ಯಕ್ಷಗಾನವು ನಮ್ಮ ನಾಡಿನ ಶ್ರೀಮಂತ ಕಲೆಯಾಗಿದ್ದು, 40ಕ್ಕೂ ಹೆಚ್ಚು ಮೇಳಗಳು 5,000ಕ್ಕಿಂತಲೂ ಹೆಚ್ಚು ಕಲಾವಿದರು. 25,000 ಕ್ಕಿಂತಲೂ ಅಧಿಕ ಹವ್ಯಾಸಿ ಕಲಾವಿದರು ಸೇರಿದಂತೆ ಅದೆಷ್ಟೋ ಮಂದಿ ಯಕ್ಷಗಾನ ಕ್ಷೇತ್ರದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ವಿಶ್ವವ್ಯಾಪಿಯಾಗಿ ಎಲ್ಲರ ಮನ್ನಣೆಗೆ ಪಾತ್ರವಾದ ಯಕ್ಷಗಾನ ಕಲೆಯನ್ನು ರಾಜ್ಯದ ಅಧಿಕೃತ ಕಲೆಯಾಗಿ ಘೋಷಿಸಬೇಕು ಎಂದು ಮೂಡುಬಿದರೆ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ ಮೋಹನ ಆಳ್ವ ಅವರು ಅಭಿಪ್ರಾಯ ವ್ಯಕ್ತಪಡಿಸಿದರು. ಅಜೆಕಾರು ಕಲಾಭಿಮಾನಿ ಬಳಗ ಮುಂಬಯಿ ಇದರ ರಜತ ಮಹೋತ್ಸವ ಸಂಭ್ರಮ ಅಂಗವಾಗಿ ಅಕ್ಟೋಬರ್ 3 ಮತ್ತು 4ರಂದು ಕುರ್ಲಾ ಪೂರ್ವದ ಬಂಟರ ಭವನದಲ್ಲಿ ಜರಗಿದ ‘ಮುಂಬಯಿ ಯಕ್ಷಗಾನ ಸಮ್ಮೇಳನ – 2026’ ಸಮಾರಂಭವನ್ನು ಅಕ್ಟೋಬರ್ 3 ರಂದು ಬೆಳಗ್ಗೆ ಉದ್ಘಾಟಿಸಿ ಮಾತನಾಡಿದ ಅವರು, ‘ಒಂದು ಕಾಲದಲ್ಲಿ ಗಂಡು ಕಲೆ ಎಂದೇ ಕರೆಯುತ್ತಿದ್ದ ಯಕ್ಷಗಾನವು ಇಂದು ಮಕ್ಕಳು – ಹೆಂಗಳೆಯರೂ ಸೇರಿದಂತೆ ಸರ್ವರಿಗೂ ಪ್ರಿಯವಾದ, ಸರ್ವರೂ ಭಾಗವಹಿಸುವ ಕಲೆಯಾಗಿದೆ. ಇಂದಿನ ಯುವ ಪೀಳಿಗೆ ಹಾಗೂ ಶಿಕ್ಷಣ ಸಂಸ್ಥೆಗಳಲ್ಲಿ ಯಕ್ಷಗಾನಕ್ಕೆ ಹೆಚ್ಚಿನ ಮಹತ್ವ ಸಿಗುತ್ತಿದೆ ಎನ್ನಲು ಸಂತೋಷವಾಗುತ್ತಿದೆ. ಯಕ್ಷಗಾನಕ್ಕೆ ರಾಜ್ಯದ ಕಲೆ ಎಂಬ ಗೌರವ ದೊರೆತರೆ ಮುಂದೆ ಅದನ್ನು ಶಾಸ್ತ್ರೀಯ ಕಲೆಯಾಗಿ ಗುರುತಿಸಬೇಕೆಂದು ಕೇಂದ್ರ ಸರಕಾರವನ್ನು ಒತ್ತಾಯಿಸಬಹುದಾಗಿದೆ’ ಎಂದರು.




ಬಂಟರ ಸಂಘ ಮುಂಬಯಿ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿಯವರ ಅಧ್ಯಕ್ಷತೆಯಲ್ಲಿ ಜರಗಿದ ಸಮಾರಂಭದಲ್ಲಿ ಎಂಆರ್ಜಿ ಗ್ರೂಪಿನ ಡಾ। ಕೆ. ಪ್ರಕಾಶ್ ಶೆಟ್ಟಿ ಅವರು ವಿಶೇಷ ಅತಿಥಿಯಾಗಿ ಆಗಮಿಸಿದ್ದರು. ಅವರು ಸಮ್ಮೇಳನದ ಸವಿ ಸಂಪುಟ ‘ಯಕ್ಷಗಾನ ಮುಂಬೆಳಗು’ ಗ್ರಂಥವನ್ನು ಬಿಡುಗಡೆಗೊಳಿಸಿ, ಪ್ರಧಾನ ಸಂಪಾದಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ನೇತೃತ್ವದ ಸಂಪಾದಕ ಮಂಡಳಿಗೆ ಹಸ್ತಾಂತರಿಸಿದರು. ಇದೇ ಸಂದರ್ಭದಲ್ಲಿ ಭಾಸ್ಕರ ರೈ ಕುಕ್ಕುವಳ್ಳಿಯವರ ಸ್ವಂತ ಕೃತಿ ‘ಯಕ್ಷಾಲೋಕ’ ಯಕ್ಷಗಾನ ಸಂಪ್ರಬಂಧಗಳ ಸಂಕಲನವನ್ನು ಡಾ. ಎಂ ಮೋಹನ ಆಳ್ವ ಬಿಡುಗಡೆಗೊಳಿಸಿದರು. ಭಾಗವತ ಹರೀಶ್ ಶೆಟ್ಟಿ ಸೂಡ ಅವರ ಅರ್ಥ ಸಹಿತ ಐದು ಪ್ರಸಂಗಗಳ ‘ಯಕ್ಷ ಪಂಚೋಳಿ’ ತುಳು ಕೃತಿಯನ್ನು ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಲೋಕಾರ್ಪಣೆಗೈದರು. ಸಭೆಯಲ್ಲಿ ಆಶೀರ್ವಚನ ನೀಡಿದ ಶ್ರೀ ಕ್ಷೇತ್ರ ಕಟೀಲಿನ ಆನುವಂಶಿಕ ಅರ್ಚಕ ವೇ।ಮೂ। ಹರಿನಾರಾಯಣದಾಸ ಆಸ್ರಣ್ಣರು, ‘ಭಗವಂತನ ಆರಾಧನ ಕಲೆ ಯಕ್ಷಗಾನವಾಗಿದೆ. ಯಕ್ಷಗಾನದ ಮೂಲಕ ಸಮಾಜಕ್ಕೆ ಸರಿಯಾದ ದಾರಿಯನ್ನು ತೋರಿಸಲಾಗುತ್ತದೆ. ಇಂತಹ ಕಲೆಗೆ ಯಾವುದೇ ರೀತಿಯ ತೊಂದರೆಯಾಗದಂತೆ ಅದರ ಗೌರವವನ್ನು ಉಳಿಸಿ-ಬೆಳೆಸಬೇಕು” ಎಂದರು. ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಉದ್ಯಮಿ ಎಲ್.ಡಿಎಸ್ ಇನ್ಫೋಟೆಕ್ ಪ್ರೈವೇಟ್ ಲಿಮಿಟೆಡ್ ಆಡಳಿತ ನಿರ್ದೇಶಕ ಅಮರನಾಥ್ ಶೆಟ್ಟಿ ಅವರು ಮಾತನಾಡಿ, ‘ಅಜೆಕಾರು ಕಲಾಭಿಮಾನಿ ಬಳಗ ಅದೆಷ್ಟೋ ಮಂದಿ ಕಲಾವಿದರನ್ನು ಸೃಷ್ಟಿಸುವ ಕೆಲಸವನ್ನು ಮಾಡುತ್ತಿದೆ. ಅಂತಹ ಕಲಾವಿದರಿಂದ ಯಕ್ಷಗಾನವು ಮನೆ ಮನೆಗಳಲ್ಲಿ ಬೆಳೆಯಲಿ’ ಎಂದರು.



ಸಮ್ಮೇಳನದ ಸರ್ವಾಧ್ಯಕ್ಷ ಕರ್ನಾಟಕ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಹಾಗೂ ಯಕ್ಷಗಾನ ಕಲಾಪೋಷಕ ಡಾ| ಟಿ. ಶ್ಯಾಮ್ ಭಟ್ ಅವರು ಉಪಸ್ಥಿತರಿದ್ದು ಶುಭ ಹಾರೈಸಿದರು. ಬಾಂಬೆ ಬಂಟ್ಸ್ ಅಸೋಸಿಯೇಶನ್ ಅಧ್ಯಕ್ಷ ನ್ಯಾಯವಾದಿ ಡಿ.ಕೆ. ಶೆಟ್ಟಿ ಮಾತನಾಡಿ, ‘ಯಕ್ಷಗಾನವನ್ನು ಉಳಿಸಿ ಬೆಳೆಸಲು ಇಂತಹ ಸಮ್ಮೇಳನಗಳ ಅಗತ್ಯವಿದೆ. ಇದರಿಂದ ನಮ್ಮ ಯಕ್ಷಗಾನ ಕಲೆಯು ಇನ್ನಷ್ಟು ಶ್ರೀಮಂತಗೊಳ್ಳಲಿ’ ಎಂದರು. ಅತಿಥಿ ಗಣ್ಯರನ್ನು ಅಜೆಕಾರು ಕಲಾಭಿಮಾನಿಗಳ ಬಳಗದ ಅಧ್ಯಕ್ಷ ಅಜೆಕಾರು ಬಾಲಕೃಷ್ಣ ಶೆಟ್ಟಿ ಸ್ವಾಗತಿಸಿ, ಸಮಿತಿ ಸದಸ್ಯರೊಂದಿಗೆ ಗೌರವಿಸಿದರು. ಪ್ರಾರಂಭದಲ್ಲಿ ಸಮ್ಮೇಳನದ ಪ್ರಧಾನ ಸಂಚಾಲಕರಾದ ಪ್ರೊ| ಭಾಸ್ಕರ ರೈ ಕುಕ್ಕುವಳ್ಳಿ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು. ವೇದಿಕೆಯಲ್ಲಿ ಪ್ರಧಾನ ಸಲಹೆಗಾರ ಡಾ| ಎಂ. ಪ್ರಭಾಕರ ಜೋಶಿ, ಬಂಟರ ಸಂಘ ಮುಂಬಯಿ ಗೌರವ ಪ್ರಧಾನ ಕಾರ್ಯದರ್ಶಿ ಸಮ್ಮೇಳನ ವೇದಿಕೆಯ ಪ್ರಾಯೋಜಕರಾದ ಡಾ| ಆರ್.ಕೆ ಶೆಟ್ಟಿ, ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಚಿತ್ರಾ ಆರ್ ಶೆಟ್ಟಿ, ಬಂಟರ ಸಂಘ ಮುಂಬಯಿ ಮಹಿಳಾ ವಿಭಾಗದ ಮಾಜಿ ಕಾರ್ಯಾಧ್ಯಕ್ಷೆ ರಂಜಿನಿ ಸುಧಾಕರ್ ಹೆಗ್ಡೆ, ‘ಕರ್ನಾಟಕ ಮಲ್ಲ’ ಸಂಪಾದಕ ಚಂದ್ರಶೇಖರ ಪಾಲೆತ್ತಾಡಿ, ಯಕ್ಷ ಕಲಾರಂಗ ಕಾರ್ಕಳ ಇದರ ಅಧ್ಯಕ್ಷ ವಿಜಯ ಶೆಟ್ಟಿ, ಕನ್ನಡ ಭವನ ಎಜುಕೇಶನ್ ಸೊಸೈಟಿ ಉಪ ಕಾರ್ಯಾಧ್ಯಕ್ಷ ಗಿರೀಶ್ ಸಾಲ್ಯಾನ್ ಮೊದಲಾದವರು ಉಪಸ್ಥಿತರಿದ್ದರು. ಉದ್ಘಾಟಕರಾದ ಡಾ. ಎಂ ಮೋಹನ ಆಳ್ವ, ಸಮ್ಮೇಳನಾಧ್ಯಕ್ಷ ಡಾ. ಟಿ ಶ್ಯಾಮ ಭಟ್ ಮತ್ತು ವಿಶೇಷ ಅತಿಥಿ ಡಾ| ಕೆ. ಪ್ರಕಾಶ್ ಶೆಟ್ಟಿ ಅವರನ್ನು ಪೇಟ ತೊಡಿಸಿ, ಹಾರವನ್ನು ಹಾಕಿ ನೆನಪಿನ ಕಾಣಿಕೆಯೊಂದಿಗೆ ಅಭೂತಪೂರ್ವವಾಗಿ ಸನ್ಮಾನಿಸಲಾಯಿತು.



ಉದ್ಘಾಟನಾ ಸಮಾರಂಭಕ್ಕಿಂತ ಮೊದಲು ಬಂಟರ ಸಂಘದ ಶ್ರೀಮತಿ ರಾಧಾಭಾಯಿ ಟಿ ಭಂಡಾರಿ ಸಭಾಗೃಹದಲ್ಲಿ ಅಜೆಕಾರು ಬಾಲಕೃಷ್ಣ ಶೆಟ್ಟಿಯವರು ಪ್ರಧಾನ ಕಾರ್ಯಕಾರಿ ಸಮಿತಿ ಸದಸ್ಯರೊಂದಿಗೆ ಸಾಂಕೇತವಾಗಿ ದೀಪ ಬೆಳಗಿಸಿದರು. ಬಳಿಕ ಯಕ್ಷಗಾನದ ಸಾಂಪ್ರದಾಯಿಕ ‘ಕೇಳಿ’ ಬಾರಿಸಲಾಯಿತು. ಸಂಘದ ಶ್ರೀ ಮಹಾವಿಷ್ಣು ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ, ಭವ್ಯ ಸಾಂಸ್ಕೃತಿಕ ಮೆರವಣಿಗೆಯೊಂದಿಗೆ ದಿ. ಕಲ್ಲಾಡಿ ವಿಠಲ ಶೆಟ್ಟಿ ಹೆಸರಿನ ಸಮ್ಮೇಳನಾಂಗಣದಲ್ಲಿ ಸೂರಿಕುಮೇರು ಗೋವಿಂದ ಭಟ್ ಮಹಾದ್ವಾರವನ್ನು ಉದ್ಘಾಟಿಸಿದ ಅತಿಥಿ ಗಣ್ಯರನ್ನು ದಿ. ಹೆಚ್.ಬಿ.ಎಲ್ ರಾವ್, ಬೊಟ್ಟಿಕೆರೆ ಪುರುಷೋತ್ತಮ ಪೂಂಜ, ಸಿದ್ಧಕಟ್ಟೆ ಚೆನ್ನಪ್ಪ ಶೆಟ್ಟಿ ಮತ್ತು ವಿಶ್ವನಾಥ ಶೆಟ್ಟಿ ದ್ವಾರಗಳ ಮೂಲಕ ಛಂದೋಬ್ರಹ್ಮ ಡಾ| ಶಿಮಂತೂರು ನಾರಾಯಣ ಶೆಟ್ಟಿ ಸಭಾಂಗಣಕ್ಕೆ ಕರೆ ತರಲಾಯಿತು. ಡಾ| ಆರ್.ಕೆ ಶೆಟ್ಟಿ ಯಕ್ಷಕಲಾ ವೇದಿಕೆಯಲ್ಲಿ ‘ಅಬ್ಬರ ತಾಳ’ದೊಂದಿಗೆ ಉದ್ಘಾಟನಾ ಸಮಾರಂಭ ಜರಗಿತು. ತವರೂರ ಭಾಗವತ ದೇವಿ ಪ್ರಸಾದ್ ಆಳ್ವ ತಲಪಾಡಿ ಮತ್ತು ತಂಡದವರು ಯಕ್ಷಗಾನ ಧಾಟಿಯಲ್ಲಿ ಪ್ರಾರ್ಥನೆ ಸಲ್ಲಿಸಿದರು. ಸಮಿತಿಯ ದೀವಿತ್ ಎಸ್.ಕೆ ಪೆರಾಡಿ ಸಮ್ಮೇಳನಾಧ್ಯಕ್ಷರನ್ನು ಪರಿಚಯಿಸಿದರು. ಕಾರ್ಯದರ್ಶಿಗಳಾದ ಅಶೋಕ ಪಕ್ಕಳ, ಕರ್ನೂರು ಮೋಹನ ರೈ ಮತ್ತು ಅಮೃತಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಸಂಜೆಯ ಸಮಾರಂಭದಲ್ಲಿ ಅಜೆಕಾರು ಕಲಾಭಿಮಾನಿ ಬಳಗದ ವತಿಯಿಂದ ವಿವಿಧ ಕ್ಷೇತ್ರದ ಸಾಧಕರಿಗೆ ಕಲಾ ಗೌರವ, ರಜತ ಯಕ್ಷರಕ್ಷಾ ಪ್ರಶಸ್ತಿ ಪ್ರದಾನ ಮತ್ತು ಸಂಘ ಸಂಸ್ಥೆಗಳಿಗೆ ರಜತ ಗೌರವಾರ್ಪಣೆ ಜರಗಿತು.

















































































































