ಬ್ರಹ್ಮಾವರ ಇಲ್ಲಿನ ಜಿ.ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ ಮಕ್ಕಳಿಗೆ ಹದಿಹರೆಯದವರ ಆರೋಗ್ಯ, ಅವರು ಎದುರಿಸುತ್ತಿರುವ ಹೊಸ ಸವಾಲುಗಳು ವಿಷಯದ ಕುರಿತು ಮಾಹಿತಿ ಕಾರ್ಯಾಗಾರವನ್ನು ಆಯೋಜಿಸಿತ್ತು. ಮಣಿಪಾಲ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ಕಮ್ಯುನಿಟಿ ಮೆಡಿಸಿನ್ ವಿಭಾಗದ ಸಹ ಪ್ರಾದ್ಯಾಪಕ ಡಾ. ಸಂಜಯ್ ಕಿಣಿ ಬಿ ಹಾಗೂ ಬೇಸಿಕ್ ಮೆಡಿಕಲ್ ಸೈನ್ಸ್ ವಿಭಾಗದ ಅನಾಟಮಿ ಪ್ರಾದ್ಯಾಪಕಿ ಮತ್ತು ಸಂಯೋಜಕರಾದ ಡಾ. ಬಿನ್ಸಿ ಎಂ ಜಾರ್ಜ್ರವರು ಮುಖ್ಯ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿ ಮಾಹಿತಿಯನ್ನು ನೀಡಿದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿಯವರು ಮಾತನಾಡಿ ನಾವೆಲ್ಲರೂ ನಮ್ಮ ಜೀವನದಲ್ಲಿ ಒಂದು ಹಂತದಲ್ಲಿ ಕಿಶೋರಾವಸ್ಥೆಯನ್ನು ಅನುಭವಿಸುತ್ತೇವೆ. ಈ ಅವಧಿಯಲ್ಲಿ ನಾವು ವಿವಿಧ ಮಾನಸಿಕ, ದೈಹಿಕ, ಭಾವನಾತ್ಮಕ ಮತ್ತು ಬೌದ್ಧಿಕ ಸವಾಲುಗಳನ್ನು
ಎದುರಿಸಬೇಕಾಗುತ್ತದೆ.




ಇಂದಿನ ದಿನಗಳಲ್ಲಿ ಡಿಜಿಟಲ್ ತಂತ್ರಜ್ಞಾನಗಳಿಗೆ ಸಂಬಂಧಿಸಿದ ಹೊಸ ಸವಾಲುಗಳನ್ನು
ಎದುರಿಸಬೇಕಾಗಿದೆ. ಇಂಥಹ ಕಾರ್ಯಾಗಾರಗಳು ಸವಾಲುಗಳನ್ನು ಎದುರಿಸಿ ಮುನ್ನಡೆಯಲು ಯಶಸ್ಸನ್ನು ಪಡೆಯಲು ನೆರವಾಗುತ್ತದೆ ಎಂದರು. ಶಾಲಾ ಪ್ರಾಂಶುಪಾಲ ಜಾರ್ಜ್ ಕುರಿಯನ್ ಮಾತನಾಡಿ, ವಿದ್ಯಾರ್ಥಿಗಳು ಜೀವನದ ಒತ್ತಡವನ್ನು ನಿರ್ವಹಿಸಲು ಕಲಿಯಬೇಕು. ಅದಕ್ಕೆ ಬೇಕಾದ ಸಲಹೆಯನ್ನು ಹಿರಿಯರಿಂದ ಪಡೆದುಕೊಳ್ಳಬೇಕೆಂದರು. ಕಾರ್ಯಾಗಾರದಲ್ಲಿ ಮಕ್ಕಳಿಗೆ ಹದಿಹರೆಯದಲ್ಲಾಗುವ ದೈಹಿಕ, ಮಾನಸಿಕ, ಭಾವನಾತ್ಮಕ ಬದಲಾವಣೆ ಉತ್ತಮ ಆರೋಗ್ಯಕ್ಕೆ ಪಾಲಿಸಬೇಕಾದ ಆಹಾರ ಪದ್ದತಿ, ಸ್ವಚ್ಛತೆ, ಮಾದಕ ವಸ್ತುಗಳ ದುಷ್ಪರಿಣಾಮ, ಉತ್ತಮ ಹವ್ಯಾಸಗಳ ಕುರಿತು ಮಾಹಿತಿ ನೀಡಿದರು. ಕಾರ್ಯಾಗಾರದಲ್ಲಿ ಶಾಲೆಯ ಒಂಬತ್ತು ಮತ್ತು ಹತ್ತನೆಯ ತರಗತಿಯ ವಿದ್ಯಾರ್ಥಿಗಳು, ಶಿಕ್ಷಕವೃಂದ ಉಪಸ್ಥಿತರಿದ್ದರು.














































































































