ಸಂಘದ ಮೇಲಿನ ಪ್ರೀತಿ, ಸೇವೆ ಮಾಡುವ ತುಡಿತ ಮತ್ತು ಜೊತೆ ನಿಲ್ಲುವ ದಾನಿಗಳು, ಸೇವಾಕರ್ತ ತುಳುವರು, ಸೇವೆಗೆ ಹೆಗಲಿಗೆ ಹೆಗಲು ಕೊಡುವವರು ಇದ್ದರೆ, ನಾವು ಹಾಕಿಕೊಂಡ ಯಾವುದೇ ಯೋಜನೆ, ಗುರಿಯನ್ನು ಮುಟ್ಟಬಹುದು ಮತ್ತು ಸಾಧಿಸಬಹುದು. ಸಾಮಾಜಿಕ ಸೇವೆಗಳಿಗೆ ಧನ ಸಂಪತ್ತು ಮತ್ತು ಜನ ಸಂಪತ್ತು ಎರಡು ಬೇಕೇ ಬೇಕು. ಜವಾಬ್ದಾರಿ ವಹಿಸಿಕೊಂಡ ನಾವು ಅದಿಕಾರಕ್ಕಿಂತ ಮೊದಲಾಗಿ ಜನರ ಸೇವೆಗೆ ಒತ್ತು ಕೊಟ್ಟು ಕಿಂಚಿತ್ತೂ ಸೇವೆಯನ್ನು ಸಮಾಜಕ್ಕಾಗಿ ಅರ್ಪಿಸುವ ಧ್ಯೇಯವನ್ನು ಇಟ್ಟುಕೊಂಡರೆ ಅದನ್ನು ಪೂರ್ಣಗೊಳಿಸಬಹುದು ಎಂಬ ಭರವಸೆ ಬರುತ್ತದೆ. ನಾವು ತುಳುಕೂಟದ ಪದವಿ ಪಡೆದಾಗ ಇದೇ ಧ್ಯೇಯವನ್ನು ಇಟ್ಟುಕೊಂಡು ಬಂದವರು. ಯಾವುದೇ ಕಾರ್ಯ ಮಾಡಿದರೂ ಅರ್ಥಪೂರ್ಣವಾಗಿ ಸಮಾಜಕ್ಕೆ ಅರ್ಪಣೆಯಾಗಬೇಕು. ನಮಗೆ ಬಹಳಷ್ಟು ತುಳುವರು, ದಾನಿಗಳು, ನಮ್ಮ ಟ್ರಸ್ಟಿಗಳು, ಪದಾಧಿಕಾರಿಗಳು ಸಹಕಾರ ನೀಡಿದ್ದರಿಂದ ತುಳುಕೂಟಕ್ಕೆ ಯಾವುದೇ ರೀತಿಯ ತೊಂದರೆ ನ್ಯೂನತೆಗಳಿಲ್ಲದೇ ಸ್ವಂತ ಮಿನಿ ಹಾಲ್ ಮಾಡಿಕೊಡುವ ದೊಡ್ಡ ಸೇವೆ ನಮ್ಮಿಂದಾಯಿತು. ಮುಖ್ಯವಾಗಿ ನಾನು ಅಹಮದ್ ನಗರದ ಕೆ.ಕೆ ಶೆಟ್ಟ, ಪುಣೆಯ ಕರುಣಾಕರ ಶೆಟ್ಟಿ ಸಮುದ್ರ ಮತ್ತು ಅಜಿತ್ ಹೆಗ್ಡೆ ಕೆಂಜಾರು ಗುತ್ತುರವರು ನೀಡಿದ ಸಹಕಾರದಿಂದ ಇಷ್ಟು ಬೇಗ ಮಿನಿ ಹಾಲ್ ಆಗಲು ಕಾರಣವಾಯಿತು. ಅವರಿಗೆ ಅಭಾರಿಯಾಗಿದ್ದೇವೆ. ಅದೇ ರೀತಿ ಆಕಸ್ಮಿಕ ಸಮಯದಲ್ಲಿ ಕೆಲವು ತುಳುವರ ಕಷ್ಟ ಕಾಲದಲ್ಲಿ ಕೂಡಾ ತುಳುಕೂಟ ಅರ್ಥಿಕ ಸಹಾಯ ಬೆಂಬಲ ನೀಡುತ್ತಾ ಬಂದಿದೆ. ಪ್ರತಿಯೊಬ್ಬ ವ್ಯಕ್ತಿಯೂ ತನಗೆ ತಾನೇ ವಿಕಾಸಗೊಂಡು ತನ್ನ ನಿರ್ದಿಷ್ಟ ಮಟ್ಟವನ್ನು ತಲುಪಿದಾಗ ಸಂತೃಪ್ತಿಯನ್ನು ಹೊಂದುತ್ತಾನೆ. ಅಂತಹ ಸಮಯದಲ್ಲಿ ನಮಗೆ ಸಮಾಜ ಸೇವೆ ಮಾಡುವ ಗುಣ ಕೂಡಾ ಬರಬೇಕು. ಸಂಘಟನೆ ಮಾಡುವುದು ಸುಲಭ ಆದರೆ ಅದರ ಗುರಿ ಮುಟ್ಟಲು ಚಿಂತನಾಶೀಲ, ಸಂಘಟನಾತ್ಮಕ ಛಲ, ದೃಡ ಸಂಕಲ್ಪ ಬೇಕು. ಹೃದಯದಲ್ಲಿ ಕರುಣೆ, ಸಮಾನತೆ, ಮಾನವೀಯ ಮೌಲ್ಯಗಳು ಮತ್ತು ಸಹಭಾಗಿತ್ವ ಎಂಬ ಆಶಾಭಾವ ನಮ್ಮಲ್ಲಿ ಇದ್ದರೆ ಯಾವ ರೀತಿಯಿಂದಲಾದರೂ ಸೇವೆ ಮಾಡಿ ತೋರಿಸಬಹುದು. ನಾವು ಮತ್ತು ತುಳುವರೆಲ್ಲರೂ ನಮ್ಮವರು ಎಂಬ ಸಮಷ್ಟಿ ರೂಪದಲ್ಲಿ ಸೇವೆ ಮಾಡಿದರೆ ಅದು ಪುಣ್ಯಸೇವೆಗೆ ಸಲ್ಲುತ್ತದೆ. ಮನುಷ್ಯನಲ್ಲಿರುವ ಸೇವಾ ಮನೋಭಾವವೇ ಸಮಾಜ ಸೇವೆಗೆ ಮೂಲ ವಸ್ತುವಾಗುತ್ತದೆ ಎಂದು ಪುಣೆ ತುಳುಕೂಟದ ಅಧ್ಯಕ್ಷರಾದ ದಿನೇಶ್ ಶೆಟ್ಟಿ ಕಳತ್ತೂರು ನುಡಿದರು.




ತುಳುಕೂಟ ಪುಣೆ ಇದರ 28ನೇ ವಾರ್ಷಿಕ ಮಹಾಸಭೆಯು ನವೆಂಬರ್ 4 ರಂದು ಪುಣೆಯ ಕರ್ವೆ ನಗರದ ಶೌರ್ಯ ರಿಜೆನ್ಸಿಯ ಬ್ಯಾಂಕ್ವೆಟ್ ಹಾಲ್ ನಲ್ಲಿ ಜರಗಿತು. ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ದಿನೇಶ್ ಶೆಟ್ಟಿಯವರು ತುಳುವರಿಗಾಗಿ ಜವಾಬ್ದಾರಿಯುತವಾದ ಸಂಸ್ಥೆಯಾಗಿ ತುಳುಕೂಟ ನಡೆಯುತ್ತಿದೆ. ನಮ್ಮ ತುಳು ಬಾಷೆ, ಕಲೆ, ಸಂಸ್ಕ್ರತಿ, ಅಚಾರ ವಿಚಾರಗಳಿಗೆ ಒತ್ತು ನೀಡುತ್ತಾ ಅದರ ಬೆಳವಣಿಗೆ ದುಡಿಯುತ್ತಿದೆ. ತುಳು ಬಾಷೆಯನ್ನು ಕರ್ನಾಟಕ ರಾಜ್ಯದ ಎರಡನೇ ಬಾಷೆಯಾಗಿ ಘೋಷಿಸುವಂತೆ ತುಳುಕೂಟ ಕೂಡಾ ಕರ್ನಾಟಕದ ಮುಖ್ಯಮಂತ್ರಿ, ಸಚಿವರು, ಶಾಸಕರು, ಸಂಸದರು, ಬಹಳಷ್ಟು ಮಂದಿಗೆ ನಿರಂತರವಾಗಿ ಮನವಿ ಸಲ್ಲಿಸುವ ಮೂಲಕ ಒತ್ತಾಯ ಮಾಡುತ್ತಾ ಬಂದಿತ್ತು. ಈ ಬಾರಿ ತುಳು ಬಾಷೆಗೆ ರಾಜ್ಯದ ಎರಡನೇ ಬಾಷೆಯಾಗಿ ಮಾನ್ಯತೆ ಸಿಕ್ಕಿದೆ ಇದು ನಮಗೆ ಬಹಳ ಸಂತೋಷದ ವಿಷಯ. ನನ್ನ ಕಾರ್ಯ ಯೋಜನೆಗಳಿಗೆ ದಾನಿಗಳು, ಟ್ರಸ್ಟಿಗಳು, ನಮ್ಮ ಸಮಿತಿಯ ಪದಾಧಿಕಾರಿಗಳು, ಮಹಿಳಾ ವಿಭಾಗ, ಯುವ ವಿಭಾಗದವರು ಉತ್ತಮ ರೀತಿಯಲ್ಲಿ ಸಹಕಾರ ನೀಡಿದ್ದಾರೆ. ಮುಂದೆಯೂ ತುಳುಕೂಟದ ಅಭಿವೃದ್ದಿಗೆ ಸಹಕರಿಸಿ ತುಳುವರ ಸೇವೆಗೆ ನಾವು ಕಟಿಬದ್ದರಾಗೋಣ ಎಂದರು.

ಪುಣೆ ತುಳು ಕೂಟದ ಅಧ್ಯಕ್ಷ ದಿನೇಶ್ ಶೆಟ್ಟಿ ಕಳತ್ತೂರುರವರ ಅಧ್ಯಕ್ಷತೆಯಲ್ಲಿ ಜರಗಿದ ಮಹಾಸಭೆಯ ವೇದಿಕೆಯಲ್ಲಿ ತುಳುಕೂಟದ ತುಳುಕೂಟದ ಗೌರವಾಧ್ಯಕ್ಷ ಮೋಹನ್ ಶೆಟ್ಟಿ ಎಣ್ಣೆಹೊಳೆ, ರಜತ ಮಹೋತ್ಸವ ಸಮಿತಿಯ ಅಧ್ಯಕ್ಷರಾಗಿದ್ದ ಪ್ರವೀಣ್ ಶೆಟ್ಟಿ ಪುತ್ತೂರು, ಉಪಾಧ್ಯಕ್ಷರಾದ ಮಾಧವ ಶೆಟ್ಟಿ, ಉದಯ್ ಶೆಟ್ಟಿ ಕಳತ್ತೂರು, ಶೇಖರ್ ಪೂಜಾರಿ, ಪ್ರಧಾನ ಕಾರ್ಯದರ್ಶಿ ರಾಜಾರಾಮ್ ಶೆಟ್ಟಿ, ಕೋಶಾಧಿಕಾರಿ ಸಿಎ ಮನೋಹರ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಪ್ರಿಯಾ ಎಚ್ ದೇವಾಡಿಗ, ಯುವ ವಿಭಾಗದ ಕಾರ್ಯಾಧ್ಯಕ್ಷ ಆಕಾಶ್ ಶೆಟ್ಟಿಯವರು ಉಪಸ್ಥಿತರಿದ್ದು, ದೀಪ ಬೆಳಗಿಸಿ ಮಹಾಸಭೆಗೆ ಚಾಲನೆ ನೀಡಿದರು. ತುಳುಕೂಟದ ಉಪಾಧ್ಯಕ್ಷರಾದ ಉದಯ್ ಶೆಟ್ಟಿ ಕಳತ್ತೂರು ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಾಜಾರಾಮ್ ಶೆಟ್ಟಿಯವರು ತುಳುಕೂಟದ ವಾರ್ಷಿಕ ಕಾರ್ಯಕ್ರಮಗಳ ಬಗ್ಗೆ ವರದಿಯನ್ನು ಸಲ್ಲಿಸಿದರು ಹಾಗೂ ಕೋಶಾಧಿಕಾರಿ ಸಿ.ಎ ಮನೋಹರ ಶೆಟ್ಟಿಯವರು ವಾರ್ಷಿಕ ಲೆಕ್ಕಪತ್ರವನ್ನು ಮಂಡಿಸಿ ಅನುಮೊದನೆ ಪಡೆದರು. ಸಂಘದ ಮುಂದಿನ ಯೋಜನೆ ಕಾರ್ಯಕ್ರಮಗಳ ಬಗ್ಗೆ ಸದಸ್ಯರ ಸಲಹೆ ಸೂಚನೆಗಳನ್ನೂ ಅಂಗೀಕರಿಸಲಾಯಿತು. ಈ ಸಂದರ್ಭದಲ್ಲಿ ತುಳುಕೂಟದ 2026 -28 ನೇ ಸಾಲಿಗೆ ನೂತನ ಸಮಿತಿಯನ್ನು ಆಯ್ಕೆ ಮಾಡಲಾಯಿತು. ವೇದಿಕೆಯಲ್ಲಿದ್ದ ಶೇಖರ್ ಪೂಜಾರಿ, ಮನೋಹರ ಶೆಟ್ಟಿ, ನಾರಾಯಣ ಹೆಗ್ಡೆ, ಪ್ರಕಾಶ್ ಪೂಜಾರಿ ಮತ್ತು ಪದಾಧಿಕಾರಿಗಳು ಸಾಂದರ್ಭಿಕವಾಗಿ ಮಾತನಾಡಿದರು. ಸಭೆಯಲ್ಲಿದ್ದ ಸಮಿತಿಯ ಸದಸ್ಯರು ಸಲಹೆ ಸೂಚನೆ ಮತ್ತು ತುಳುಕೂಟದ ಬಗ್ಗೆ ಮೆಚ್ಚುಗೆಯ ಮಾತುಗಳನ್ನು ಆಡಿ ಮುಂದಿನ ಯೋಜನೆಗಳಿಗೆ ಸಹಕಾರ ನೀಡುವ ಭರವಸೆ ನೀಡಿದರು. ಸಭೆಯಲ್ಲಿ ಟ್ರಸ್ಟಿಗಳಾದ ಸದಾಶಿವ ಸಾಲ್ಯಾನ್, ತುಳುಕೂಟದ ಸಮಿತಿ ಪದಾಧಿಕಾರಿಗಳಾದ ನಾರಾಯಣ ಹೆಗ್ಡೆ, ಆನಂದ್ ಶೆಟ್ಟಿ ಮಡಂತ್ಯಾರ್, ಯಶವಂತ್ ಶೆಟ್ಟಿ ಉಳಾಯಿಬೆಟ್ಟು, ಪ್ರಕಾಶ್ ಪೂಜಾರಿ ದೊಂಡೆರಂಗಡಿ, ಮಹಾಬಲೇಶ್ವರ್ ದೇವಾಡಿಗ, ಜಗದೀಪ್ ಶೆಟ್ಟಿ, ನವೀನ್ ಬಂಟ್ವಾಳ್, ತಾರಾನಾಥ್ ಶೆಟ್ಟಿ ಮಡಂತ್ಯಾರ್, ಶರತ್ ಭಟ್, ಸತೀಶ್ ದೇವಾಡಿಗ, ವಿಟ್ಟಲ್ ಮೂಲ್ಯ, ಚಂದ್ರಹಾಸ ಶೆಟ್ಟಿ, ಸುಕೇಶ್ ಶೆಟ್ಟಿ, ಹಿತೇಶ್ ಶೆಟ್ಟಿ, ಗೀತಾ ಪೂಜಾರಿ, ನಯನಾ ಶೆಟ್ಟಿ, ಶಶಿಕಾಂತಿ ದೇವಾಡಿಗ, ಸುಕನ್ಯಾ ಶೆಟ್ಟಿ, ಸರಸ್ವತಿ ಕುಲಾಲ್, ಗೀತಾ ದೇವಾಡಿಗ ಮತ್ತು ಮಹಿಳಾ ವಿಭಾಗ, ಯುವ ವಿಭಾಗದ ಪದಾಧಿಕಾರಿಗಳು ಸಭೆಯಲ್ಲಿ ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ರಾಜಾರಾಮ್ ಶೆಟ್ಟಿ ಮತ್ತು ಉದಯ್ ಶೆಟ್ಟಿ ಕಳತ್ತೂರು ಕಾರ್ಯಕ್ರಮ ನಿರೂಪಿಸಿ, ವಂದಿಸಿದರು.
ಚಿತ್ರ, ವರದಿ : ಹರೀಶ್ ಮೂಡುಬಿದ್ರಿ


















































































































