ಸಾಧನೆಗೆ ವಯಸ್ಸಿನ ಮಿತಿ ಇಲ್ಲ. ಆಸಕ್ತಿ, ಪರಿಶ್ರಮ ಮತ್ತು ಕುಟುಂಬದ ಬೆಂಬಲ ದೊರೆತರೆ ಬಾಲ್ಯದಲ್ಲಿಯೇ ವಿಶ್ವದಾಖಲೆ ನಿರ್ಮಿಸಲು ಸಾಧ್ಯ ಎಂಬುದನ್ನು ವಿಷ್ಣುಪ್ರಿಯಾ ಪೈ ಸಾಬೀತುಪಡಿಸಿದ್ದಾರೆ ಎಂದು ಸಾಹಸಸಿಂಹ ಡಾ| ವಿಷ್ಣುವರ್ಧನರ ಪುತ್ರಿ ಕೀರ್ತಿ ವಿಷ್ಣುವರ್ಧನ್ ಹೇಳಿದರು. ಅವರು ಆಳ್ವಾಸ್ ಸೆಂಟ್ರಲ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ವಿಷ್ಣುಪ್ರಿಯಾ ಪೈ ಕೇವಲ 15 ದಿನಗಳಲ್ಲಿ ಕರ್ನಾಟಕ 54 ವಿದ್ಯಾಸಂಸ್ಥೆಗಳ ಸುಮಾರು 4,500 ವಿದ್ಯಾರ್ಥಿಗಳಿಗೆ ಒತ್ತಡ ನಿಯಂತ್ರಣದ ಕುರಿತು ತರಬೇತಿ ನೀಡುವ ಮೂಲಕ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ನಲ್ಲಿ ವಿಶ್ವದಾಖಲೆ ನಿರ್ಮಿಸಿದ ಹಿನ್ನೆಲೆಯಲ್ಲಿ ಆಳ್ವಾಸ್ ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ನಡೆದ ‘ವಿಷ್ಣುಪ್ರಿಯಾ ಪೈಯ ವಿಶ್ವದಾಖಲೆ ಸಾಧನೆಯ ಸಂಭ್ರಮ’ ಕಾರ್ಯಕ್ರಮದಲ್ಲಿ ಮಾತನಾಡಿದರು. ಕೇವಲ 15ನೇ ವಯಸ್ಸಿನಲ್ಲಿ ಒತ್ತಡ ನಿಯಂತ್ರಣದಂತಹ ಮಹತ್ವದ ವಿಷಯದ ಕುರಿತು ವಿದ್ಯಾರ್ಥಿಗಳಿಗೆ ತರಬೇತಿ ನೀಡಿರುವುದು ಶ್ಲಾಘನೀಯ. ಇಂತಹ ಸಾಧನೆಗಳು ಇತರ ವಿದ್ಯಾರ್ಥಿಗಳಿಗೂ ಪ್ರೇರಣೆಯಾಗಬೇಕು. ವಿಷ್ಣುಪ್ರಿಯಾ ಮುಂದಿನ ದಿನಗಳಲ್ಲಿ ಇನ್ನಷ್ಟು ಕೀರ್ತಿ ಗಳಿಸಲಿ ಎಂದು ಹಾರೈಸಿದರು. ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಏಷ್ಯಾ ವಿಭಾಗದ ಮುಖ್ಯಸ್ಥ ಡಾ| ಮನೀಷ್ ಬಿಷ್ಣೋಯಿ ಮಾತನಾಡಿ, ದಕ್ಷಿಣ ಕನ್ನಡ ಜಿಲ್ಲೆಯ ಜನರು ಪ್ರತಿಭೆ ಹಾಗೂ ಬುದ್ಧಿವಂತಿಕೆಗೆ ಹೆಸರುವಾಸಿಯಾಗಿದ್ದಾರೆ. ವಿಷ್ಣುಪ್ರಿಯಾಳ ಸಾಧನೆ ಈ ಜಿಲ್ಲೆಯ ಪ್ರತಿಭೆಗೆ ಮತ್ತೊಂದು ಉದಾಹರಣೆಯಾಗಿದೆ. ಚಿಕ್ಕ ವಯಸ್ಸಿನಲ್ಲಿಯೇ ಇಂತಹ ಮಹತ್ವದ ಸಾಧನೆ ಮಾಡಿರುವ ಇವಳು ಮುಂದಿನ ದಿನಗಳಲ್ಲಿ ಇನ್ನಷ್ಟು ಉನ್ನತ ಸಾಧನೆಗಳನ್ನು ಮಾಡಲಿದ್ದಾಳೆ ಎಂದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಮಾತನಾಡಿ, ತಮ್ಮ ಕ್ಷೇತ್ರದ ವಿದ್ಯಾರ್ಥಿನಿಯೊಬ್ಬರು ವಿಶ್ವದಾಖಲೆ ನಿರ್ಮಿಸಿರುವುದು ಹೆಮ್ಮೆಯ ಸಂಗತಿ. ವಿಷ್ಣುಪ್ರಿಯಾಳ ಸಾಧನೆ ಇತರ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ. ಮುಂದಿನ ದಿನಗಳಲ್ಲಿ ಅವರು ಇನ್ನಷ್ಟು ಕೀರ್ತಿ ಗಳಿಸಲಿ ಎಂದು ಶುಭ ಹಾರೈಸಿದರು.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ ಆಳ್ವ ಮಾತನಾಡಿ, 15 ದಿನಗಳಲ್ಲಿ 54 ವಿದ್ಯಾಸಂಸ್ಥೆಗಳ 4,500 ವಿದ್ಯಾರ್ಥಿಗಳಿಗೆ ಒತ್ತಡ ನಿಯಂತ್ರಣದ ಕುರಿತು ತರಬೇತಿ ನೀಡಿರುವುದು ವಿಶಿಷ್ಟ ಸಾಧನೆಯಾಗಿದೆ. ಈ ಸಾಧನೆಗೆ ವಿಶ್ವದಾಖಲೆಯ ಮಾನ್ಯತೆ ದೊರೆತಿರುವುದು ಸಂತಸದ ವಿಚಾರ ಎಂದರು. ವಿದ್ಯಾರ್ಥಿಗಳ ಪ್ರತಿಭೆ ಕೇವಲ ಪಠ್ಯಕ್ರಮಕ್ಕೆ ಸೀಮಿತವಾಗಬಾರದು. ಪಠ್ಯೇತರ ಚಟುವಟಿಕೆಗಳಲ್ಲಿಯೂ ತಮ್ಮ ಆಸಕ್ತಿ ಮತ್ತು ಸಾಮರ್ಥ್ಯವನ್ನು ಗುರುತಿಸಿಕೊಂಡು ಮುನ್ನಡೆಯಬೇಕು. ವಿಷ್ಣುಪ್ರಿಯಾಳ ಸಾಧನೆ ಯಾವುದೇ ಮಾಂತ್ರಿಕ ಫಲವಲ್ಲ. ಅದರ ಹಿಂದೆ ಸಾಕಷ್ಟು ಪರಿಶ್ರಮ, ತ್ಯಾಗ, ಶಿಸ್ತು, ಆತ್ಮವಿಶ್ವಾಸ ಹಾಗೂ ಕುಟುಂಬದ ಬೆಂಬಲವಿದೆ. ವಿದ್ಯಾರ್ಥಿಗಳು ಸಾಧನೆಯ ಫಲಿತಾಂಶವನ್ನು ಮಾತ್ರ ನೋಡದೆ ಅದರ ಹಿಂದಿರುವ ಪರಿಶ್ರಮವನ್ನು ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು. ಮುಂದಿನ ದಿನಗಳಲ್ಲಿ ವಾಣಿಜ್ಯ ವಿಷಯವನ್ನು ಆಯ್ಕೆ ಮಾಡಿಕೊಂಡು ಲೆಕ್ಕಪರಿಶೋಧಕ ವೃತ್ತಿಯತ್ತ ಸಾಗುವ ಹಾಗೂ ಕಾನೂನು ಶಿಕ್ಷಣ ಪಡೆಯುವ ಆಸೆಯನ್ನು ವಿಷ್ಣುಪ್ರಿಯಾ ಹೊಂದಿದ್ದಾರೆ. ಶಿಕ್ಷಣದೊಂದಿಗೆ ಪಠ್ಯೇತರ ಚಟುವಟಿಕೆಗಳಲ್ಲಿಯೂ ಸಮತೋಲನ ಕಾಯ್ದುಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದರು. ಮುಂದಿನ ದಿನಗಳಲ್ಲಿ ವಿಷ್ಣುಪ್ರಿಯಾ ಆಳ್ವಾಸ್ನಲ್ಲಿ ಪದವಿಪೂರ್ವ ಶಿಕ್ಷಣ ಪಡೆಯಲು ಬಯಸಿದರೆ ಶೈಕ್ಷಣಿಕ ದತ್ತು ಸ್ವೀಕಾರ ಯೋಜನೆಯಲ್ಲಿ ಉಚಿತ ಶಿಕ್ಷಣ ನೀಡುವುದಾಗಿ ಘೋಷಿಸಿದರು. ತಮ್ಮ ಸಾಧನೆಯ ಕುರಿತು ಮಾತನಾಡಿದ ವಿಷ್ಣುಪ್ರಿಯಾ ಪೈ, ವಿಶ್ವದಾಖಲೆಯ ಗೌರವವನ್ನು ಕನ್ನಡದ ಖ್ಯಾತ ನಟ, ಸಾಹಸಸಿಂಹ ಡಾ| ವಿಷ್ಣುವರ್ಧನ್ ಅವರಿಗೆ ಸಮರ್ಪಿಸುವುದಾಗಿ ತಿಳಿಸಿದರು. ಡಾ| ವಿಷ್ಣುವರ್ಧನ್ ಅವರ ಅಭಿನಯ ಮತ್ತು ವ್ಯಕ್ತಿತ್ವದಿಂದ ಪ್ರೇರಣೆ ಪಡೆದಿರುವುದಾಗಿ ಹೇಳಿದ ಅವರು, ತಮ್ಮ ಸಾಧನೆಯ ಮೂಲಕ ಅವರಿಗೆ ಗೌರವ ಸಲ್ಲಿಸುವ ಆಶಯವನ್ನು ವ್ಯಕ್ತಪಡಿಸಿದರು.






ಕಾರ್ಯಕ್ರಮದಲ್ಲಿ ಗೋಲ್ಡನ್ ಬುಕ್ ಆಫ್ ವರ್ಲ್ಡ್ ರೆಕಾರ್ಡ್ಸ್ ಏಷ್ಯಾ ವಿಭಾಗದ ಮುಖ್ಯಸ್ಥ ಡಾ| ಮನೀಷ್ ಬಿಷ್ಣೋಯಿ ಅವರು ವಿಶ್ವದಾಖಲೆಯ ಅಧಿಕೃತ ಪ್ರಮಾಣಪತ್ರವನ್ನು ಪ್ರದಾನ ಮಾಡಿದರು. ಕಾರ್ಯಕ್ರಮದಲ್ಲಿ ಮಾಜಿ ವಿಧಾನ ಪರಿಷತ್ ಸದಸ್ಯ ಗಣೇಶ್ ಕಾರ್ಣಿಕ್, ಸುಲೋಚನಾ ಜಿ.ಕೆ ಭಟ್, ಉಡುಪಿ ಶಾರದಾ ವಸತಿ ಕಾಲೇಜಿನ ಪ್ರಾಚಾರ್ಯ ವಿನ್ಸೆಂಟ್ ಡಿಸೋಜಾ, ಆಳ್ವಾಸ್ ಸೆಂಟ್ರಲ್ ಶಾಲೆಯ ಮೊಹಮ್ಮದ್ ಶಫೀ ಶೇಖ್, ಸುಧೀಂದ್ರ ವಿಶ್ವತೀರ್ಥರು ಸೇರಿದಂತೆ ಗಣ್ಯರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಪೋಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ವಿಷ್ಣುಪ್ರಿಯಾ ಹಾಗೂ ಡಾ| ಮನೀಷ್ ಬಿಷ್ಣೊಯಿಯವರನ್ನು ಸನ್ಮಾನಿಸಲಾಯಿತು. ಉಪನ್ಯಾಸಕ ವೇಣುಗೋಪಾಲ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು.














































































































