
2028ರಲ್ಲಿ ಶತಮಾನೋತ್ಸವ ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆಯ ಜಾಗತಿಕ ಸಂಘಟನೆಯಾದ ತುಳುವ ಮಹಾಸಭೆ ಇಂಟರ್ನ್ಯಾಷನಲ್ ವತಿಯಿಂದ ಕಾಪು ವಲಯ ಸಂಚಾಲಕರಾಗಿ ಡಾ| ನಿರಂಜನ್ ಎಸ್ ಶೆಟ್ಟಿ ಅವರನ್ನು ಮರು ನೇಮಕ ಮಾಡಲಾಗಿದೆ. ಆಯುರ್ವೇದ, ಯೋಗ, ಸಮತೋಲಿತ ಆಹಾರ ಹಾಗೂ ಮನಃಶಾಂತಿ ಆಧಾರಿತ ಸಮಗ್ರ ಆರೋಗ್ಯ ಸೇವೆಯಲ್ಲಿ ಗುರುತಿಸಿಕೊಂಡಿರುವ ಡಾ| ನಿರಂಜನ್ ಎಸ್ ಶೆಟ್ಟಿ ಅವರು ಸುನಂದ ವೆಲ್ನೆಸ್ ಸೆಂಟರ್ ನ ಸಂಸ್ಥಾಪಕರಾಗಿದ್ದು, ಔಷಧರಹಿತ ಚಿಕಿತ್ಸಾ ವಿಧಾನಗಳ ಮೂಲಕ ನೂರಾರು ಜನರ ಆರೋಗ್ಯ ಸುಧಾರಣೆಗೆ ಸೇವೆ ಸಲ್ಲಿಸುತ್ತಿದ್ದಾರೆ. ಮನೋವಿಜ್ಞಾನದಲ್ಲಿ ಡಾಕ್ಟರೇಟ್ ಪದವಿ ಪಡೆದಿರುವ ಅವರು ರಾಷ್ಟ್ರೀಯ ಮಾನವ ಹಕ್ಕು ಸಮಿತಿ ಹಾಗೂ ಮಹಿಳಾ ಮಕ್ಕಳ ಅಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸುತ್ತಿದ್ದಾರೆ. ಅಮೆರಿಕದ ಲಿಂರಾ ವಿಂಡ್ಸರ್ ಸುವರ್ಣ ಪದಕ ಹಾಗೂ ಸಿಂಗಾಪುರದ ಚಾಂಪಿಯನ್ ಆಫ್ ಚಾಂಪಿಯನ್ಸ್ ಸಿಇಓ ಅವಾರ್ಡ್ ಸೇರಿದಂತೆ ಹಲವು ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದಾರೆ.


ಅವರ ಸಮಾಜ ಸೇವೆ, ಸಂಘಟನಾ ಸಾಮರ್ಥ್ಯ ಹಾಗೂ ತುಳು ಭಾಷೆ, ಸಂಸ್ಕೃತಿ ಮತ್ತು ತಾಯ್ನಾಡಿನ ಮೇಲಿನ ಬದ್ಧತೆಯನ್ನು ಪರಿಗಣಿಸಿ ತುಳುವ ಮಹಾಸಭೆ ಇಂಟರ್ನ್ಯಾಷನಲ್ನ ಅಂತರರಾಷ್ಟ್ರೀಯ ಅಧ್ಯಕ್ಷ ಸರ್ವೋತ್ತಮ ಶೆಟ್ಟಿ, ಕೇಂದ್ರೀಯ ಅಧ್ಯಕ್ಷ ಡಾ. ಅವಿನ್ ಬಿ.ಆರ್ ಆಳ್ವ, ಪ್ರಧಾನ ಕಾರ್ಯದರ್ಶಿ ಅರವಿಂದ ಬೆಳ್ಚಡ ಹಾಗೂ ಪ್ರಧಾನ ಸಂಚಾಲಕ ವಿಶ್ವನಾಥ ಆಚಾರ್ಯ ಪೆರ್ಡೂರು ಅವರು ಕಾಪು ವಲಯ ಸಂಚಾಲಕರಾಗಿ ಮರು ನೇಮಕ ಮಾಡಿದ್ದಾರೆ. ತುಳುವ ಮಹಾಸಭೆಯ ಶತಮಾನೋತ್ಸವದ ಅಂಗವಾಗಿ ತುಳು ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆ, ತುಳುವ ನಾಗರಿಕತೆಯ ವೈಭವವನ್ನು ಮರುಸ್ಥಾಪಿಸುವುದು, ತುಳುನಾಡನ್ ಕಳರಿ, ದೈವಾರಾಧನಾ ಪರಂಪರೆಯ ಪುನರುಜ್ಜೀವನ ಹಾಗೂ ಸಮುದಾಯದ ಸಂಘಟನೆಯನ್ನು ಬಲಪಡಿಸುವ ವಿವಿಧ ಕಾರ್ಯಕ್ರಮಗಳನ್ನು ಕಾಪು ವಲಯದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ವಿಶ್ವಾಸವನ್ನು ಮಹಾಸಭೆಯ ಕೇಂದ್ರೀಯ ಸಮಿತಿ ವ್ಯಕ್ತಪಡಿಸಿದೆ. ಈ ಮರು ನೇಮಕವನ್ನು ತುಳುವರ್ಲ್ಡ್ ಫೌಂಡೇಶನ್ ಗೌರವಾಧ್ಯಕ್ಷ ಶ್ರೀ ಹರಿನಾರಾಯಣದಾಸ ಅಸ್ರಣ್ಣ, ಅಧ್ಯಕ್ಷೆ ಭಾನುಮತಿ ಶೆಟ್ಟಿ ಕಕ್ವಗುತ್ತು, ಕಾರ್ಯದರ್ಶಿ ವಸಂತ ರೈ ಹಾಗೂ ನಿರ್ದೇಶಕ ಡಾ| ರಾಜೇಶ್ ಕೃಷ್ಣ ಆಳ್ವ ಅವರು ಸ್ವಾಗತಿಸಿ, ಡಾ| ನಿರಂಜನ್ ಎಸ್ ಶೆಟ್ಟಿ ಅವರಿಗೆ ಅಭಿನಂದನೆ ಸಲ್ಲಿಸಿ ಶುಭ ಹಾರೈಸಿದ್ದಾರೆ.




























































































































