ರೀತಿಯ ಕಾರ್ಯಕ್ರಮ ಸಂಘಟನೆ, ಉತ್ಸವ ಹಾಗೂ ಆಚರಣೆಗಳಲ್ಲಿ ಹೊಸ ಬಗೆಯ ಪರಿಕಲ್ಪನೆ ತರುವ ಅಗತ್ಯವಿದೆ. ಕನ್ನಡದ ಶುದ್ಧ ರೂಪವೊಂದು ನಮ್ಮ ಕಲೆಗಳಲ್ಲಿದೆ. ಸುದೀರ್ಘ ಭವಿಷ್ಯದ ದೃಷ್ಟಿಯಲ್ಲಿ ಕನ್ನಡವನ್ನು ಸಮರ್ಪಕವಾಗಿ ಬಳಕೆ ಮಾಡಬೇಕು. ಭಾಷೆ ಬಳಕೆಯಲ್ಲಿದ್ದರೆ ಮಾತ್ರ ಉಳಿಯುತ್ತದೆ. ಕನ್ನಡದ ಉಳಿವಿನ ನಿಟ್ಟಿನಲ್ಲಿ ಯಕ್ಷಗಾನವೂ ಕೂಡ ಪ್ರಮುಖವಾಗಿದೆ. ವಿವಿಧ ವಲಯಗಳಲ್ಲಿ ಆಸ್ವಾದನೆಯ ಸ್ವರೂಪ ಬದಲಾಗಿರುವುದು ಯಕ್ಷಗಾನಕ್ಕೂ ಕೂಡ ಅಪಾಯಕಾರಿ. ಯಕ್ಷಗಾನ ಕಲೆ ಉಳಿಯಬೇಕಾದರೆ, ಪೋಷಣೆ ಅಗತ್ಯ. ಅಂತಹ ಪೋಷಣೆ ನೀಡುವ ಕಾರ್ಯವನ್ನು ಯಕ್ಷಾಂಗಣ ಮಾಡುತ್ತಿದೆ. ಕನ್ನಡ ಹಾಗೂ ಕಲೆ ಉಳಿಸುವ ನಿಟ್ಟಿನಲ್ಲಿ ಈ ಕಾರ್ಯ ಶ್ಲಾಘನೀಯ. ತಾಳಮದ್ದಲೆಯನ್ನು ಪ್ರೋತ್ಸಾಹಿಸುವ ಕಾರ್ಯಗಳು ಅಗತ್ಯವಾಗಿದ್ದು, ಯಕ್ಷಾಂಗಣದ ಕಾರ್ಯ ನಿರಂತರ ಮುಂದುವರಿಯಲಿ ಎಂದು ನುಡಿದರು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಪ್ರದೀಪ ಕುಮಾರ ಕಲ್ಕೂರ ಮಾತನಾಡಿ, ಕರಾವಳಿಯ ಜನತೆಯ ಭಾಷಾ ಶುದ್ದತೆ ಮತ್ತೊಂದು ಕಡೆ ಸಿಗದು. ಅದಕ್ಕೆ ಯಕ್ಷಗಾನದಂತಹ ಕಲೆಗಳೇ ಕಾರಣ ಎಂದರು. ಯಕ್ಷಾಂಗಣದ ಗೌರವಾಧ್ಯಕ್ಷ ಡಾ| ಎ.ಜೆ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಕ್ಷಾಂಗಣ ಸಂಸ್ಥೆಯ ಮೂಲಕ ಯಕ್ಷಗಾನ ಕಲೆ ಮತ್ತು ಕನ್ನಡ ಭಾಷೆಯ ಶ್ರೀಮಂತಿಕೆಯನ್ನು ಉಳಿಸುವ ನಿಟ್ಟಿನಲ್ಲಿ ಮತ್ತಷ್ಟು ಉತ್ತಮ ಕೆಲಸಗಳಾಗಲಿ, ತಾಳಮದ್ದಳೆ ಪ್ರಕಾರವನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ನಿರಂತರ ಪ್ರೋತ್ಸಾಹ ಸಿಗಲಿ ಎಂದರು.







ಸಮಾರಂಭದಲ್ಲಿ ಉದ್ಯಮಿ, ಕಲಾಪೋಷಕ, ಥಾಣೆ ಬಂಟ್ಸ್ ಅಸೋಸಿಯೇಷನ್ ನ ಮಾಜಿ ಅಧ್ಯಕ್ಷ ಹಾಗೂ ಬಜಪೆ ಬಂಟರ ಸಂಘದ ಅಧ್ಯಕ್ಷ ವೇಣುಗೋಪಾಲ ಎಲ್ ಶೆಟ್ಟಿ ಇವರಿಗೆ 2026ನೇ ಸಾಲಿನ ‘ಯಕ್ಷಾಂಗಣ ರಾಜ್ಯೋತ್ಸವ ಪುರಸ್ಕಾರ’ ನೀಡಿ ಗೌರವಿಸಲಾಯಿತು. ಧರ್ಮಪತ್ನಿ ಶಿಲ್ಪಾ ವಿ ಶೆಟ್ಟಿ ಜೊತೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ವೇಣುಗೋಪಾಲ ಶೆಟ್ಟಿ ಅವರು, ನಾವೆಲ್ಲಾ ಶೂನ್ಯದಿಂದ ಮೇಲೆ ಬಂದವರು. ದೈವ ಕೃಪೆಯಿಂದ ವ್ಯವಹಾರ ಕ್ಷೇತ್ರದಲ್ಲಿ ಒಂದಷ್ಟು ಸಾಧನೆ, ಸಂಪಾದನೆ ಹಾಗೂ ಜನಪ್ರೀತಿ ಗಳಿಸುವಂತಾಗಿದೆ. ಸಂಪಾದನೆಯ ಒಂದು ಭಾಗ ಸಮಾಜ ಮತ್ತು ಸಂಸ್ಕೃತಿಯ ಒಳಿತಿಗೆ ವಿನಿಯೋಗವಾಗುವುದರಲ್ಲಿ ಸಂತೃಪ್ತಿ ಇದೆ. ಇಂತಹ ಅಳಿಲ ಸೇವೆಯನ್ನು ಗುರುತಿಸಿ ಯಕ್ಷಾಂಗಣದಂತಹ ಪ್ರತಿಷ್ಠಿತ ಸಂಸ್ಥೆ ದೊಡ್ಡ ಮಟ್ಟದಲ್ಲಿ ಪ್ರಶಸ್ತಿ ನೀಡಿ ಸನ್ಮಾನಿಸುತ್ತಿರುವುದರಿಂದ ಧನ್ಯತೆ ತಂದಿದೆ ಎಂದರು. ಯಕ್ಷಾಂಗಣದ ಪ್ರಧಾನ ಸಂಚಾಲಕ ರವೀಂದ್ರ ರೈ ಕಲ್ಲಿಮಾರು ಸನ್ಮಾನ ಫಲಕ ವಾಚಿಸಿದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಸಿಎ ಎಸ್.ಎಸ್ ನಾಯಕ್, ಥಾಣೆ ಬಂಟರ ಸಂಘದ ನಿಕಟಪೂರ್ವ ಅಧ್ಯಕ್ಷ ಅಶೋಕ್ ಎಂ. ಶೆಟ್ಟಿ, ವಿವಿ ಕಾಲೇಜಿನ ಪ್ರಾಂಶುಪಾಲ ಡಾ| ಜಯವಂತ ನಾಯಕ್ ಮಾತನಾಡಿದರು. ನಿಟ್ಟೆ ಸಂಸ್ಥೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಹೇಮಂತ್ ಶೆಟ್ಟಿ, ಮಂಗಳೂರು ವಿವಿ ಯಕ್ಷಗಾನ ಕೇಂದ್ರದ ಡಾ| ಸತೀಶ್ ಕೋಣಾಜೆ ಅತಿಥಿಗಳಾಗಿದ್ದರು. ಯಕ್ಷಾಂಗಣದ ಕಾರ್ಯಾಧ್ಯಕ್ಷ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ಪ್ರಾಸ್ತಾವಿಕ ಮಾತುಗಳನ್ನಾಡಿ ಸ್ವಾಗತಿಸಿ, ಸುಧಾಕರ ರಾವ್ ಪೇಜಾವರ ವಂದಿಸಿ, ಡಾ| ವಿಶ್ಮಿತಾ ಶೆಟ್ಟಿ ಬೆಳ್ಳಾರೆ ಪ್ರಾರ್ಥಿಸಿದರು. ಪ್ರಧಾನ ಕಾರ್ಯದರ್ಶಿ ತೋನ್ಸೆ ಪುಷ್ಕಳ ಕುಮಾರ್ ಕಾರ್ಯಕ್ರಮ ನಿರೂಪಿಸಿದರು. ಉಪಾಧ್ಯಕ್ಷ ಎಂ ಸುಂದರ ಶೆಟ್ಟಿ ಬೆಟ್ಟಂಪಾಡಿ, ಕಾರ್ಯದರ್ಶಿಗಳಾದ ಕೆ. ಲಕ್ಷ್ಮಿ ನಾರಾಯಣ ರೈ ಹರೇಕಳ, ಸುಮಾ ಪ್ರಸಾದ್, ಪದಾಧಿಕಾರಿಗಳಾದ ಕರುಣಾಕರ ಶೆಟ್ಟಿ ಪಣಿಯೂರು, ಜಗದೀಶ ಪೂಜಾರಿ ಇರಾ ಆಚೆಬೈಲು, ಸಿದ್ಧಾರ್ಥ ಅಜ್ರಿ, ವಾಸಪ್ಪ ಶೆಟ್ಟಿ ಉಪಸ್ಥಿತರಿದ್ದರು. ಸಮಾರಂಭಕ್ಕೂ ಮುನ್ನ ನಡೆದ ‘ತೋರಣ ನಾಂದಿ’ ಕಾರ್ಯಕ್ರಮದಲ್ಲಿ ಹಿರಿಯ ಉದ್ಯಮಿ ಎ.ಕೆ ಜಯರಾಮ ಶೇಖ ಅವರು ನಾಂದಿ ದೀಪೋಜ್ವಲನ ಮಾಡಿದರು. ಬಳಿಕ ಬಾಯಾರು ಸಂಕಯ್ಯ ಭಾಗವತ ವಿರಚಿತ ತುಳು ಪಂಚವಟಿ ಪ್ರಸಂಗದ ‘ಬಂಗಾರ್ದ ಉರೆ’ ಭಾಗವನ್ನು ತುಳು ಯಕ್ಷಗಾನ ತಾಳಮದ್ದಳೆ ರೂಪದಲ್ಲಿ ಪ್ರಸ್ತುತ ಪಡಿಸಲಾಯಿತು. ಉದ್ಘಾಟನೆಯ ಕೊನೆಗೆ ಶ್ರೀ ಕಾಳಿಕಾಂಬ ಯಕ್ಷ ಕಲಾ ಪ್ರತಿಷ್ಠಾನ (ರಿ) ಉಪ್ಪಿನಂಗಡಿ ಅವರ ಸಂಯೋಜನೆಯಲ್ಲಿ ‘ಚಂದ್ರ ವಂಶೋದಯ’ ಯಕ್ಷಗಾನ ಕೂಟ ಜರಗಿತು.


















































































































