ತೊಟ್ಟಿಲ ತೂಗುವ ಕೈ ಜಗವ ತೂಗ ಬಲ್ಲುದು ಎಂಬ ಮಾತು ಪ್ರಚಲಿತದಲ್ಲಿದೆ. ಇದು ಮಹಿಳಾ ಸಬಲೀಕರಣದ ಯೋಜನೆಗಳಿಗೆ ಸ್ಫೂರ್ತಿ ಮಂತ್ರ. ಒಬ್ಬಾಕೆ ವಿದ್ಯಾವಂತೆ, ಸುಸಂಸ್ಕೃತೆ ಹಾಗೂ ಪ್ರತಿಭಾನ್ವಿತ ಹೆಣ್ಣಿನ ಸಾಮರ್ಥ್ಯವನ್ನು ಸಮಾಜ ಗುರುತಿಸಿ ಆಕೆಗೆ ಉತ್ತಮ ಸ್ಥಾನಮಾನಗಳನ್ನು ನೀಡಿದರೆ ಖಂಡಿತವಾಗಿಯೂ ಒಂದು ಸಮುದಾಯ ಸಮಾಜ ಪ್ರಗತಿ ಕಾಣಬಹುದು. ಇದೀಗ ಬೆಂಗಳೂರು ಬಂಟರ ಸಂಘದ ಉಪಾಧ್ಯಕ್ಷೆ ಸ್ಥಾನಕ್ಕೆ ಸ್ಪರ್ಧಾಳು ಆಗಿರುವ ಕಾನೂನು ಪದವಿಧರೆ, ಯಕ್ಷಗಾನ ಹವ್ಯಾಸಿ ಕಲಾವಿದೆ, ಕ್ರೀಡೆ, ಸಾಹಿತ್ಯ ಪ್ರತಿಭೆ, ಸಾಮಾಜಿಕ ಚಿಂತಕಿ ಶ್ರೀಮತಿ ಸೌಮ್ಯ ಪ್ರಿಯ ಹೆಗ್ಡೆ ಅವರು ಈ ಹುದ್ದೆಗೆ ಅರ್ಹರಾಗಿದ್ದಾರೆ ಎಂದು ಎದೆಯುಬ್ಬಿಸಿ ಹೇಳಬಲ್ಲೆವು. ಎಸ್.ಡಿ.ಎಮ್ ಲಾ ಕಾಲೇಜು ಮೂಲಕ ಕಾನೂನು ಕಲಿತ ಪದವಿಧರೆ ಸೌಮ್ಯ ಅವರು ತನ್ನ ವಿದ್ಯಾರ್ಥಿ ಜೀವನದಲ್ಲಿ ಪಾಠ ಪಾಠೇತರ ಚಟುವಟಿಕೆಗಳಲ್ಲಿ ಮುಂದೆ ಇದ್ದವರು ತನ್ನ ಆಸಕ್ತಿಯನ್ನು ಉಳಿಸಿ ಬೆಳೆಸುವ ಮೂಲಕ ಸಾಕಷ್ಟು ಜನಪ್ರಿಯತೆಯನ್ನು ಗಳಿಸಿಕೊಂಡಿದ್ದಾರೆ.
ಹಲವು ಮುಖಗಳಾಗಿ ಹರಿದ ಪ್ರತಿಭೆಗಳ ಒಡತಿ ಶ್ರೀಮತಿ ಸೌಮ್ಯ ಪ್ರಿಯ ಹೆಗ್ಡೆ ಅವರ ಕೌಟುಂಬಿಕ ಹಿನ್ನೆಲೆ ತುಂಬಾ ಪ್ರತಿಷ್ಠಿತ ಪ್ರಸಿದ್ಧ. ಈ ಕುಟುಂಬದ ಪ್ರತೀ ಸದಸ್ಯರು ಒಂದಿಲ್ಲೊಂದು ಕ್ಷೇತ್ರದಲ್ಲಿ ಅಗ್ರಮಾನ್ಯರು. ಗಿಳಿಯಾರು ಕುಶಲ್ ಹೆಗ್ಡೆ ಇದು ಕೇವಲ ಹೆಸರು ಮಾತ್ರವೇ ಆಗಿರದೆ ಆ ಕಾಲದ ಬಹುದೊಡ್ಡ ಸಾಮಾಜಿಕ ಸ್ಪಂದನೆಯ ಶಕ್ತಿಯಾಗಿತ್ತು. ಸಂಘಟನೆ, ಸಾಮರಸ್ಯ, ಸಮೃದ್ಧಿ, ಹೀಗೆ ತನ್ನ ಬದುಕನ್ನೇ ನಿತ್ಯೋತ್ಸವದಂತೆ ಬದುಕಿದವರು ಗಿಳಿಯಾರು ಮೈನಾಡಿ ಮನೆ ಕುಶಲ್ ಹೆಗ್ಡೆ. ಇವರ ಹೆಸರಿನಲ್ಲಿ ‘ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೆಬಲ್ ಟ್ರಸ್ಟ್’ ಸಮಾಜಮುಖಿ ಕಾರ್ಯಗಳನ್ನು ನಡೆಸುತ್ತಿದೆ. ಕಳೆದ 25 ವರ್ಷಗಳಿಂದ ಸಾವಿರಾರು ವಿದ್ಯಾರ್ಥಿಗಳಿಗೆ ವಿದ್ಯಾರ್ಜನೆಗಾಗಿ ವಿದ್ಯಾರ್ಥಿವೇತನ ನೀಡಲಾಗಿದೆ. ಬಹುಶ್ರುತ ಬಂಟಶ್ರೇಷ್ಠ ಗಿಳಿಯಾರು ಕುಶಲ ಹೆಗ್ಡೆಯವರ ಸೊಸೆಯಾಗಿರುವ ಇವರು ಇಂಜಿನಿಯರ್ ಬಿ ಕಿಶೋರ್ ಹೆಗ್ಡೆ ಗಿಳಿಯಾರು ಅವರ ಧರ್ಮಪತ್ನಿ. ಅಡ್ವಕೇಟ್ ಮೇನಾಲ ಶ್ರೀನಿವಾಸ ರೈ ಹಾಗೂ ಪನ್ನೆಗುತ್ತು ದೇವಕಿ ರೈ ದಂಪತಿಯ ಸುಪುತ್ರಿ ಹಾಗೂ ಖ್ಯಾತ ಹೈಕೋರ್ಟ್ ವಕೀಲ ವಿಶ್ವಜಿತ್ ರೈ ಅವರ ಸಹೋದರಿ ಈಕೆ. ಸುಮಾರು ಮೂವತ್ತು ವರ್ಷಗಳಿಂದ ಬೆಂಗಳೂರು ಬಂಟರ ಸಂಘದ ಸದಸ್ಯೆಯಾಗಿ ಮಾತ್ರವಲ್ಲದೇ ವಿವಿಧ ಹುದ್ದೆಗಳನ್ನು ಸಮರ್ಥವಾಗಿ ನಿಭಾಯಿಸಿದ ಹೆಗ್ಗಳಿಕೆ ಇವರದ್ದು. ತನಗೆ ದೊರೆತ ಹುದ್ದೆ ಯಾವುದೇ ಇರಲಿ, ಸಮಿತಿ ಉಪಸಮಿತಿ ಏನೇ ಇರಲಿ ತನ್ನ ಸಮರ್ಥ ಪಾರದರ್ಶಿಕ ಸೇವೆ ಸಲ್ಲಿಸಿ ಎಲ್ಲರ ವಿಶ್ವಾಸಕ್ಕೆ ಪಾತ್ರರಾಗಿದ್ದಾರೆ. ಇವರ ಪ್ರಾಮಾಣಿಕತೆ, ಸಮುದಾಯ ಸದಸ್ಯಪರ ಕಾಳಜಿ, ಸಂಘದ ಪ್ರಗತಿಗೆ ನಿರಂತರ ಪರಿಶ್ರಮ ಪಡುವ ಪ್ರಯತ್ನಶೀಲೆ ಕ್ರಿಯಾಶೀಲೆಯಾಗಿದ್ದಾರೆ.




ಬೆಂಗಳೂರು ಬಂಟರ ಸಂಘದ ಮಾಜಿ ಅಧ್ಯಕ್ಷ ದಿವಂಗತ ಡಿ.ಕೆ ಚೌಟರ ಅಧ್ಯಕ್ಷತೆ ಅವಧಿಯಲ್ಲಿ ಸಾಂಸ್ಕೃತಿಕ ವಿಭಾಗದಲ್ಲಿ ಅಪ್ರತಿಮ ಸೇವೆ ಸಾಧನೆಗಳನ್ನು ಮೆರೆದ ಸೌಮ್ಯ ಅವರು ನಂತರದ ದಿನಗಳಲ್ಲಿ ಸಂಘದೊಂದಿಗೆ ತನ್ನನ್ನು ತೀರಾ ಆಪ್ತತೆಯಿಂದ ಜೋಡಿಸಿಕೊಂಡು ಸದಾ ಕ್ರಿಯಾಶೀಲರಾಗಿದ್ದಾರೆ. ಸಂಘದ ವಿವಿಧ ವಿಭಾಗಗಳಲ್ಲಿ ಪದಾಧಿಕಾರಿಯಾಗಿ ಸೇವೆ ಸಲ್ಲಿಸಿರುವ ಇವರು ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ಜೊತೆಗೆ ಕ್ರೀಡಾ ವಿಭಾಗದಲ್ಲಿ ವಿಶೇಷ ಪರಿಣತಿ ತೋರಿಸಿದ್ದಾರೆ. ಸಂಘದೊಂದಿಗೆ ಸತತ ನಿರಂತರ ಸಂಪರ್ಕ ಹೊಂದಿರುವ ಇವರು ಇತರ ಸದಸ್ಯರ ಜೊತೆಗೆ ಹೊಂದಿದ ಸ್ನೇಹ ಸದ್ಭಾವಗಳು ಇತರ ಮಹಿಳೆಯರಿಗೆ ಮಾದರಿಯಾಗಿದೆ. ಬಹುಮುಖ ಪ್ರತಿಭೆಯ ಪ್ರತಿಷ್ಠಿತ ಬಂಟ ಕುಟುಂಬದ ಕುವರಿ ಬೆಂಗಳೂರು ಬಂಟರ ಸಂಘದ ಉಪಾಧ್ಯಕ್ಷೆ ಗಾದಿಗೆ ಅರ್ಹರಾಗಿದ್ದಾರೆ. ಇದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಬಂಟ ಸಮಾಜ ಬಾಂಧವರು ಸರ್ವ ರೀತಿಯಲ್ಲಿಯೂ ಸಂಪನ್ನರೂ ಸಮರ್ಥರೂ ಆಗಿರುವ ಡಾ| ದೀಪಕ್ ಶೆಟ್ಟರ ಸಮಸ್ತ ತಂಡವನ್ನೇ ಐತಿಹಾಸಿಕ ಮತಗಳ ಅಂತರಲ್ಲಿ ಗೆಲ್ಲಿಸಲಿ ಎನ್ನುವುದು ಬಂಟ್ಸ್ ನೌ ಮಾಧ್ಯಮ ಸಂಸ್ಥೆಯ ಹಾರೈಕೆ.
ಬರಹ : ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು




















































































































