
ಮೂಲ್ಕಿ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಸ್ವಾಗತ ಗೋಪುರವನ್ನು ರಾಷ್ಟ್ರೀಯ ಹೆದ್ದಾರಿ ಸಂಖ್ಯೆ 66ರ ಅಗಲೀಕರಣ ಕಾಮಗಾರಿಯ ಹಿನ್ನೆಲೆಯಲ್ಲಿ ಸ್ಥಳಾಂತರಿಸುವ ಕುರಿತು ಮಹತ್ವದ ಪರಿಶೀಲನಾ ಸಭೆ ನಡೆಯಿತು. 1999ನೇ ವರ್ಷದಲ್ಲಿ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿ, ಉದ್ಯಮಿ ಐಕಳ ಗುಣಪಾಲ ಶೆಟ್ಟಿ ಹಾಗೂ ಕುಟುಂಬದವರಿಂದ ನಿರ್ಮಿಸಲ್ಪಟ್ಟು ದೇವಸ್ಥಾನಕ್ಕೆ ಸಮರ್ಪಿಸಲಾದ ಈ ಸ್ವಾಗತ ಗೋಪುರವನ್ನು ತೆರವುಗೊಳಿಸುವ ಅಥವಾ ಸುರಕ್ಷಿತವಾಗಿ ಸ್ಥಳಾಂತರಿಸುವ ಅಗತ್ಯ ಎದುರಾಗಿದೆ. ಟ್ರಸ್ಟಿ ಹಾಗೂ ಮುಲ್ಕಿ ಸೀಮೆ ಅರಸರಾದ ಶ್ರೀ ದುಗ್ಗಣ್ಣ ಸಾವಂತರ ಸಲಹೆಯಂತೆ ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ್ ಮೂಲ್ಕಿಯ ಅಧ್ಯಕ್ಷರಾದ ಜೀವನ್ ಕೆ ಶೆಟ್ಟಿ ಅವರ ಸಹಕಾರದಲ್ಲಿ ಹರಿಯಾಣದ ವಿಶೇಷ ಪರಿಣತಿ ಹೊಂದಿದ ತಾಂತ್ರಿಕ ಸಂಸ್ಥೆಯೊಂದು ಸ್ಥಳಕ್ಕೆ ಭೇಟಿ ನೀಡಿ ಗೋಪುರದ ಸಮಗ್ರ ಪರಿಶೀಲನೆ ನಡೆಸಿತು. ಗೋಪುರವನ್ನು ಹಾನಿಯಾಗದಂತೆ ಸ್ಥಳಾಂತರಿಸುವ ತಾಂತ್ರಿಕ ಸಾಧ್ಯತೆಗಳ ಬಗ್ಗೆ ತಜ್ಞರು ಚರ್ಚಿಸಿದರು.





ಈಗಿರುವ ಗೋಪುರವನ್ನು ಕೆಡವದೆ ಅದರ ಮೂಲ ರಚನೆಯನ್ನು ಉಳಿಸಿಕೊಂಡೇ ಸ್ಥಳಾಂತರಿಸುವುದು ಹಸಿರು ಅಭಿವೃದ್ಧಿಯ ಮಹತ್ವದ ಹೆಜ್ಜೆಯಾಗಿದೆ ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಹಳೆಯ ಕಟ್ಟಡವನ್ನು ಉಳಿಸುವುದರಿಂದ ಹೊಸ ನಿರ್ಮಾಣಕ್ಕೆ ಅಗತ್ಯವಿರುವ ಸಿಮೆಂಟ್, ಉಕ್ಕು, ಮರಳು, ಜಲ್ಲಿ ಸೇರಿದಂತೆ ಅನೇಕ ನೈಸರ್ಗಿಕ ಸಂಪನ್ಮೂಲಗಳ ಬಳಕೆ ಕಡಿಮೆಯಾಗುತ್ತದೆ. ಇದರೊಂದಿಗೆ ಹೊಸ ನಿರ್ಮಾಣ ಕಾರ್ಯದಿಂದ ಉಂಟಾಗುವ ಧೂಳು, ತ್ಯಾಜ್ಯ ಹಾಗೂ ಪರಿಸರದ ಮೇಲೆ ಬೀಳುವ ಒತ್ತಡವನ್ನು ತಪ್ಪಿಸಬಹುದು. ಅದೇ ರೀತಿ ಈಗಿರುವ ರಚನೆಯನ್ನು ಸಂರಕ್ಷಿಸುವುದರಿಂದ ಅದರ ಐತಿಹಾಸಿಕ ಮೌಲ್ಯ, ಭಕ್ತರ ಭಾವನಾತ್ಮಕ ನಂಟು ಹಾಗೂ ಸಾಂಸ್ಕೃತಿಕ ಪರಂಪರೆ ಮುಂದಿನ ಪೀಳಿಗೆಗಳಿಗೆ ಉಳಿಯಲಿದೆ. ಹಳೆಯ ನಿರ್ಮಿತಿಯನ್ನು ಉಳಿಸಿ ಮರುಬಳಕೆ ಮಾಡುವುದೇ ಪ್ರಕೃತಿ ಸ್ನೇಹಿ ಮತ್ತು ಶಾಶ್ವತ ಅಭಿವೃದ್ಧಿಯ ನಿಜವಾದ ಪರಿಕಲ್ಪನೆ ಎಂದು ಸಭೆಯಲ್ಲಿ ತಿಳಿಸಲಾಯಿತು.
ಈ ಸಂದರ್ಭದಲ್ಲಿ ಐಕಳ ಹರೀಶ್ ಶೆಟ್ಟಿ ಅವರ ಉಪಸ್ಥಿತಿಯಲ್ಲಿ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶ್ರೀಮತಿ ಶ್ವೇತಾ ಪಲ್ಲಿ ಹಾಗೂ ಊರಿನ ಪ್ರಮುಖರೊಂದಿಗೆ ಸಮಾಲೋಚನೆ ನಡೆಸಿ ಮುಂದಿನ ಕ್ರಮಗಳನ್ನು ಕೈಗೊಳ್ಳಲು ತೀರ್ಮಾನಿಸಲಾಯಿತು. ಸಭೆಯಲ್ಲಿ ಸಂತೋಷ್ ಹೆಗ್ಡೆ, ಸುಜಿತ್ ಸಾಲ್ಯಾನ್ (ಕಾರ್ಯದರ್ಶಿ, ACEM), ಸತೀಶ್ ಅಂಚನ್, ಸಂಜೀವ ದೇವಾಡಿಗ, ವೇದಾನಂದ ಚೌಟ, ಬಾಲಕೃಷ್ಣ ರೈ ಕೊಲ್ಲಾಡಿ, ಅಶೋಕ್ ಶೆಟ್ಟಿ, ಉದಯ ಶೆಟ್ಟಿ, ಪುರಂದರ ಶೆಟ್ಟಿಗಾರ್, ಚಂದ್ರಶೇಖರ ಸುವರ್ಣ, ನಾಗೇಶ್ ಬಪ್ಪನಾಡು, ಶಿವಶಂಕರ, ಸಾಯಿನಾಥ್ ಶೆಟ್ಟಿ ಹಾಗೂ ರವಿ ಶೆಟ್ಟಿ ಜತ್ತೊಟ್ಟು ಉಪಸ್ಥಿತರಿದ್ದರು.

























































































































