ಶಿವಾಯ ಫೌಂಡೇಶನ್ (ರಿ) ವತಿಯಿಂದ ಶೈಕ್ಷಣಿಕ ಸಹಾಯ, ಪ್ರತಿಭಾ ಪುರಸ್ಕಾರ ಹಾಗೂ ವಿದ್ಯಾರ್ಥಿ ವೇತನ ವಿತರಣಾ ಕಾರ್ಯಕ್ರಮ ‘ವಿದ್ಯಾ ಪ್ರೇರಣ 2026’ ಸೆಪ್ಟೆಂಬರ್ 27ರಂದು ಆಯೋಜಿಸಲಾಗಿದೆ. ಸೆಪ್ಟೆಂಬರ್ 27ರಂದು ಮಧ್ಯಾಹ್ನ 12.30ಕ್ಕೆ ಪಡುಬಿದ್ರಿಯ ಕೃಷ್ಣ ಸುಧಾಮ ಸಭಾಂಗಣ ಬಂಟರ ಭವನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿದೆ. ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಶೈಕ್ಷಣಿಕ ನೆರವು ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪುರಸ್ಕಾರ ನೀಡಲಾಗುತ್ತದೆ. ಇದೇ ಸಂದರ್ಭದಲ್ಲಿ ಮಧ್ಯಾಹ್ನ 12:30 ರಿಂದ ಮನರಂಜನಾ ಕಾರ್ಯಕ್ರಮದ ಅಂಗವಾಗಿ ಡ್ರೀಮ್ ಬಾಯ್ಸ್ ಡಾನ್ಸ್ ಗ್ಯಾಲರಿ ಕಾವೂರು ಮಂಗಳೂರು ಇವರಿಂದ ‘ಗಾನ ನೃತ್ಯ ವೈಭವ’ ನಡೆಯಲಿದೆ.




ಮಧ್ಯಾಹ್ನ 2 ಗಂಟೆಯಿಂದ ಸಭಾ ಕಾರ್ಯಕ್ರಮ ನಡೆಯಲಿದೆ. 2018 ರಲ್ಲಿ ಸ್ಥಾಪನೆಯಾದ ಈ ಸಂಸ್ಥೆಯು ಸಮಾಜಮುಖಿ ಸೇವೆಯ ಅಂಗವಾಗಿ ‘ಶಿವಾಯ ಫುಡ್ ಡ್ರೈವ್’ ಯೋಜನೆಯಡಿ ಮುಂಬೈನ ಟಾಟಾ ಕ್ಯಾನ್ಸರ್ ಆಸ್ಪತ್ರೆ, ಕೆ.ಇ.ಎಂ. ಮುನ್ಸಿಪಲ್ ಆಸ್ಪತ್ರೆ ಪರಿಸರ ಹಾಗೂ ರಸ್ತೆ ಬದಿಯ ನಿರ್ಗತಿಕರಿಗೆ ಅನ್ನದಾನ ಮಾಡಲಾಗುತ್ತಿದೆ. ಇದರ ಜೊತೆಗೆ ವಿಧವಾ ವೇತನ, ವಿದ್ಯಾರ್ಥಿವೇತನ ಹಾಗೂ ವಿಶೇಷ ಚೇತನ ಶಾಲೆಗಳಿಗೆ ಆರ್ಥಿಕ ನೆರವು ನೀಡಲಾಗುತ್ತಿದೆ. ಅಂಗವಿಕಲರಿಗೆ ವೀಲ್ಚೇರ್ ವಿತರಣೆ, ರಕ್ತದಾನ ಶಿಬಿರ, ಪಡಿತರ ವಿತರಣೆ ಸೇರಿದಂತೆ ವೃದ್ಧಾಶ್ರಮ ಹಾಗೂ ಅನಾಥಾಶ್ರಮಗಳಲ್ಲಿ ಸದಸ್ಯರ ಜನ್ಮದಿನ, ವಾರ್ಷಿಕೋತ್ಸವ ಮತ್ತು ಹಬ್ಬಗಳನ್ನು ಆಚರಿಸುವ ಮೂಲಕ ಅಲ್ಲಿನ ನಿವಾಸಿಗಳೊಂದಿಗೆ ಸಂತಸ ಹಂಚಿಕೊಳ್ಳುತ್ತಿದೆ.














































































































