ಬಂಟರ ಯಾನೆ ನಾಡವರ ಮಾತೃ ಸಂಘ, ದಕ್ಷಿಣ ಕನ್ನಡ, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳ ಬಂಟರ ಸಂಘಗಳು ಹಾಗೂ ಶ್ರೀ ಸಿದ್ಧಿವಿನಾಯಕ ಪ್ರತಿಷ್ಠಾನ ಮತ್ತು ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಆಶ್ರಯದಲ್ಲಿ 20ನೇ ವರ್ಷದ ಸಾರ್ವಜನಿಕ ಶ್ರೀ ಗಣೇಶೋತ್ಸವ, ತೆನೆಹಬ್ಬ, ಅಷ್ಟೋತ್ತರ ಸಹಸ್ರ ನಾರಿಕೇಳ, ಮಹಾಗಣಯಾಗ ಸೆಪ್ಟೆಂಬರ್ 14ರಿಂದ 17ರ ವರೆಗೆ ಮಂಗಳೂರಿನ ಬಂಟ್ಸ್ ಹಾಸ್ಟೆಲ್ ಓಂಕಾರ ನಗರದಲ್ಲಿ ಜರಗಲಿದೆ. ಸೆಪ್ಟೆಂಬರ್ 13ರಂದು ಸಂಜೆ 5 ಗಂಟೆಗೆ ಶರವು ದೇವಸ್ಥಾನದ ಬಳಿಯಿರುವ ರಾಧಾಕೃಷ್ಣ ದೇವಸ್ಥಾನದಲ್ಲಿ ಸಾಮೂಹಿಕ ಪ್ರಾರ್ಥನೆ ಮಾಡಿ ರಾಮದಾಸ್ ಆಚಾರ್ಯ ಅವರ ಶಿಷ್ಯರಿಂದ ರಚಿಸಲ್ಪಟ್ಟ ಶ್ರೀ ಸಿದ್ದಿವಿನಾಯಕ ದೇವರ ವಿಗ್ರಹವನ್ನು ಬಂಟ್ಸ್ ಹಾಸ್ಟೆಲಿನ ಓಂಕಾರ ನಗರಕ್ಕೆ ಬರಮಾಡಿಕೊಳ್ಳಲಾಗುವುದು. ಸೆಪ್ಟೆಂಬರ್ 14 ರಂದು ಬೆಳಿಗ್ಗೆ 8 ಗಂಟೆಗೆ ಮೂರ್ತಿ ಪ್ರತಿಷ್ಠೆ ನಡೆದು, 9 ಗಂಟೆಗೆ ಧ್ವಜಾರೋಹಣ, ಗಣೇಶೋತ್ಸವ ಕಾರ್ಯಕ್ರಮಗಳ ಉದ್ಘಾಟನೆ ಮತ್ತು ತೆನೆ ವಿತರಣಾ ಕಾರ್ಯಕ್ರಮ ನಡೆಯಲಿದೆ.




ಮಧ್ಯಾಹ್ನ 3 ರಿಂದ ಪಾಂಚಜನ್ಯ ಪ್ರತಿಷ್ಠಾನ ಕುಡ್ಲ ಕಲಾವಿದರಿಂದ ‘ಶ್ರೀ ಮಂಗಳಾಪುರದ ಮಂಗಳಾಂಬಿಕೆ’ ಪೌರಾಣಿಕ ನೃತ್ಯ ನಾಟಕ ನಡೆಯಲಿದೆ. ಸಂಜೆ 5 ರಿಂದ 7 ಗಂಟೆಯವರೆಗೆ ಧಾರ್ಮಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಈ ಸಂದರ್ಭದಲ್ಲಿ ಸಮಾಜದ ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು. ರಾತ್ರಿ 7.30 ರಿಂದ ರಂಗಪೂಜೆ, ಮಹಾಪೂಜೆ, ಪ್ರಸಾದ ವಿತರಣೆ, ರಾತ್ರಿ 8ರಿಂದ ‘ಬಂಟಕಲಾ ಸಂಗಮ-2026’ ವಿವಿಧ ಬಂಟರ ಸಂಘಗಳಿಂದ ಸಾಂಸ್ಕೃತಿಕ ಸ್ಪರ್ಧಾ ಕಾರ್ಯಕ್ರಮ ಜರಗಲಿರುವುದು ಎಂದು ಶ್ರೀ ಸಿದ್ದಿವಿನಾಯಕ ಪ್ರತಿಷ್ಠಾನದ ಮೇನೆಜಿಂಗ್ ಟ್ರಸ್ಟಿ ಅಜಿತ್ ಕುಮಾರ್ ರೈ ಮಾಲಾಡಿ ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಸಿದ್ದಿವಿನಾಯಕ ಪ್ರತಿಷ್ಠಾನದ ಮ್ಯಾನೆಜಿಂಗ್ ಟ್ರಸ್ಟಿ ಡಾ. ಆಶಾಜ್ಯೋತಿ ರೈ ಬಂಬ್ರಾಣ ಮಾತನಾಡಿ, ಸೆಪ್ಟೆಂಬರ್ 15ರಂದು ಬೆಳಿಗ್ಗೆ 11.30ರಿಂದ ಮೂಡಪ್ಪ ಸೇವೆ, ಮಹಾಪೂಜೆ, ಪ್ರಸಾದ ವಿತರಣೆ, ಸಂಜೆ 8ರಿಂದ ಅಷ್ಟೋತ್ತರ ಸಹಸ್ರನಾರಿಕೇಳ ಮಹಾಗಣಯಾಗದ ಋತ್ವಿಜರಿಂದ ಯಾಗ ಶಾಲಾ ಪ್ರವೇಶ, ಗಣಪತಿ ಪೂಜೆ, ಮಹಾಗಣಯಾಗದ ಸೇವಾರ್ಥಿಗಳಿಂದ ಸಂಕಲ್ಪ ನಡೆಯಲಿದೆ. ಸಂಜೆ 5 ರಿಂದ ಧಾರ್ಮಿಕ ಸಭೆ ಆಯೋಜಿಸಲಾಗಿದ್ದು, ವಿವಿಧ ಕ್ಷೇತ್ರಗಳ ಸಾಧಕರನ್ನು ಸನ್ಮಾನಿಸಲಾಗುವುದು. ರಾತ್ರಿ 7.30 ರಿಂದ ಹೂವಿನ ಪೂಜೆ, ರಂಗಪೂಜೆ, ಮಹಾಪೂಜೆ ನಡೆದು ಪ್ರಸಾದ ವಿತರಣೆ ನಡೆಯುವುದು. ರಾತ್ರಿ 8ರಿಂದ ಸ್ವರಲಯ ಸಿಂಪೋನಿ ಕಲಾ ಶಾಲೆಯ ಸಂಗೀತ ಸಂಜೆ ಕಾರ್ಯಕ್ರಮ ಏರ್ಪಡಿಸಲಾಗಿದೆ ಎಂದರು. ಸೆಪ್ಟೆಂಬರ್ 16 ರಂದು ಬೆಳಿಗ್ಗೆ 8.30 ರಿಂದ ಅಷ್ಟೋತ್ತರ ಸಹಸ್ರ ನಾರಿಕೇಳ ಮಹಾಗಣಯಾಗ ಆರಂಭಗೊಂಡು 11 ಗಂಟೆಗೆ ಯಾಗದ ಪೂರ್ಣಾಹುತಿ, ಮಹಾಪೂಜೆ, ಪ್ರಸಾದ ವಿತರಣೆ ನಡೆದು ಮಧ್ಯಾಹ್ನ 12.30ಕ್ಕೆ ಮಹಾ ಅನ್ನಸಂತರ್ಪಣೆ ನಡೆಯಲಿದೆ. ಮಧ್ಯಾಹ್ನ 3.30ಕ್ಕೆ ವಿಸರ್ಜನಾ ಪೂರ್ವ ಪೂಜೆ ನಡೆದು ಗಣ್ಯರ ಉಪಸ್ಥಿತಿಯಲ್ಲಿ ಶೋಭಾಯಾತ್ರೆಗೆ ಚಾಲನೆ ನೀಡಲಾಗುವುದು. ಶೋಭಾಯಾತ್ರೆಯು ಓಂಕಾರನಗರದಿಂದ ಜಿಲ್ಲೆಯ ವಿವಿಧ ಭಜನಾ ತಂಡಗಳ ಸೇವೆಯೊಂದಿಗೆ ಬಂಟ್ಸ್ ಹಾಸ್ಟೆಲ್ ಸರ್ಕಲ್, ಪಿ.ವಿ.ಎಸ್ ವೃತ್ತ, ನ್ಯೂಚಿತ್ರಾ ಟಾಕೀಸ್, ರಥಬೀದಿ ವೆಂಕಟರಮಣ ದೇವಸ್ಥಾನದ ರಸ್ತೆಯಲ್ಲಿ ಸಾಗಿ ಶ್ರೀ ಮಹಾಮ್ಮಾಯಿ ದೇವಸ್ಥಾನದ ಕೆರೆಯಲ್ಲಿ ವಿಸರ್ಜಿಸಲಾಗುವುದು ಎಂದು ವಿವರಿಸಿದರು. ಬಂಟರ ಯಾನೆ ನಾಡವರ ಮಾತೃ ಸಂಘದ ಉಪಾಧ್ಯಕ್ಷ ಹೇಮನಾಥ ಶೆಟ್ಟಿ ಕಾವು, ಪ್ರಧಾನ ಕಾರ್ಯದರ್ಶಿ ಎಂ. ಕರುಣಾಕರ ಶೆಟ್ಟಿ, ಕೋಶಾಧಿಕಾರಿ ರಾಮ್ಮೋಹನ್ ರೈ, ಜೊತೆ ಕಾರ್ಯದರ್ಶಿ ಪದ್ಮನಾಭ ಶೆಟ್ಟಿ ಪುಂಚಮೆ, ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಅಧ್ಯಕ್ಷ ಜಯಶೀಲ ಅಡ್ಯಂತಾಯ ಅಡ್ಯಾರ್ ಗುತ್ತು, ಪ್ರಧಾನ ಕಾರ್ಯದರ್ಶಿ ಸದಾಶಿವ ಶೆಟ್ಟಿ ಬಿಜೈ ಉಪಸ್ಥಿತರಿದ್ದರು.












































































































