


ವೃತ್ತಿ, ಪ್ರವೃತ್ತಿ ಹಾಗೂ ಜೀವನದ ಜೊತೆಯಲ್ಲಿ ಸಮಾಜದ ಬಗ್ಗೆ ತುಡಿತವಿರುವ ಸಮಾಜಮುಖಿಗಳಾಗಿರುವುದೇ ಬದುಕಿನ ನಿಜವಾದ ಶ್ರೇಷ್ಠತನ ಎಂದು ಟೆಲಿಕಾಂ ಇಲಾಖೆಯ ನಿವೃತ್ತ ಹಿರಿಯ ಅಧಿಕಾರಿ ಶ್ರೀಧರ ಶೆಟ್ಟಿ ನುಡಿದರು. ಮೇ. 31 ರಂದು ಕೋಟೇಶ್ವರದ ಸಹನಾ ಕನ್ವೆನ್ಷನ್ ಹಾಲ್ನಲ್ಲಿ ನಡೆಯಲಿರುವ ಜಿ. ಕುಶಲ ಹೆಗ್ಡೆ ಜನ್ಮ ಶತಮಾನೋತ್ಸವ ಕಾರ್ಯಕ್ರಮ ‘ಕುಶಲ ಹೆಗ್ಡೆ 100’ ಇದರ ಆಮಂತ್ರಣ ಪತ್ರಿಕೆ ಬಿಡುಗಡೆ ಮಾಡಿ ಅವರು ಮಾತನಾಡಿದರು. ಸಮಾಜದ ಕಟ್ಟಕಡೆಯ ಮಕ್ಕಳಿಗೂ ಶಿಕ್ಷಣ ದೊರಕಬೇಕು ಎನ್ನುವ ಕಾಳಜಿಯಲ್ಲಿ ಸ್ಥಾಪನೆಗೊಂಡಿದ್ದ ಕುಂದಾಪುರದ ಬಂಟ್ಸ್ ಹಾಸ್ಟೆಲ್ ನಿರ್ವಹಣೆ ವೇಳೆ, ಸ್ವಂತಕ್ಕೆ ಬಂದಿದ್ದ ಗೇಣಿ ಅಕ್ಕಿಯನ್ನು ನಿಲಯವಾಸಿಗಳಿಗೆ ನೀಡುವ ಔದಾರ್ಯತೆ ಜಿ. ಕುಶಲ ಹೆಗ್ಡೆ ಅವರಿಗೆ ಇತ್ತು ಎಂದರು.


ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ ಕಾರ್ಯದರ್ಶಿ ಯು.ಎಸ್ ಶೆಣೈ ಪ್ರಾಸ್ತಾವಿಕವಾಗಿ ಮಾತನಾಡಿ, ದಶಕಗಳ ಕಾಲ ಕುಂದಾಪುರದ ನಿತ್ಯ ಕಾರ್ಯ ಕಲಾಪಗಳ ಅವಿಭಾಜ್ಯವಾಗಿದ್ದ ಕುಶಲ ಹೆಗ್ಡೆ ಅವರಲ್ಲಿ ಸಾಮಾಜಿಕ ಚಿಂತನೆಗಳಿದ್ದವು. ಶೈಕ್ಷಣಿಕ, ಧಾರ್ಮಿಕ, ಸಹಕಾರಿ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅವರ ಕೊಡುಗೆ ಅಪಾರವಾಗಿದೆ. ಅವರ ನಿಧನದ ಬಳಿಕ ಸ್ಥಾಪನೆಗೊಂಡ ಟ್ರಸ್ಟ್ ಮೂಲಕ ಅವರ ಮಕ್ಕಳು ಹಾಗೂ ಕುಟುಂಬಿಕರು ಅವರ ಮೌಲ್ಯಗಳನ್ನು ಹಾಗೂ ಆದರ್ಶತೆಯನ್ನು ಉಳಿಸುವ ಅನೇಕ ಕೊಡುಗೆ ಹಾಗೂ ಕೆಲಸಗಳನ್ನು ಮಾಡುತ್ತಿದ್ದಾರೆ. ಜನ್ಮ ಶತಾಬ್ದಿ ಕಾರ್ಯಕ್ರಮದ ಮೂಲಕ ಅವರ ಒಳ್ಳೆಯ ಕೆಲಸಗಳನ್ನು ಮುಂದಿನ ತಲೆಮಾರಿಗೆ ತಿಳಿಸುವ ಕಾರ್ಯ ಮಾಡಲಾಗುತ್ತಿದೆ ಎಂದರು. ಗುಡ್ಡಮ್ಮಾಡಿ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತ ಧರ್ಮದರ್ಶಿ ಬಿ. ಅರುಣಕುಮಾರ ಶೆಟ್ಟಿ, ಕೀರ್ತಿಶೇಷ ಗಿಳಿಯಾರು ಕುಶಲ ಹೆಗ್ಡೆಯವರ ಜನ್ಮ ಶತಮಾನೋತ್ಸವ ಸಂಯೋಜಕ ಬಿ. ಉದಯ್ ಕುಮಾರ್ ಹೆಗ್ಡೆ, ರಾಜ್ಯ ವೈನ್ಸ್ ಮರ್ಚಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಗೋವಿಂದ್ ರಾಜ್ ಹೆಗ್ಡೆ ಬ್ರಹ್ಮಾವರ ಮಾತನಾಡಿದರು.
ಗಿಳಿಯಾರು ಕುಶಲ ಹೆಗ್ಡೆ ಮೆಮೋರಿಯಲ್ ಚಾರಿಟೇಬಲ್ ಟ್ರಸ್ಟ್ನ ಸ್ನೇಹಾ ಪಿ ರೈ, ಬಿ. ಕಿಶೋರ ಹೆಗ್ಡೆ, ಜಿ. ಸಂತೋಷ ಕುಮಾರ್ ಶೆಟ್ಟಿ, ಸುಜಾತ ಉದಯ್ ಕುಮಾರ್ ಹೆಗ್ಡೆ, ನಾರಾಯಣ ದೇವಾಡಿಗ, ಕೆ.ಕೆ ರಾಮನ್, ಬಂಟರ ಯಾನೆ ನಾಡವರ ಸಂಘದ ಮಾಜಿ ಸಂಚಾಲಕ ಆವರ್ಸೆ ಸುಧಾಕರ ಶೆಟ್ಟಿ, ಕುಂದಾಪುರ ತಾಲ್ಲೂಕು ಯುವ ಬಂಟರ ಸಂಘದ ಸ್ಥಾಪಕಾಧ್ಯಕ್ಷ ಡಾ| ನಿತ್ಯಾನಂದ ಶೆಟ್ಟಿ ಅಂಪಾರು, ಅಧ್ಯಕ್ಷ ನಿತೇಶ್ ಶೆಟ್ಟಿ ಬಸ್ರೂರು, ಉದ್ಯಮಿ ಕೆ.ಆರ್ ನಾಯಕ್, ಜನ್ಮ ಶತಮಾನೋತ್ಸವ ಸಮಿತಿಯ ಪಡುಕೆರೆ ಉದಯ್ ಕುಮಾರ್ ಶೆಟ್ಟಿ, ಪ್ರವೀಣ್ ಯಕ್ಷೀಮಠ, ಎನ್ ಮಂಜಯ್ಯ ಶೆಟ್ಟಿ ಸಬ್ಲಾಡಿ, ಬೈಂದೂರು ಬಂಟರ ಸಂಘದ ಮಾಜಿ ಅಧ್ಯಕ್ಷ ಸಾಲ್ಗದ್ದೆ ಶಶಿಧರ ಶೆಟ್ಟಿ, ಹೆಚ್. ಸೋಮಶೇಖರ ಶೆಟ್ಟಿ ಉಪಸ್ಥಿತರಿದ್ದರು. ಜನ್ಮ ಶತಮಾನೋತ್ಸವ ಸಮಿತಿಯ ರಾಜೇಶ್ ಕೆ.ಸಿ ನಿರೂಪಿಸಿ, ಯೋಗಾನಂದ ಹೆಗ್ಡೆ ಗಿಳಿಯಾರ್ ವಂದಿಸಿದರು.
ಚಿತ್ರ, ವರದಿ : ರಾಜೇಶ್ ಕೆ.ಸಿ

























































































































