
ಕೊಪ್ಪ ತಾಲೂಕು ಮೇಗುಂದ ಹೋಬಳಿ ರವಿನಗರ ನಿವಾಸಿಯಾದ ರಮೇಶ್ ಅವರು ಕಳೆದ ಎರಡು ತಿಂಗಳುಗಳಿಂದ ತೀವ್ರ ಅನಾರೋಗ್ಯದಿಂದ ಬಳಲುತ್ತಾ ಹಾಸಿಗೆಯಲ್ಲೇ ಜೀವನ ಸಾಗಿಸುತ್ತಿದ್ದರು. ಅವರ ಸಂಕಷ್ಟದ ಸ್ಥಿತಿಯನ್ನು ಗಮನಿಸಿದ ಸ್ಥಳೀಯ ಅಮ್ಮ ಫೌಂಡೇಶನ್ ಪೂರ್ಣಾವಧಿ ಕಾರ್ಯಕರ್ತರು ಈ ವಿಷಯವನ್ನು ಅಮ್ಮ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಸುಧಾಕರ್ ಶೆಟ್ಟಿ ಅವರಿಗೆ ತಿಳಿಸಿದರು. ಮಾನವೀಯತೆಗೆ ಮೊದಲ ಆದ್ಯತೆ ನೀಡುವ ಸುಧಾಕರ್ ಶೆಟ್ಟಿ ಅವರು ತಕ್ಷಣವೇ ಸ್ಪಂದಿಸಿ, ರಮೇಶ್ ಅವರಿಗೆ ಅಗತ್ಯವಾದ ವೀಲ್ ಚೇರ್ ಒದಗಿಸುವಂತೆ ಸೂಚಿಸಿದರು.

ಅದರಂತೆ ಮಾರ್ಚ್ 7ರಂದು, ಅಮ್ಮ ಫೌಂಡೇಶನ್ ವತಿಯಿಂದ ಸುಧಾಕರ್ ಶೆಟ್ಟಿ ಅವರ ಅನುಪಸ್ಥಿತಿಯಲ್ಲಿ ರಮೇಶ್ ಅವರಿಗೆ ವೀಲ್ ಚೇರ್ ವಿತರಿಸಲಾಯಿತು. ಈ ನೆರವು ರಮೇಶ್ ಅವರ ಜೀವನದಲ್ಲಿ ಹೊಸ ಆಶಯವನ್ನು ಮೂಡಿಸಿದೆ. ಹಾಸಿಗೆಯಲ್ಲೇ ಸೀಮಿತವಾಗಿದ್ದ ಅವರ ಜೀವನದಲ್ಲಿ ಈ ಸಹಾಯವು ಚಲನೆ ಹಾಗೂ ಸ್ವಾಭಿಮಾನವನ್ನು ನೀಡಿದಂತಾಗಿದೆ. ಆ ಕ್ಷಣದಲ್ಲಿ ಅವರ ಕಣ್ಣುಗಳಲ್ಲಿ ಕಾಣಿಸಿಕೊಂಡ ಆನಂದದ ಕಣ್ಣೀರು ಹಾಗೂ ಮುಖದ ಮಂದಹಾಸ ಈ ಸೇವೆಯ ಮಹತ್ವವನ್ನು ಸ್ಪಷ್ಟಪಡಿಸಿತು. ಈ ಕಾರ್ಯಕ್ರಮದಲ್ಲಿ ಅಮ್ಮ ಫೌಂಡೇಶನ್ ನಿರ್ದೇಶಕರಾದ ಪ್ರಭಾಕರ್ ಎಸ್ ಶೆಟ್ಟಿ, ಕಾರ್ಯನಿರ್ವಹಣಾಧಿಕಾರಿ ಗುರುಪ್ರಸಾದ್, ಸ್ಥಳೀಯ ಮುಖಂಡರಾದ ಉದಯ್, ವಾಸು ಹಾಗೂ ಅಮ್ಮ ಫೌಂಡೇಶನ್ ಪೂರ್ಣಾವಧಿ ಕಾರ್ಯಕರ್ತೆ ಶ್ರೀಮತಿ ಪ್ರೇಮ ಉದಯ್ ಅವರು ಭಾಗವಹಿಸಿದ್ದರು. ಜೊತೆಗೆ ರಮೇಶ್ ಅವರ ಪತ್ನಿ ಮತ್ತು ಮಗ ಈ ಸಂದರ್ಭದಲ್ಲಿ ಉಪಸ್ಥಿತರಿದ್ದು ಕೃತಜ್ಞತೆಯನ್ನು ವ್ಯಕ್ತಪಡಿಸಿದರು.


























































































































