ಹುಬ್ಬಳ್ಳಿ ಧಾರವಾಡ ಬಂಟರ ಸಂಘದಿಂದ ಆರ್.ಎನ್ ಶೆಟ್ಟಿ ಕಲ್ಯಾಣ ಮಂಟಪದ ಆವರಣದಲ್ಲಿ 80ನೇ ಸ್ವಾತಂತ್ರ್ಯೋತ್ಸವ ಆಚರಿಸಲಾಯಿತು. ಉದ್ಯಮಿ ಅಜೆಕಾರು ಸುಜಯ ಶೆಟ್ಟಿ ಧ್ವಜಾರೋಹಣ ನೆರವೇರಿಸಿ ಮಾತನಾಡಿ, ದೇಶ ಪ್ರಗತಿಪಥದಲ್ಲಿ ಮುನ್ನಡೆಯಲು ಪ್ರತಿಯೊಬ್ಬರೂ ಸಂಘಟಿತರಾಗಿ ಕಾರ್ಯ ನಿರ್ವಹಿಸಬೇಕು. ದೇಶದ ಅಭಿವೃದ್ಧಿಗೆ ಪ್ರತಿಯೊಬ್ಬರೂ ತಮ್ಮದೇ ಆದ ಕೊಡುಗೆ ನೀಡುವ ಮೂಲಕ ರಾಷ್ಟ್ರ ನಿರ್ಮಾಣದಲ್ಲಿ ಪಾಲ್ಗೊಳ್ಳಬೇಕು ಎಂದರು. ಆರ್.ಎನ್ ಶೆಟ್ಟಿ ಅವರ ಜನ್ಮದಿನದ ಅಂಗವಾಗಿ ಬಂಟರ ಸಂಘದ ಆವರಣದಲ್ಲಿರುವ ಅವರ ಪುತ್ಥಳಿಗೆ ಪುಷ್ಪ ನಮನ ಸಲ್ಲಿಸಲಾಯಿತು. ಬಳಿಕ ಸಂಘದ ವತಿಯಿಂದ ವಿಕಲಚೇತನರಿಗೆ ವೀಲ್ ಚೇರ್ ಗಳನ್ನು ಹಸ್ತಾಂತರಿಸಲಾಯಿತು. ನವೀಕರಣಗೊಂಡ ಬಂಟರ ಸಂಘದ ಆಡಳಿತ ಕಚೇರಿಯನ್ನು ಬೇಂದ್ರೆ ನಗರ ಸಾರಿಗೆಯ ಪ್ರಭಾಕರ ಶೆಟ್ಟಿ ಹಾಗೂ ಹರೀಶ್ಚಂದ್ರ ಶೆಟ್ಟಿ ಉದ್ಘಾಟಿಸಿದರು.




ಕಳೆದ ನಾಲ್ಕು ವರ್ಷಗಳಿಂದ ಬಡ ವಿದ್ಯಾರ್ಥಿಗಳಿಗೆ ಆರ್ಥಿಕ ನೆರವು ನೀಡುತ್ತಿರುವ ದಾನಿಗಳಾದ ಪ್ರದೀಪ್ ಪಕ್ಕಲ, ಪ್ರಸನ್ನ ಶಂಕರ ಶೆಟ್ಟಿ, ಅಶೋಕ ಕುಮಾರ ಶೆಟ್ಟಿ ಓಝೋನ್, ಅಶೋಕ ಕುಮಾರ ಶೆಟ್ಟಿ ಪರಾಗ್, ಕುಡ್ಲ ಸತೀಶ ಶೆಟ್ಟಿ ಅವರು ಅಂತಿಮ ವರ್ಷದ ಬಿಇ ಅಧ್ಯಯನ ಮಾಡುತ್ತಿರುವ ಬಡ ಕುಟುಂಬದ ವಿದ್ಯಾರ್ಥಿ ಶ್ರೇಯಾ ಶೆಟ್ಟಿಯವರ ವಿದ್ಯಾಭ್ಯಾಸಕ್ಕೆ 1ಲಕ್ಷ ರೂಪಾಯಿ ಧನಸಹಾಯ ನೀಡಿದರು. ಸಂಘದ ಅಧ್ಯಕ್ಷ ರಾಜೇಂದ್ರ ವಿ ಶೆಟ್ಟಿ, ಉಪಾಧ್ಯಕ್ಷ ಸುಧೀರ್ ಜೆ ಶೆಟ್ಟಿ, ಶ್ರೀನಿವಾಸ ಶೆಟ್ಟಿ, ಕಾರ್ಯದರ್ಶಿ ರತ್ನಾಕರ ಶೆಟ್ಟಿ ಕರಾವಳಿ, ಖಜಾಂಚಿ ದಿನೇಶ್ ಕೆ ಶೆಟ್ಟಿ, ಸಂಘದ ಮಾಜಿ ಅಧ್ಯಕ್ಷರುಗಳು, ಕಾರ್ಯಕಾರಿ ಸಮಿತಿ ಸದಸ್ಯರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.














































































































