ಸಾಮಾಜಿಕ ಸೇವೆ ಮಾಡುವಾಗ ನಮ್ಮಲ್ಲಿ ಭಯ ಇರಬಾರದು. ಸಿಕ್ಕಿದ ಅವಕಾಶವನ್ನು ಸಮರ್ಥ ರೀತಿಯಲ್ಲಿ ನಿರ್ವಹಿಸಬೇಕು. ನನಗೆ 39 ವರ್ಷಗಳಿಂದ ಬಂಟರ ಸಂಘದಲ್ಲಿ ಸೇವೆ ಮಾಡುವ ಭಾಗ್ಯ ಒದಗಿದೆ. ಸಂಘಕ್ಕೆ ಅಧ್ಯಕ್ಷನಾಗಬೇಕೆಂಬ ಹಂಬಲವಿರಲಿಲ್ಲ. ಅನಿರೀಕ್ಷಿತವಾಗಿ ಬಂದ ಜವಾಬ್ದಾರಿಯನ್ನು ನಿರ್ವಹಿಸುವ ಕಾರ್ಯವನ್ನು ಮಾಡಿದ್ದೇನೆ. ಸಾಮಾಜಿಕ ಸೇವೆ ಮಾಡುವಾಗ ನಮ್ಮಲ್ಲಿ ಮತ ಭೇದ ಬರುವುದು ಸಹಜ. ಆದರೆ ಮನಭೇದ ಬರಬಾರದು. ಅದರಿಂದ ವೈರತ್ವ ಬೆಳೆಯುತ್ತದೆ ಮತ್ತು ಸಂಘ ಸಂಸ್ಥೆಗಳು ವಿಂಗಡವಾಗುತ್ತದೆ ಎಂದು ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ನುಡಿದರು. ಅಕ್ಟೋಬರ್ 11ರಂದು ನಾಲಾಸೋಪಾರ ಪೂರ್ವದ ಫೈರ್ ಬ್ರಿಗೇಡ್ ಸಮೀಪದ ರೀಜನ್ಸಿ ಬ್ಯಾಂಕ್ವೆಟ್ ಹಾಲ್ನಲ್ಲಿ ಬಂಟರ ಸಂಘ ಮುಂಬಯಿ ವಸಾಯಿ ದಹಾಣು ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ವತಿಯಿಂದ ನವರಾತ್ರಿಯ ಪ್ರಯುಕ್ತ ಆಯೋಜಿಸಿದ ‘ಮಾತಾ ಕಿ ಚೌಕಿ’ ನವರಾತ್ರೋತ್ಸವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರು ದೀಪ ಬೆಳಗಿಸಿ ಮಾತನಾಡಿದರು. ಈ ಪ್ರಾದೇಶಿಕ ಸಮಿತಿಯಲ್ಲಿ ಶಶಿಧರ್ ಶೆಟ್ಟಿಯವರಂತಹ ಸೇವಾಕರ್ತರು ಸೇವಾ ಮನೋಭಾವನೆಯಿಂದ ಇಲ್ಲಿ ಕಾರ್ಯಕ್ರಮಗಳಲ್ಲಿ ಸಾವಿರಾರು ಸಂಖ್ಯೆಯಲ್ಲಿ ಉತ್ಸಾಹದಿಂದ ಪಾಲ್ಗೊಳ್ಳುತ್ತಾರೆ. ಎಲ್ಲರೂ ಒಗ್ಗಟ್ಟಿನಿಂದ ಸಂಘವನ್ನು ಅಭಿವೃದ್ಧಿಪಡಿಸುವ ಸೇವೆಯಲ್ಲಿ ತೊಡಗಿಕೊಳ್ಳಬೇಕು. ಸಂಘಕ್ಕೆ ನೂರು ವರ್ಷದ ಸಂಭ್ರಮದ ಹೊಸ್ತಿಲಿನಲ್ಲಿ ಇದೆ. ನೂತನ ಅಧ್ಯಕ್ಷರ ಆಯ್ಕೆ ಪ್ರಕ್ರಿಯೆಯು ಕೂಡಾ ನಡೆಯಲಿದೆ. ಚುನಾವಣೆ ನಡೆದರೆ ಸಮರ್ಥ ಅಧ್ಯಕ್ಷನನ್ನು ಆಯ್ಕೆ ಮಾಡುವ ಜವಾಬ್ದಾರಿ ಸದಸ್ಯರಿಗಿದೆ. ಪ್ರತಿಯೊಬ್ಬ ಬಂಟರಿಗೂ ಸಂಘದ ಅಧ್ಯಕ್ಷನಾಗುವ ಯೋಗ್ಯತೆ ಇದೆ. ಯಾರಿಗೆ ಯೋಗ ಇದೆ ಅವರು ಅಧ್ಯಕ್ಷರಾಗುತ್ತಾರೆ. ಅವಸರ ಮಾಡಿದರೆ ಬಹಳಷ್ಟು ಕಠಿಣವಾಗುತ್ತದೆ. ಇಲ್ಲಿ ಇಷ್ಟೊಂದು ಸಂಖ್ಯೆಯಲ್ಲಿ ಮಹಿಳೆಯರು ಸೇರಿಕೊಂಡಿದ್ದೀರಿ. ಇಂಥಹ ಕಾರ್ಯಕ್ರಮದಲ್ಲಿ ನಾವು ಒಬ್ಬರನ್ನೊಬ್ಬರು ಸಂಬಂಧವನ್ನು ಗಟ್ಟಿಯಾಗಿ ಬೆಳೆಸಿಕೊಳ್ಳಬೇಕು. ಒಳ್ಳೆಯ ಮಾತನಾಡಿದರೆ ನಾವೆಲ್ಲಾ ಒಳ್ಳೆಯವರಾಗುತ್ತೇವೆ ಎಂದು ನುಡಿದರು.




ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಥಾಣೆ ಬಂಟ್ಸ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಮೋಹಿನಿ ಶೆಟ್ಟಿ ಮಾತನಾಡಿ, ಹೆಣ್ಣೊಬ್ಬಳು ಮನೆಯನ್ನು, ಸಂಸಾರವನ್ನು ನಿರ್ವಹಿಸಿಕೊಂಡು ಸಾಮಾಜಿಕ ಸೇವೆಯಲ್ಲಿ ತೊಡಗಿಸಿಕೊಳ್ಳುವ ಶಕ್ತಿವಂತಳು. ಅಂತಹ ಉತ್ಸಾಹಿ ಮಹಿಳೆಯರು ಈ ಕಾರ್ಯಕ್ರಮದಲ್ಲಿ ಸೇರಿದ್ದನ್ನು ಕಂಡಾಗ ಅಭಿಮಾನವಾಗುತ್ತದೆ. ತುಳುನಾಡಿನ ಸಂಸ್ಕೃತಿ ಸಂಸ್ಕಾರವನ್ನು ಉಳಿಸುವ ಮೂಲಕ ಕರ್ಮಭೂಮಿಯ ಆಚರಣೆಗಳನ್ನು ಉಳಿಸುವಲ್ಲಿ ಮಹಿಳೆಯರು ಬಹಳಷ್ಟು ಕೊಡುಗೆಯನ್ನು ನೀಡುತ್ತಿದ್ದಾರೆ. ಮಹಾರಾಷ್ಟ್ರದ ಸಂಸ್ಕೃತಿ ಆಚರಣೆಗಳನ್ನು ಬಲಿಷ್ಠಗೊಳಿಸುವಲ್ಲಿ ನಮ್ಮೆಲ್ಲರ ಕೊಡುಗೆ ಬಹಳಷ್ಟಿವೆ. ಯಾವುದೇ ಸಂಘ ಸಂಸ್ಥೆಗಳಲ್ಲಿ ಮಹಿಳೆಯರಿಗೆ ವಿಶೇಷ ಸ್ಥಾನಮಾನ ನೀಡಿದರೆ ಅದನ್ನು ಅವರು ಅಚ್ಚುಕಟ್ಟಾಗಿ ನಿರ್ವಹಿಸಿಕೊಳ್ಳುತ್ತಾರೆ. ಮಹಿಳೆಯರೆಲ್ಲರೂ ಬಾಂಧವ್ಯತೆ, ಒಗ್ಗಟ್ಟು ಹಾಗೂ ಸೌಹಾರ್ದತೆಯಿಂದ ಬದುಕು ಕಟ್ಟಬೇಕು ಎಂದರು. ಬಂಟರ ಸಂಘ ಮುಂಬಯಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಆರ್ ಶೆಟ್ಟಿಯವರು ಮಾತನಾಡುತ್ತಾ, ನವರಾತ್ರಿಯ ಶುಭ ಸಂದರ್ಭದಲ್ಲಿ ದೇವಿಯ ಆರಾಧನೆ ಮಾಡಿದಾಗ ಮಹಿಳೆಯರಲ್ಲಿ ಧಾರ್ಮಿಕ ಪ್ರಜ್ಞೆ ಜಾಗೃತಿಯಾಗುತ್ತದೆ. ನಮ್ಮ ನಾಡಿನ ಶ್ರೀ ಶಕ್ತಿ ಪೀಠಗಳಲ್ಲಿ ಬಹಳ ವಿಜೃಂಭಣೆಯಿಂದ ನವರಾತ್ರಿ ಉತ್ಸವ ಆಚರಣೆಯಾಗುತ್ತಿದೆ. ಯಾವುದೇ ಸಂಘ ಸಂಸ್ಥೆಯಲ್ಲಿ ನಾವು ಸೇವೆ ಮಾಡಿದಾಗ ಅದರಲ್ಲಿ ಒಳ್ಳೆಯದು ಮತ್ತು ಕೆಟ್ಟದ್ದು ಕೇಳಿ ಬರುವುದು ಸಹಜ. ಅದನ್ನು ಮನಸ್ಸಿನಲ್ಲಿರಿಸದೆ ಸಮಾಜಕ್ಕೆ ನಿಸ್ವಾರ್ಥ ಸೇವೆಯನ್ನು ಮಾಡಬೇಕು. ಬಂಟರ ಸಂಘಕ್ಕೆ ಹಿರಿಯರು ಮಾಡಿದ ತ್ಯಾಗ, ಬಹಳಷ್ಟು ಜನರ ಪರಿಶ್ರಮದಿಂದಾದ ಭವ್ಯ ಬಂಟರ ಸಂಘದಲ್ಲಿ ಯಾವುದೇ ಅಡಚಣೆ ಆಗದೆ ಸಮರ್ಥ ನಾಯಕನ ಆಯ್ಕೆ ಆಗುವಂತಾಗಲಿ. ಬಹಳಷ್ಟು ವರ್ಷಗಳಿಂದ ಈ ಪ್ರದೇಶಕ್ಕೆ ಬರುತ್ತಿದ್ದೇನೆ. ನನಗೆ ಈ ಪರಿಸರದ ಋಣವಿದೆ. ಎಲ್ಲರಿಗೂ ದುರ್ಗಾದೇವಿ ಅನುಗ್ರಹಿಸಲಿ ಎಂದು ನುಡಿದರು.


ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಕಣಂಜಾರ್ ಮಾತನಾಡಿ, ಪ್ರಾಚೀನ ಕಾಲದಲ್ಲಿ ನಾಲಾಸೋಪಾರವು ಶೂರ್ಪಾರಕ ಎಂಬ ಹೆಸರಿನಿಂದ ಪ್ರಸಿದ್ಧವಾಗಿದ್ದು, ಬೌದ್ಧ ಧರ್ಮದ ಇತಿಹಾಸದಲ್ಲಿಯೂ ಮಹತ್ವದ ಸ್ಥಾನವನ್ನು ಹೊಂದಿದೆ. ಸಾಮ್ರಾಟ್ ಅಶೋಕನ ಕಾಲದ ಬೌದ್ಧ ಧರ್ಮದ ಪ್ರಭಾವ ಹಾಗೂ ಗೌತಮ ಬುದ್ಧನ ಬೋಧನೆಗಳ ಪರಂಪರೆಯನ್ನು ಸ್ಮರಿಸುವ ಈ ಪ್ರದೇಶವು ಇಂದಿಗೂ ಐತಿಹಾಸಿಕ ಮಹತ್ವವನ್ನು ಸಾರುತ್ತಿದೆ. ಇದರೊಂದಿಗೆ ಯದುವಾಡಿ ಮಹಾಲಕ್ಷ್ಮಿ ದೇವಿಯ ಕ್ಷೇತ್ರ, ವಜ್ರೇಶ್ವರಿ ದೇವಿಯ ಪವಿತ್ರ ಸನ್ನಿಧಿ ಹಾಗೂ ತುಂಗಾರೇಶ್ವರದ ಪ್ರಕೃತಿ ರಮಣೀಯ ಧಾರ್ಮಿಕ ಕ್ಷೇತ್ರಗಳು ಈ ಪ್ರದೇಶದ ಆಧ್ಯಾತ್ಮಿಕ ವೈಭವವನ್ನು ಹೆಚ್ಚಿಸಿವೆ. ವಿವಿಧ ಧರ್ಮಗಳು, ಸಂಪ್ರದಾಯಗಳು ಹಾಗೂ ಸಂಸ್ಕೃತಿಗಳು ಇಲ್ಲಿ ಸಹಬಾಳ್ವೆಯಿಂದ ಬೆಳೆದು ಬಂದಿರುವುದು ಈ ನೆಲದ ವಿಶೇಷತೆಯಾಗಿದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿಯ ಜೊತೆ ಕೋಶಾಧಿಕಾರಿ ಶಶಿಧರ ಶೆಟ್ಟಿ ಇನ್ನಂಜೆ, ಮಹಿಳಾ ವಿಭಾಗದ ಸಂಚಾಲಕಿ ಉಷಾ ಶ್ರೀಧರ್ ಶೆಟ್ಟಿ, ಸಲಹೆಗಾರ ಸಮಿತಿಯ ಕಾರ್ಯಾಧ್ಯಕ್ಷೆ ಶಶಿಕಲಾ ಶಶಿಧರ ಶೆಟ್ಟಿ, ಉಪ ಕಾರ್ಯಾಧ್ಯಕ್ಷೆ ಸಹನಾ, ಕಾರ್ಯದರ್ಶಿ ಸಂಧ್ಯಾ ವಿ ಶೆಟ್ಟಿ, ಕೋಶಾಧಿಕಾರಿ ಜಯಶ್ರೀ ಶೆಟ್ಟಿ, ಜೊತೆ ಕಾರ್ಯದರ್ಶಿ ಪ್ರಭಾ ಶೆಟ್ಟಿ, ಜೊತೆ ಕೋಶಾಧಿಕಾರಿ ಸಂಧ್ಯಾ ಯು ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷೆ ಜಯ ಅಶೋಕ್ ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಮಹಿಳಾ ವಿಭಾಗದ ಸದಸ್ಯೆಯರಾದ ಪ್ರಭಾ ಶೆಟ್ಟಿ ಮತ್ತು ನಯನಾ ಎಚ್ ಶೆಟ್ಟಿ ಇವರನ್ನು ಸನ್ಮಾನಿಸಲಾಯಿತು.


ಕಾರ್ಯಕ್ರಮದಲ್ಲಿ ಮಹಿಳಾ ವಿಭಾಗದ ಸದಸ್ಯೆಯರಿಂದ ಭಜನಾ ಕಾರ್ಯಕ್ರಮ, ಹಳದಿ ಕುಂಕುಮ ಕಾರ್ಯಕ್ರಮ ಹಾಗೂ ದಾಂಡಿಯಾ ರಾಸ್, ‘ಮಾತಾ ಕಿ ಚೌಕಿ’ ಬಳಿಕ ಮಂಗಳಾರತಿ ನಡೆಯಿತು. ಪಾಲ್ಗೊಂಡ ಎಲ್ಲರಿಗೂ ಶಶಿಧರ್ ಶೆಟ್ಟಿ ಇನ್ನಂಜೆಯವರ ಸೇವಾ ರೂಪದಲ್ಲಿ ಅನ್ನಪ್ರಸಾದ ನಡೆಯಿತು. ಕಾರ್ಯಕ್ರಮದಲ್ಲಿ ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ಜಗನ್ನಾಥ್ ಡಿ ಶೆಟ್ಟಿ ಪಳ್ಳಿ, ಕೋಶಾಧಿಕಾರಿ ವಿಜಯ್ ಎಂ ಶೆಟ್ಟಿ, ಜೊತೆ ಕೋಶಾಧಿಕಾರಿ ರತೀಶ್ ಶೆಟ್ಟಿ, ಇತರ ಪದಾಧಿಕಾರಿಗಳು ಹಾಗೂ ಅಪಾರ ಸಂಖ್ಯೆಯಲ್ಲಿ ಮಹಿಳೆಯರು ಪಾಲ್ಗೊಂಡಿದ್ದರು. ಕಾರ್ಯಕ್ರಮವನ್ನು ಸಾಂಸ್ಕೃತಿಕ ಕಾರ್ಯಕ್ರಮ ಸಮಿತಿಯ ಕಾರ್ಯಾಧ್ಯಕ್ಷ ವಿಜಯ್ ಶೆಟ್ಟಿ ಕುತ್ತೆತ್ತೂರು ನಿರೂಪಿಸಿದರು. ಸನ್ಮಾನಿತರನ್ನು ಜಯಶ್ರಿ ಶೆಟ್ಟಿ ಮತ್ತು ಲೀಲಾವತಿ ಆಳ್ವ ಪರಿಚಯಿಸಿದರು.
ವರದಿ : ದಿನೇಶ್ ಕುಲಾಲ್


















































































































