ವಡಾಲದ ಎನ್.ಕೆ.ಇ.ಎಸ್ ಶಾಲಾ ಕಟ್ಟಡ ಕೆಡವಲು ಸಿದ್ಧತೆ ನಡೆಯುತ್ತಿದ್ದು, ಇದೇ ಜಾಗದಲ್ಲಿ ನೂತನ ಎನ್.ಕೆ.ಇ.ಎಸ್ ಬೃಹತ್ ಶಾಲಾ ಕಟ್ಟಡವು ಸುಮಾರು 70 ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಲಿದೆ. ಆ ಪ್ರಯುಕ್ತ ಪ್ರಸ್ತುತ ಇರುವ ಎನ್.ಕೆ.ಇ.ಎಸ್ ಶಾಲೆಯ ಸಭಾಂಗಣದಲ್ಲಿ ಹಳೆ ವಿದ್ಯಾರ್ಥಿಗಳ ಒಂದು ಬ್ಯಾಚ್ ಸಮೂಹದ ಕಾರ್ಯಕ್ರಮವು ನವೆಂಬರ್ 14 ರಂದು ನಡೆಯಿತು. ಇನ್ನೊಂದು ಬ್ಯಾಚ್ ಸಮೂಹದ ಕಾರ್ಯಕ್ರಮವು ನವೆಂಬರ್ 21 ರಂದು ನಡೆಯಲಿದೆ. ನವೆಂಬರ್ 14 ರಂದು ನಡೆದ ಕಾರ್ಯಕ್ರಮದಲ್ಲಿ ಮುಂಬಯಿಯ ಖ್ಯಾತ ಹೃದಯ ರೋಗ ತಜ್ಞ ಡಾ. ಸದಾನಂದ ಆರ್ ಶೆಟ್ಟಿ ಅವರಿಂದ ಹೃದಯ ರೋಗ ಸಂಬಂಧಿತ ವೈದ್ಯಕೀಯ ಉಪನ್ಯಾಸ ನಡೆಯಿತು. ಹೃದಯ ರೋಗ ತಜ್ಞ ಡಾ. ಸದಾನಂದ ಆರ್ ಶೆಟ್ಟಿ ಅವರು ಉಪನ್ಯಾಸ ನೀಡಿ ಮಾತನಾಡಿ, ಪ್ರತಿಯೊಬ್ಬರೂ ತಮ್ಮ ಶರೀರದ ಸಮತೋಲನವನ್ನು ಕಾಪಾಡಿಕೊಳ್ಳುವುದರ ಜೊತೆಗೆ ನಿಯಮಿತ ಆಹಾರದೊಂದಿಗೆ ವ್ಯಾಯಾಮ, ಯೋಗಭ್ಯಾಸ ಮಾಡಬೇಕು. ಪ್ರತಿಯೊಬ್ಬರೂ ಪ್ರತಿದಿನ ಕನಿಷ್ಠ ಅರ್ಧಗಂಟೆಯಿಂದ ಒಂದು ಗಂಟೆಯ ತನಕ ವಾಕಿಂಗ್ ಮಾಡಬೇಕು. ಸಾಧ್ಯವಾದಷ್ಟು ನಡೆಯುವುದು ಎಲ್ಲಕ್ಕಿಂತಲೂ ಉತ್ತಮ ವ್ಯಾಯಾಮ ಎಂದರು. ಶರೀರದಲ್ಲಿ ಯಾವುದೇ ಪ್ರಕಾರದ ಕಾಯಿಲೆ ಕಂಡು ಬಂದಲ್ಲಿ ಕೂಡಲೇ ವೈದ್ಯರನ್ನು ಸಂಪರ್ಕಿಸಬೇಕು ಎಂದರು. ಈ ಸಂದರ್ಭ ವೇದಿಕೆಯಲ್ಲಿ ಡಾ. ಸದಾನಂದ ಆರ್ ಶೆಟ್ಟಿ, ಡಾ. ಹರೀಶ್ಚಂದ್ರ ಶೆಟ್ಟಿ, ಡಾ. ಮಂಜುನಾಥ್, ಶ್ರೀ ಮಂಜುನಾಥಯ್ಯ, ಅಧ್ಯಕ್ಷ ಪಾರ್ಥಸಾರಥಿ ನಾಯಕ್, ಭವಾನಿ ಭಾರ್ಗವ, ಸರೋಜ ರಾವ್, ಪ್ರೊ. ಡಾ| ಉಪಾಧ್ಯಾಯ, ಪ್ರಿನ್ಸಿಪಲ್ ನಿತಿನ್ ಶುಕ್ಲ, ಸುನಿಲ್ ಹರಿಬಲ್, ಯಶೋಧಾ ಶೆಟ್ಟಿಗಾರ್ ಮೊದಲಾದವರು ವೇದಿಕೆಯಲ್ಲಿದ್ದರು. ಸುನಿಲ್ ಹರಿಬಲ್ ಕಾರ್ಯಕ್ರಮ ನಿರೂಪಿಸಿದರು. ಹಳೆ ವಿದ್ಯಾರ್ಥಿಗಳು ತಮ್ಮ ಶಾಲೆಯ ಹಳೆಯ ನೆನಪುಗಳನ್ನು ಮರುಕಳಿಸುವ ಸಲುವಾಗಿ ನವೆಂಬರ್ 21ರವರೆಗೆ ಮರಳಿ ಶಾಲೆಯನ್ನೊಮ್ಮೆ ನೋಡಲು ಸುವರ್ಣ ಅವಕಾಶವಿದೆ.





















































































































