
ರಾಜ್ಯ ಅರಣ್ಯ ಸೇವೆಗೆ ಸೇರಿದ ಸ್ಥಳ ನಿರೀಕ್ಷಣೆಯಲ್ಲಿರುವ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಗಳನ್ನು ಸಾರ್ವಜನಿಕ ಹಾಗೂ ಆಡಳಿತಾತ್ಮಕ ಹಿತದೃಷ್ಟಿಯಿಂದ ತಕ್ಷಣದಿಂದಲೇ ಜಾರಿಗೆ ಬರುವಂತೆ ಹಾಗೂ ಮುಂದಿನ ಆದೇಶದವರೆಗೆ ಸೂಚಿಸಿರುವ ಹುದ್ದೆಗೆ ಸ್ಥಳ ನಿಯುಕ್ತಿಗೊಳಿಸಿ ಸರಕಾರ ಆದೇಶಿಸಿದ್ದು, ಹಾಸನ ಅರಣ್ಯ ಸಂಚಾರಿ ಸ್ಥಳದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಕುಂಬ್ರದ ಹಸ್ತ ಶೆಟ್ಟಿಯವರನ್ನು ನಿಯುಕ್ತಿಗೊಳಿಸಿದೆ. ಒಳಮೊಗ್ರು ಗ್ರಾಮದ ಮುಡಾಲ ಪುರಂದರ ಶೆಟ್ಟಿ ಮತ್ತು ವಾರಿಜಾ ಶೆಟ್ಟಿಯವರ ಪುತ್ರಿಯಾಗಿರುವ ಹಸ್ತ ಶೆಟ್ಟಿಯವರು ತನ್ನ ಪ್ರಾಥಮಿಕ ಶಿಕ್ಷಣವನ್ನು ಪುತ್ತೂರು ಲಿಟ್ಟಲ್ ಫ್ಲವರ್ ಸ್ಕೂಲ್, ಹೈಸ್ಕೂಲ್ ಶಿಕ್ಷಣವನ್ನು ಪುತ್ತೂರು ಬೆಥನಿಯಲ್ಲಿ, ಉಜಿರೆ ಎಸ್.ಡಿ.ಎಂ ನಲ್ಲಿ ಪದವಿಪೂರ್ವ ಶಿಕ್ಷಣವನ್ನು ಪಡೆದು ಮಡಿಕೇರಿ ಪೊನ್ನಂಪೇಟೆ ಅರಣ್ಯ ಮಹಾವಿದ್ಯಾಲಯದಲ್ಲಿ ಪದವಿ ಶಿಕ್ಷಣವನ್ನು ಪಡೆದಿದ್ದಾರೆ.

ತನ್ನ ಪದವಿ ಶಿಕ್ಷಣ ಮುಗಿಸಿ 2019ರಲ್ಲಿ ಉಪವಲಯ ಅರಣ್ಯ ಅಧಿಕಾರಿಯಾಗಿ ನೇಮಕಗೊಂಡು ಎರಡು ವರ್ಷ ಕುಂದಾಪುರ ವಿಭಾಗದಲ್ಲಿ ಸೇವೆ ಸಲ್ಲಿಸಿ ಬಳಿಕ 2022ರಲ್ಲಿ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ಆಯ್ಕೆಯಾಗಿ ಎರಡು ವರ್ಷ ಕೊಯಂಬತ್ತೂರಿನಲ್ಲಿ ತರಬೇತಿ ಪಡೆದಿದ್ದರು. ಬಳಿಕ ಒಂದು ವರ್ಷ ಕಾಲ ಮಂಗಳೂರು ವೃತ್ತದಲ್ಲಿ ಪ್ರೊಬೇಷನರಿಯಾಗಿ ಕರ್ತವ್ಯ ನಿರ್ವಹಿಸಿದ್ದರು. ಇದೀಗ ಹಾಸನ ಅರಣ್ಯ ಸಂಚಾರಿ ದಳಕ್ಕೆ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿಯಾಗಿ ನೇಮಕಗೊಂಡಿದ್ದಾರೆ.


























































































































