
ತಲಪಾಡಿ ಶ್ರೀ ದುರ್ಗಾ ಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆ ಪ್ರಯುಕ್ತ ಧರ್ಮ ಶಿಕ್ಷಣ ಜ್ಞಾನಯಜ್ಞ ಸಲುವಾಗಿ ಶ್ರೀದೇವಿ ಸನ್ನಿಧಿಯಲ್ಲಿ ಪೂರ್ಣ ಹಗಲಿನ ಯಕ್ಷಗಾನ ತಾಳಮದ್ದಳೆ ಇತ್ತೀಚೆಗೆ ಜರಗಿತು. ಬೆಳಿಗ್ಗೆ 9 ಗಂಟೆಯಿಂದ ಸಾಯಂಕಾಲ 7ರವರೆಗೆ ಸತತ 10 ಗಂಟೆ ನಡೆದ ತಾಳಮದ್ದಳೆ ಕಾರ್ಯಕ್ರಮದಲ್ಲಿ ಜಿಲ್ಲೆಯ ಪ್ರಸಿದ್ಧ ಹವ್ಯಾಸಿ ಕಲಾವಿದರು ಭಾಗವಹಿಸಿದರು. ಯಕ್ಷಧ್ರುವ ಹವ್ಯಾಸಿ ಘಟಕವು ಈ ಕಾರ್ಯಕ್ರಮವನ್ನು ಆಯೋಜಿಸಿತ್ತು. ಬೆಳಿಗ್ಗೆ ಉದ್ಘಾಟನಾ ಸಮಾರಂಭದಲ್ಲಿ ದೇವಳದ ಆಡಳಿತ ಸಮಿತಿ ಹಿರಿಯ ಸದಸ್ಯರು ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಸಂಜೆಯ ಸಮಾರೋಪ ಸಮಾರಂಭದಲ್ಲಿ ಯಕ್ಷಧ್ರುವ ಪಟ್ಲ ಫೌಂಡೇಶನ್ ಸ್ಥಾಪಕಾಧ್ಯಕ್ಷ ಭಾಗವತ ಸತೀಶ್ ಶೆಟ್ಟಿ ಪಟ್ಲ ಅವರನ್ನು ಗೌರವಿಸಲಾಯಿತು. ಹವ್ಯಾಸಿ ಘಟಕದ ಅಧ್ಯಕ್ಷ ರಾಜಾರಾಮ ಹೊಳ್ಳ ಕೈರಂಗಳ ಸ್ವಾಗತಿಸಿದರು. ಸಂಚಾಲಕ ಸದಾಶಿವ ಆಳ್ವ ತಲಪಾಡಿ ಕಾರ್ಯಕ್ರಮ ನಿರೂಪಿಸಿ, ಗಣೇಶ ಕುಂಜತ್ತೂರು ವಂದಿಸಿದರು.


ದಿನವಿಡೀ ನಡೆದ ತಾಳಮದ್ದಳೆ ಜ್ಞಾನಯಜ್ಞದಲ್ಲಿ ಜನಪ್ರಿಯ ನಾಲ್ಕು ಪೌರಾಣಿಕ ಪ್ರಸಂಗಗಳನ್ನು ಆಯ್ದುಕೊಳ್ಳಲಾಗಿತ್ತು. ವಿಭೀಷಣನೀತಿ, ಅಂಗದ ಸಂಧಾನ, ಶಲ್ಯ ಸಾರಥ್ಯ ಮತ್ತು ಕರ್ಣ ಪರ್ವ. ಯಕ್ಷಗಾನ ವೃತ್ತಿಮೇಳಗಳಲ್ಲಿ ಪ್ರಸ್ತುತ ಖಾಯಂ ಕಲಾವಿದರಲ್ಲದ ಹೆಸರಾಂತ ಹವ್ಯಾಸಿಗಳು ಇದರಲ್ಲಿ ಪಾಲ್ಗೊಂಡರು. ತಾಳಮದ್ದಳೆ ರಂಗದಲ್ಲಿ ಖ್ಯಾತನಾಮರಾದ ಸರ್ಪಂಗಳ ಈಶ್ವರ ಭಟ್, ಭಾಸ್ಕರ ರೈ ಕುಕ್ಕುವಳ್ಳಿ, ಸದಾಶಿವ ಆಳ್ವ ತಲಪಾಡಿ, ಹರೀಶ ಭಟ್ ಬಳಂತಿ ಮೊಗರು, ವಿನಯ ಆಚಾರ್ಯ ಹೊಸಬೆಟ್ಟು, ಗಣೇಶ ಕಾವ ತಲ್ಲಂಗಡಿ, ದಿವಾಕರ ಆಚಾರ್ಯ ಗೇರುಕಟ್ಟೆ, ರಾಜಾರಾಮ ರಾವ್ ಮೀಯಪದವು, ಗಣೇಶ ಕುಂಜತ್ತೂರು, ಆನಂದ ಸೌಕುರ್ಡೇಲು, ವಿದ್ಯಾಧರ ಶೆಟ್ಟಿ, ವಿಜಯಶಂಕರ ಆಳ್ವ, ಬಾಲಕೃಷ್ಣ ಶೆಟ್ಟಿ, ದೀವಿತ್ ಎಸ್.ಕೆ. ಪೆರಾಡಿ, ದಯಾನಂದ ಪಿಲಿಕೂರು, ಹರಿಶ್ಚಂದ್ರ ನಾಯ್ಗ ಮಾಡೂರು, ನಾಗೇಶ್ ಆಚಾರ್ಯ ಕೈರಂಗಳ ಮತ್ತು ರಾಧಾ ಆರ್ ಹೊಳ್ಳ ವಿವಿಧ ಪ್ರಸಂಗಗಳಲ್ಲಿ ಅರ್ಥಧಾರಿಗಳಾಗಿದ್ದರು.

ಭಾಗವತರುಗಳಾದ ರಾಜಾರಾಮ ಹೊಳ್ಳ ಕೈರಂಗಳ, ದೇವಿಪ್ರಸಾದ್ ಆಳ್ವ ತಲಪಾಡಿ, ರತ್ನಾಕರ ಆಳ್ವ ತಲಪಾಡಿ, ಶಶಿಧರಾವ್ ಸುರತ್ಕಲ್, ಲಕ್ಷ್ಮೀನಾರಾಯಣ ಹೊಳ್ಳ, ದಯಾನಂದ ಪಾವೂರು, ಮನೋಹರ ಪ್ರಭು ಶರವು, ಹಾಡುಗಾರಿಕೆಯಲ್ಲಿ ಪಾಲ್ಗೊಂಡರು. ಕೋಳ್ಯೂರು ಭಾಸ್ಕರ, ಪೆರ್ಲ ಗಣಪತಿ ಭಟ್, ರಾಮ ಹೊಳ್ಳ ಸುರತ್ಕಲ್, ವೇದವ್ಯಾಸ ರಾವ್ ಕುತ್ತೆತ್ತೂರು, ಮಯೂರ್ ನಾಯ್ಗ ಮಾಡೂರು, ಗಣೇಶ ಮಯ್ಯ ವರ್ಕಾಡಿ, ರಘುರಾಮ ಮಯ್ಯ, ರಾಘವೇಂದ್ರ ರಾವ್ ಮಂಜನಾಡಿ ಚೆಂಡೆ ಮದ್ದಲೆಗಳಲ್ಲಿ ಸಹಕಾರ ನೀಡಿದರು. ತೊಕ್ಕೊಟ್ಟಿನ ಪೊಸಕುರಲ್ ಬಳಗ ಸಂಪೂರ್ಣ ತಾಳಮದ್ದಳೆಯನ್ನು ದಾಖಲಿಸಿ ಆಸಕ್ತರಿಗೆ ಅಂತರ್ಜಾಲ ಮೂಲಕ ವೀಕ್ಷಿಸುವ ಅವಕಾಶ ಮಾಡಿಕೊಟ್ಟರು.


























































































































