ಖ್ಯಾತ ಕವಯತ್ರಿ, ಅಂಕಣಕಾರ್ತಿ ಹಾಗೂ ಕನ್ನಡ ತುಳು ಸಾಹಿತಿ ಪುತ್ತೂರಿನ ಮಲ್ಲಿಕಾ ಜೆ ರೈ ಗುಂಡ್ಯಡ್ಕ ಅವರನ್ನು 2026ನೇ ಸಾಲಿನ ‘ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ’ಗೆ ಆಯ್ಕೆ ಮಾಡಲಾಗಿದೆ. ಕನ್ನಡ ಭವನದ ಡಾ. ವಾಮನ್ ರಾವ್ ಬೇಕಲ್ ಅವರ ನೇತೃತ್ವದಲ್ಲಿ ಕಾಸರಗೋಡು ಪಾಂಗೋಡು ಶ್ರೀ ದುರ್ಗಾಪರಮೇಶ್ವರಿ, ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ದಸರಾ ವೇದಿಕೆಯಲ್ಲಿ ಅಕ್ಟೋಬರ್ 11 ರಿಂದ 20 ರವರೆಗೆ ನಡೆಯಲಿರುವ ‘ಕಾಸರಗೋಡು ದಸರಾ ಸಾಂಸ್ಕೃತಿಕೋತ್ಸವ -2026’ರ ಅಂಗವಾಗಿ ಅಕ್ಟೋಬರ್ 18ರಂದು ಬೆಳಗ್ಗೆ 11 ಗಂಟೆಗೆ ಕಾಸರಗೋಡು ದಸರಾ ಕವಿ ಸಮ್ಮೇಳನ ನಡೆಯಲಿದೆ. ಈ ಸಂದರ್ಭದಲ್ಲಿ ಮಲ್ಲಿಕಾ ಜೆ ರೈ ಗುಂಡ್ಯಡ್ಕ ಅವರಿಗೆ ‘ಕಾಸರಗೋಡು ದಸರಾ ಕವಿ ಶ್ರೇಷ್ಠ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು. ಸಾಹಿತ್ಯ ಸಂಘಟಕ ಬಿ. ಶ್ರೀನಿವಾಸ್ ಬಹಾದ್ದೂರ್ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯುವ ಕವಿ ಸಮ್ಮೇಳನವನ್ನು ಚುಟುಕು ಬ್ರಹ್ಮ ಹಾಗೂ ಚುಟುಕು ಸಾಹಿತ್ಯ ಪರಿಷತ್ ಸಂಸ್ಥಾಪಕ ಡಾ| ಎಂ.ಜಿ.ಆರ್ ಅರಸ್ ಮೈಸೂರು ಉದ್ಘಾಟಿಸಲಿದ್ದಾರೆ. ಮೈಸೂರಿನ ಖ್ಯಾತ ಕವಿ ಹಾಗೂ ಸಾಹಿತ್ಯ ರತ್ನ ಜಯಪ್ಪ ಹೊನ್ನಾಳಿ (ಜಯ ಕವಿ ಮೈಸೂರು) ಅವರ ಅಧ್ಯಕ್ಷತೆಯಲ್ಲಿ ಕಾಸರಗೋಡು ದಸರಾ ಕವಿಗೋಷ್ಠಿ ನಡೆಯಲಿದೆ. ರಾಷ್ಟ್ರಮಟ್ಟದ 75 ಮಂದಿ ಕವಿಗಳು ಭಾಗವಹಿಸಲಿರುವ ಕಾರ್ಯಕ್ರಮದಲ್ಲಿ 21 ಮಂದಿ ಕವಿಗಳಿಗೆ ‘ಕಾಸರಗೋಡು ದಸರಾ ಕವಿ ಶ್ರೇಷ್ಠ ರಾಷ್ಟ್ರೀಯ ಪ್ರಶಸ್ತಿ -2026’ ನೀಡಿ ಗೌರವಿಸಲಾಗುವುದು ಎಂದು ಆಯೋಜಕರು ತಿಳಿಸಿದ್ದಾರೆ.
ಮಲ್ಲಿಕಾ ಜೆ. ರೈ ಗುಂಡ್ಯಡ್ಕ ಅವರು ಎಂ.ಕಾಂ ಪದವೀಧರರಾಗಿದ್ದು, ತುಳು ಎಂ.ಎ.ಯಲ್ಲಿ ಆರನೇ ರ್ಯಾಂಕ್ ಪಡೆದಿದ್ದಾರೆ. ಕನ್ನಡ ಮತ್ತು ತುಳು ಸಾಹಿತ್ಯ ಕ್ಷೇತ್ರದಲ್ಲಿ ಕವಯತ್ರಿ, ಲೇಖಕಿ ಹಾಗೂ ಅಂಕಣಕಾರ್ತಿಯಾಗಿ ಗುರುತಿಸಿಕೊಂಡಿದ್ದಾರೆ. ಕಳೆದ ಐದಾರು ವರ್ಷಗಳಿಂದ ‘ಇಂಗಿತ’ ಶೀರ್ಷಿಕೆಯಡಿ ಪ್ರತೀ ವಾರ ಅಂಕಣ ಬರೆಯುತ್ತಾ ಸಾಹಿತ್ಯ ಕ್ಷೇತ್ರಕ್ಕೆ ತಮ್ಮದೇ ಆದ ಕೊಡುಗೆ ನೀಡುತ್ತಿದ್ದಾರೆ. ಅವರ ಸಾಹಿತ್ಯ ಕೃಷಿಯಲ್ಲಿ ‘ಬೀಳದ ಹನಿಗಳು’ ಚುಟುಕು ಸಂಕಲನ, ‘ಅರಗಿಣಿ’ ಮಕ್ಕಳ ಸಂಕಲನ, ‘ಪಚ್ಚೆ ತೆಗರ್’ ತುಳು ಕವಿತಾ ಸಂಕಲನ ಹಾಗೂ ‘ನಿನ್ನದೇ ಎಲ್ಲ’ ಕವನ ಸಂಕಲನಗಳು ಪ್ರಮುಖವಾಗಿವೆ. ಸಾಹಿತ್ಯ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಾಧನೆಗಾಗಿ ಅವರಿಗೆ 2008 ರ ಹನಿಮಿನಿ ಕಾವ್ಯ ಪ್ರಶಸ್ತಿ, 2009 ರ ರಾಜ್ಯ ಜಾನಪದ ವೇದಿಕೆ ತುಳು ಕಥಾ ಪ್ರಶಸ್ತಿ, 2012 ರ ಕೆ.ಎಸ್ ನರಸಿಂಹಸ್ವಾಮಿ ನೆನಪಿನ ರಾಜ್ಯಮಟ್ಟದ ಕವಿ ಕಾವ್ಯ ಪುರಸ್ಕಾರ, 2013 ರ ಗಡಿನಾಡ ಧ್ವನಿ ರಾಜ್ಯ ಪ್ರಶಸ್ತಿ, 2024 ರ ಭಾರತ ಭೂಷಣ ರಾಷ್ಟ್ರಮಟ್ಟದ ಪ್ರಶಸ್ತಿ, 2025 ರ ಭಾವೈಕ್ಯತಾ ಸಾಹಿತ್ಯ ರತ್ನ ರಾಜ್ಯ ಪ್ರಶಸ್ತಿ ಹಾಗೂ 2026 ರ ಚುಟುಕು ಶ್ರೀ ರಾಜ್ಯ ಪ್ರಶಸ್ತಿ ಸೇರಿದಂತೆ ಹಲವು ಗೌರವಗಳು ಸಂದಿವೆ. ಇದಲ್ಲದೇ 2020 ರಲ್ಲಿ ಅಖಿಲ ಭಾರತ ಸೌಂದರ್ಯ ಸ್ಪರ್ಧೆಯಲ್ಲಿ ‘ಮಿಸೆಸ್ ಇಂಡಿಯಾ ಗ್ರೀನರಿ’ ಕಿರೀಟವನ್ನೂ ಅವರು ಪಡೆದಿದ್ದಾರೆ.

















































































































