ದಾಮೋದರ ಮಂಡೆಚ್ಚರು ಯಕ್ಷಗಾನ ಭಾಗವತಿಕೆಗೆ ದಕ್ಷಿಣಾದಿ ಸಂಗೀತವನ್ನು ಅಳವಡಿಸಿದ ಮೊದಲಿಗರು ಎಂಬ ಭಾವನೆ ಹಲವರಲ್ಲಿದೆ. ಆದರೆ, ಅವರಿಗಿಂತಲೂ ಮೊದಲೇ ಕೋಟೆಕುಂಜ ಮಹಾಬಲ ನೋಂಡರು ಶಾಸ್ತ್ರೀಯ ಸಂಗೀತವನ್ನು ಹದಮಿಳಿತವಾಗಿ ಅಳವಡಿಸಿಕೊಂಡು ಭಾಗವತಿಕೆಗೆ ಭಾವಪೂರ್ಣತೆ ತಂದವರು. ಇದೇ ಹಾದಿಯಲ್ಲಿದ್ದ ಇನ್ನೊಬ್ಬ ಭಾಗವತರೆಂದರೆ ಇವರ ಸಮಕಾಲೀನರಾಗಿದ್ದ ಕೀರ್ತಿಶೇಷ ಮೈಂದಪ್ಪ ರೈಗಳು. ಮಹಾಬಲ ನೋಂಡರ ಜನನ ಪುತ್ತೂರು ಗ್ರಾಮದ ಕೋಟೆಕುಂಜ ಗುತ್ತಿನ ಮನೆಯಲ್ಲಿ 26 ನೇ ಫೆಬ್ರವರಿ 1904 ರಲ್ಲಿ ಆಯಿತು. ಇವರ ತಂದೆ ಕೋಟೆಕುಂಜ ರಾಮಯ್ಯ ನೋಂಡರು ಮತ್ತು ತಾಯಿ ಪಡಾರುಗುತ್ತು ಸೀತಮ್ಮನವರು. ತಮ್ಮ ಬಾಲ್ಯದ ವಿದ್ಯಾಭ್ಯಾಸವನ್ನು ಕುಂಬಳೆಯಲ್ಲಿ ಪ್ರಾರಂಭಿಸಿದ ಇವರು ರಾಮಚಂದ್ರ ಮಾಸ್ಟ್ರಲ್ಲಿ ಸಂಗೀತ ಶಿಕ್ಷಣವನ್ನು ಪಡೆದರು. ಆಗಲೇ ಸಂಗೀತದ ಬಗ್ಗೆ ಅವರಿಗಿದ್ದ ಆಸಕ್ತಿ ಅತೀ ಹೆಚ್ಚು. ಮುಂದೆ ಕಾಸರಗೋಡು ಮಿಷನ್ ಸೆಕೆಂಡರಿ ಶಾಲೆಯಲ್ಲಿ ವಿದ್ಯೆ ಮುಂದುವರಿಸಿ, ಆಮೇಲೆ ಮಂಗಳೂರಿನ ಕೆನರಾ ಹೈಸ್ಕೂಲಿನಲ್ಲಿ ಹೆಚ್ಚಿನ ಶಿಕ್ಷಣವನ್ನು ಪಡೆದರು. ಆಗಲೇ ಅವರಲ್ಲಿ ಸುಪ್ತಾವಸ್ತೆಯಲ್ಲಿದ್ದ ಕಲಾಭಿರುಚಿಗೆ ತಕ್ಕ ಪ್ರೋತ್ಸಾಹ ದೊರೆಯಿತು. ಬೆಳೆಯುವ ಗುಣ ಮೊಳಕೆಯಲ್ಲಿ ಎಂಬಂತೆ, ಹೈಸ್ಕೂಲಿನಲ್ಲಿದ್ದಾಗ ನಾಟಕಗಳಲ್ಲಿ ಭಾಗವಹಿಸಿ, ಹಾಡುಗಾರಿಕೆಯಲ್ಲಿ ನೈಪುಣ್ಯತೆಯನ್ನು ಪ್ರದರ್ಶಿಸಿ, ಪ್ರೇಕ್ಷಕ ವರ್ಗವನ್ನು ತನ್ಮಯಗೊಳಿಸುತ್ತಿದ್ದ ಇವರಲ್ಲಿ ಮುಂದೆ ಉತ್ತಮ ಕಲಾವಿದರಾಗಿ ಬೆಳಗುವ ಸಕಲ ಲಕ್ಷಣಗಳನ್ನು ಜನ ಕಂಡುಕೊಂಡಿದ್ದರು.
ಕಾರಣಾಂತರಗಳಿಂದ ಹೈಸ್ಕೂಲು ಶಿಕ್ಷಣವನ್ನು ಕೊನೆ ಮುಟ್ಟಿಸಲಾಗದೆ ವಿದ್ಯಾರ್ಥಿ ಜೀವನಕ್ಕೆ ವಿದಾಯ ಹೇಳಬೇಕಾಯಿತು. ಶಾಲೆಯನ್ನು ತ್ಯಜಿಸಿದ ನೋಂಡರು ಸುಮ್ಮನಿರಲಾಗದೆ ಯಕ್ಷಗಾನದ ಕಡೆಗೆ ತಮ್ಮ ಮನಸ್ಸನ್ನು ಹರಿಸಿದರು. ಪ್ರಸಿದ್ಧ ಭಾಗವತರಾದ ಹಾಗೂ ಸಂಗೀತ, ತಬಲ, ಮೃದಂಗ ಮುಂತಾದವುಗಳಲ್ಲಿ ವಿಶೇಷ ಪಾಂಡಿತ್ಯವನ್ನು ಗಳಿಸಿದ ಮಾಂಬಾಡಿ ನಾರಾಯಣ ಭಾಗವತರಿಂದ ಯಕ್ಷಗಾನ ಹಾಡುಗಾರಿಕೆಯ ವೈವಿದ್ಯಗಳನ್ನು ಅಭ್ಯಸಿಸಿದರು. ಮೊದಲೇ ನೋಂಡರಲ್ಲಿದ್ದ ಸಂಗೀತ ಜ್ಞಾನ ಯೋಗ್ಯ ಗುರುವಿನ ದಕ್ಷ ಮಾರ್ಗದರ್ಶನದಿಂದ ಇನ್ನಷ್ಟು ವರ್ಧಿಸಿ ಚಿನ್ನಕ್ಕೆ ಒಪ್ಪವಿಟ್ಟಂತಾಯಿತು. ತುರಗಪುರ ಈಶ್ವರ, ಕಣಿಪುರದ ಪಾರ್ತಿಸುಬ್ಬ, ನಂದಳಿಕೆಯ ನಾರಣಪ್ಪ ಮುಂತಾದ ಯಕ್ಷಗಾನ ಕಲಾಪರಿಣತರ ಲೆಕ್ಕಣಿಕೆಗಳಿಂದ ಸುರಸವಾಗಿ ಹರಿದು ಬಂದ ಕಥಾಪ್ರಸಂಗಗಳಿಗೆ
ತಮ್ಮ ಸುಶ್ರಾವ್ಯ ಗಾನವನ್ನು ಅಳವಡಿಸಿದರು. 1935ರಲ್ಲಿ ಮಂಗಳೂರು ಶರವು ಯಕ್ಷಗಾನ ಸಂಘವು ಶ್ರೀ ಕುಬಣೂರು ಬಾಲಕೃಷ್ಣ ರಾವ್ (ಎಡ್ವೊಕೇಟ್) ಇವರ ಅಧ್ಯಕ್ಷತೆಯಲ್ಲಿ ರೂಪಿತವಾಯಿತು. ಆ ಸಂಘದಲ್ಲಿ ಮಹಾಬಲ ನೋಂಡರು ಖಾಯಂ ಭಾಗವತರಾಗಿಯೂ, ಏರಿಕ್ಕಳ ಈಶ್ವರಪ್ಪಯ್ಯನವರು ಮೃದಂಗವಾದಕರಾಗಿಯೂ ಸೇರಿಕೊಂಡರು. ಆ ಸಂಘಟನೆಯ ಮೂಲಕ ಮಂಗಳೂರು, ರಾಜ್ಯದ ಇನ್ನಿತರ ಭಾಗದಲ್ಲಿ ಜರಗಿದ ತಾಳಮದ್ದಳೆಗೆ ಲೆಕ್ಕವಿಲ್ಲ. ದೇಶಭಕ್ತ ನಾರಾಯಣ ಕಿಲ್ಲೆಯವರು, ದೇರಾಜೆ ಸೀತಾರಾಮಯ್ಯನವರು, ಪೊಳಲಿ ಶಂಕರನಾರಾಯಣ ಶಾಸ್ತ್ರಿಗಳು, ಶೇಣಿಯವರು ಹೀಗೆ ಅನೇಕಾನೇಕ ಘಟಾನುಘಟಿಗಳ ಒಗ್ಗೂಡುವಿಕೆಯಲ್ಲಿ ಅನವರತ ಜರಗಿದ ಕೂಟಗಳು, ತಾಳಮದ್ದಳೆ ಎಂಬ ಪ್ರಾಕಾರಕ್ಕೆ ಮತ್ತಷ್ಟು ಜನಪ್ರಿಯತೆಯನ್ನು ತಂದುಕೊಟ್ಟಿತು.



ಶ್ರೋತೃಗಳಿಗೆ ಯಕ್ಷಗಾನ, ತಾಳಮದ್ದಳೆ ಕೂಟಗಳ ರಸದೂಟ ಬಡಿಸುತ್ತಿದ್ದುದು ಮಾತ್ರವಲ್ಲ, ಪ್ರತೀ ಆದಿತ್ಯವಾರಗಳಲ್ಲಿ ಈ ಸಂಘವು ನೋಂಡರ ಪುರಾಣವಾಚನ ಮತ್ತು ಕುಬಣೂರು ಬಾಲಕೃಷ್ಣ ರಾಯರ ಅರ್ಥ ವಿವರಣೆಗಳಿಂದ ಕೂಡಿದ ವಿಶೇಷ ಕಾರ್ಯಕ್ರಮಗಳನ್ನು ಏರ್ಪಡಿಸಿ, ರಸಿಕರ ಹೃದಯವನ್ನು ರಸಾಂಬುಧಿಯಲ್ಲಿ ತೇಲಿಸುತ್ತಿದ್ದು ಬಹುಜನ ಪ್ರಿಯವಾಯಿತು. ಕಲೆಗಾಗಿ ಜೀವಿತವನ್ನು ಧಾರೆಯೆರೆದು ಶ್ರಮಿಸುವ ನೋಂಡರನ್ನು ಗೌರವಿಸುವ ಸದುದ್ದೇಶದಿಂದ ಆಗ ಮಂಗಳೂರಿನಲ್ಲಿ ಜಿಲ್ಲಾ ಜಡ್ಜ್ ಆಗಿದ್ದ ರಾಜಗೋಪಾಲ ಆಚಾರ್ಯರ ಘನ ಅಧ್ಯಕ್ಷತೆಯಿಂದೊಡಗೂಡಿ, ಡಾ. ಯು ರಾಮರಾಯರು ಅತಿಥಿಗಳಾಗಿ ಭಾಗವಹಿಸಿದ್ದ ವಿಶೇಷ ಯಕ್ಷಗಾನ ಕೂಟವೊಂದರಲ್ಲಿ ಅವರಿಗೆ ಬಂಗಾರದ ಪದಕದೊಂದಿಗೆ ಸನ್ಮಾನವಾಗಿ, ‘ಸಂಗೀತರತ್ನ’ ಎಂಬ ಬಿರುದು ಕೊಡಲ್ಪಟ್ಟಿತು. ಮುಂದೆ 1947 ರಲ್ಲಿ ಕಾಸರಗೋಡಿನಲ್ಲಿ ಜರುಗಿದ ಸಾಹಿತ್ಯ ಸಮ್ಮೇಳನವು ನೋಂಡರನ್ನು ಬರಮಾಡಿಕೊಂಡು ಗೌರವಿಸಿತು. ಶರವು ಯಕ್ಷಗಾನ ಸಂಘವು ಕರ್ನಾಟಕದಾದ್ಯಂತ ಸಂಚಾರ ಕೈಗೊಂಡ ಸಮಯ ರಾಜ್ಯದ ಪ್ರಮುಖ ನಗರಗಳಲ್ಲಿ ಬೆಂಗಳೂರಿನ ವಿಧಾನ ಸೌಧ, ಸಾಹಿತ್ಯ ಪರಿಷತ್ತಿನ ಮಂದಿರ, ಹಾಗೆಯೇ ರೇಡಿಯೋ ನಿಲಯದ ವಿಶೇಷ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸುದೈವ ನೋಂಡರದಾಗಿತ್ತು ಈ ರೀತಿ ಕನ್ನಡ ನಾಡಿನಲ್ಲಿ ತಮ್ಮ ಹಾಡುಗಾರಿಕೆಯ ಕೌಶಲದಿಂದ ನೋಂಡರು ಜನಪ್ರಿಯರಾಗಿದ್ದಾರಲ್ಲದೇ, ಮುಂಬಯಿಯ ಹಲವು ಕನ್ನಡ ಸಂಸ್ಥೆಗಳು, ರೇಡಿಯೋ ನಿಲಯವೂ ಇವರನ್ನು ಬರಮಾಡಿಸಿ ಕಾರ್ಯಕ್ರಮಗಳಲ್ಲಿ ಭಾಗವಹಿಸುವ ಸದಾವಕಾಶವಿತ್ತಿದ್ದವು. 1959ರಲ್ಲಿ ಮಂಗಳೂರಿನ ಬಂಟರ ಯಾನೆ ನಾಡವರ ಸಂಘದವರು ಅವರ ಸ್ವರ್ಣಮಹೋತ್ಸವ ಕಾರ್ಯಕ್ರಮದಲ್ಲಿ ನೋಂಡರನ್ನು ಕರೆಸಿ, ಸ್ವರ್ಣಪದಕವನ್ನಿತ್ತು ಗೌರವಿಸಿದ್ದರು.
ಶೃಂಗೇರಿ ಜಗದ್ಗುರುಗಳು ನೋಂಡರ ಹಾಡುಗಾರಿಕೆಗೆ ಪ್ರಶಸ್ತಿ ಪತ್ರ ಹಾಗೂ ರಜತ ಫಲಕಗಳನ್ನಿತ್ತು ಹರಸಿದ್ದಾರೆ. ಎಡನೀರು ಮಠಾದೀಶರಾದ ಶ್ರೀ ಕೇಶವಾನಂದ ಭಾರತೀ ಸ್ವಾಮೀಜಿಯವರು ನೋಂಡರನ್ನು ಬರ ಮಾಡಿಕೊಂಡು, ಆಸ್ಥಾನ ವಿದ್ವಾಂಸರಾಗಿ ಮನ್ನಿಸಿ ಗೌರವಿಸಿರುವರು. ಮಹಾಬಲ ನೋಂಡರಿಗೆ ಪಾರ್ತಿಸುಬ್ಬನ ಪ್ರಸಂಗಗಳೆಂದರೆ ಬಹಳ ಪ್ರೀತಿಯಿತ್ತು. ಈ ಪ್ರಸಂಗಗಳನ್ನು ಹಾಡುವಲ್ಲಿ ಶ್ರೀಯುತರು ತೋರುತ್ತಿದ್ದ ಕೌಶಲ್ಯ ಅನ್ಯಾದೃಶವಾದುದು. ತಾವೇ ರಾಗಗಳ ಗಂಗೆಯಲ್ಲಿ ಮಿಂದು ಆನಂದವನ್ನು ಅನುಭವಿಸುವುದಲ್ಲದೇ ಕೇಳುವವರಿಗೂ ರಸ ಸಿಂಚನ ಮಾಡಿ ರೋಮಾಂಚನಗೊಳ್ಳುವಂತೆ ಮಾಡುವ ಶಕ್ತಿ ಅವರಲ್ಲಿತ್ತು. ಸಾಂಸಾರಿಕ ಜೀವನದಲ್ಲಿಯೂ ಸಂತೃಪ್ತರಾಗಿದ್ದ ನೋಂಡರ ಪತ್ನಿಯ ಹೆಸರು ಶ್ರೀಮತಿ ಪದ್ಮಾವತಿ. ಈ ದಂಪತಿಗಳಿಗೆ ಸೀತಾರಾಮ, ಶಿವರತ್ನ, ಲಕ್ಷ್ಮಣ, ರಾಜಾರಾಮ ಮತ್ತು ಸುರೇಶ ಎಂಬ ಮಕ್ಕಳಿರುವರು. ಭೌತಿಕ ಶರೀರದಲ್ಲಿ ಕೃಶಕಾಯರಾಗಿದ್ದ ನೋಂಡರು, ಸ್ವರ ಶಾರೀರರಲ್ಲಿ ನಿಜಕ್ಕೂ ‘ಮಹಾಬಲರು’ ಎಂದು ಕೊಂಡಾಡುವಂತೆ ಇದ್ದರು. 1975 ನೇ ಇಸವಿಯಲ್ಲಿ ಮರೆಯಾದ ಕೋಟೆಕುಂಜ ಮಹಾಬಲ ನೋಂಡರು ತಾಳಮದ್ದಳೆ ಯಕ್ಷಗಾನಕ್ಕೆ ನೀಡಿದ ಕೊಡುಗೆ ಅಪಾರ ಮತ್ತು ಸದಾ ಸ್ಮರಣೀಯವಾದುದು.














































































































