ಬಂಟರ ಯಾನೆ ನಾಡವರ ಸಂಘ (ರಿ) ಬೆಳ್ತಂಗಡಿ ತಾಲೂಕು ಇದರ ಮಹಿಳಾ ಬಂಟರ ವಿಭಾಗ ಹಾಗೂ ಯುವ ಬಂಟರ ವಿಭಾಗದ ಜಂಟಿ ಆಶ್ರಯದಲ್ಲಿ ಅಕ್ಟೋಬರ್ 11, 2026ರಂದು ಗುರುವಾಯನಕೆರೆಯ ಬಂಟರ ಭವನದಲ್ಲಿ ‘ಪ್ರೇರಣಾ -2026’ ವೃತ್ತಿ ಮಾರ್ಗದರ್ಶನ ಮತ್ತು ಪರಿಚಯಾತ್ಮಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು. 9ನೇ ತರಗತಿಯಿಂದ ಪದವಿ ಹಂತದವರೆಗಿನ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ಈ ಕಾರ್ಯಕ್ರಮದಲ್ಲಿ ಸುಮಾರು 200 ಬಂಟ ಸಮುದಾಯದ ವಿದ್ಯಾರ್ಥಿಗಳು ಭಾಗವಹಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ದಿಶಾ ಕೌನ್ಸೆಲಿಂಗ್ ಮತ್ತು ತರಬೇತಿ ಕೇಂದ್ರದ ಮುಖ್ಯಸ್ಥೆ, ವೃತ್ತಿ ಮಾರ್ಗದರ್ಶಕಿ ಶ್ರೀಮತಿ ರಾಜೇಶ್ವರಿ ಡಿ. ಶೆಟ್ಟಿ ಹಾಗೂ ಉಜಿರೆಯ ಎಸ್ಡಿಎಂ ಸ್ವಾಯತ್ತ ಕಾಲೇಜಿನ ನಿವೃತ್ತ ಪ್ರಾಂಶುಪಾಲರಾದ ಡಾ. ಬಿ.ಎ ಕುಮಾರ ಹೆಗ್ಡೆ ಭಾಗವಹಿಸಿ, ವಿದ್ಯಾರ್ಥಿಗಳಿಗೆ ಉನ್ನತ ಶಿಕ್ಷಣ, ವೃತ್ತಿ ಆಯ್ಕೆ ಹಾಗೂ ಭವಿಷ್ಯದ ಅವಕಾಶಗಳ ಕುರಿತು ಉಪಯುಕ್ತ ಮಾರ್ಗದರ್ಶನ ನೀಡಿದರು.




ಮುಖ್ಯ ಅತಿಥಿಗಳು ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಹಿಳಾ ಬಂಟರ ವಿಭಾಗದ ವತಿಯಿಂದ ಪ್ರಾರ್ಥನೆ ಸಲ್ಲಿಸಲಾಯಿತು. ಬೆಳ್ತಂಗಡಿ ತಾಲೂಕು ಬಂಟರ ಸಂಘದ ಅಧ್ಯಕ್ಷರಾದ ಶ್ರೀ ಪ್ರಕಾಶ್ ಶೆಟ್ಟಿ ನೊಚ್ಚ ಅವರು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಹಿತವಚನ ನೀಡಿದರು. ಸಭೆಯಲ್ಲಿ ಯುವ ಬಂಟರ ವಿಭಾಗದ ಅಧ್ಯಕ್ಷರಾದ ಅಜಯ್ ಶೆಟ್ಟಿ, ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಶ್ರೀಮತಿ ವಸುಧಾ ಪ್ರಶಾಂತ್ ಶೆಟ್ಟಿ, ಸಂಘದ ಪದಾಧಿಕಾರಿಗಳು ಹಾಗೂ ಯುವ ಬಂಟರ ವಿಭಾಗದ ಕಾರ್ಯದರ್ಶಿ ಶ್ರೀ ನಿಧೀಶ್ ಶೆಟ್ಟಿ ಉಪಸ್ಥಿತರಿದ್ದರು. ಮಹಿಳಾ ಬಂಟರ ವಿಭಾಗದ ಅಧ್ಯಕ್ಷೆ ಶ್ರೀಮತಿ ವಸುಧಾ ಪ್ರಶಾಂತ್ ಶೆಟ್ಟಿ ಸ್ವಾಗತಿಸಿದರು. ಶ್ರೀ ಸುರೇಶ್ ಶೆಟ್ಟಿ ಲೈಲಾ ಕಾರ್ಯಕ್ರಮ ನಿರೂಪಿಸಿದರು. ಯುವ ಬಂಟರ ವಿಭಾಗದ ಕಾರ್ಯದರ್ಶಿ ಶ್ರೀ ನಿಧೀಶ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು. ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರಿಂದ ಕಾರ್ಯಕ್ರಮಕ್ಕೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಯಿತು. ಮಹಿಳಾ ಮತ್ತು ಯುವ ಬಂಟರ ವಿಭಾಗಗಳ ಪದಾಧಿಕಾರಿಗಳು ಹಾಗೂ ಸದಸ್ಯರ ಸಹಕಾರದಿಂದ ಕಾರ್ಯಕ್ರಮ ಯಶಸ್ವಿಯಾಗಿ ನೆರವೇರಿತು.


















































































































