
ನಮ್ಮ ಬೇರುಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಮನುಷ್ಯನ ಜೀವನ ನಾಣ್ಯದಂತೆ; ಒಂದು ಮುಖ ಲೌಕಿಕವಾದರೆ ಇನ್ನೊಂದು ಆಧ್ಯಾತ್ಮ. ಅಭಂಗ ಎಂದರೆ ವಚನ; ವಚನ ಎಂದರೆ ಅಭಂಗ. ಬಸವಣ್ಣನವರ ಕಾಲದ 60-70 ವರ್ಷಗಳ ನಂತರ ಏಕತಾರಿಯೊಂದಿಗೆ ಅಭಂಗ ಬಂದಿತು. ಕೈಯಲ್ಲಿ ತಂಬೂರಿ, ಕಾಲಿಗೆ ಗೆಜ್ಜೆ ಕಟ್ಟಿ ದಾಸರು ಕೀರ್ತನೆಗಳಿಗೆ ಸಂಗೀತದ ರೂಪ ಕೊಟ್ಟರು. ವಚನ, ಅಭಂಗ, ಕೀರ್ತನೆಗಳಿಗೆ ಒಂದು ಮೂಲ ಸ್ರೋತ ಭಕ್ತಿ. ಇವೆಲ್ಲವೂ ಒಂದೇ ಉದ್ದೇಶಕ್ಕಾಗಿ ಬಂದವುಗಳು. ಆದುದರಿಂದ ಎಲ್ಲವೂ ಶ್ರೇಷ್ಠ ಎಂದು ಹಿರಿಯ ವಿದ್ವಾಂಸರು, ಖ್ಯಾತ ಸಂಶೋಧಕರೂ ಆದ ಡಾ. ಕೃಷ್ಣ ಕೊಲ್ಹಾರ ಕುಲಕರ್ಣಿ ಅವರು ಹೇಳಿದರು. ಅವರು ಮಾರ್ಚ್ 15ರ ರವಿವಾರದಂದು ಕನ್ನಡ ವಿಭಾಗ, ಮುಂಬಯಿ ವಿಶ್ವವಿದ್ಯಾಲಯ ಮತ್ತು ಮೈಸೂರು ಅಸೋಸಿಯೇಷನ್ ಮುಂಬಯಿ ಇವರ ಸಂಯುಕ್ತ ಆಶ್ರಯದಲ್ಲಿ ಮಾಟುಂಗಾದ ಮೈಸೂರು ಅಸೋಸಿಯೇಷನ್ನ ಸಭಾಂಗಣದಲ್ಲಿ ನಡೆದ “ಮೈಸೂರು ಅಸೋಸಿಯೇಷನ್ ಬಂಗಾರ ಹಬ್ಬದ ದತ್ತಿ ಉಪನ್ಯಾಸ ಮಾಲಿಕೆ -2026” ಕಾರ್ಯಕ್ರಮದಲ್ಲಿ ಉಪನ್ಯಾಸಕರಾಗಿ ಪಾಲ್ಗೊಂಡು, ‘ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಒಂದು ತೌಲನಿಕ ಜಿಜ್ಞಾಸೆ’ ಎಂಬ ವಿಷಯದ ಕುರಿತು ಮಾತನಾಡಿದರು.

ಕನ್ನಡ ವಿಭಾಗದ ಹಿರಿಯ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರೂ ಆದ ಪ್ರೊ. ಜಿ ಎನ್ ಉಪಾಧ್ಯ ಅವರು ಪ್ರಾಸ್ತಾವಿಕವಾಗಿ ಮಾತನಾಡುತ್ತಾ, ವಚನ ವಾಙ್ಮಯ ಮತ್ತು ದಾಸ ವಾಙ್ಮಯ- ಎರಡೂ ಕನ್ನಡದ ತವನಿಧಿಗಳು; ಅವು ಕನ್ನಡದ ಸಂಸ್ಕೃತಿ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಶರಣ ಸಾಹಿತ್ಯ ಪ್ರಜಾ ಸಾಹಿತ್ಯವಾದರೆ ದಾಸ ಸಾಹಿತ್ಯ ಗುರು ಶಿಷ್ಯ ಪರಂಪರೆಯನ್ನು ಹಾಕಿಕೊಟ್ಟಿದೆ. ವಚನ ವಾಙ್ಮಯದಲ್ಲಿ ಮಾನವ ಸ್ವಭಾವದ ಅನ್ವೇಷಣೆ ನಡೆದರೆ, ದಾಸರು ಸಮಾಜದ ಜೊತೆ ಮುಖಾಮುಖಿ ನಡೆಸಿದರು. ವಚನ ಮತ್ತು ದಾಸ ವಾಙ್ಮಯಗಳು ವಿಶ್ವ ಸಾಹಿತ್ಯಕ್ಕೆ ಕನ್ನಡದ ಪ್ರಧಾನ ಕೊಡುಗೆಗಳಾಗಿವೆ. ವಚನ ಪರಂಪರೆ ಮತ್ತು ದಾಸ ಪರಂಪರೆಗಳ ನಡುವೆ ಅನುಸಂಧಾನ ನಡೆದಿದೆ ಎಂದು ನಾವು ನೆನಪಿಟ್ಟುಕೊಳ್ಳಬೇಕು. ದಾಸರನ್ನು, ಶರಣರನ್ನು ನೆನಯಬೇಕಾದದ್ದು ನಮ್ಮ ಕರ್ತವ್ಯ ಎಂದು ನುಡಿದು ಎರಡು ಪ್ರಧಾನ ಭಕ್ತಿ ಧಾರೆಯ ಹಿನ್ನೆಲೆಯಲ್ಲಿ ಚಿಂತನ ಮಂಥನ ನಡೆಯಲಿರುವ ಕುರಿತು ಪ್ರವೇಶಿಕೆಯನ್ನು ನೀಡಿದರು. ಅವರು ಮೈಸೂರು ಅಸೋಸಿಯೇಷನ್ ನಾಲ್ಕೂವರೆ ದಶಕಗಳಿಂದ ಅನೂಚಾನವಾಗಿ ನಡೆಸಿಕೊಂಡು ಬರುತ್ತಿರುವ ಬಂಗಾರದ ಹಬ್ಬದ ದತ್ತಿ ಉಪನ್ಯಾಸ ಮಾಲಿಕೆ ಕಾರ್ಯಕ್ರಮದ ಬಗ್ಗೆ ಮೆಚ್ಚುಗೆಯ ನುಡಿಗಳನ್ನಾಡಿದರು. ವಿಮರ್ಶಕ ಡಾ. ಗುರುಪಾದ ಮರಿಗುದ್ದಿ ಮಾತನಾಡಿ, ವಚನಕಾರರಿಗೆ ತತ್ತ್ವಗಳನ್ನು ಆ ಕಾಲದ ಸಾಮಾನ್ಯರ ಕಡೆಗೆ ಹೇಗೆ ಒಯ್ಯಬಹುದು ಎಂಬ ತುಡಿತ ಇತ್ತು. ತತ್ತ್ವಗಳನ್ನು ಸರಳವಾಗಿ ಹೇಗೆ ಹೇಳಬಹುದು ಎಂದು ಅವರು ಚಿಂತಿಸಿದರು. ದಾಸರಿಗೆ ಸಾಮಾನ್ಯರನ್ನು ಒಳಗೊಂಡ ಸಂಗೀತ, ನೃತ್ಯ ಗಮಕದ ಮೂಲಕ ಒಡೆಯನನ್ನು ಕಾಣುವ, ನುತಿಸುವ ದಾಸಭಾವವಿತ್ತು. ಎರಡೂ ಹೋರಾಟಗಳಿಗೆ ಬೇರೆ ಬೇರೆ ಉದ್ದೇಶಗಳಿವೆ. ಇಬ್ಬರೂ ಕನ್ನಡ ಸಾಹಿತ್ಯವನ್ನು ಬೆಳೆಸಿದರು. ಎರಡೂ ಪ್ರಜ್ಞೆಗಳಿಂದ ಮೂರನೆಯದಾದ ತತ್ತ್ವಪದ ಸಾಹಿತ್ಯ ಹುಟ್ಟಿಕೊಂಡಿತು. ಈ ಮೂರೂ ಧಾರೆಗಳ ಪ್ರಭಾವ ಆಧುನಿಕ ಕನ್ನಡ ಸಾಹಿತ್ಯದ ಮೇಲೂ ಆಯಿತು ಎಂದು ಅಭಿಪ್ರಾಯಪಟ್ಟರು.
ಹಂಪಿ ವಿಶ್ವವಿದ್ಯಾಲಯದ ಡಾ. ಕೆ. ರವೀಂದ್ರನಾಥ್ ಅವರು ಮಾತನಾಡಿ, ವಚನ ಸಾಹಿತ್ಯ ಮತ್ತು ದಾಸ ಸಾಹಿತ್ಯ ಎರಡನ್ನೂ ಜೊತೆಗೆ ಇಡುವುದು ಸಾಧ್ಯವೂ ಇಲ್ಲ, ಸಾಧುವೂ ಅಲ್ಲ: ಪ್ರತಿಯೊಂದಕ್ಕೂ ಯುಗಧರ್ಮ ಎನ್ನುವುದು ಇರುತ್ತದೆ. ಎರಡರಲ್ಲೂ ಸಾಹಿತ್ಯಕ್ಕಾಗಿ ಸಾಹಿತ್ಯ ರಚನೆಯಾಗಿಲ್ಲ, ಸಾಹಿತ್ಯ ಎನ್ನುವುದು ಉಪ ಉತ್ಪಾದನೆ. ಭಕ್ತಿ ರಸದ ಕೊಡುಗೆ ದಾಸ ಸಾಹಿತ್ಯವಾದರೆ ಅನುಭಾವದ ಕೊಡುಗೆ ವಚನ ಸಾಹಿತ್ಯ ಎಂದು ಅವರು ಅಭಿಪ್ರಾಯಪಟ್ಟರು. ಕವಿ, ಸಾಹಿತಿ ಆನಂದ ಝಂಜರವಾಡ ಅವರು ಮಾತನಾಡಿ, ಕ್ಲಾಸಿಕಲ್ದಲ್ಲಿ ಶಾಸ್ತ್ರ ಶುದ್ಧಿ ಇರುತ್ತದೆ. ಜೀವನದ ಸತ್ಯವನ್ನು ಮಾಸಿಕಲ್ ಮಾಡುವಾಗ ಅದು ಲುಪ್ತವಾಗಿ ಬಿಡುತ್ತದೆ. ಚರಿತ್ರೆಯ ಅಧ್ಯಯನವನ್ನು ಮಾಡುವಾಗ ಚರಿತ್ರೆಯ ಸುಧಾರಿತ ಆವೃತ್ತಿಯನ್ನು ಅರ್ಥೈಸಿಕೊಳ್ಳುತ್ತೇವೆ. ಇತಿಹಾಸವೆನ್ನುವುದು ಸಹ ಕವಿ ಕಲ್ಪನೆಯಂತೆಯೇ ಕೇವಲ ಊಹೆ. ಶಾಸನ ಮುಂತಾದ ಪುರಾವೆ ಓದುವಾಗ ಪದ ಮತ್ತು ಅರ್ಥ, ಅರ್ಥ ನೀವು ಅರ್ಥೈಸಿಕೊಂಡಂತೆ. ಅಲ್ಲಿ ಸ್ವಲ್ಪ ಮಟ್ಟಿನ ಊಹೆ ಇರುತ್ತೆ ಎಂದವರು ನುಡಿದರು. ಆ ಬಳಿಕ ನಡೆದ ಸಂವಾದ ಕಾರ್ಯಕ್ರಮದಲ್ಲಿ ಆಸಕ್ತರು ಭಾಗವಹಿಸಿದರು.
ಆರಂಭದಲ್ಲಿ ಮುಂಬೈ ವಿಶ್ವವಿದ್ಯಾಲಯ ಕನ್ನಡ ವಿಭಾಗದ ಸಂಶೋಧನ ವಿದ್ಯಾರ್ಥಿ ಕಲಾ ಭಾಗ್ವತ್ ಅವರು ವಚನ ಒಂದನ್ನು ಸಾದರ ಪಡಿಸಿದರು. ವಿಭಾಗದ ಸಹಾಯಕ ಪ್ರಾಧ್ಯಾಪಕರಾದ ಡಾ. ಪೂರ್ಣಿಮಾ ಸುಧಾಕರ್ ಶೆಟ್ಟಿಯವರು ಕಾರ್ಯಕ್ರಮ ನಿರೂಪಿಸಿದರು. ನಾರಾಯಣ ನವಿಲೇಕರ್ ಅವರು ವಂದನಾರ್ಪಣೆ ಸಲ್ಲಿಸಿದರು. ಮೈಸೂರು ಅಸೋಸಿಯೇಷನ್ನ ಅಧ್ಯಕ್ಷರಾದ ಕಮಲಾ, ಗೌರವ ಕಾರ್ಯದರ್ಶಿ ಡಾ. ಗಣಪತಿ ಶಂಕರಲಿಂಗ, ಡಾ. ಮಂಜುನಾಥ್, ನಾರಾಯಣ ನವಿಲೇಕರ್, ಮಧುಸೂದನ್, ಡಾ. ಮಂಜುನಾಥಯ್ಯ, ಡಾ. ಉಮಾ ರಾಮರಾವ್, ಡಾ. ಬಿ. ಲೀಲಾ, ಕರ್ನಾಟಕ ಮಲ್ಲದ ಉಪಸಂಪಾದಕ, ಪತ್ರಕರ್ತ ಶ್ರೀನಿವಾಸ ಜೋಕಟ್ಟೆ, ಅಹಲ್ಯಾ ಬಲ್ಲಾಳ್ ಮೊದಲಾದ ಗಣ್ಯರು, ವಿಭಾಗದ ವಿದ್ಯಾರ್ಥಿಗಳು, ಅಸೋಸಿಯೇಷನ್ ಪದಾಧಿಕಾರಿಗಳು ಮತ್ತು ಸಾಹಿತ್ಯಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿದ್ದರು.


























































































































