ಸುಳ್ಯದ ಗಾಂಧಿನಗರ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಪಿ.ಯು ವಿಭಾಗದ ಇತಿಹಾಸ ಉಪನ್ಯಾಸಕ ಡಾ| ಪ್ರದೀಪ್ ಶೆಟ್ಟಿ ಕೆಂಚನೂರು ಅವರು ಕನ್ನಡ ಚಲನಚಿತ್ರಗಳ ತತ್ವ ಮತ್ತು ರಾಜಕೀಯದ ಕುರಿತು ಬರೆದ ಪುಸ್ತಕಕ್ಕೆ ಚಲನಚಿತ್ರ ಪುಸ್ತಕ ವಿಭಾಗದಲ್ಲಿ ರಾಷ್ಟ್ರೀಯ ಸ್ವರ್ಣಕಮಲ ಪ್ರಶಸ್ತಿ ಬಂದಿದ್ದು ಪ್ರಶಸ್ತಿ ಪ್ರಧಾನ ಇತ್ತೀಚಿಗೆ ನಡೆಯಿತು. ಗುಜರಾತಿನಲ್ಲಿ ಏರ್ಪಡಿಸಲಾಗಿದ್ದ 72ನೇ ರಾಷ್ಟ್ರೀಯ ಚಲನಚಿತ್ರ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ರಾಷ್ಟ್ರಪತಿ ಡಾ| ದ್ರೌಪದಿ ಮುರ್ಮು ಅವರು ಡಾ| ಪ್ರದೀಪ್ ಶೆಟ್ಟಿ ಕೆಂಚನೂರು ಅವರಿಗೆ ಸ್ವರ್ಣ ಕಮಲ ಪ್ರಶಸ್ತಿ ಪ್ರಧಾನ ಮಾಡಿದರು.
ಚಲನಚಿತ್ರ ಸಂಭಾಷಣೆಕಾರರೂ, ಜ್ಯೂರಿಯೂ ಆಗಿರುವ ಡಾ| ಪ್ರದೀಪ್ ಶೆಟ್ಟಿ ಕೆಂಚನೂರು ಅವರು ಕುಂದಾಪುರದ ಕೆಂಚನೂರಿನವರಾಗಿದ್ದು, ಕಳೆದ ಮೂರು ವರ್ಷಗಳಿಂದ ಗಾಂಧಿನಗರ ಕೆ.ಪಿ.ಎಸ್ ನಲ್ಲಿದ್ದಾರೆ. ಪ್ರಶಸ್ತಿಯು ಸ್ವರ್ಣ ಕಮಲ ಮತ್ತು 1 ಲಕ್ಷ ರೂ. ನಗದನ್ನು ಒಳಗೊಂಡಿದೆ. ಇವರ ಪತ್ನಿ ಪೆರಿಯ ಕೇಂದ್ರೀಯ ವಿ.ವಿ ಯಲ್ಲಿ ಪ್ರಾಧ್ಯಾಪಕಿ ಸೌಮ್ಯ ಹೆಚ್ ಈ ಪುಸ್ತಕದ ಪ್ರಕಾಶಕರಾಗಿದ್ದು, ಈ ಪುಸ್ತಕವನ್ನು ಪ್ರಕಾಶಿಸಿದುದಕ್ಕಾಗಿ ಅವರಿಗೂ ಪ್ರಕಾಶಕರಿಗಾಗಿ ನೀಡಲಾಗುವ ಸ್ವರ್ಣಕಮಲ ಪ್ರಶಸ್ತಿಯನ್ನು ಅದೇ ಸಮಾರಂಭದಲ್ಲಿ ನೀಡಲಾಯಿತು.

















































































































