ಕುಂದಗನ್ನಡಕ್ಕೆ ಹಳ್ಳಾಡಿ ಜಯರಾಮ ಶೆಟ್ಟಿ ಅವರ ಕೊಡುಗೆ ಅಪಾರ. ಮಾತೃ ಭಾಷೆಯ ಮೂಲಕ ಯಕ್ಷಗಾನವನ್ನು ಜನಪ್ರಿಯಗೊಳಿಸಿರುವುದು ಕುಂದಗನ್ನಡಿಗರಿಗೆ ಹೆಮ್ಮೆಯ ಸಂಗತಿ ಎಂದು ಸಂಘದ ನೂತನ ನಿರ್ದೇಶಕ, ಹಿರಿಯ ಉದ್ಯಮಿ ಸಟ್ವಾಡಿ ವಿಜಯ ಶೆಟ್ಟಿ ಅವರು ಹೇಳಿದರು. ಅವರು ಬುಧವಾರ ಕುಂದಾಪುರ ಬಂಟರ ಸಂಘದ ಕಚೇರಿಯಲ್ಲಿ ಕುಂದಾಪುರ ತಾಲೂಕು ಯುವ ಬಂಟರ ಸಂಘದಿಂದ ಆಯೋಜಿಸಿದ್ದ ವಿಶ್ವ ಕುಂದಾಪುರ ಕನ್ನಡ ದಿನ ಕಾರ್ಯಕ್ರಮದಲ್ಲಿ ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ ಜಯರಾಮ ಶೆಟ್ಟಿ ಅವರಿಗೆ ಸನ್ಮಾನ ನೆರವೇರಿಸಿ ಮಾತನಾಡಿದರು. ಕಳೆದ 12 ವರ್ಷಗಳಿಂದ ಯುವ ಬಂಟರ ಸಂಘ ಉತ್ತಮ ಕಾರ್ಯಗಳನ್ನು ಮಾಡಿಕೊಂಡು ಬರುತ್ತಿದೆ. ಮುಂದಿನ ದಿನಗಳಲ್ಲೂ ಸಂಘದ ಮೂಲಕ ಸಮುದಾಯವನ್ನು ಶೈಕ್ಷಣಿಕ ಹಾಗೂ ಆರ್ಥಿಕವಾಗಿ ಸಬಲಗೊಳಿಸುವ ನಿಟ್ಟಿನಲ್ಲಿ ವಿವಿಧ ಸಹಕಾರ ಹಾಗೂ ನೆರವು ಕಾರ್ಯಕ್ರಮಗಳನ್ನು ಕೈಗೊಳ್ಳಬೇಕು ಎಂದು ಹೇಳಿದರು. ಸನ್ಮಾನ ಸ್ವೀಕರಿಸಿದ ಯಕ್ಷಗಾನದ ಹಿರಿಯ ಹಾಸ್ಯ ಕಲಾವಿದ ಹಳ್ಳಾಡಿ ಜಯರಾಮ್ ಶೆಟ್ಟಿ ಮಾತನಾಡಿ, 25 ವರ್ಷಗಳ ಹಿಂದೆ ಯಕ್ಷಗಾನದಲ್ಲಿ ಕುಂದಗನ್ನಡದ ಪೂರ್ಣ ಪ್ರಸಂಗ ಬಳಕೆಗೆ ಚಾಲನೆ ದೊರೆತ ಸಂದರ್ಭದಲ್ಲಿ ಹುಲಿಯಾದ ಕಾಳ, ಕೋಳಿಪಡಿ ಕುಷ್ಠ ಸೇರಿದಂತೆ ಐದಾರು ಕುಂದಗನ್ನಡ ಆಧಾರಿತ ಯಕ್ಷಗಾನ ಪ್ರಸಂಗಗಳು ಕ್ಯಾಸೆಟ್ ರೂಪದಲ್ಲಿ ಬಂದಾಗ ಮುಖ್ಯ ಪಾತ್ರ ನಿರ್ವಹಿಸಿದ್ದೆ. ಈ ಪ್ರಯೋಗ ಯಶಸ್ವಿಯಾಗಿದ್ದು ಕಲಾ ಪ್ರೇಕ್ಷಕರಿಂದಲೂ ಉತ್ತಮ ಪ್ರತಿಕ್ರಿಯ ದೊರೆಯಿತು. ಇದರಿಂದ ಕುಂದಗನ್ನಡ ಯಕ್ಷಗಾನದೊಂದಿಗೆ ಇನ್ನಷ್ಟು ಹತ್ತಿರವಾಗಲು ಸಾಧ್ಯವಾಯಿತು ಎಂದರು.




ಸಂಘದ ಗೌರವಾಧ್ಯಕ್ಷ ಪ್ರಕಾಶ ಶೆಟ್ಟಿ ಶೇರ್ಡಿ ಗೈನಾಡಿಮನೆ ಮಾತನಾಡಿ, ಕುಂದಗನ್ನಡ ಭಾಷಿಕರಲ್ಲಿ ಹೃದಯ ಶ್ರೀಮಂತಿಕೆ ಹೆಚ್ಚಿದೆ. ದೇಶ ವಿದೇಶಗಳಲ್ಲೂ ಕುಂದಗನ್ನಡಿಗರು ವಿವಿಧ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡು ತಮ್ಮದೇ ಆದ ಛಾಪು ಮೂಡಿಸಿದ್ದಾರೆ. ಇದು ಹೆಮ್ಮೆಯ ಸಂಗತಿ ಎಂದರು. ಇದೇ ಸಂದರ್ಭದಲ್ಲಿ ವಿದ್ಯಾರ್ಥಿ ಆಕಾಶ್ ಅವರಿಗೆ ಸಂಘದ ವತಿಯಿಂದ ಪ್ರೋತ್ಸಾಹಧನ ನೀಡಲಾಯಿತು. ಯುವ ಬಂಟರ ಸಂಘದ ಅಧ್ಯಕ್ಷ ಡಾ| ಚೇತನ್ ಶೆಟ್ಟಿ ಕೋವಾಡಿ ಅಧ್ಯಕ್ಷತೆ ವಹಿಸಿದ್ದರು. ಈ ಸಂದರ್ಭ ನಿಕಟ ಪೂರ್ವ ಅಧ್ಯಕ್ಷ ನಿತೇಶ್ ಶೆಟ್ಟಿ ಬಸ್ರೂರು, ಮಾಜಿ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ ಹೇರಿಕುದ್ರು, ಉಪಾಧ್ಯಕ್ಷರಾದ ಸಂತೋಷ್ ಶೆಟ್ಟಿ ಹೈಕಾಡಿ, ಸತೀಶ್ ಶೆಟ್ಟಿ ಹೆಸ್ಕತ್ತೂರು, ಪದಾಧಿಕಾರಿಗಳಾದ ಪ್ರಶಾಂತ್ ಶೆಟ್ಟಿ ಶಿರೂರು, ಚಂದ್ರಶೇಖರ ಶೆಟ್ಟಿ ಯಳೂರು, ಸುರೇಂದ್ರ ಶೆಟ್ಟಿ ಗುಳ್ವಾಡಿ, ಅವಿನಾಶ್ ಶೆಟ್ಟಿ ಹೊಸಮಠ, ಪ್ರದೀಪ್ ಶೆಟ್ಟಿ ಕಾರಿಕಟ್ಟೆ ಹಾಗೂ ಸಂಘದ ಸದಸ್ಯರು ಉಪಸ್ಥಿತರಿದ್ದರು. ಸಂಘದ ಸ್ಥಾಪಕ ಅಧ್ಯಕ್ಷ ಡಾ| ಅಂಪಾರು ನಿತ್ಯಾನಂದ ಶೆಟ್ಟಿ ಪ್ರಸ್ತಾವಿಸಿ, ಕೋಶಾಧಿಕಾರಿ ಅರುಣ್ ಶೆಟ್ಟಿ ಕುಂದಾಪುರ ವಂದಿಸಿ, ಕಾರ್ಯದರ್ಶಿ ಪ್ರವೀಣ್ ಶೆಟ್ಟಿ ಹರ್ಕೂರು ಕಾರ್ಯಕ್ರಮ ನಿರೂಪಿಸಿದರು.














































































































