
ಬ್ರಹ್ಮಾವರ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನ ಮಕ್ಕಳಿಗೆ ಕೃಷಿಯಲ್ಲಿ ಆಸಕ್ತಿಯನ್ನು ಮೂಡಿಸಲು “ಕೃಷಿತೋ ನಾಸ್ತಿ ದುರ್ಭಿಕ್ಷಂ” ಎನ್ನುವ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಸಂಸ್ಥೆಯ ಸ್ಕೌಟ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿಯವರ ಮಾರ್ಗದರ್ಶನದಲ್ಲಿ ಉಡುಪಿ ಉದ್ಯಾವರದ ಕುತ್ಪಾಡಿಯ ಸತ್ಯಯುಗ ಯೋಗಾಶ್ರಮದ ಕೃಷಿ ಭೂಮಿಯಲ್ಲಿ ಭತ್ತದ ನಾಟಿಯನ್ನು ಮಾಡಿದರು. ಯೋಗಾಶ್ರಮದ ಮ್ಯಾನೇಜರ್ ಶ್ರೀ ವಾಮನ ಬಂಗೇರ ಅವರು ಮಕ್ಕಳಿಗೆ ಊಟೋಪಚಾರಗಳನ್ನು ನೀಡಿ ಶುಭ ಹಾರೈಸಿದರು. ಮಕ್ಕಳು ಸ್ಥಳೀಯ ರೈತರೊಂದಿಗೆ ನೇಜಿಯನ್ನು ನಾಟಿ ಮಾಡುವುದರ ಮೂಲಕ ಕೃಷಿಯ ಅನುಭವ ಪಡೆದುಕೊಂಡರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಕೃಷಿ ಭೂಮಿಯಲ್ಲಿ ಮಕ್ಕಳ ಜೊತೆಯಿದ್ದು ಸ್ಪೂರ್ತಿ ತುಂಬಿದರು. ಶಾಲಾ ಕೌನ್ಸಿಲರ್ ಶ್ರೀಮತಿ ನೀಲಾವತಿ, ಸ್ಕೌಟ್ ಮತ್ತು ಗೈಡ್ಸ್ ಶಿಕ್ಷಕರಾದ ಗಾಯತ್ರಿ, ಸ್ಮಿತಾ, ವಿಜಯ್ ಕುಮಾರ್ ಹಾಗೂ ಬಸವರಾಜ್ ಮಕ್ಕಳೊಂದಿಗೆ ಉಪಸ್ಥಿತರಿದ್ದು ಮಾರ್ಗದರ್ಶನವನ್ನು ನೀಡಿದರು.






















































































































