
ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಲ್ಲಾ ಕಾರ್ಯಕಾರಿ ಸಮಿತಿ ಸದಸ್ಯರು ಅವಿರೋಧವಾಗಿ ಆಯ್ಕೆಯಾಗಿದ್ದು, ಕಾಸರಗೋಡು ತಾಲೂಕಿನಲ್ಲಿ ನಾಮಪತ್ರ ಹಿಂದೆಗೆಯುವ ಅವಧಿ ಮುಗಿದ ಬಳಿಕವೂ ಎರಡು ನಾಮಪತ್ರ ಹೆಚ್ಚು ಇದ್ದುದರಿಂದ ಅನಿವಾರ್ಯವಾಗಿ ಚುನಾವಣೆ ನಡೆಯಿತು. ಅಧ್ಯಕ್ಷರು ಸೇರಿ 84 ಸದಸ್ಯರ ಕಾರ್ಯಕಾರಿ ಸಮಿತಿಯನ್ನು ಚುನಾವಣಾ ಆಯೋಗ ಅಧಕೃತವಾಗಿ ಘೋಷಣೆ ಮಾಡಿದೆ. ಅಧ್ಯಕ್ಷರಾಗಿ ಕೆ ಅಜಿತ್ ಕುಮಾರ್ ರೈ ಮಾಲಾಡಿ ಮೊದಲಾಗಿ ಅವಿರೋಧ ಆಯ್ಕೆಯಾಗಿದ್ದರು.


ಕಾರ್ಯಕಾರಿ ಸಮಿತಿ ಚುನಾವಣೆ ಪ್ರಕ್ರಿಯೆ ಮುಗಿದ ಬಳಿಕ ನಡೆದ ಉಪಾಧ್ಯಕ್ಷ ಸ್ಥಾನಕ್ಕೆ ಕಾವು ಹೇಮನಾಥ ಶೆಟ್ಟಿಯವರು ನಾಮಪತ್ರ ಸಲ್ಲಿಸಿ, ಅವಿರೋಧವಾಗಿ ಆಯ್ಕೆಯಾದರು. ಇವರು ಮಾತೃ ಸಂಘದ ಜೊತೆ ಕಾರ್ಯದರ್ಶಿಯಾಗಿ, ಉಪಾಧ್ಯಕ್ಷರಾಗಿ ಮತ್ತು ಪುತ್ತೂರು ಶ್ರೀ ರಾಮಕೃಷ್ಣ ಪ್ರೌಢಶಾಲೆಯ ಸಂಚಾಲಕರಾಗಿ ದಶಕಗಳಿಗಿಂತಲೂ ಹೆಚ್ಚಿನ ಸಮಯದಿಂದ ಕಾರ್ಯನಿರ್ವಹಿಸುತ್ತಾ ಬಂದಿದ್ದಾರೆ. ಪ್ರಸ್ತುತ ಪುತ್ತೂರು ತಾಲೂಕು ಬಂಟರ ಸಂಘದ ಅಧ್ಯಕ್ಷರಾಗಿ ಸುಮಾರು 3.5 ಎಕ್ರೆ ಸರಕಾರಿ ಜಮೀನು ಸಂಘಕ್ಕೆ ಮಂಜೂರು ಮಾಡಿಸಿದ್ದು, ಇನ್ನೂ 2.5 ಎಕ್ರೆ ಜಮೀನು ಮಂಜೂರಾತಿ ಹಂತದಲ್ಲಿದೆ. ಈ ಜಮೀನಿನಲ್ಲಿ ಸಮುದಾಯ ಭವನ ನಿರ್ಮಾಣ, ಎಲ್.ಕೆ.ಜಿ ಯಿಂದ ಪದವಿವರೆಗಿನ ವಿದ್ಯಾ ಸಂಸ್ಥೆಯನ್ನು ಪ್ರಾರಂಭಿಸುವ ಬಗ್ಗೆ ಕಾರ್ಯ ಪ್ರವೃತ್ತರಾಗಿದ್ದಾರೆ. ಹೇಮನಾಥ ಶೆಟ್ಟಿಯವರು ರಾಜಕೀಯ, ಧಾರ್ಮಿಕ, ಸಾಮಾಜಿಕ, ಶೈಕ್ಷಣಿಕ, ಸಹಕಾರಿ ಮತ್ತು ಕೃಷಿ ಕ್ಷೇತ್ರದಲ್ಲಿ ಬಹಳ ಅನುಭವ ಹೊಂದಿದವರಾಗಿದ್ದಾರೆ.

























































































































