ಬ್ರಹ್ಮಾವರ, ಜುಲೈ ೧೩: ಇಲ್ಲಿನ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಇಂಟರ್ ಹೌಸ್ ಚರ್ಚಾ ಸ್ಪರ್ಧೆಯನ್ನು ಆಯೋಜಿಸಲಾಯಿತು. ಚರ್ಚಾಕೂಟದ ನಿರ್ವಾಹಕ ಬ್ರಹ್ಮಾವರ ಕ್ರಾಸ್ಲ್ಯಾಂಡ್ ಕಾಲೇಜಿನ ಪ್ರಾಂಶುಪಾಲರಾದ ಡಾ. ಜಿ ರಾಬರ್ಟ್ ಕ್ಲೇವ್ ಮಾತನಾಡಿ ಮನುಷ್ಯನ ಜೀವ ತುಂಬಾ ಅಮೂಲ್ಯವಾದದ್ದು. ಆದರೆ ಇಂದಿನ ಪ್ರತಿಭಾವಂತ ವಿದ್ಯಾರ್ಥಿಗಳೇ ಜೀವನ ಕೌಶಲ್ಯ ಮತ್ತು ಮೌಲ್ಯಗಳ ಕೊರತೆಯಿಂದ ಆತ್ಮಹತ್ಯೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ಮಾದಕ ವಸ್ತುಗಳಿಂದ ಬಲಿಯಾಗುತ್ತಿದ್ದಾರೆ. ಇಂದು ಮಕ್ಕಳಿಗೆ ಸಾಮಾಜಿಕ ಮೌಲ್ಯಗಳ ಅರಿವಿನ ಅಗತ್ಯತೆ ಇದೆ. ಎಲ್ಲರೂ ತಮ್ಮ ಪೋಷಕರನ್ನು ಪ್ರೀತಿಸಿ ಅವರ ತ್ಯಾಗವನ್ನು ಸ್ಮರಿಸಿ ಕಠಿಣ ಪರಿಶ್ರಮದೊಂದಿಗೆ ಮುನ್ನಡೆಯಬೇಕೆಂದರು. ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಕೆಲಸವನ್ನು ಸಂಪಾದಿಸಲು ಅಂಕಗಳು ನೆರವಾದರೆ ಮುಂದಿನ ಜೀವನವನ್ನು ಯಶಸ್ವಿಯಾಗಿ ಕಟ್ಟಿಕೊಳ್ಳಲು ಮೌಲ್ಯಗಳು, ಕೌಶಲ್ಯಗಳು ಅವಶ್ಯಕವಾಗಿದೆ.
ಮಕ್ಕಳು ತಮಗೆ ಸಿಗುವ ಎಲ್ಲಾ ಅವಕಾಶಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಇದರಿಂದ ಆತ್ಮಸ್ಥೆರ್ಯ ಹೆಚ್ಚಾಗಿ ಜೀವನ ಉಜ್ವಲವಾಗುತ್ತದೆ ಎಂದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಎಲ್ಲಾ ಸ್ಪರ್ದಿಗಳ ಪೂರ್ವಸಿದ್ಧತೆ, ಭಾಗವಹಿಸುವಿಕೆ ಮತ್ತು ಸ್ಪರ್ಧಾಗುಣಗಳನ್ನು ಪ್ರಶಂಸಿದರು. ಶಾಲೆಯ ಗುಣ, ಮೇಧ, ವಿದ್ಯಾ, ಪ್ರಜ್ಞಾ, ಶ್ರದ್ಧಾ ತಂಡಗಳ ನಡುವೆ ಎರಡು ಹಂತಗಳಲ್ಲಿ ನಡೆದ ಸ್ಪರ್ಧೆಯಲ್ಲಿ ಅಂತಿಮವಾಗಿ ಶ್ರದ್ಧಾ ತಂಡವು ಪ್ರಥಮ ಸ್ಥಾನವನ್ನು, ಮೇಧಾ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡವು. ಎಲ್ಲಾ ವಿಜೇತರಿಗೂ ಬಹುಮಾನವನ್ನು ವಿತರಿಸಲಾಯಿತು. ಚರ್ಚಾ ಸ್ಪರ್ಧೆಯಲ್ಲಿ ಶ್ರೀಮತಿ ಎವರೆಸ್ಟ್ ಕ್ಲೇವ್, ಶಾಲೆಯ ಶಿಕ್ಷಕವೃಂದ ಹಾಗೂ ವಿದ್ಯಾರ್ಥಿವೃಂದ ಉಪಸ್ಥಿತರಿದ್ದರು.























































































































