ಮದ್ಯ ವ್ಯಸನಿಗಳು ಸ್ವಪ್ರೇರಣೆಯಿಂದ ಮದ್ಯವರ್ಜನ ಶಿಬಿರದಲ್ಲಿ ಭಾಗವಹಿಸಿ ವ್ಯಸನದಿಂದ ಮುಕ್ತರಾಗಿ ಆರೋಗ್ಯಕರ ಜೀವನ ನಡೆಸಬೇಕೆಂದು ಪೆರ್ವಾಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಪ್ರಧಾನ ಅರ್ಚಕ ಹರಿಕೃಷ್ಣ ಭಟ್ ಹೇಳಿದರು. ಸೆ. 22ರಂದು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಕಾರ್ಕಳ, ಜನಜಾಗೃತಿ ವೇದಿಕೆ ಸೇರಿದಂತೆ ವಿವಿಧ ಸಂಘ ಸಂಸ್ಥೆಗಳ ಸಹಯೋಗದೊಂದಿಗೆ ಪೆರ್ವಾಜೆ ಶ್ರೀ ಮಾಹಾಲಿಂಗೇಶ್ವರ ದೇವಸ್ಥಾನದ ಸಭಾಂಗಣದಲ್ಲಿ ಆಯೋಜಿಸಲಾದ 2123ನೇ ಮದ್ಯವರ್ಧನ ಶಿಬಿರದ ಉದ್ಘಾಟನಾ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ದೇವಸ್ಥಾನದ ಸಾನಿಧ್ಯದಲ್ಲಿ ಮದ್ಯವರ್ಜನ ಶಿಬಿರ ನಡೆಯುತ್ತಿರುವುದು ಪುಣ್ಯದ ಕಾರ್ಯ.ಮದ್ಯಪಾನವನ್ನು ತ್ಯಜಿಸಿ ಉತ್ತಮ ಜೀವನ ನಡೆಸಲು ಶಿಬಿರಾರ್ಥಿಗಳು ದೃಢಸಂಕಲ್ಪ ಕೈಗೊಳ್ಳಬೇಕು ಎಂದರು. ಮುಖ್ಯ ಅತಿಥಿ ಕೆಎಂಎಫ್ ನಿರ್ದೇಶಕ ಸುಧಾಕರ್ ಶೆಟ್ಟಿ ಮುಡಾರು ಮಾತನಾಡಿ, ಒಂದಲ್ಲ ಒಂದು ಕಾರಣದಿಂದ ಮಧ್ಯಪಾನದ ವ್ಯಸನಕ್ಕೀಡಾದವರು ಸ್ವಂತ ಇಚ್ಛೆಯಿಂದ ಕುಡಿತವನ್ನು ಬಿಡಲು ಮುಂದೆ ಬರಬೇಕು. ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯು ಇಂತಹ ಶಿಬಿರಗಳನ್ನು ಏರ್ಪಡಿಸುವುದರಿಂದ ಲಕ್ಷಾಂತರ ಮಂದಿ ದುಶ್ಚಟದಿಂದ ಮುಕ್ತರಾಗುವಂತಾಗಿದೆ ಎಂದರು.




ಅಧ್ಯಕ್ಷತೆ ವಹಿಸಿ ಮಾತನಾಡಿದ ಮದ್ಯವರ್ಜನ ಶಿಬಿರ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವಿಜಯ ಶೆಟ್ಟಿ, ಪೂಜ್ಯ ಡಾ| ಡಿ. ವೀರೇಂದ್ರ ಹೆಗ್ಗಡೆಯವರ ಸಂಕಲ್ಪದಂತೆ ನಡೆಯುತ್ತಿರುವ ಮದ್ಯವರ್ಜನ ಶಿಬಿರದಿಂದಾಗಿ ಲಕ್ಷಾಂತರ ಕುಟುಂಬಗಳು ಇಂದು ನೆಮ್ಮದಿಯ ಬದುಕು ಕಟ್ಟಿಕೊಳ್ಳುವಂತೆ ಆಗಿದೆ. ಪೆರ್ವಾಜೆ ದೇವಸ್ಥಾನದ ಸಭಾಂಗಣದಲ್ಲಿ 8 ದಿನ ನಡೆಯಲಿರುವ ಶಿಬಿರದಲ್ಲಿ ಮದ್ಯ ವ್ಯಸನಿಗಳು ಸ್ವಇಚ್ಛೆಯಿಂದ ಪಾಲ್ಗೊಂಡು ದುಶ್ಚಟ ಬಿಟ್ಟು ಹೊಸ ಜೀವನ ರೂಪಿಸಿಕೊಳ್ಳಬೇಕೆಂದರು. ಶಿಬಿರದ ರಾಜ್ಯ ಸಂಘಟನಾ ಅಧ್ಯಕ್ಷ ದೇವದಾಸ್ ಹೆಬ್ಬಾರ್ ಅಗತ್ಯ ಸಲಹೆ ನೀಡಿದರು. ಉಡುಪಿ ಜಿಲ್ಲಾ ನಿರ್ದೇಶಕ ನಾಗರಾಜ್ ಶೆಟ್ಟಿ ಮಾತನಾಡಿ, ಕಳೆದ 40 ವರ್ಷಗಳಿಂದ ಪೂಜ್ಯ ವೀರೇಂದ್ರ ಹೆಗ್ಗಡೆ ಹಾಗೂ ಹೇಮಾವತಿ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ರಾಜ್ಯದಾದ್ಯಂತ ಮದ್ಯವರ್ಜನ ಶಿಬಿರಗಳನ್ನು ನಡೆಸಲಾಗುತ್ತಿದ್ದು, ಈವರೆಗೆ ಒಂದೂವರೆ ಲಕ್ಷಕ್ಕೂ ಅಧಿಕ ಮಂದಿ ವ್ಯಸನಮುಕ್ತ ಜೀವನ ನಡೆಸುತ್ತಿದ್ದಾರೆ ಎಂದು ಆಶಾ ವ್ಯಕ್ತಪಡಿಸಿದರು. ಪ್ರಾಸ್ತಾವಿಕ ಮಾತುಗಳನ್ನಾಡಿದ ಕರಾವಳಿ ಪ್ರಾದೇಶಿಕ ವಿಭಾಗದ ಜನಜಾಗೃತಿ ಯೋಜನಾಧಿಕಾರಿ ಗಣೇಶ್ ಆಚಾರ್ಯ, ಎಂಟು ದಿನಗಳ ಶಿಬಿರದಲ್ಲಿ ಯೋಗ, ಧ್ಯಾನ, ಪ್ರಾರ್ಥನೆ, ಗುಂಪು ಸಲಹೆ, ಗಣ್ಯರಿಂದ ಮಾಹಿತಿ ಹಾಗೂ ಮಾರ್ಗದರ್ಶನ, ಸಾಂಸ್ಕೃತಿಕ ಕಾರ್ಯಕ್ರಮ, ಆಟೋಟ ಮತ್ತು ಭಜನಾ ಕಾರ್ಯಕ್ರಮಗಳ ಮೂಲಕ ಶಿಬಿರಾರ್ಥಿಗಳಲ್ಲಿ ಮಾನಸಿಕ ಪರಿವರ್ತನೆ ಹಾಗೂ ಉತ್ತಮ ಜೀವನದ ಬಗ್ಗೆ ಆತ್ಮವಿಶ್ವಾಸ ಮೂಡಿಸಲಾಗುತ್ತದೆ ಎಂದರು.
ಮಧ್ಯವರ್ಜನ ಶಿಬಿರ ವ್ಯವಸ್ಥಾಪನ ಸಮಿತಿ ಗೌರವಾಧ್ಯಕ್ಷ ಪ್ರಭಾಕರ್ ಬಂಗೇರ, ತಾಲೂಕು ಜನಜಾಗೃತಿ ವೇದಿಕೆ ಅಧ್ಯಕ್ಷ ಉದಯ್ ಕುಮಾರ್ ಹೆಗ್ಡೆ, ನಿಯೋಜಿತ ಅಧ್ಯಕ್ಷ ವೃಷಭ ರಾಜ್ ಕಡಂಬ, ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯರಾದ ಮಹಾವೀರ್ ಜೈನ್, ಹರೀಶ್ಚಂದ್ರ ತೆಂಡೂಲ್ಕರ್, ಕಮಲಾಕ್ಷ ನಾಯಕ್ ಜಾರ್ಕಳ, ತಾರನಾಥ್ ಶೆಟ್ಟಿ ಹಿರ್ಗಾನ, ವಲಯಾಧ್ಯಕ್ಷ ವಾಸು ಶೆಟ್ಟಿ, ಕೋಶಾಧಿಕಾರಿ ಉದಯ್ ವಿ ಶೆಟ್ಟಿ ಶಿಬಿರಾಧಿಕಾರಿ ದೇವಿ ಪ್ರಸಾದ್ ಸುವರ್ಣ, ಆರೋಗ್ಯ ಸಹಾಯಕ ಜಯಲಕ್ಷ್ಮಿ ಮತ್ತಿತರರು ವೇದಿಕೆಯಲ್ಲಿ ಉಪಸ್ಥಿತರಿದ್ದರು. ತಾಲೂಕು ಯೋಜನಾಧಿಕಾರಿ ಬಾಲಕೃಷ್ಣ ಹಿರಿಂಜ ಸ್ವಾಗತಿಸಿದರು. ಯೋಜನೆ ಮೇಲ್ವಿಚಾರಕಿ ಗೀತಾ ಹೆಗ್ಡೆ ನಿರೂಪಿಸಿ, ದಿನೇಶ್ ಹೆಗ್ಡೆ ವಂದಿಸಿದರು.














































































































