

1928ರ ಸೆಪ್ಟೆಂಬರ್ 23ರಂದು ಉಡುಪಿಯಲ್ಲಿ ಸ್ಥಾಪನೆಯಾಗಿ, 2028ರಲ್ಲಿ ಶತಮಾನೋತ್ಸವವನ್ನು ಆಚರಿಸಲಿರುವ ಐತಿಹಾಸಿಕ ತುಳುವ ಮಹಾಸಭೆಯ ಜಾಗತಿಕ ಸಂಘಟನೆಯಾದ ತುಳುವ ಮಹಾಸಭೆ ಇಂಟರ್ನ್ಯಾಷನಲ್ ನ ಅಂತರರಾಷ್ಟ್ರೀಯ ಅಧ್ಯಕ್ಷರಾಗಿ ಯುನೈಟೆಡ್ ಅರಬ್ ಎಮಿರೇಟ್ಸ್ನ ಹಿರಿಯ ಸಮಾಜಸೇವಕ, ಉದ್ಯಮಿ ಹಾಗೂ ಅನಿವಾಸಿ ತುಳುವ ಸಮುದಾಯದ ಪ್ರಮುಖ ಸಂಘಟಕರಾದ ಸರ್ವೋತ್ತಮ ಶೆಟ್ಟಿ ಅವರನ್ನು ಆಯ್ಕೆ ಮಾಡಲಾಗಿದೆ. ಉಡುಪಿ ಜಿಲ್ಲೆಯ ಪರೀಕ ಗ್ರಾಮದವರಾದ ಸರ್ವೋತ್ತಮ ಶೆಟ್ಟಿ ಅವರು ಕಳೆದ 48 ವರ್ಷಗಳಿಂದ ಯುನೈಟೆಡ್ ಅರಬ್ ಎಮಿರೇಟ್ಸ್ನಲ್ಲಿ ಕನ್ನಡ ಮತ್ತು ತುಳು ಭಾಷೆ, ಕಲೆ ಹಾಗೂ ಸಂಸ್ಕೃತಿಯ ಬೆಳವಣಿಗೆಗೆ ಅಪಾರ ಕೊಡುಗೆ ನೀಡಿದ್ದಾರೆ. ಅಬುಧಾಬಿ ಕರ್ನಾಟಕ ಸಂಘ, ಯುಎಇ ಬಂಟ್ಸ್, ಯುಎಇ ತುಳು ಕೂಟ ಸೇರಿದಂತೆ ಹಲವು ಸಂಘಟನೆಗಳ ಸ್ಥಾಪನೆ ಮತ್ತು ಬೆಳವಣಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿರುವ ಅವರು, ಅನಿವಾಸಿ ತುಳುವರನ್ನು ಜಾಗತಿಕ ಮಟ್ಟದಲ್ಲಿ ಸಂಘಟಿಸುವ ಕಾರ್ಯದಲ್ಲಿ ಮುಂಚೂಣಿಯಲ್ಲಿದ್ದಾರೆ. 2016 ರಲ್ಲಿ ಕಾಸರಗೋಡು ಜಿಲ್ಲೆಯ ಬದಿಯಡ್ಕದಲ್ಲಿ ಐದು ದಿನಗಳ ಕಾಲ ನಡೆದ ಐತಿಹಾಸಿಕ ‘ವಿಶ್ವ ತುಳುವೆರೆ ಆಯನೊ’ದ ಅಧ್ಯಕ್ಷರಾಗಿ ಯಶಸ್ವಿ ನಾಯಕತ್ವ ವಹಿಸಿ, ವಿಶ್ವದಾದ್ಯಂತ ತುಳು ಭಾಷೆ, ಸಂಸ್ಕೃತಿ ಹಾಗೂ ತುಳುವರ ಐಕ್ಯತೆಗೆ ಹೊಸ ದಿಕ್ಕು ನೀಡಿದ್ದರು. ಬಳಿಕ 2018ರಲ್ಲಿ ದುಬೈನಲ್ಲಿ ನಡೆದ ವಿಶ್ವ ತುಳು ಸಮ್ಮೇಳನದ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿ, ಅನಿವಾಸಿ ತುಳುವರನ್ನು ಒಂದೇ ವೇದಿಕೆಯಡಿ ಒಗ್ಗೂಡಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.


ಸರ್ವೋತ್ತಮ ಶೆಟ್ಟಿ ಅವರು ತುಳುವರ್ಲ್ಡ್ ಫೌಂಡೇಶನ್ನ ನಿಕಟ ಪೂರ್ವ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದು, ತುಳುವ ಮಹಾಸಭೆಯ ಪುನಶ್ಚೇತನ, ಜಾಗತಿಕ ವಿಸ್ತರಣೆ ಹಾಗೂ ತುಳು ಭಾಷೆ, ಸಂಸ್ಕೃತಿ ಮತ್ತು ಪರಂಪರೆಯ ಸಂರಕ್ಷಣೆಗೆ ಮಹತ್ವದ ಕೊಡುಗೆ ನೀಡಿದ್ದಾರೆ. ವಿದೇಶದಲ್ಲಿ ಕನ್ನಡ ಮತ್ತು ತುಳು ಭಾಷೆ, ಕಲೆ ಹಾಗೂ ಸಂಸ್ಕೃತಿಯ ಅಭಿವೃದ್ಧಿಗೆ ಸಲ್ಲಿಸಿದ ಅಪೂರ್ವ ಸೇವೆಗಾಗಿ ಕರ್ನಾಟಕ ಸರ್ಕಾರವು ಅವರಿಗೆ 1998ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (ಹೊರನಾಡ ಕನ್ನಡಿಗ) ನೀಡಿ ಗೌರವಿಸಿದೆ. ಇದಲ್ಲದೇ ಆರ್ಯಭಟ ಅಂತರಾಷ್ಟ್ರೀಯ ಪ್ರಶಸ್ತಿ, ಗ್ಲೋಬಲ್ಮ್ಯಾನ್ ಪ್ರಶಸ್ತಿ, ಮಯೂರ ವಿಶ್ವ ಕನ್ನಡಿಗ ಪ್ರಶಸ್ತಿ, ತುಳುವ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ, ಅನಿವಾಸಿ ತುಳುವ ಸಾಧಕ ಪ್ರಶಸ್ತಿ ಸೇರಿದಂತೆ ಅನೇಕ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಪ್ರಶಸ್ತಿಗಳಿಗೆ ಅವರು ಭಾಜನರಾಗಿದ್ದಾರೆ.
ತುಳುವ ಮಹಾಸಭೆ 1928ರ ಸೆಪ್ಟೆಂಬರ್ 23ರಂದು ಎಸ್.ಯು ಪಣಿಯಾಡಿಯವರ ನೇತೃತ್ವದಲ್ಲಿ ಉಡುಪಿಯಲ್ಲಿ ಸ್ಥಾಪನೆಯಾದ ತುಳುನಾಡಿನ ಐತಿಹಾಸಿಕ ಭಾಷಾ ಸಾಂಸ್ಕೃತಿಕ ಚಳವಳಿಯಾಗಿದೆ. ಸಂಸ್ಥಾಪಕರಲ್ಲಿ ಅಂಜಾರು ರಾಮಣ್ಣ ಹೆಗ್ಡೆ, ಎಸ್.ಯು ಪಣಿಯಾಡಿ, ಡಾ. ಯು. ರಾಮಚಂದ್ರ ರಾವ್, ಹಿರಿಯಡ್ಕ ನಾರಾಯಣ ರಾವ್ ಹಾಗೂ ಯು ವೆಂಕಪ್ಪಯ್ಯ ಪ್ರಮುಖರಾಗಿದ್ದರು. ನಂತರ ಪೊಳಲಿ ಶೀನಪ್ಪ ಹೆಗ್ಡೆ ಹಾಗೂ ಬಡಕಬೈಲು ಪರಮೇಶ್ವರಯ್ಯ ಅವರ ನೇತೃತ್ವದಲ್ಲಿ ಮಹಾಸಭೆ ಹಲವು ದಶಕಗಳ ಕಾಲ ಸಕ್ರಿಯವಾಗಿ ಕಾರ್ಯ ನಿರ್ವಹಿಸಿ ತುಳು ಭಾಷೆ, ಸಾಹಿತ್ಯ, ಸಂಸ್ಕೃತಿ, ದೈವಾರಾಧನೆ, ಜಾನಪದ ಪರಂಪರೆ ಹಾಗೂ ತುಳುವರ ಸ್ವಾಭಿಮಾನವನ್ನು ಉಳಿಸಿ ಬೆಳೆಸುವಲ್ಲಿ ಮಹತ್ವದ ಪಾತ್ರ ವಹಿಸಿತು. 97 ವರ್ಷಗಳ ಸುದೀರ್ಘ ಇತಿಹಾಸ ಹೊಂದಿರುವ ತುಳುವ ಮಹಾಸಭೆಯನ್ನು ಶತಮಾನೋತ್ಸವದ ಅಂಗವಾಗಿ ತುಳುವರ್ಲ್ಡ್ ಫೌಂಡೇಶನ್ನ ಮುಂದಾಳತ್ವದಲ್ಲಿ ಪುನಶ್ಚೇತನಗೊಳಿಸಲಾಗಿದ್ದು, ವಿಶ್ವದಾದ್ಯಂತ ತುಳುವರನ್ನು ಒಂದೇ ವೇದಿಕೆಯಡಿ ಸಂಘಟಿಸುವ ಉದ್ದೇಶದಿಂದ ತುಳುವ ಮಹಾಸಭೆ ಇಂಟರ್ನ್ಯಾಷನಲ್ ಅನ್ನು ಬಲಿಷ್ಠಗೊಳಿಸಲಾಗುತ್ತಿದೆ. ಸಂಸ್ಥೆಯ ಪ್ರಮುಖ ಧ್ಯೇಯಗಳಲ್ಲಿ ತುಳುವ ನಾಗರಿಕತೆಯ ವೈಭವವನ್ನು ಮರು ಸ್ಥಾಪಿಸುವುದು, ತುಳು ಭಾಷೆಗೆ ಭಾರತದ ಸಂವಿಧಾನದ ಎಂಟನೇ ಅನುಸೂಚಿಯಲ್ಲಿ ಸ್ಥಾನ ದೊರಕಿಸುವುದು, ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ತುಳುವಿಗೆ ಅಧಿಕೃತ ಭಾಷೆಯ ಮಾನ್ಯತೆ ದೊರಕಿಸುವುದು, ತುಳು ಸಾಹಿತ್ಯ, ಜಾನಪದ, ದೈವಾರಾಧನೆ, ಬನ ಸಂಸ್ಕೃತಿ, ತುಳುನಾಡಿನ ಕಲರಿ ಹಾಗೂ ಮರ್ಮ ಚಿಕಿತ್ಸೆಯ ಪುನರುಜ್ಜೀವನ, ಪ್ರಾದೇಶಿಕ ಭಾಷೆ ಮತ್ತು ಸಂಸ್ಕೃತಿಗಳ ಸಂರಕ್ಷಣೆ, ಯುವಜನರಿಗೆ ಕೌಶಲ್ಯಾಭಿವೃದ್ಧಿ ಹಾಗೂ ಉದ್ಯೋಗಾವಕಾಶ, ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿಗೆ ಉತ್ತೇಜನ ಹಾಗೂ ವಿಶ್ವದಾದ್ಯಂತ ತುಳು ಭಾಷೆ ಮತ್ತು ಸಂಸ್ಕೃತಿಗೆ ಜಾಗತಿಕ ಮನ್ನಣೆ ದೊರಕಿಸುವ ಕಾರ್ಯಗಳು ಸೇರಿವೆ.
2028 ರ ಶತಮಾನೋತ್ಸವವನ್ನು ಭಾರತ ಸೇರಿದಂತೆ ವಿಶ್ವದ ವಿವಿಧ ದೇಶಗಳಲ್ಲಿ ವಿಜೃಂಭಣೆಯಿಂದ ಆಚರಿಸುವುದರೊಂದಿಗೆ, ತುಳುವ ನಾಗರಿಕತೆಯ ವೈಭವವನ್ನು ಮರು ಸ್ಥಾಪಿಸುವ ಮಹಾ ಸಂಕಲ್ಪದೊಂದಿಗೆ ವಿಶ್ವದ ತುಳುವರನ್ನು ಒಂದುಗೂಡಿಸಿ, ಭಾಷೆ, ಸಂಸ್ಕೃತಿ, ಪರಂಪರೆ, ಇತಿಹಾಸ ಹಾಗೂ ಜ್ಞಾನ ಪರಂಪರೆಯನ್ನು ಮುಂದಿನ ಪೀಳಿಗೆಗೆ ತಲುಪಿಸುವ ನಿಟ್ಟಿನಲ್ಲಿ ವಿವಿಧ ಶೈಕ್ಷಣಿಕ, ಸಾಂಸ್ಕೃತಿಕ, ಸಂಶೋಧನಾ ಹಾಗೂ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ತುಳುವ ಮಹಾಸಭೆ ಇಂಟರ್ನ್ಯಾಷನಲ್ ಪ್ರಕಟಣೆಯಲ್ಲಿ ತಿಳಿಸಿದೆ.




























































































































