
ಬ್ರಹ್ಮಾವರ ಜಿ ಎಮ್ ವಿದ್ಯಾನಿಕೇತನ್ ಪಬ್ಲಿಕ್ ಸ್ಕೂಲ್ನಲ್ಲಿ ‘ಪ್ರೆಷರ್ಸ್’ ಡೇ ಯನ್ನು ಆಚರಿಸಲಾಯಿತು. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಖ್ಯಾತ ಯಕ್ಷಗಾನ ಕಲಾವಿದೆ, ವಿಮರ್ಷಕಿ, ಚಿಂತಕಿ ಶ್ರೀಮತಿ ಅಶ್ವಿನಿ ಹೆಗ್ಡೆ ಕೊಂಡದಕುಳಿ ಆಗಮಿಸಿದ್ದರು. ಅವರು ಮಾತನಾಡಿ ಉತ್ತಮ ಜೀವನ ನಡೆಸಲು ಅಂಕದ ಜೊತೆಯಲ್ಲಿ ಪ್ರಾಯೋಗಿಕ ಜ್ಞಾನ ಅತ್ಯಗತ್ಯ. ‘ಕಲಾರಂಗ’ದಲ್ಲಿನ ಆಸಕ್ತಿಯು ನಮ್ಮನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಗಟ್ಟಿಗೊಳಿಸುತ್ತದೆ. ನಮ್ಮ ಜೀವನದಲ್ಲಿರುವ ಧನಾತ್ಮಕತೆಯನ್ನು ಕಂಡುಕೊAಡಾಗ ಮಾತ್ರ ನಾವು ಸಾಧನೆ ಮಾಡಲು ಸಾಧ್ಯ. ಜೀವನದಲ್ಲಿ ‘ರೀಲ್ ಸ್ಟಾರ್’ ಆಗದೇ ‘ರಿಯಲ್ ಸ್ಟಾರ್’ ಆಗಿ ಎಂದು ತಿಳಿಸಿ, ಅಭಿಮನ್ಯು ಚಕ್ರವ್ಯೂಹಕ್ಕೆ ಯಾಕೆ ಮತ್ತು ಹೇಗೆ ತೆರಳುತ್ತಾನೆಂದು ಯಕ್ಷಗಾನದ ಭಾಗವತಿಕೆ ಮತ್ತು ಅಭಿನಯದ ಮೂಲಕ ಪ್ರದರ್ಶಿಸಿದರು.


ಶಾಲಾ ಆಡಳಿತ ಮಂಡಳಿಯ ಅಧ್ಯಕ್ಷರಾದ ಪ್ರಕಾಶ್ಚಂದ್ರ ಶೆಟ್ಟಿ ಮಾತನಾಡಿ ಶಿಕ್ಷಣದ ಜೊತೆಯಲ್ಲಿ ಕಲೆ, ಸಾಹಿತ್ಯ, ಸಂಗೀತ, ಸಂಸ್ಕೃತಿಯನ್ನು ಅಳವಡಿಸಿಕೊಂಡರೆ ನಿಮ್ಮ ಮುಂದಿನ ಜೀವನ ಉತ್ತಮವಾಗುತ್ತದೆ. ಅತಿಥಿಗಳ ನುಡಿಯಂತೆ ಸಂಸ್ಥೆಯಲ್ಲಿರುವ ಸೌಲಭ್ಯಗಳನ್ನು ಕೇವಲ ಉಪಯೋಗಿಸಿಕೊಳ್ಳದೇ ಸದ್ಭಳಕೆ ಮಾಡಿಕೊಳ್ಳಿ ಎಂದು ತಿಳಿಸಿದರು. ಸಂಸ್ಥೆಗೆ ಹೊಸದಾಗಿ ಸೇರಿಕೊಂಡ ಶಿಕ್ಷಕರ ಮತ್ತು ವಿದ್ಯಾರ್ಥಿಗಳಲ್ಲಿರುವ ಪ್ರತಿಭೆಯನ್ನು ಪ್ರಶಂಸಿಸಿ, ಶುಭ ಹಾರೈಸಿದರು. ಶಾಲಾ ಪ್ರಾಂಶುಪಾಲರಾದ ಜಾರ್ಜ್ ಕುರಿಯನ್ ಸಂಸ್ಥೆಗೆ ಹೊಸದಾಗಿ ಸೇರಿಕೊಂಡ ಶಿಕ್ಷಕರನ್ನು, ವಿದ್ಯಾರ್ಥಿಗಳಿಗೆ ಶುಭಕೋರಿ ಅವರಲ್ಲಿರುವ ಪ್ರತಿಭೆಗೆ ಸಂತೋಷ ವ್ಯಕ್ತಪಡಿಸಿದರು. ಮುಖ್ಯ ಅತಿಥಿಗಳ ಯಕ್ಷಗಾನದ ಪ್ರತಿಭೆಯ ಕುರಿತು ಮೆಚ್ಚುಗೆ ವ್ಯಕ್ತಪಡಿಸಿದರು.

ತಮ್ಮ ಮಕ್ಕಳ ವಿದ್ಯಾಭ್ಯಾಸಕ್ಕಾಗಿ ನಮ್ಮ ಸಂಸ್ಥೆಯನ್ನು ಆಯ್ಕೆ ಮಾಡಿದ ಪೋಷಕರಿಗೆ ಅಭಿನಂದನೆ ಸಲ್ಲಿಸಿದರು ಸಂಸ್ಥೆಗೆ ಹೊಸದಾಗಿ ಸೇರಿಕೊಂಡ ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮ್ಮಲ್ಲಿರುವ ಪ್ರತಿಭೆಗಳನ್ನು ವಿದ್ಯಾರ್ಥಿಗಳು ಮತ್ತು ಪೋಷಕರ ಮುಂದೆ ಪ್ರದರ್ಶಿಸಿದರು. ಕಾರ್ಯಕ್ರಮದಲ್ಲಿ ಶಾಲಾ ಆಡಳಿತ ಮಂಡಳಿಯ ಸದಸ್ಯೆ ತಾರಾ ಪ್ರಕಾಶ್ಚಂದ್ರ ಶೆಟ್ಟಿ, ಶಿಕ್ಷಕ ರಕ್ಷಕ ಸಂಘದ ಉಪಾಧ್ಯಕ್ಷೆ ರೇವತಿ ಕೆ, ಶ್ರೀಮಾ ಪ್ರಣವ್ ಶೆಟ್ಟಿ, ಪೋಷಕರು, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.




























































































































