ದೋಹಾ (ಕತಾರ್): ಕತಾರ್ನ ದೋಹಾದಲ್ಲಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರದಲ್ಲಿ (ICC) ಇತ್ತೀಚೆಗೆ ನಡೆದ ಸಮಾರಂಭದಲ್ಲಿ ಶಂಕರ್ ಎಲೆಕ್ಟ್ರಿಕಲ್ಸ್ ಸರ್ವಿಸಸ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ (SESIPL) ಸಂಸ್ಥೆಯ ಸಂಸ್ಥಾಪಕರು ಹಾಗೂ ವ್ಯವಸ್ಥಾಪಕ ನಿರ್ದೇಶಕರಾದ ರಾಜೇಶ್ ಶೆಟ್ಟಿ ಅವರನ್ನು ಆತ್ಮೀಯವಾಗಿ ಸನ್ಮಾನಿಸಲಾಯಿತು. ಭಾರತೀಯ ಸಮುದಾಯದ ನಾಯಕತ್ವ ಮತ್ತು ಸೇವೆಯನ್ನು ಗೌರವಿಸುವ ಈ ಸಮಾರಂಭವು ಅತ್ಯಂತ ಸ್ಮರಣೀಯ ಕ್ಷಣಕ್ಕೆ ಸಾಕ್ಷಿಯಾಯಿತು. ಈ ಸಂದರ್ಭದಲ್ಲಿ ಐಸಿಸಿ (ICC) ಅಧ್ಯಕ್ಷರಾದ ಎ.ಪಿ ಮಣಿಕಂಠನ್, ಉಪಾಧ್ಯಕ್ಷರಾದ ಶಂತನು ದೇಶಪಾಂಡೆ, ಪ್ರಧಾನ ಕಾರ್ಯದರ್ಶಿಗಳಾದ ಅಬ್ರಹಾಂ ಕೆ. ಜೋಸೆಫ್, ಬಂಟ್ಸ್ ಕತಾರ್ ಸಂಸ್ಥೆಯ ಸ್ಥಾಪಕ ಅಧ್ಯಕ್ಷರಾದ ಡಾ| ರವಿ ಶೆಟ್ಟಿ ಹಾಗೂ ಖ್ಯಾತ ಹಿನ್ನೆಲೆ ಗಾಯಕಿ ಶ್ರೀಮತಿ ಅನುರಾಧಾ ಭಟ್ ಅವರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು.




ಭಾರತೀಯ ರಾಯಭಾರ ಕಚೇರಿಯ ಆಶ್ರಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಭಾರತೀಯ ಸಾಂಸ್ಕೃತಿಕ ಕೇಂದ್ರವು, ಕತಾರ್ನಲ್ಲಿರುವ ಅನಿವಾಸಿ ಭಾರತೀಯ ಸಮುದಾಯದ ನಡುವೆ ಭಾರತೀಯ ಕಲೆ, ಸಂಸ್ಕೃತಿ ಮತ್ತು ಸಾಮಾಜಿಕ ಕಲ್ಯಾಣವನ್ನು ಉತ್ತೇಜಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದೆ. ವಿದೇಶಿ ನೆಲದಲ್ಲಿ ಭಾರತೀಯರ ನಾಯಕತ್ವ, ಸೇವಾ ಮನೋಭಾವ ಮತ್ತು ಒಗ್ಗಟ್ಟನ್ನು ಪ್ರದರ್ಶಿಸಿದ ಈ ಕಾರ್ಯಕ್ರಮವು ಅನಿವಾಸಿ ಭಾರತೀಯರಲ್ಲಿ ಹೆಮ್ಮೆಯ ಭಾವನೆಯನ್ನು ಮೂಡಿಸಿದೆ.

















































































































