


ಮಕ್ಕಳು ಬಂಟರ ಸಂಘದ ಚಟುವಟಿಕೆಗಳಲ್ಲಿ ಯಾವಾಗಲೂ ಬಾಗವಹಿಸಲು ಅಥವಾ ಉಪಸ್ಥಿತರಿರಲು ಸಾಧ್ಯವಾಗದೇ ಇದ್ದಲ್ಲಿ ಮಕ್ಕಳಿಗೆ ಅವರ ಹಿರಿಯರು ಯಾ ತಂದೆ ತಾಯಂದಿರು ಶಿಕ್ಷಣದ ಜೊತೆಗೆ ಬಂಟರ ಸಂಘದ ಚಟುವಟಿಕೆಗಳ ಬಗ್ಗೆ ಮಾಹಿತಿಯಿತ್ತಲ್ಲಿ ಮುಂದೆ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಸಂಘದ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಲು ಮತ್ತು ಸಂಘಕ್ಕೆ ಸಹಾಯ ನೀಡಲು ಸಾಧ್ಯ ಎಂದು ಶತಮಾನದತ್ತ ಸಾಗುತ್ತಿರುವ ಬಂಟರ ಸಂಘ ಮುಂಬಯಿಯ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ನುಡಿದರು. ಜೂನ್ 28ರಂದು ನಾಲಾಸೋಪಾರ ಪಶ್ಚಿಮ ಗೆಲಾಕ್ಸಿ ಹೋಟೇಲಿನ ಸಭಾಗೃಹದಲ್ಲಿ ಬಂಟರ ಸಂಘ ಮುಂಬಯಿಯ ವಸಾಯಿ ದಹಾಣು ಪ್ರಾದೇಶಿಕ ಸಮಿತಿಯ ಆಶ್ರಯದಲ್ಲಿ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯಿಂದ ನಡೆದ ಸಮಾಜದಲ್ಲಿನ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ, ವಿಧವೆಯರಿಗೆ ಹಾಗೂ ಪ್ರಾದೇಶಿಕ ಸಮಿತಿಯ ವ್ಯಾಪ್ತಿಯಲ್ಲಿ 10 ಹಾಗೂ 12 ನೇಯ ತರಗತಿಯಲ್ಲಿ ಅಧಿಕ ಅಂಕ ಗಳಿಸಿದ ಪರಿಸರದಲ್ಲಿರುವ ಸಮಾಜದ ವಿದ್ಯಾರ್ಥಿಗಳನ್ನು ಗೌರವಿಸುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಅವರು ಪ್ರತಿಯೊಂದು ಪ್ರಾದೇಶಿಕ ಸಮಿತಿಯು ನೂರು ಮಕ್ಕಳನ್ನು ಶೈಕ್ಷಣಿಕ ದತ್ತು ಪಡೆಯುವ ಯೋಜನೆಯಡಿ ಒಳಗೊಳ್ಳುವ ಮೂಲಕ ಹತ್ತು ವರ್ಷಗಳ ನಂತರ ಹತ್ತು ಸಾವಿರಕ್ಕೂ ಅಧಿಕ ಮಕ್ಕಳ ದತ್ತು ಪಡೆದಂತಾಗುವುದು. ಪ್ರಾದೇಶಿಕ ಸಮಿತಿಗಳಿಂದಾಗಿ ಬಂಟರ ಸಂಘ ಮುಂಬಯಿಗೆ ಉತ್ತಮ ಹೆಸರಿದೆ. ಸಂಘದ ನಮ್ಮ ಹಿರಿಯರು ಶಿಕ್ಷಣಕ್ಕೆ ಮಹತ್ವ ನೀಡಿದ್ದು ಅದು ಈಗ ಪ್ರಯೊಜನಕಾರಿಯಾಗಿದೆ. ನಮ್ಮವರ ನಿಸ್ವಾರ್ಥ ಸೇವೆಯಿಂದ ಇದೆಲ್ಲ ಸಾಧ್ಯ ಎಂದರು.






ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಇಂದ್ರಾಳಿ ದಿವಾಕರ ಶೆಟ್ಟಿ ಮತ್ತವರ ತಂಡವು ಪ್ರಾದೇಶಿಕ ಸಮಿತಿ ಹಾಗೂ ಸಮಿತಿಯ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಗೆ 22 ಲಕ್ಷಕ್ಕೂ ಅಧಿಕ ಮೊತ್ತದ ಚೆಕ್ಕನ್ನು ಹೊಂದಿದ ನಿಧಿಯನ್ನು ಹಸ್ತಾಂತರಿಸಿದರು. ಪ್ರಾದೇಶಿಕ ಸಮಿತಿಯ ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷರಾದ ಜಯ ಅಶೋಕ ಶೆಟ್ಟಿಯವರು ಪ್ರಸ್ತಾವಿಕ ನುಡಿಗಳನ್ನಾಡುತ್ತಾ, ನಾನು ಪ್ರಾದೇಶಿಕ ಸಮಿತಿಯಲ್ಲಿ ಸುಧೀರ್ಘ ಕಾಲದಿಂದ ಕಾರ್ಯ ನಿರ್ವಹಿಸುತ್ತಿದ್ದು, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯಲ್ಲಿ ಕಾರ್ಯ ನಿರ್ವಹಿಸಿ ಸಿಕ್ಕಿದ ಸಂತೋಷ ಇತರ ಸಮಿತಿಯಲ್ಲಿ ಸಿಕ್ಕಿಲ್ಲ. ಸಮಿತಿಗೆ ವಿವಿಧ ರೀತಿಯಲ್ಲಿ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತಾ, ಪ್ರಾದೇಶಿಕ ಸಮಿತಿಯಲ್ಲಿನ ಸಮಾಜ ಬಾಂಧವರು ತಮ್ಮ ಪರಿವಾರದವರ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದರೊಂದಿಗೆ ಅಗತ್ಯ ಬಂದಲ್ಲಿ ಸಂಘದ ಸಹಾಯ ಪಡೆಯಲು ಹಿಂಜರಿಯಬಾರದು ಎಂದರು. ಹಿರಿಯ ನಾಗರಿಕರಾದ ಶ್ರೀಮತಿ ಸುನಂದ ರತ್ನಾಕರ ಶೆಟ್ಟಿ ದಂಪತಿ ಮತ್ತು ಶ್ರೀಮತಿ ಲಲಿತ ಜಯಕರ ಶೆಟ್ಟಿ ವಿರಾರ್ ಇವರನ್ನು ಸಂಘದ ಹಿರಿಯ ನಾಗರಿಕ ಸಮಿತಿಯ ವತಿಯಿಂದ ಕೃಷ್ಣ ಶೆಟ್ಟಿ ಮತ್ತು ಡಾ. ಪ್ರಭಾಕರ ಶೆಟ್ಟಿ ಬೋಳರವರ ನೇತೃತ್ವದಲ್ಲಿ ಸನ್ಮಾನಿಸಲಾಯಿತು.
ಬಂಟರ ಸಂಘ ಮುಂಬಯಿಯ ಗೌರವ ಪ್ರಧಾನ ಕಾರ್ಯದರ್ಶಿ ಡಾ| ಆರ್. ಕೆ ಶೆಟ್ಟಿಯವರು ಸಂಜೀವಿನಿ ಟ್ರಸ್ಟ್ ಕುರಿತು ಮಾತನಾಡುತ್ತಾ, ಈ ಯೋಜನೆಯ ಮೂಲಕ ನಮ್ಮ ಸಮಾಜದ ನೂರಾರು ಮಕ್ಕಳು ಈಗಾಗಲೇ ಪ್ರಯೋಜನ ಪಡೆದಿದ್ದಾರೆ. ಆದರೆ ವಸಾಯಿ ದಹಾಣು ಪ್ರಾದೇಶಿಕ ವ್ಯಾಪ್ತಿಯಲ್ಲಿ ಕೆಲವೇ ಮಂದಿ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದಿರುವುದು ವಿಷಾದನೀಯ. ಈ ಯೋಜನೆಯಲ್ಲಿ ತರಬೇತಿ ಪೂರ್ಣಗೊಳಿಸಿದ ನಂತರ ವಿದ್ಯಾರ್ಥಿಗಳ ವಿದ್ಯಾರ್ಹತೆಗೆ ಅನುಗುಣವಾಗಿ ಟಾಟಾ ಸಂಸ್ಥೆಯ ಸಹಯೋಗದಲ್ಲಿ ಉದ್ಯೋಗಾವಕಾಶಗಳೂ ಲಭ್ಯವಾಗುತ್ತವೆ. ಅತೀ ಕಡಿಮೆ ಶುಲ್ಕದಲ್ಲಿ ಈ ಯೋಜನೆಗೆ ಪ್ರವೇಶ ಪಡೆಯಬಹುದಾಗಿದ್ದು, ಒಂದು ವೇಳೆ ಶುಲ್ಕ ಪಾವತಿಸಲು ಅಸಾಧ್ಯವಾದರೆ ಅದರ ವ್ಯವಸ್ಥೆ ಮಾಡಲು ನಾನು ವೈಯಕ್ತಿಕವಾಗಿ ಪ್ರಯತ್ನಿಸುವೆ ಎಂದರು. ಬಂಟರ ಸಂಘ ಮುಂಬಯಿಯ ವಸಾಯಿ ದಹಾಣು ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ಮಂಜುನಾಥ ಶೆಟ್ಟಿ ಕೊಡ್ಲಾಡಿ ಸ್ವಾಗತಿಸುತ್ತಾ, ಬಂಟರ ಸಂಘ ಮುಂಬಯಿಯ ಎಲ್ಲಾ ಕಾರ್ಯಕ್ರಮಗಳಲ್ಲಿ ಶಿಕ್ಷಣ ಹಾಗೂ ಸಮಾಜ ಕಲ್ಯಾಣ ಸಮಿತಿಯ ಕಾರ್ಯಕ್ರಮವು ಉತ್ತಮ ಕಾರ್ಯಕ್ರಮವಾಗಿದ್ದು ಸಂಘದ ಅಧ್ಯಕ್ಷರ ಮಾರ್ಗದರ್ಶನವು ನಮ್ಮ ಪ್ರತಿಯೊಂದು ಕಾರ್ಯಕ್ರಮಗಳ ಯಸಸ್ಸಿಗೆ ಸಹಕಾರಿಯಾಗುತ್ತಿದೆ ಎನ್ನುತ್ತಾ, ಎಲ್ಲಾ ವಿದ್ಯಾರ್ಥಿಗಳಿಗೆ ಅಭಿನಂದನೆಗಳು. ಸಂಘದ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲಕರೊಂದಿಗೆ ಮಕ್ಕಳು ಪಾಲ್ಗೊಳ್ಳಬೇಕು. ಸಂಘದ ಕಾರ್ಯಕ್ರಮಗಳಲ್ಲಿ ಯುವ ಸಮುದಾಯ ಸೇರಿಕೊಂಡಾಗ ಸೇವಾ ಕಾರ್ಯಗಳು ಇನ್ನಷ್ಟು ಬಂಧುಗಳಿಗೆ ತಲುಪಲು ಸಾಧ್ಯವಾಗುತ್ತದೆ ಎಂದು ನುಡಿದರು. ಪ್ರಾದೇಶಿಕ ಸಮಿತಿಯ ವ್ಯಾಪ್ತಿಯಲ್ಲಿ ಹತ್ತು ಹಾಗೂ ಹನ್ನೆರಡನೇಯ ತರಗತಿಯಲ್ಲಿ ಅಧಿಕ ಅಂಕ ಗಳಿಸಿದ ಪರಿಸರದ ಸಮಾಜದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು. ವೃತ್ತಿಪರ ಶಿಕ್ಷಣದಲ್ಲಿ ಯಶಸ್ಸು ಗಳಿಸಿದ ಏಳು ಮಂದಿ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು ಹಾಗೂ ಸಿಎ ಪರೀಕ್ಷೆಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿ ಒಬ್ಬಳಿಗೆ ಸಂಘದ ಅಧ್ಯಕ್ಷರಾದ ಪ್ರವೀಣ್ ಭೋಜ ಶೆಟ್ಟಿ ಅವರು ಒಂದು ಲಕ್ಷ ರೂಪಾಯಿ ನೀಡಿ ಆಶೀರ್ವದಿಸಿದರು. ವೇದಿಕೆಯಲ್ಲಿದ್ದ ಗಣ್ಯರು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆಯಿತ್ತರು. ಆರಂಭದಲ್ಲಿ ಬಂಟರ ಸಂಘ ರಮಾನಾಥ ಪಯ್ಯಡೆ ಹೋಟೇಲು ಮ್ಯಾನೇಜ್ಮೆಂಟ್ ಇದರ ವಿಶಾಲ್ ಕನೋಜ ಅವರು ಹೋಟೆಲ್ ಮ್ಯಾನೇಜ್ಮೆಂಟ್ ಬಗ್ಗೆ ಮಾತನಾಡುತ್ತಾ, ಬಂಟ ಸಮಾಜದ ಮಕ್ಕಳು ಇದರ ಪ್ರಯೋಜನ ಪಡೆಯಲು ವಿನಂತಿಸಿದರು. ಈ ಬಗ್ಗೆ ವಿಡಿಯೋ ಕ್ಲಿಪ್ ನ್ನು ಪ್ರದರ್ಶಿಸಲಾಯಿತು.
ವೇದಿಕೆಯಲ್ಲಿ ಬಂಟರ ಸಂಘ ಮುಂಬಯಿಯ ಜೊತೆ ಕಾರ್ಯದರ್ಶಿ ಗಿರೀಶ್ ಶೆಟ್ಟಿ ತೆಳ್ಳಾರ್, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿಯ ಉಪ ಕಾರ್ಯಾಧ್ಯಕ್ಷರಾದ ಸುಬ್ಬಯ್ಯ ಎ ಶೆಟ್ಟಿ, ಕೋಶಾಧಿಕಾರಿ ಜಯಪ್ರಕಾಶ್ ಶೆಟ್ಟಿ, ಪ್ರಾದೇಶಿಕ ಸಮಿತಿ ಸಲಹಾ ಸಮಿತಿಯ ಕಾರ್ಯಾಧ್ಯಕ್ಷ ಹರೀಶ್ ಶೆಟ್ಟಿ ಗುರ್ಮೆ, ಪ್ರಾದೇಶಿಕ ಸಮಿತಿಯ ಉಪ ಕಾರ್ಯಾಧ್ಯಕ್ಷ ಪ್ರವೀಣ್ ಶೆಟ್ಟಿ ಕಣಂಜಾರು, ಕೋಶಾಧಿಕಾರಿ ವಿಜಯ್ ಎಂ ಶೆಟ್ಟಿ, ಜೊತೆ ಕಾರ್ಯದರ್ಶಿ ನಾರಾಯಣ ಎಂ ಶೆಟ್ಟಿ, ಜೊತೆ ಕೋಶಾಧಿಕಾರಿ ರತೀಶ್ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಅರುಣಾ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷೆ ವರ್ಷಾ ಎಸ್ ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ದಿವಾಕರ್ ಶೆಟ್ಟಿ ಇಂದ್ರಾಳಿ, ಪ್ರಾದೇಶಿಕ ಸಮಿತಿಯ ಜಯ ಅಶೋಕ ಶೆಟ್ಟಿಯವರನ್ನು ಗೌರವಿಸಲಾಯಿತು. ವಿಜಯ ಶೆಟ್ಟಿ ಕುತ್ತೆತ್ತೂರು ಕಾರ್ಯಕ್ರಮವನ್ನು ನಿರೂಪಿಸಿದರು. ಮಹಿಳಾ ವಿಭಾಗದಿಂದ ಭಜನೆ, ಮಕ್ಕಳಿಂದ ನೃತ್ಯ ಹಾಗೂ ಸಂಗೀತ ಕಾರ್ಯಕ್ರಮ ನಡೆಯಿತು. ಪ್ರಾದೇಶಿಕ ಸಮಿತಿಯ ಕಾರ್ಯದರ್ಶಿ ಜಗನ್ನಾಥ ಶೆಟ್ಟಿ ಪಳ್ಳಿ ವಂದನಾರ್ಪಣೆ ಮಾಡಿದರು. ಬಂಟ ಗೀತೆಯ ಬಳಿಕ ಲೀಲಾವತಿ ಆಳ್ವ ಪ್ರಾರ್ಥನೆ ಮಾಡಿದರು. ಶಶಿಧರ ಶೆಟ್ಟಿ ಇನ್ನಂಜೆಯವರಿಂದ ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು. ಮೀರಾ ಭಾಯಂಧರ್ ಪ್ರಾದೇಶಿಕ ಸಮಿತಿಯ ಕಾರ್ಯಾಧ್ಯಕ್ಷ ರವೀಂದ್ರ ಶೆಟ್ಟಿ ಕೊಟ್ರಪಾಡಿ ಉಪಸ್ಥಿತರಿದ್ದರು. ಎರ್ಮಾಳು ಸುಭಾಷ್ ಶೆಟ್ಟಿ, ಸುಪ್ರೀತ್ ಶೆಟ್ಟಿ ನೀರೆ, ನವೀನ್ ಶೆಟ್ಟಿ ಪಳ್ಳಿ, ಸುರೇಂದ್ರ ಶೆಟ್ಟಿ ಗ್ಯಾಲಕ್ಸಿ, ಧರ್ಮೇಂದ್ರ ಶೆಟ್ಟಿ ಗ್ಯಾಲಕ್ಸಿ, ಅಶೋಕ್ ಶೆಟ್ಟಿ ಸಾಯಿ ಕೃಪ ಮತ್ತಿತರರು ಸಹಕರಿಸಿದರು.
ಚಿತ್ರ, ವರದಿ : ದಿನೇಶ್ ಕುಲಾಲ್




























































































































