

ಭಾರತೀಯ ರೆಡ್ ಕ್ರಾಸ್ ಸೊಸೈಟಿಯ ದ.ಕ ಜಿಲ್ಲಾ ಘಟಕದ 2026-29 ನೇ ಸಾಲಿನ ಛೇರ್ಮನ್ ಆಗಿ ಸಿ.ಎ ಶಾಂತಾರಾಮ ಶೆಟ್ಟಿ ಪುನರಾಯ್ಕೆಯಾಗಿದ್ದಾರೆ. ವೈಸ್ ಛೇರ್ಮನ್ ಆಗಿ ಡಾ. ಬಿ. ಸಚ್ಚಿದಾನಂದ ರೈ, ಖಜಾಂಚಿಯಾಗಿ ಗುರುದತ್ ನಾಯಕ್ ಆಯ್ಕೆಯಾಗಿದ್ದಾರೆ. ದ.ಕ ಜಿಲ್ಲಾಧಿಕಾರಿ ಕಚೇರಿಯಲ್ಲಿ ರೆಡ್ ಕ್ರಾಸ್ ಸೊಸೈಟಿಯ ದ.ಕ. ಜಿಲ್ಲಾ ಅಧ್ಯಕ್ಷರಾಗಿರುವ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಅವರು ಆಡಳಿತ ಮಂಡಳಿ ಸದಸ್ಯರಿಗೆ ಪ್ರಮಾಣವಚನ ಬೋಧಿಸಿ ಶುಭ ಹಾರೈಸಿದರು. ನೂತನವಾಗಿ ಚುನಾಯಿತರಾದ ಸಿ.ಎ ಶಾಂತಾರಾಮ ಶೆಟ್ಟಿ, ಡಾ. ಬಿ. ಸಚ್ಚಿದಾನಂದ ರೈ, ಗುರುದತ್ ನಾಯಕ್, ಡಾ. ಸತೀಶ್ ರಾವ್, ಯತೀಶ್ ಬೈಕಂಪಾಡಿ, ಪುಷ್ಪರಾಜ್ ಜೈನ್, ಡಾ. ಸುಮನ ಬಿ., ಪಿ.ಬಿ ಹರೀಶ್ ರೈ, ಸಚೇತ್ ಸುವರ್ಣ ಮತ್ತು ರಾಘವೇಂದ್ರ ರಾವ್ ಪ್ರಮಾಣ ವಚನ ಸ್ವೀಕರಿಸಿದರು.


ಬಳಿಕ ಛೇರ್ಮನ್ ಹಾಗೂ ವಿವಿಧ ಉಪ ಸಮಿತಿಗಳಿಗೆ ನಿರ್ದೇಶಕರನ್ನು ಆಯ್ಕೆ ಮಾಡಲಾಯಿತು. ಸಿ.ಎ ಶಾಂತಾರಾಮ ಶೆಟ್ಟಿಯವರು ಸತತ 4 ನೇ ಅವಧಿಗೆ ದ.ಕ. ಜಿಲ್ಲಾ ಘಟಕದ ಛೇರ್ಮನ್ ಆಗಿ ಆಯ್ಕೆಯಾಗಿದ್ದು, ಪ್ರಸ್ತುತ ಅವರು ಹೊಸದಿಲ್ಲಿಯ ರೆಡ್ ಕ್ರಾಸ್ ಸಂಸ್ಥೆಯ ರಾಷ್ಟ್ರೀಯ ನಿರ್ವಹಣ ಮಂಡಳಿ ಸದಸ್ಯರಾಗಿದ್ದಾರೆ.

























































































































