
ಕುಂದಾಪುರ ಪರಿಸರದಲ್ಲಿ ಶಿಕ್ಷಣ, ಕಲೆ, ಸಾಹಿತ್ಯ, ಸಾಂಸ್ಕೃತಿಕ ವಲಯದಲ್ಲಿ ಕ್ರಿಯಾಶೀಲವಾಗಿ ಗುರುತಿಸಿಕೊಂಡಿರುವ ಸಂಘಟನಾ ಚತುರ, ವಾಗ್ಮಿಗಳಾಗಿರುವ ಡಾ| ಚೇತನ್ ಶೆಟ್ಟಿ ಕೋವಾಡಿ ಅವರು ಕುಂದಾಪುರ ತಾಲೂಕಿನ ಪ್ರತಿಷ್ಠಿತ ಯುವ ಬಂಟರ ಸಂಘದ 2026 -28 ನೇ ಸಾಲಿನ ನೂತನ ಅಧ್ಯಕ್ಷರಾಗಿ ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ. ಪ್ರಸ್ತುತ ಅವರು ಕುಂದಾಪುರದ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜಿನಲ್ಲಿ ಉಪ ಪ್ರಾಂಶುಪಾಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದು, ಎನ್.ಎಸ್.ಎಸ್ ಕಾರ್ಯಕ್ರಮಾಧಿಕಾರಿಗಳಾಗಿ ರಾಜ್ಯಮಟ್ಟದ ಗಮನ ಸೆಳೆದವರು. ಇವರ ನಿರ್ವಾಹಕ ಸಂಪಾದಕತ್ವದ ಕಾಲೇಜಿನ ವಾರ್ಷಿಕ ಸಂಚಿಕೆ ‘ಶಿಖರ’ ಸತತ ನಾಲ್ಕು ವರ್ಷ ಪ್ರಥಮ ಸ್ಥಾನ ಪಡೆಯುವ ಮೂಲಕ ದಾಖಲೆ ನಿರ್ಮಿಸಿದೆ. ಇದುವರೆಗೆ 200ಕ್ಕೂ ಹೆಚ್ಚು ಸರಕಾರಿ ಮತ್ತು ಖಾಸಗಿ ಪ್ರಾಯೋಜಿತ ಕಾರ್ಯಕ್ರಮಗಳಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಇವರು ರಾಜ್ಯ ಮತ್ತು ರಾಷ್ಟ್ರಮಟ್ಟದ ವಿಚಾರ ಸಂಕಿರಣದಲ್ಲಿ ಪ್ರಬಂಧ ಮಂಡಿಸಿ, ಅಧ್ಯಯನ ಗೋಷ್ಠಿಯ ಅಧ್ಯಕ್ಷತೆಯನ್ನು ನಿರ್ವಹಿಸಿದ್ದಾರೆ. ‘ಕರ್ನಾಟಕ ಕರಾವಳಿಯ ಪ್ರಾದೇಶಿಕ ಅಧ್ಯಯನದ ವಿಭಿನ್ನ ಪ್ರವೃತ್ತಿಗಳು’ ಎಂಬ ವಿಷಯದ ಕುರಿತು ಪ್ರಸಿದ್ಧ ಅಂಕಣಕಾರ ಡಾ| ನರೇಂದ್ರ ರೈ ದೇರ್ಲ ಅವರ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ ಹಂಪಿ ಕನ್ನಡ ವಿಶ್ವವಿದ್ಯಾನಿಲಯದಿಂದ ಡಾಕ್ಟರೇಟ್ ಪದವಿ ಪಡೆದಿದ್ದಾರೆ.


ಕರ್ನಾಟಕ ಸರಕಾರದ ಡಾ| ಶಿವರಾಮ ಕಾರಂತ ಟ್ರಸ್ಟ್ ಉಡುಪಿ ಜಿಲ್ಲೆ ಹಾಗೂ ಸಿಡಬ್ಲ್ಯೂಸಿ ನಮ್ಮ ಭೂಮಿ ಹಟ್ಟಿಯoಗಡಿಯ ಸಲಹಾ ಸಮಿತಿಯ ಸದಸ್ಯರು, ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟಪೂರ್ವ ಕಾರ್ಯದರ್ಶಿ ಹಾಗೂ ಲಯನ್ಸ್ ಸೇರಿದಂತೆ ಹತ್ತಾರು ಸಂಘ ಸಂಸ್ಥೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶೈಕ್ಷಣಿಕ ಸಾಧನೆಗೆ ರಾಜ್ಯಮಟ್ಟದ ಶಿಕ್ಷಕ ರತ್ನ, ನೇಶನ್ ಬಿಲ್ಡರ್, ಯುವರತ್ನ, ನಮ್ಮೂರ ಶಿಕ್ಷಣ ರತ್ನ ಪ್ರಶಸ್ತಿ ಪುರಸ್ಕೃತರಾದ ಇವರು ಕೃಷಿಕ ಕ್ರೋಢ ಬೈಲೂರು ಕೆಳಮನೆ ಬಾಲಕೃಷ್ಣ ಶೆಟ್ಟಿ ಹಾಗೂ ಕೋವಾಡಿ ಗೌರಿ ಬಿ ಶೆಟ್ಟಿ ದಂಪತಿಗಳ ಪುತ್ರರು.




























































































































