ಬಂಟರ ಸಂಘ ಬೆಂಗಳೂರು ಇಲ್ಲಿನ 2026 -29ನೇ ಸಾಲಿಗೆ ನೂತನ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕಾರಿ ಸಮಿತಿ ಸದಸ್ಯರ ಆಯ್ಕೆಗೆ ಚುನಾವಣೆ ಯಶಸ್ವಿಯಾಗಿ ಜರಗಿತು. ನೂತನ ಆಡಳಿತ ಮಂಡಳಿಯ ಅಧ್ಯಕ್ಷರಾಗಿ ಡಾ| ದೀಪಕ್ ಶೆಟ್ಟಿ ಬಾರ್ಕೂರು, ಉಪಾಧ್ಯಕ್ಷರಾಗಿ ಮಧುಕರ ಶೆಟ್ಟಿ, ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಅಮರನಾಥ ಶೆಟ್ಟಿ ಹೆಗ್ಗುಂಜೆ, ಕೋಶಾಧಿಕಾರಿಯಾಗಿ ರಮಿತ್ ಶೆಟ್ಟಿ, ಜೊತೆ ಕಾರ್ಯದರ್ಶಿಯಾಗಿ ಸುರೇಖಾ ಶೆಟ್ಟಿ ಹಾಗೂ ಮಹಿಳಾ ಮೀಸಲು ಉಪಾಧ್ಯಕ್ಷೆಯಾಗಿ ಸೌಮ್ಯಪ್ರಿಯ ಹೆಗ್ಡೆ ಬಹುಮತದೊಂದಿಗೆ ಆಯ್ಕೆಯಾಗಿದ್ದಾರೆ.




ಗೆಲುವಿನ ಬಳಿಕ ಮಾತನಾಡಿದ ನೂತನ ಅಧ್ಯಕ್ಷ ಡಾ| ದೀಪಕ್ ಶೆಟ್ಟಿ, ಬಂಟರ ಸಂಘವು ನನ್ನ ಮೇಲೆ ಅಪಾರ ವಿಶ್ವಾಸವಿಟ್ಟು ದೊಡ್ಡ ಜವಾಬ್ದಾರಿ ನೀಡಿದೆ. ಸಮುದಾಯದ ನಿರೀಕ್ಷೆಗಳನ್ನು ಹುಸಿಗೊಳಿಸದೆ ಕಾಯಾ, ವಾಚಾ, ಮನಸಾ ಸಮಾಜ ಹಾಗೂ ಸಮುದಾಯದ ಸಮಗ್ರ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆ ಎಂದು ಭರವಸೆ ನೀಡಿದರು. ಇದೇ ವೇಳೆ ತುಳು ಭಾಷೆಗೆ ರಾಜ್ಯದ ಎರಡನೇ ಆಡುಭಾಷೆಯ ಅಧಿಕೃತ ಸ್ಥಾನಮಾನ ನೀಡಿದ ರಾಜ್ಯ ಸರ್ಕಾರ ಹಾಗೂ ಮಾನ್ಯ ಮುಖ್ಯಮಂತ್ರಿಗಳಾದ ಡಿ.ಕೆ ಶಿವಕುಮಾರ್ ಅವರಿಗೆ ಬಂಟರ ಸಮುದಾಯದ ಪರವಾಗಿ ಹೃತ್ಪೂರ್ವಕ ಅಭಿನಂದನೆಗಳನ್ನು ಸಲ್ಲಿಸಿದರು.
ಸಂಘದ ಮುಂದಿನ ನಡೆಗಳ ಕುರಿತು ಮಾಹಿತಿ ಹಂಚಿಕೊಂಡ ಡಾ| ದೀಪಕ್ ಶೆಟ್ಟಿ ಸಮುದಾಯದ ಸಬಲೀಕರಣಕ್ಕಾಗಿ ಐದು ಅಂಶಗಳ ವಿಶೇಷ ಯೋಜನೆಯನ್ನು ಜಾರಿಗೆ ತರಲಾಗುವುದು ಎಂದರು. ಸಂಘದ ಅಧೀನದಲ್ಲಿರುವ ಎರಡು ಪ್ರಮುಖ ಶಿಕ್ಷಣ ಸಂಸ್ಥೆಗಳ ಉನ್ನತೀಕರಣ, ಯುವ ಜನರಿಗೆ ಉದ್ಯೋಗವಕಾಶ ಕಲ್ಪಿಸುವುದು ಹಾಗೂ ಆರೋಗ್ಯ ಸೇವೆಗಳಿಗೆ ಗರಿಷ್ಠ ಆದ್ಯತೆ ನೀಡುವುದು ನಮ್ಮ ಪ್ರಮುಖ ಗುರಿ. ಇದಕ್ಕಾಗಿ ಈಗಾಗಲೇ ಸಾವಿರಾರು ಸಮುದಾಯ ಬಾಂಧವರನ್ನು ಖುದ್ದಾಗಿ ಭೇಟಿ ಮಾಡಿ ಅವರ ಸಲಹೆ ಮಾರ್ಗದರ್ಶನಗಳನ್ನು ಪಡೆಯಲಾಗಿದೆ ಎಂದು ಅವರು ತಿಳಿಸಿದರು.













































































































