
ದೇಶದ ಆರ್ಥಿಕತೆಗೂ ಆರೋಗ್ಯಕ್ಕೂ ಸಂಬಂಧವಿದೆ. ಆರ್ಥಿಕವಾಗಿ ಮುಂದುವರಿದ ದೇಶಗಳಲ್ಲಿ ಸಾಂಕ್ರಾಮಿಕ ರೋಗಗಳು ಕಡಿಮೆಯಾಗುತ್ತವೆ. ಆದರೆ ಜೀವನ ಶೈಲಿಯಿಂದ ಬರುವ ಕಾಯಿಲೆಗಳು ಹೆಚ್ಚಾಗುತ್ತವೆ. ಆದ್ದರಿಂದ ಜೀವನ ಶೈಲಿಯನ್ನು ಬದಲಾಯಿಸುವುದರ ಮೂಲಕ ಕಾಯಿಲೆಯನ್ನು ದೂರ ಇಡಬಹುದು ಎಂದು ಶ್ರೀ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಉದ್ಯಾವರ ಇದರ ಅಧೀಕ್ಷಕರಾದ ಡಾ. ಜಯಕೃಷ್ಣ ನಾಯಕ್ ಹೇಳಿದರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ರಿ) ಕಾರ್ಕಳ, ಶ್ರೀ ಮಂಜುನಾಥೇಶ್ವರ ಆಯುರ್ವೇದ ಕಾಲೇಜು ಮತ್ತು ಆಸ್ಪತ್ರೆ ಕುತ್ಪಾಡಿ ಉದ್ಯಾವರ, ರೋಟರಿ ಕ್ಲಬ್ ಕಾರ್ಕಳ, ಗ್ರಾಮೀಣ ರೋಟರಿ ಸಮುದಾಯ ದಳ ಕಲ್ಲಂಬಾಡಿ ಪದವು, ಶಾಲಾ ಅಭಿವೃದ್ಧಿ ಸಮಿತಿ ಹಳೆ ವಿದ್ಯಾರ್ಥಿ ಸಂಘ ಕಲಂಬಾಡಿ ಪದವು ಇವರ ಸಂಯುಕ್ತ ಆಶ್ರಯದಲ್ಲಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಕಲಂಬಾಡಿ ಪದವು ಇಲ್ಲಿ ನಡೆದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.

ಅಧ್ಯಕ್ಷತೆಯನ್ನು ವಹಿಸಿದ ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷ ಕೆ. ನವೀನ್ ಚಂದ್ರ ಶೆಟ್ಟಿ ಅವರು ಮಾತನಾಡುತ್ತಾ, ನಮಗೆ ಗೊತ್ತಿಲ್ಲದಂತೆ ಕಲಬೆರಕೆ ಆಹಾರವನ್ನೇ ತಿನ್ನುತ್ತಿರುವ ಈ ಕಾಲಘಟ್ಟದಲ್ಲಿ ಪ್ರತಿಯೊಬ್ಬರು ಕಾಲ ಕಾಲಕ್ಕೆ ಆರೋಗ್ಯ ತಪಾಸಣೆ ಮಾಡುವ ಮೂಲಕ ತಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಬೇಕು ಎಂದರು. ಕೆನರಾ ಬ್ಯಾಂಕಿನ ಸಮಾಲೋಚಕರಾದ ಪ್ರದೀಪ್ ಬಿ.ರವರು ಸೈಬರ್ ವಂಚನೆ ಜಾಗೃತಿ ಬಗ್ಗೆ ಉಪಯುಕ್ತ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಎಸ್. ಡಿ.ಎಂ.ಸಿ ಅಧ್ಯಕ್ಷೆ ಸಂಗೀತಾ ಆಚಾರ್ಯ, ಮುಖ್ಯ ಶಿಕ್ಷಕ ನಾಗರಾಜ್ ಬಿ., ಗ್ರಾಮೀಣಾಭಿವೃದ್ಧಿ ಯೋಜನೆ ಒಕ್ಕೂಟ ಪದವು ವಲಯದ ಅಧ್ಯಕ್ಷ ಸುರೇಶ ಆಚಾರ್ಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ರಾಜೇಶ್ ಕುಲಾಲ್, ರೋಟರಿ ಕ್ಲಬ್ಬಿನ ಕಾರ್ಯದರ್ಶಿ ಚೇತನ್ ನಾಯಕ್ ಉಪಸ್ಥಿತರಿದ್ದು, ಶುಭ ಹಾರೈಸಿದರು. ಸುಮಾರು 240 ಜನರು ಉಚಿತ ಆರೋಗ್ಯ ಶಿಬಿರದ ಪ್ರಯೋಜನವನ್ನು ಪಡೆದರು. ವಿದ್ಯಾರ್ಥಿಗಳು ಪ್ರಾರ್ಥಿಸಿದರು. ವಲಯ ಮೇಲ್ವಿಚಾರಕ ಬ್ರಜೇಶ್ ಸ್ವಾಗತಿಸಿದರು. ಜ್ಞಾನವಿಕಾಸ ಕೇಂದ್ರದ ಸವಿತಾ ನಿರೂಪಿಸಿ ವಂದಿಸಿದರು.


























































































































