
ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಆವರಣದ ಟೆಕ್ನಾಲಜಿ ಸೆಂಟರ್ನಲ್ಲಿ ಮೆಟಾಸಾಫ್ಟ್ ಐಟಿ ಸೊಲ್ಯೂಷನ್ಸ್ ಹಾಗೂ ಕಾಕುಂಜೆ ಸಾಫ್ಟ್ವೇರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಗಳ ಹೊಸ ಕಚೇರಿ ಹಾಗೂ ಸಂಶೋಧನೆ – ನವೀನತೆ ಕೇಂದ್ರವನ್ನು ಉದ್ಘಾಟಿಸಲಾಯಿತು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ್ ಆಳ್ವ ಹೊಸ ಕಚೇರಿ ಉದ್ಘಾಟಿಸಿ ಮಾತನಾಡಿ, ಆಳ್ವಾಸ್ ಎಂಜಿನಿಯರಿಂಗ್ ಕಾಲೇಜು ತಂತ್ರಜ್ಞಾನ, ಸಂಶೋಧನೆ ಹಾಗೂ ಉದ್ಯೋಗಾವಕಾಶಗಳ ಸಮಗ್ರ ಪರಿಸರವನ್ನು ಒದಗಿಸುವ ವಿಶಿಷ್ಟ ಕ್ಯಾಂಪಸ್ ಆಗಿ ಹೊರಹೊಮ್ಮಿದೆ. ಇಲ್ಲಿ ಸ್ಥಾಪಿಸಿರುವ ವಿವಿಧ ಐಟಿ ಕಂಪನಿಗಳು ಮತ್ತು ಸ್ಟಾರ್ಟ್ಅಪ್ಗಳು ವಿದ್ಯಾರ್ಥಿಗಳ ಭವಿಷ್ಯವನ್ನು ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುತ್ತಿವೆ. ಈ ಕೇಂದ್ರವು ವಿದ್ಯಾರ್ಥಿಗಳಿಗೆ ಇಂಟರ್ನ್ ಶಿಪ್, ಪ್ರಾಜೆಕ್ಟ್, ಉದ್ಯೋಗಾವಕಾಶಗಳು ಹಾಗೂ ಸಂಶೋಧನೆ -ನವೀನತೆ ಕ್ಷೇತ್ರಗಳಲ್ಲಿ ಪೂರಕ ವೇದಿಕೆಯಾಗಿ ಕಾರ್ಯ ನಿರ್ವಹಿಸಲಿದೆ ಎಂದರು.






ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಆಳ್ವಾಸ್ ಇಂಜಿನಿಯರಿಂಗ್ ಕಾಲೇಜಿನ ಕ್ಯಾಂಪಸ್ನಲ್ಲಿ ಸಂಪೂರ್ಣ ಬ್ಲಾಕ್ವೊಂದನ್ನು ಟೆಕ್ ಸೆಂಟರ್ಗಳ ಸ್ಥಾಪನೆಗಾಗಿ ಮೀಸಲಿಟ್ಟಿದೆ. ಈ ವಿಶೇಷ ಬ್ಲಾಕ್ನಲ್ಲಿ ಕಚೇರಿ ಸ್ಥಳ, ಮೂಲಭೂತ ಸೌಲಭ್ಯಗಳು, ವಿದ್ಯುತ್, ಇಂಟರ್ನೆಟ್ ಸೇರಿದಂತೆ ಅಗತ್ಯವಿರುವ ಎಲ್ಲಾ ಮೂಲ ಸೌಕರ್ಯಗಳನ್ನು ಉಚಿತವಾಗಿ ಒದಗಿಸಲಾಗುತ್ತಿದೆ. ಈ ಉಪಕ್ರಮವು ಕಂಪನಿಗಳನ್ನು ಕ್ಯಾಂಪಸ್ಗೆ ಆಕರ್ಷಿಸುವುದರ ಜೊತೆಗೆ, ವಿದ್ಯಾರ್ಥಿಗಳಿಗೆ ನೇರ ಸಂಪರ್ಕವನ್ನು ಕಲ್ಪಿಸುತ್ತದೆ. ಆಳ್ವಾಸ್ ಕ್ಯಾಂಪಸ್ನಲ್ಲಿ ಈಗಾಗಲೇ ಸ್ಟೇಲಿಯಂ, ಸ್ಟ್ರೀಕಾನ್, ಇನ್ಫೋಸಿಸ್, ಸ್ವಿಚ್ಗೇರ್, ಎಲ್ಎಸ್ಜಿಎ ಕಂಪೆನಿಗಳು ಕಾರ್ಯನಿರ್ವಹಿಸುತ್ತಿದ್ದು, ಇವುಗಳ ಜೊತೆಯಲ್ಲಿ ಕಾಕುಂಜೆ ಹಾಗೂ ಮೆಟಾಸಾಫ್ಟ್ ಕಂಪನಿಗಳು ಸೇರ್ಪಡೆಗೊಂಡವು. ಇವುಗಳೊಂದಿಗೆ ಹೋಮ್ಝಕಾರ್ಟ, ವಲ್ಕನ್ಸ್ ವಿದ್ಸೂತ್ರ ಹ್ಯಾಕ್ಫೈ, ಕ್ರೆಸೆಂಟ್, ವಾಶಿಟೆಕ್, ಲೋಜಿಕ್ಯೂ ಮತ್ತು ಲಿಂಕ್ಲಿ ಮುಂತಾದ ಸ್ಟಾರ್ಟ್ಅಪ್ ಸಂಸ್ಥೆಗಳೂ ಕಾಲೇಜಿನ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದರು.
ಈ ಸಂದರ್ಭದಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ, ಮೆಟಾಸಾಫ್ಟ್ ಸಂಸ್ಥೆಯ ಕಾರ್ಯಾಕಾರಿ ನಿರ್ದೇಶಕಿ ಸರಿತಾ ಪ್ರವೀಣ್, ಅಂಚನ್ ಆಯುರ್ವೇದಿಕ್ ಇಂಡಸ್ಟ್ರೀಸ್ ಸಂಸ್ಥಾಪಕ ಡಾ. ನಾರಾಯಣ ಟಿ. ಅಂಚನ್, ಆಗರಿ ಎಂಟರ್ಪ್ರೈಸಸ್ನ ಮಾಲೀಕ ಆಗರಿ ರಾಘವೇಂದ್ರ ರಾವ್, ಪ್ರಿಯಾ ಅಸೋಸಿಯೇಟ್ಸ್ ನ ಡಾ. ಪ್ರಿಯಾ ಹಾಗೂ ಆಳ್ವಾಸ್ ಎಂಜಿನಿಯರಿಂಗ್ ಕಾಲೇಜಿನ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್, ಉಪಸ್ಥಿತರಿದ್ದರು. ಕಾಕುಂಜೆ ಸಾಫ್ಟ್ವೇರ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಜಿ.ಕೆ. ಭಟ್ ಕಾಕುಂಜೆ, ಮಾಲತಿ ಎಸ್.ಎನ್ ಭಟ್ ಕಾಕುಂಜೆ, ಅಪರ್ಣಾ ಜಿ.ಕೆ ಭಟ್ ಕಾಕುಂಜೆ, ತಂಡದ ಸದಸ್ಯರು ಉಪಸ್ಥಿತರಿದ್ದರು.

























































































































