
ಸುಳ್ಯ ಬಂಟರ ಸಂಘ ತನ್ನ ಸಮುದಾಯಪರ ಕಾಳಜಿಗೆ ಹೆಸರು ಪಡೆದಿದ್ದು, ಇದೀಗ ಹೆಸರಾಂತ ಕ್ರೀಡಾಪಟು, ನಿವೃತ್ತ ಕ್ರೀಡಾ ಶಿಕ್ಷಕ ಹಾಗೂ ಜನಪ್ರಿಯ ಸಂಘಟಕ ಶ್ರೀ ಬಿ ಸುಭಾಶ್ಚಂದ್ರ ರೈಯವರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ್ದಾರೆ. ಸುಳ್ಯ ಪರಿಸರದ ಬಂಟ ಬಾಂಧವರಿಗೆ ಇವರಿಂದ ವಿಶೇಷ ಕಾರ್ಯ ಸಾಧನೆಗಳ ನಿರೀಕ್ಷೆ ಸಹಜವಾಗಿಯೇ ಇದೆ. ಪ್ರತಿಷ್ಠಿತ ಪರಂಪರೆಯಿಂದ ಕೂಡಿದ ಬಂಟ ಕುಟುಂಬವಾದ ಅಳೇರಿತೋಟ ದಿವಂಗತ ಜತ್ತಪ್ಪ ರೈ ಹಾಗೂ ದಿವಂಗತ ಲಕ್ಷ್ಮೀ ಜೆ ರೈ ದಂಪತಿಗೆ ಸುಪುತ್ರನಾಗಿ ಜನಿಸಿದ ಸುಭಾಶ್ಚಂದ್ರ ರೈ ಅವರು ಬಾಳಿಲದ ವಿದ್ಯಾ ಬೋಧಿನಿ ಶಿಕ್ಷಣ ಸಂಸ್ಥೆಯ ಮೂಲಕ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣವನ್ನು ಮುಗಿಸಿದ ಬಳಿಕ ಬೆಳ್ಳಾರೆ ಪಿಯು ಕಾಲೇಜಿನಲ್ಲಿ ಪದವಿಪೂರ್ವ ಶಿಕ್ಷಣ ಪೂರೈಸಿದರು. ನಂತರದ ವರ್ಷಗಳಲ್ಲಿ ತನ್ನ ಆಸಕ್ತಿಯ ವಿಭಾಗದಲ್ಲಿ ತರಬೇತಿ ಪಡೆಯಲು ಬೆಂಗಳೂರಿಗೆ ತೆರಳಿ ಅಲ್ಲಿನ ವೈ.ಎಂ.ಸಿ.ಎ ತರಬೇತಿ ಕೇಂದ್ರದಲ್ಲಿ ದೈಹಿಕ ಶಿಕ್ಷಣ ಕುರಿತ ವಿಶೇಷ ತರಬೇತಿ ಪಡೆದು, ತನ್ನ ಆರಂಭಿಕ ವೃತ್ತಿ ಜೀವನವೆಂಬಂತೆ ಏಳು ವರ್ಷಗಳ ಪರ್ಯಂತ ನೆಟ್ಟಣಿಗೆ ಪ್ರಾಥಮಿಕ ಶಾಲೆಯಲ್ಲಿ ದೈಹಿಕ ಶಿಕ್ಷಕರಾಗಿ ಸೇವೆ ಸಲ್ಲಿಸಿ ಬಳಿಕ ಕೋಟೆ ಮುಂಡುಗಾರಿನಲ್ಲಿ ಸೇವೆ ಮುಂದುವರಿಸಿದರು. ಈ ಅವಧಿಯಲ್ಲಿ ಸುಭಾಶ್ ಮೇಷ್ಟ್ರು ಎಂದರೆ ವಿದ್ಯಾರ್ಥಿಗಳಿಗೆ ಪಂಚಪ್ರಾಣ. ಕಾರಣ ಅವರ ವಿಶೇಷವಾದ ನಡೆನುಡಿ, ಮಕ್ಕಳ ಕುರಿತ ಅವರ ವಿಶೇಷ ಪ್ರೀತಿ.

ಗ್ರಾಮೀಣ ಪ್ರದೇಶದ ಕ್ರೀಡಾ ಪ್ರತಿಭೆಗಳನ್ನು ಬೆಳಕಿಗೆ ತರುವಲ್ಲಿ ಶ್ರೀಯುತರ ಶ್ರಮ, ಶ್ರದ್ಧೆ ಅಪರಿಮಿತವಾದುದು. ಅದೆಷ್ಟೋ ವಿದ್ಯಾರ್ಥಿಗಳನ್ನು ಕಬಡ್ಡಿ ಮತ್ತು ವಾಲಿಬಾಲ್ ಕ್ರೀಡೆಗಳಲ್ಲಿ ತರಬೇತು ನೀಡಿ ಜಿಲ್ಲಾಮಟ್ಟದ ಹಾಗೂ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಮಿಂಚುವಂತೆ ಸಿದ್ಧಗೊಳಿಸಿದ ಕೀರ್ತಿಗೆ ಸುಭಾಶ್ ರೈ ಅವರು ಭಾಜನರಾಗಿದ್ದಾರೆ. 2003 ರಿಂದ ಇದುವರೆಗೆ ಜಿಲ್ಲಾ, ರಾಜ್ಯ, ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಮಾಸ್ಟರ್ ಕ್ರೀಡಾಕೂಟದಲ್ಲಿ ಭಾಗವಹಿಸಿ ಅನೇಕ ಪದಕಗಳನ್ನು ತಮ್ಮದಾಗಿಸಿಕೊಂಡಿದ್ದಾರೆ. ಓರ್ವ ಜನಪರ ಕಾಳಜಿಯ ಸಮಾಜ ಸೇವಕನಾಗಿ, ದಾನಿಯಾಗಿ, ಸಹಕಾರಿ ಧುರೀಣರಾಗಿ, ಕಲಾಪೋಷಕರಾಗಿ, ಅಪ್ರತಿಮ ಸಂಘಟಕರಾಗಿ, ಹವ್ಯಾಸಿ ಯಕ್ಷಗಾನ ಕಲಾವಿದರಾಗಿ ಸುಭಾಶ್ ರೈ ಜನಾನುರಾಗಿಯಾಗಿದ್ದಾರೆ.
2001-02 ರಲ್ಲಿ ಜನ ಮೆಚ್ಚಿದ ಶಿಕ್ಷಕ ಪ್ರಶಸ್ತಿ, 2008-09ರಲ್ಲಿ ತಾಲೂಕು ಮಟ್ಟದ ಉತ್ತಮ ದೈಹಿಕ ಶಿಕ್ಷಕ ಪ್ರಶಸ್ತಿ, 2010-11ರಲ್ಲಿ ಜಿಲ್ಲಾಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ, ಗಡಿನಾಡ ಸಿರಿ, ಗ್ರಾಮ ಮಟ್ಟದ ಉತ್ತಮ ಸಾಧಕ, ಇತ್ಯಾದಿ ಅಭಿದಾನಗಳ ಜೊತೆಗೆ ಸಾಹಿತ್ಯ ಪರಿಷತ್ ಪ್ರಶಸ್ತಿಗೂ ಪಾತ್ರರಾಗಿದ್ದಾರೆ. ಸ್ವಜನರ ಯೋಗ ಕ್ಷೇಮಕ್ಕೆ ಬೇಕಾಗಿ ಹಗಲಿರುಳು ಜೀವ ತೇವ ಅಪರೂಪದ ವ್ಯಕ್ತಿತ್ವ ಸುಭಾಶ್ ರೈ ಅವರದ್ದು. ಪತ್ನಿ ಕಾತ್ಯಾಯಿನಿ ಎಸ್ ರೈ, ಪುತ್ರಿ ಸಾತ್ವಿಕಾ ನಿತಿನ್ ರೈ ಕುಕ್ಕುವಳ್ಳಿ, ಅಳಿಯ ನಿತಿನ್ ರೈ ಕುಕ್ಕುವಳ್ಳಿ (ಚಿತ್ರ ನಿರ್ದೇಶಕ, ಬರಹಗಾರರು) ಹಾಗೂ ಪುತ್ರ ಕೌಶಿಕ್ ರೈ ಜೊತೆ ಸುಖಿ ಜೀವನ ನಡೆಸುತ್ತಿದ್ದಾರೆ. 12 ವರ್ಷ ಸುಳ್ಯ ಬಂಟರ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿ, ಇದೀಗ 2026-28 ರ ಅವಧಿಗೆ ಸುಳ್ಯ ಬಂಟರ ಸಂಘದ ಅಧ್ಯಕ್ಷರಾಗಿ ಆಯ್ಕೆ ಆದುದು ತಮ್ಮ ಭಾಗ್ಯ, ವಿಶೇಷ ಎಂದು ಪರಿಸರದ ಸಮಾಜ ಬಾಂಧವರು ಆಡಿಕೊಳ್ಳುತ್ತಿದ್ದಾರೆ. ಇವರ ಅಧಿಕಾರ ಅವಧಿಯಲ್ಲಿ ಸುಳ್ಯ ಬಂಟರ ಸಂಘ ಮಹತ್ತರ ಕಾರ್ಯ ಸಾಧನೆಗಳ ಮೂಲಕ ಗುರುತಿಸಿಕೊಳ್ಳಲಿ, ಮಾತೆ ದುರ್ಗಾಪರಮೇಶ್ವರಿ ಅನುಗ್ರಹಿಸಲಿ ಎಂದು ಬಂಟ್ಸ್ ನೌ ಮಾಧ್ಯಮ ಸಂಸ್ಥೆ ಹಾರೈಸುತ್ತದೆ.
ಬರಹ : ಅರುಣ್ ಶೆಟ್ಟಿ ಎರ್ಮಾಳ್
ಗೌರವ ಸಂಪಾದಕರು


























































































































