
ಕಳೆದ ಎಂಟು ವರ್ಷಗಳಿಂದ ಮುಂಬಯಿ ಅಲ್ಲದೇ ನಮ್ಮ ಊರಿನಲ್ಲಿ ಸಾಮಾಜಿಕವಾಗಿ ಬಡ ಜನರಿಗೆ ವಿವಿಧ ರೀತಿಯ ಸೇವೆಯನ್ನು ಶಿವಾಯ ಫೌಂಡೇಶನ್ ಮಾಡುತ್ತಾ ಬಂದಿದೆ. ಬಡವರ ಕಣ್ಣೀರು ಒರೆಸುವ ಕಾಯಕವನ್ನು ಶಿವಾಯ ಫೌಂಡೇಶನ್ ಮಾಡುತ್ತಿರುವುದು ಅಭಿನಂದನೀಯ. ಇದೊಂದು ಮಾನವೀಯ ಮಾದರಿ ಸೇವೆಯಾಗಿದೆ. ಈ ಸಂಸ್ಥೆಯ ಎಲ್ಲಾ ಸದಸ್ಯರಿಗೆ ಮತ್ತಷ್ಟು ಸಾಮಾಜಿಕ ಸೇವೆಯನ್ನು ಮಾಡುವ ಶಕ್ತಿಯನ್ನು, ಯೋಗಾ ಭಾಗ್ಯವನ್ನು ದೇವರು ಅನುಗ್ರಹಿಸಲಿ ಎಂದು ಬೋಂಬೆ ಬಂಟ್ಸ್ ಅಸೋಸಿಯೇಷನ್ ಇದರ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ಶಾರದಾ ಶ್ಯಾಮ ಶೆಟ್ಟಿ ನುಡಿದರು. ಅವರು ಮಾರ್ಚ್ 15 ರಂದು ನವಿಮುಂಬಯಿ ಜೂಹಿನಗರ ಇಲ್ಲಿನ ಬಂಟ್ಸ್ ಸೆಂಟರ್ ಬೋಂಬೆ ಬಂಟ್ಸ್ ಅಸೋಸಿಯೇಷನ್ ಇದರ ಸಭಾಗೃಹದಲ್ಲಿ ನಿರ್ಮಿತ ಶ್ಯಾಮ ಎನ್ ಶೆಟ್ಟಿ ಮತ್ತು ಶಾರದಾ ಎಸ್ ಶೆಟ್ಟಿ ವೇದಿಕೆಯಲ್ಲಿ ಜರಗಿದ ಶಿವಾಯ ಫೌಂಡೇಶನ್ ಮುಂಬಯಿ ಇದರ ಎಂಟನೇ ವಾರ್ಷಿಕೋತ್ಸವ, ಶಿವಾಯ ಪ್ರೇರಣಾ ಪ್ರಶಸ್ತಿ ಪ್ರಧಾನ ಮತ್ತು ಸಾಧಕರಿಗೆ ಸನ್ಮಾನ ಸಮಾರಂಭವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಮಾತನಾಡಿದರು.


ಮುಖ್ಯ ಅತಿಥಿ ಬೋಂಬೆ ಬಂಟ್ಸ್ ಅಸೋಸಿಯೇಷನ್ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತಾ ನಾರಾಯಣ ಶೆಟ್ಟಿ ಮಾತನಾಡಿ, ಬಡವರ ಕಷ್ಟಗಳಿಗೆ ಸ್ಪಂದಿಸುವ ದೊಡ್ಡ ಕೆಲಸವನ್ನು ಶಿವಾಯ ಫೌಂಡೇಶನ್ ಕಳೆದ ಹಲವಾರು ವರ್ಷಗಳಿಂದ ಮಾಡುತ್ತಾ ಬರುತ್ತಿದೆ. ತನ್ನ ಉದ್ಯೋಗದಲ್ಲಿ ದೊರೆತ ಸಂಬಳದ ಅಲ್ಪಾಂಶವನ್ನು ಬದಿಗಿಟ್ಟು ಬೀದಿಗಳಲ್ಲಿ ಮಲಗುತ್ತಿರುವ ನಿರ್ಗತಿಕರಿಗೆ, ಆರೋಗ್ಯ ಪೀಡಿತರಿಗೆ, ಶಿಕ್ಷಣದಿಂದ ವಂಚಿತರಾಗುವವರಿಗೆ ಸಹಾಯ ಹಸ್ತವನ್ನು ನೀಡಿ ಅವರ ಬಾಳಿಗೆ ಬೆಳಕನ್ನು ಚೆಲ್ಲುವ ಕೆಲಸವನ್ನು ಮಾಡುತ್ತಿರುವುದು ಶ್ಲಾಘನೀಯ. ದೊಡ್ಡ ದೊಡ್ಡ ಸಂಘ ಸಂಸ್ಥೆಗಳು ಮಾಡದ ಕೆಲಸವನ್ನು ಶಿವಾಯ ಫೌಂಡೇಶನ್ ಮಾಡುತ್ತಿದೆ ಎನ್ನಲು ತುಂಬಾ ಹೆಮ್ಮೆಯಾಗುತ್ತದೆ. ಸಾಮಾಜಿಕ ಕ್ಷೇತ್ರದಲ್ಲಿ ಶಿವಾಯ ಫೌಂಡೇಶನ್ ಕೀರ್ತಿಯನ್ನು ಪಡೆಯಲಿ. ನಿಸ್ವಾರ್ಥವಾಗಿ ಶಿವಾಯ ಫೌಂಡೇಶನ್ ಮಾಡುವ ಸೇವೆಗಳು ಮುಂದುವರಿಯಲಿ. ಸಾಮಾಜಿಕವಾಗಿ ಸೇವೆಯನ್ನು ಮಾಡುವುದು ಬಡಜನರ ಕಷ್ಟಗಳಿಗೆ ಸಹಕರಿಸುವುದು ನಮ್ಮೆಲ್ಲರ ಕರ್ತವ್ಯ. ನಾನು ಕೂಡಾ ಸಾಮಾಜಿಕವಾಗಿ ತನ್ನನ್ನು ತೊಡಗಿಸಿಕೊಂಡು ವಿವಿಧ ರೀತಿಯಲ್ಲಿ ಸಮಾಜಕ್ಕೆ ಸೇವೆಯನ್ನು ಸಲ್ಲಿಸುತ್ತಿದ್ದೇನೆ. ಸಾಮಾಜಿಕ ಸೇವೆಗಾಗಿ ಬಂಟರ ಸಂಘದಿಂದ ಎರಡು ಬಾರಿ ಚಿನ್ನದ ಪದಕವನ್ನು ಪಡೆದಿರುವೆನು ಎನ್ನಲು ತುಂಬಾ ಸಂತೋಷವಾಗುತ್ತದೆ ಎಂದರು.


ಪುಣೆ ಉದ್ಯಮಿ ಸಂದೇಶ್ ಶೆಟ್ಟಿ ಇನ್ನಂಜೆ ಮಾತನಾಡಿ, ಶಿವಾಯ ಫೌಂಡೇಶನ್ ಇದರ ನಾನೋರ್ವ ಸದಸ್ಯ ಎನ್ನಲು ಹೆಮ್ಮೆಯಾಗುತ್ತದೆ. ಕಳೆದ ಕೆಲವು ವರ್ಷಗಳಿಂದ ನಾನು ಈ ಸಂಸ್ಥೆಯ ಜೊತೆಗಿದ್ದೇನೆ. ಸಾಮಾಜಿಕವಾಗಿ ಕೆಲಸ ಮಾಡುವ ಇದೊಂದು ಶ್ರೇಷ್ಠ ಸಂಸ್ಥೆ. ಅಗತ್ಯವಿದ್ದವರಿಗೆ, ಆರ್ಥಿಕವಾಗಿ ಹಿಂದುಳಿದವರಿಗೆ, ನಿರ್ಗತಿಕರಿಗೆ ಅನ್ನದಾನ, ಶೈಕ್ಷಣಿಕ ಸೇವೆ, ವೈದ್ಯಕೀಯ ಸೇವೆಯ ಮೂಲಕ ಕಣ್ಣೀರು ಒರೆಸುವ ಮಾನವೀಯ ಕೆಲಸವನ್ನು ಶಿವಾಯ ಫೌಂಡೇಶನ್ ಮಾಡುತ್ತಿದೆ. ಇಂತಹ ಸಂಸ್ಥೆಗಳು ನಮ್ಮ ಸಮಾಜ ಬದಲಾವಣೆಗೆ ಮಹತ್ತರವಾದ ಕೊಡುಗೆಯನ್ನು ನೀಡುತ್ತದೆ. ಸಮಾಜಕ್ಕೆ ನಿಸ್ವಾರ್ಥ ಸೇವೆಯನ್ನು ಮಾಡುವ ಸಂಕಲ್ಪವನ್ನು ನಾವೆಲ್ಲಾ ಮಾಡೋಣ. ಬಡಜನರ ಸೇವೆ ಮಾಡುವ ಶಿವಾಯ ಫೌಂಡೇಶನ್ ನೊಂದಿಗೆ ನಾವೆಲ್ಲಾ ಕೈಜೋಡಿಸೋಣ ಎಂದರು. ಬಂಟರ ಸಂಘ ಮುಂಬಯಿಯ ನವಿಮುಂಬಯಿ ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಗೀತಾ ಶೆಟ್ಟಿ ಮಾತನಾಡಿ, ಪ್ರಸ್ತುತ ಕಾಲದಲ್ಲಿ ಸ್ವಂತ ದುಡಿಮೆಯಿಂದ ತಮ್ಮ ಸಂಸಾರವನ್ನು ಉತ್ತಮ ರೀತಿಯಲ್ಲಿ ಸಾಗಿಸಲು ಜನರು ಕಷ್ಟ ಪಡುತ್ತಾರೆ. ಅಂತಹ ಸಮಯದಲ್ಲಿ ಶಿವಾಯ ಫೌಂಡೇಶನ್ ಸದಸ್ಯರು ಸೇರಿ ಒಳ್ಳೆಯ ಸೇವಾ ಮನೋಭಾವನೆಯಿಂದ ತನ್ನ ದುಡಿಮೆಯ ಅಲ್ಪಾಂಶವನ್ನು ದೀನದಲಿತರ, ಕಷ್ಟದಲ್ಲಿರುವವರ ಕಣ್ಣೀರು ಒರೆಸುವ ಸೇವಾ ಕಾರ್ಯಗಳಿಗೆ ವಿನಿಯೋಗಿಸಿ ಅಂತವರ ಮುಖದಲ್ಲಿ ನಗು ಭರಿಸುವ ಕೆಲಸವನ್ನು ಮಾಡುತ್ತಿರುವುದು ಅಭಿನಂದನೀಯ. ಈ ರೀತಿಯ ಸಾಮಾಜಿಕವಾಗಿ ಕೆಲಸ ಮಾಡುವ ಶಿವಾಯ ಫೌಂಡೇಶನ್ ನ ಯುವ ತಂಡಕ್ಕೆ ಪ್ರೋತ್ಸಾಹ ನೀಡುವುದು ನಮ್ಮೆಲ್ಲರ ಕರ್ತವ್ಯ. ಇಂತಹ ಸಂಸ್ಥೆ ಸಮಾಜಕ್ಕೆ ಸ್ಪೂರ್ತಿ. ದೇವರು ಶಿವಾಯ ಫೌಂಡೇಶನ್ ಇದರ ಸದಸ್ಯರಿಗೆಲ್ಲಾ ಹೆಚ್ಚಿನ ಸಮಾಜಪರ ಕೆಲಸವನ್ನು ಮಾಡುವ ಶಕ್ತಿ ಆರ್ಥಿಕ ಬಲವನ್ನು ನೀಡಲಿ ಎಂದರು.
ವೇದಿಕೆಯಲ್ಲಿ ಶಿವಾಯ ಫೌಂಡೇಶನ್ ಅಧ್ಯಕ್ಷ ಪ್ರಶಾಂತ್ ಶೆಟ್ಟಿ ಪಲಿಮಾರ್, ಅತಿಥಿ ಬೋಂಬೆ ಬಂಟ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಶ್ಯಾಮ ಎನ್ ಶೆಟ್ಟಿ, ಶಿವಾಯ ಫೌಂಡೇಶನ್ ನ ಉಪಾಧ್ಯಕ್ಷರಾದ ಮಧುಸೂಧನ್ ಶೆಟ್ಟಿ, ಗೌರವ ಸಲಹೆಗಾರರಾದ ತಾರನಾಥ ರೈ ಪುತ್ತೂರು, ಹರೀಶ್ ಕೋಟ್ಯಾನ್ ಪಡು ಇನ್ನ ಇವರೆಲ್ಲಾ ಉಪಸ್ಥಿತರಿದ್ದರು. ಶಿವಾಯ ಫೌಂಡೇಶನ್ ಇದರ ಗೌರವ ಪ್ರಧಾನ ಕಾರ್ಯದರ್ಶಿ ಪ್ರಶಾಂತ್ ಶೆಟ್ಟಿ ಪಂಜ ಸ್ವಾಗತಿಸಿದರು. ಕಾರ್ಯಕ್ರಮವನ್ನು ಶಿವಾಯ ಫೌಂಡೇಶನ್ ನ ವೈದ್ಯಕೀಯ ಸಲಹೆಗಾರ್ತಿ ಡಾ. ಸ್ವರ್ಣ ಶೆಟ್ಟಿ ಮತ್ತು ಅದ್ಯಪಾಡಿ ಬಾಲಕೃಷ್ಣ ಶೆಟ್ಟಿ ನಿರೂಪಿಸಿದರು. ಉದ್ಘಾಟನಾ ಸಮಾರಂಭದ ಬಳಿಕ ವಿವಿಧ ತಂಡಗಳ ಭಾಗವಹಿಸುವಿಕೆಯಲ್ಲಿ ಕುಣಿತ ಭಜನಾ ಸ್ಪರ್ಧೆ, ಸಮೂಹ ದೇಶಭಕ್ತಿ ಗೀತೆ ಸ್ಪರ್ಧೆ, ಐಲೇಸಾ ತಂಡದಿಂದ ಗಾನ ವೈಭವ ಜರಗಿತು. ಅಪಾರ ಸಂಖ್ಯೆಯಲ್ಲಿ ಶಿವಾಯ ಫೌಂಡೇಶನ್ ಸಂಸ್ಥೆಯ ಅಭಿಮಾನಿಗಳು, ತುಳು ಕನ್ನಡಿಗರು ಉಪಸ್ಥಿತರಿದ್ದರು.
– ಶಾರದಾ ಶ್ಯಾಮ ಶೆಟ್ಟಿ


























































































































