
ಕಠಿಣ ಪರಿಶ್ರಮ ಮತ್ತು ಅಚಲ ಗುರಿಯಿದ್ದರೆ ಅಸಾಧ್ಯವಾದುದು ಯಾವುದೂ ಇಲ್ಲ ಎಂಬುದನ್ನು ಕುಂದಾಪುರದ ಮಾಣಿಗರಡಿಯ ರಿತಿನ್ ಶೆಟ್ಟಿ ಸಾಬೀತುಪಡಿಸಿದ್ದಾರೆ. ದೇಶದ ಅತ್ಯಂತ ಪ್ರತಿಷ್ಠಿತ ತಾಂತ್ರಿಕ ಶಿಕ್ಷಣ ಸಂಸ್ಥೆಗಳ ಪ್ರವೇಶಕ್ಕಾಗಿ ನಡೆಯುವ JEE Advanced ಪರೀಕ್ಷೆಯಲ್ಲಿ ರಿತಿನ್ ಶೆಟ್ಟಿ ರಾಷ್ಟ್ರಮಟ್ಟದಲ್ಲಿ 1005ನೇ ರ್ಯಾಂಕ್ ಪಡೆಯುವ ಮೂಲಕ ಅಪ್ರತಿಮ ಸಾಧನೆ ಮಾಡಿದ್ದಾರೆ. ಮಾಣಿಗರಡಿಯ ಎಂ. ಸತೀಶ್ ಶೆಟ್ಟಿ ಮತ್ತು ಗೀತಾ ಶೆಟ್ಟಿ ದಂಪತಿಯ ಸುಪುತ್ರನಾದ ರಿತಿನ್ ಶೆಟ್ಟಿ ಮೂಲತಃ ಕುಂದಾಪುರದವರಾಗಿದ್ದರೂ ಶಿಕ್ಷಣಕ್ಕಾಗಿ ತೆಲಂಗಾಣದ ಸೂರ್ಯಪೇಟೆಯನ್ನು ಆಯ್ದುಕೊಂಡಿದ್ದರು. ಅಲ್ಲಿನ ಜಯ ಜೂನಿಯರ್ ಕಾಲೇಜಿನ ವಿದ್ಯಾರ್ಥಿಯಾಗಿರುವ ಇವರು, ಹಗಲಿರುಳು ನಡೆಸಿದ ಅಭ್ಯಾಸದ ಫಲವಾಗಿ ಇಂದು ಈ ಉನ್ನತ ಸ್ಥಾನಕ್ಕೇರಿದ್ದಾರೆ.


ಕುಂದಾಪುರದ ಗ್ರಾಮೀಣ ಭಾಗದ ಪ್ರತಿಭೆಯಾಗಿ ಐಐಟಿ (IIT) ಪ್ರವೇಶಾತಿಯ ಹೊಸ್ತಿಲಲ್ಲಿ ನಿಂತಿದ್ದಾರೆ. ನನ್ನ ಮಗನ ಈ ಸಾಧನೆಗೆ ಅವನ ನಿರಂತರ ಪರಿಶ್ರಮವೇ ಕಾರಣ. ಕುಂದಾಪುರದ ಮಣ್ಣಿನ ಸಂಸ್ಕಾರ ಮತ್ತು ಗುರುಗಳ ಮಾರ್ಗದರ್ಶನ ಅವನನ್ನು ಈ ಮಟ್ಟಕ್ಕೆ ತಂದಿದೆ ಎಂದು ತಂದೆ ಮಾಣಿಗರಡಿಯ ಎಂ. ಸತೀಶ್ ಶೆಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ. ಸಾಧಾರಣವಾಗಿ ಮೆಟ್ರೋ ನಗರಗಳ ವಿದ್ಯಾರ್ಥಿಗಳೇ ಇಂತಹ ಪರೀಕ್ಷೆಗಳಲ್ಲಿ ಮೇಲುಗೈ ಸಾಧಿಸುತ್ತಾರೆ ಎಂಬ ನಂಬಿಕೆಯನ್ನು ರಿತಿನ್ ಸುಳ್ಳು ಮಾಡಿದ್ದಾರೆ. ಕುಂದಾಪುರದಂತಹ ಸಣ್ಣ ಊರಿನಿಂದ ಬಂದು, ತೆಲಂಗಾಣದ ಕಾಲೇಜಿನಲ್ಲಿ ಓದಿ ರಾಷ್ಟ್ರಮಟ್ಟದ ಪಟ್ಟಿಯಲ್ಲಿ ಸ್ಥಾನ ಪಡೆದಿರುವುದು ಕರಾವಳಿಯ ಇತರೆ ವಿದ್ಯಾರ್ಥಿಗಳಿಗೆ ದೊಡ್ಡ ಸ್ಫೂರ್ತಿಯಾಗಿದೆ.





























































































































