ಶಿವನ ಮನೆಯಲ್ಲಿ ಕಡು ಬಡತನ ಇಲ್ಲದಿದ್ದರೂ,ಶ್ರೀಮಂತಿಕೆ ಮಾತ್ರ ಯಾವತ್ತೂ ಅವನ ಮನೆಯ ಹೊಸ್ತಿಲು ದಾಟಿ ಒಳಗೆ ಹೆಜ್ಜೆ ಇಟ್ಟಿಲ್ಲ.
ನಿತ್ಯ ಕೂಲಿಗೆ ಹೋಗಿ ಸಂಸಾರ ನೌಕೆಯನ್ನು ದಡ ಸೇರಿಸುವುದಲ್ಲದೆ ಬೇರೊಂದು ದಾರಿ ಶಿವನಿಗಿಲ್ಲ. ಕಳೆದ ಏಳೆಂಟು ದಿನಗಳಿಂದ ಒಂದೂ ದಿನ ರಜೆ ಮಾಡದೆ ಕೊಡವೂರಿನಲ್ಲಿ ಬಾವಿ ಕೆಲಸಕ್ಕೆ ಹೋಗುತ್ತಿದ್ದ ಶಿವನಿಗೆ ಮುಂಜಾನೆ ಚಾಪೆಯಿಂದ ಏಳಲಾಗದೆ ಬೆನ್ನು ನೋವಿನಿಂದ
ಚಡಪಡಿಸುತ್ತಿದ್ದ.ಮಲಗಿದ್ದಲ್ಲಿಯೇ
ಹೆಂಡತಿಗೆ ಹೇಳಿ ಒಂದಷ್ಟು ನೋವಿನೆಣ್ಣೆಯ ಮಸಾಜು ಮಾಡಿಸಿಕೊಂಡ.
‘ಸ್ವಲ್ಪ ಹೊತ್ತು ಮಲಗುವೆ, ಬಚ್ಚಲು ಮನೆಯಲ್ಲಿ ಸ್ವಲ್ಪ ನೀರು ಕಾದಿರಲಿ,ಬೆನ್ನಿಗೆ ಶಾಖ ಕೊಡುವೆ ಎಂದು ಹೆಂಡತಿಗೆ ಹೇಳಿದ. ಅರ್ಧ ತಾಸು ಮಲಗಿ ನೋವು ಕಡಿಮೆಯಾದ ತಕ್ಷಣ ಎದ್ದು ಎರಡು ಹೆಜ್ಜೆ ಮುಂದೆ ಇಟ್ಟಿದ್ದ ಅಷ್ಟೇ, ಧೊಪ್ಪ ಅಂತ ಸಿಲಿಂಗ್ ಫ಼್ಯಾನು ಕೆಳಗೆ ಬಿತ್ತು.ಶಿವನ ಎದೆ ಧಸಕ್ಕೆಂದಿತು.
ಬಿದ್ದ ಶಬ್ದಕ್ಕೆ ಎಲ್ಲರೂ ಓಡೋಡಿ ಬಂದರು.ನಾಲ್ಕು ಸೆಕುಂಡು ಅತ್ತಿತ್ತಾಗಿದ್ದರೆ ಶಿವ ಮಾತ್ರ ಆ ಶಿವನಿಗೆ ಪ್ರಿಯ ಆಗ್ತಾ ಇದ್ದ.
‘ರೀ’
ಅಂತ ಹೆಂಡತಿ ಗರಬಡಿದವಳಂತೆ ನಿಂತಿದ್ರೆ
‘ಅಪ್ಪ ಏನಾಗಿಲ್ಲ ಅಲ್ವಾ ಅಂತ ಮಕ್ಕಳು ಗಾಬರಿಯಿಂದ ಪ್ರಶ್ನಿಸಿದ್ರು.
ಇಲ್ಲ ಇಲ್ಲ ದೇವರು ದೊಡ್ಡವ, ಎಂದು ಎದುರಿರುವ ದೇವರ ಫ಼ೋಟೋ ಕ್ಕೆ ಕೈಮುಗಿದು ಬಚ್ಚಲುಮನೆಗೆ ಹೋಗಿ ಬಂದು ಚಾ ಕುಡಿದು ಕೆಲಸಕ್ಕೆ ಹೋಗಲು ತಯಾರಾದ.
ಅಪ್ಪ ಇಷ್ಟು ನೋವಿರುವಾಗ ಯಾಕಪ್ಪಾ ಕೆಲಸಕ್ಕೆ ಹೋಗುವುದು ಇವತ್ತು ಮನೆಯಲ್ಲೇ ಇದ್ದು ಬಿಡಿ ಚಿಕ್ಕ ಮಗಳೆಂದಾಗ ಅಲ್ಲೇ ಮನೆಯ ಹಿತ್ತಿಲಲ್ಲಿ ಓದುತ್ತಿದ್ದ ಹಿರಿಯ ಮಗಳು
ಅಪ್ಪ ಒಂದೆರಡು ದಿನ ಕೆಲಸಕ್ಕೆ ಹೋಗಿಲ್ಲ ಅಂದರೆ ಊರು ಮುಳುಗಲ್ಲ, ನಾವು ಉಪವಾಸ ಸಾಯಲ್ಲ ಅವಳಿಗೆ ಅಪ್ಪ ಬಿಟ್ಟರೆ ಬೇರೆ ಜಗತ್ತಿಲ್ಲ. ಅದಕ್ಕಾಗಿ ಸ್ವಲ್ಪ ಜೋರಾದಳು.
ಹೌದು ಇನ್ನೆರಡು ವರ್ಷದಲ್ಲಿ ನಿನ್ನ ಓದು ಮುಗಿದು ನಿನಗೆ ಉದ್ಯೋಗ ಸಿಕ್ಕಿದರೆ ಮತ್ತೆ ನಾನು ಕೆಲಸಕ್ಕೆ ಹೋಗಲ್ಲ ಎಂದು ದೊಡ್ಡ ಮಗಳ ಬಾಯಿ ಮುಚ್ಚಿಸಿದ.
ಮಕ್ಕಳ ಮಾತಿಗೆ ಹೆಂಡತಿಯೂ ದನಿಗೂಡಿಸಿದಾಗ
*ನೋಡು ಜ್ಯೋತಿ ನಿತ್ಯವೂ ಸಂಜೆ ಗುಡುಗು ಸಿಡಿಲಿನಿಂದ ಮಳೆಯ ಮುನ್ಸೂಚನೆ ಆಗ್ತಾ ಇದೆ.ಎಲ್ಲಾದರೂ ಮಳೆ ಬಂದರೆ ಬಾವಿ ಕುಸಿಯಲು ಪ್ರಾರಂಭವಾಗಿ
ಕೆಲಸ ನಿಂತು ಹೋಗುತ್ತೆ.ಮಹಾಮಾರಿಯಿಂದ ಕೆಲಸಕ್ಕೆ ಯಾರೂ ಕರೆಯುವವರಿಲ್ಲ ಇದ್ದ ಒಂದು ಕೆಲಸ ಪೂರೈಸಬೇಕಲ್ಲ??
ನಾನು ಮೊದಲು ಬಾವಿಗಿಳಿದು ಕೆಲಸಕ್ಕೆ ಮುಂದಾದರೆ ಮಾತ್ರ ಉಳಿದವರು ಇಳಿಯುತ್ತಾರೆ. ನಾನು ಹೋಗದಿದ್ದರೆ ಅವರುಗಳ ಕೆಲಸಕ್ಕೆ ಜಡ ಸುರುವಾಗುತ್ತೆ.ಮಾಲಿಕರು ಕೊಡುವ ಹಣಕ್ಕೆ ನಿಯತ್ತಾಗಿ ದುಡಿದರೆ ಆ ದುಡಿತಕ್ಕೊಂದು ಫ಼ಲಿತ ಬರುತ್ತೆ.ನಮ್ಮ
ಮಾಲಿಕರಿಗೆ ನನ್ನ ಮೇಲೆ ಬಹಳ ನಂಬಿಕೆ.ಅಲ್ಲದೆ ನನಗೆ ದಿನಕ್ಕೆ ಇನ್ನೂರು ರೂ ಸಂಬಳ ಹೆಚ್ಚು ಕೊಡ್ತಾರೆ’.
ನಿಯತ್ತು ಮತ್ತು ಪ್ರಾಮಾಣಿಕತೆ ಶಿವನ ಸಂಪತ್ತು.ಹಾಗಾಗಿ
ಊರಿನ ಯಾರ ಮನೆಯಲ್ಲಿ ಏನೇ ಕೆಲಸ ಇದ್ದರೂ ಶಿವನಿಗೆ ಮೊದಲ ಕರೆ.
ಆಕೆ ಮತ್ತೆ ಮಾತಾಡಲಿಲ್ಲ ತನಗೆ ಸರಿ ಅನಿಸಿದ್ದನ್ನು ಮಾಡಿಯೇ ತೀರುವವ. ಮತ್ಯಾರ ಮಾತಿಗೂ ಮಣೆ ಹಾಕುವವನಲ್ಲ.
ಧರ್ಮದೈವ ಪಂಜುರ್ಲಿಗೆ ಹೊರಗಿನಿಂದಲೇ ಕೈಮುಗಿದು
‘ಸ್ವಾಮಿ ಇವತ್ತು ಸಂಕ್ರಾಂತಿ, ಮಧ್ಯಾಹ್ನದ ಹೊತ್ತಿಗೆ ನಿನ್ನ ಪೂಜೆ ಮುಗಿಯಬೇಕಿತ್ತು.ಕೆಲಸಕ್ಕೆ ಹೋಗಲೇ ಬೇಕಾದುದು ಅನಿವಾರ್ಯ.
ಸಂಜೆ ಹೊತ್ತಲ್ಲಿ ಮೂಡು ದೇವರು ಮನೆ ಸೇರುವ ಮೊದಲು ನಿನ್ನ ಸೇವೆ ಮುಗಿಸುವೆ.ಕೆಲಸ ಇಲ್ಲದೆ ಸೋತು ಹೋಗಿರುವೆ.ಈಗಿರುವ ಕೆಲಸ ಮುಗಿಸಿದ್ರೆ ಏನಾದ್ರೂ ಸ್ವಲ್ಪ ಖರ್ಚಿನ ಬಾಬ್ತು ಆಗುತ್ತೆ. ಬೆಳಿಗ್ಗೆ ನಡೆದ ಘಟನೆ ನೋಡಿದ್ರೆ ಇಂದಿನ ಸಂಕ್ರಾಂತಿ ಪೂಜೆಗೆ ದೀಪ ಹಚ್ಚಲು ನಾನಿರುತ್ತಿರಲಿಲ್ಲ.ಏನೋ ನಿನ್ನ ಕೃಪೆ,ನನ್ನ ಸತ್ಯ,ಹೆಂಡತಿ ಮಕ್ಕಳ ಪುಣ್ಯ ಬದುಕಿಸಿದೆ.
ಪಂಜುರ್ಲಿ ನಿನ್ನ ಚಾಕರಿಗಾಗಿ ಪರವೂರು ಬಿಟ್ಟು ಊರು ಸೇರಿರುವೆ.
ನಿನ್ನ ಗಂಧದ ಕೊರಡು ನನ್ನ ಕೊನೆಯ ಉಸಿರಿರುವ ತನಕ ನಾನು ತೇದಬೇಕು. ಮಕ್ಕಳ ಓದು ಮುಗಿಯುವ ತನಕ ನನ್ನನ್ನು ಸರಿಯಾಗಿ ದುಡಿಯಲು ಬಿಡು.ಆಗಾಗ ಬರುವ ಈ ಕಾಲು,ಬೆನ್ನು ,ಸೊಂಟ ನೋವಿನಿಂದ ಸೋತು ಹೋಗಿದ್ದೇನೆ.ದುಡಿಯದಿದ್ದರೆ ಮಕ್ಕಳ ಶಿಕ್ಷಣ,ಮನೆ ಖರ್ಚು ಎಲ್ಲವುಗಳಿಗೂ ಕಷ್ಟ, ಮುಂದಿನ ಹತ್ತು ದಿನದಲ್ಲಿ ನಿನ್ನ ವರ್ಷದ ಸೇವೆ ಬರುತ್ತೆ, ನಂತರ ತಂಬಿಲದ ಖರ್ಚು, ಅಂತ ಹಲವು ಸಾವಿರ ರೂಪಾಯಿಗಳ ಅಗತ್ಯತೆ ಇದೆ ಒಂದಷ್ಟು ದಿನ ಮಳೆ ಬಾರದಂತೆ ನೋಡಿಕೋ.ನಿನ್ನ ನಂಬಿದ ಮೇಲೆ ಯಾವತ್ತೂ ಕಷ್ಟದಲ್ಲಿ ಕೈ ಬಿಟ್ಟವನಲ್ಲ ಕಾಪಾಡು’.
ಎಂದು ಉದ್ದಂಡ ನಮಸ್ಕಾರದೊಂದಿಗೆ ಕೈಮುಗಿದು ಎದ್ದಾಗ ಎಡಕಾಲು ತಡವರಿಸಿ ಮುಗ್ಗರಿಸಿದ ಶಿವ ಸ್ವಲ್ಪ ಕಸಿವಿಸಿಯಾದ.
ಹೆಂಡತಿ ಕೊಟ್ಟ ನೀರಿನ ಬಾಟಲಿಯನ್ನು ಸ್ಕೂಟರಿನಲ್ಲಿಟ್ಟು,ಮಕ್ಕಳಿಗೆ ಕೈಯಾಡಿಸಲು ರೀ ಬರ್ತಾ ಬರ್ತಾ ಪೂಜೆಯ ಸಾಮಾನು ತನ್ನಿ. ಬರುವಾಗ ಸ್ವಲ್ಪ ಹೂ ಹಣ್ಣು ತನ್ನಿ ದೈವದ ಪ್ರಸಾದಕ್ಕೆ ಸಾಮಾನು ತರಲು ಮರಿಬ್ಯಾಡಿ
‘ಅಂದ ಹಾಗೆ ಹೂವು ತರುವೆ,ಹಣ್ಣು ಬುಡಾನ ಸಾಬ್ರು ತರ್ತಾರಲ್ವಾ.ಲೋಕ ಅಲ್ಲೋಲ ಕಲ್ಲೋಲ ಆದ್ರೂ ದೈವದ ಪೂಜೆಗೆ ಅವರ ಹಣ್ಣಿನ ಸೇವೆ ಮತ್ತು ವರ್ಷದ ಪೂಜೆಗೆ ಗರ್ನಾಲ್ ಸೇವೆ ತಪ್ಪಲ್ಲ.ಅಂದ ಹಾಗೆ ಇವತ್ತು ಪೂಜೆ ಸಂಜೆಗೆ ಅಂತ ಹೆಚ್ಚಿನವರಿಗೆ ಫ಼ೋನು ಮಾಡಿ ಹೇಳಿದ್ದೆ.
ಅನ್ನುತ್ತಾ
ಸ್ಕೂಟರ್ ಏರಿದ.
ಮನೆಯಿಂದ ಎರಡು ಮಾರು ದೂರ ಹೋಗುವಷ್ಟರಲ್ಲಿ ನಾಗರ ಹಾವೊಂದು ರಸ್ತೆಯಲ್ಲಿ ಅಡ್ಡ ಬಂತು. ಅದು ತನ್ನ ಗಾಡಿಯ ಕೆಳಗೆ ಬೀಳುವುದನ್ನು ತಪ್ಪಿಸಲು ಸಡನ್ನ್ ಆಗಿ ಬ್ರೇಕ್ ಹಾಕಿದಾಗ ಸ್ಕೂಟರ್ ಮಗುಚಿ ರಸ್ತೆಗೆ ಬಿದ್ದ ಶಿವ.ಅಲ್ಲೇ ಪಕ್ಕಕ್ಕೆ ಬಿದ್ದಿದ್ದರೆ ಅದು ಪ್ರಪಾತ, ಬದುಕುಳಿಯುವ ಮಾತೇ ಇಲ್ಲ.
ಎದುರು ಮುಗ್ಗರಿಸಿದ್ದರೆ ಹಾವಿನ ಮೇಲೆ ಬೀಳಬೇಕಿತ್ತು. ಅದೂ ಸಹ ಸರ್ಪ. ಕೆಳಗೆ ಬಿದ್ದಾಗ ಸ್ವಲ್ಪ ತರಚಿದ್ದು ಬಿಟ್ಟರೆ ಮತ್ತೇನಾಗಲಿಲ್ಲ.ಸಾವರಿಸಿಕೊಂಡು ಮೇಲೇಳುವಾಗ ಬೆನ್ನು ನೋವು ಮತ್ತೆ ತನ್ನ ಇರುವನ್ನು ನೆನಪಿಸಿತು.
ಮಕ್ಕಳ ಮಾತು ನೆನಪಾಗಿ ಮತ್ತೆ ತನ್ನ ಸ್ಕೂಟರನ್ನು ಮನೆಕಡೆ ತಿರುಗಿಸಿದ.ಮನೆಗೆ ಬಂದು ನಡೆದ ವಿಷಯವನ್ನು ಮಡದಿ ಮಕ್ಕಳಿಗೆ ತಿಳಿಸಿದಾಗ ಸಣ್ಣವಳು
‘ ಪಪ್ಪಾ ಇವತ್ತು ಕೆಲಸಕ್ಕೆ ಹೋಗಲ್ಲ ಅಲ್ವಾ.. ಎಂದು ಹತ್ತಿರ ಬಂದಾಗ ಅವಳನ್ನು ಅಪ್ಪಿ ಮುದ್ದಿಸಿದ.
ಶಿವನಿಗೆ ಇವತ್ತು ಕೆಲಸಕ್ಕೆ ಹೋಗಲಾಗಿಲ್ಲವಲ್ಲ ಎಂಬ ನೋವಾದರೆ, ಅಪ್ಪ ಇವತ್ತು ನಮ್ಮೊಂದಿಗೆ ಇದ್ದಾರಲ್ಲ ಎಂಬ ಖುಷಿ ಮಕ್ಕಳಿಗೆ.
ಮನೆಯಲ್ಲಿ ಬಲ್ಲಾಳರು ಕೊಟ್ಟಿದ್ದ ಇಜಿ ಚೇಯರ್ ಮೇಲೆ ಕುಳಿತು ಕಾಲು ಉದ್ದಕ್ಕೆ ಬಿಟ್ಟ. ಸ್ವಲ್ಪ ಆರಾಮು ಅನ್ನುವಷ್ಟರಲ್ಲಿ
ಅವನ ಮನೆಯ ಪಕ್ಕದಲ್ಲೇ ಇರುವ ಶಿವನ ತಾಯಿ ಯಾರೋ ನನ್ನ ಎರಡು ಸಾವಿರ ಬೆಲೆಬಾಳುವ ನಾಯಿ ಮರಿಯನ್ನು ಕದ್ದುಕೊಂಡು ಹೋದ್ರು ಅವರ ಮನೆ ಹಾಳಾಗ,ಯಾರಿಗೋಮಾರಿರಬೇಕು ಅಂತ ಇವನ ಮನೆಯತ್ತ ಮುಖ ಮಾಡಿ ಬೊಬ್ಬಿಡುತ್ತಿರುವುದನ್ನು ಕಂಡಾಗ ಅವನೆದ್ದು ಹೊರ ಬಂದ.ಆರು ಹೆಣ್ಣು ಮಕ್ಕಳಿಗೆ ಶಿವನೊಬ್ಬ ಸಹೋದರನಾದರೂ ಹೆತ್ತ ತಾಯಿಗೆ ಯಾಕೋ ಅವನನ್ನು ಕಂಡರೆ ಅಷ್ಟಕ್ಕಷ್ಟೆ.ಆದರೂ ತಾಯಿ ಅಂದರೆ ಆತನಿಗೆ ಪಂಚಪ್ರಾಣ.
ಅಮ್ಮನೊಂದಿಗೆ ನಾಯಿ ಮರಿ ಹುಡುಕಲು ಹೊರಟ.ಆಕೆಗೋ ಶಿವನ ಮೇಲೆಯೇ ಅನುಮಾನ. ಅಕ್ಕಪಕ್ಕ ಹುಡುಕಾಡಿ ತದ ನಂತರ ಪಕ್ಕದ ಬಾವಿಯಲ್ಲಿ ಅದೇನೋ ಕುಂಯಿ-ಕುಂಯಿ ಶಬ್ದ ಬಂದಾಗ ಇಣುಕಿ ನೋಡಲು ಒಂದು ಕಲ್ಲಿನ ಮೇಲೆ ನಾಯಿ ಮರಿ ಭಯದಿಂದ ಕುಳಿತಿತ್ತು. ಅಮ್ಮನನ್ನು ಕರೆದು “ನಿನ್ನ ನಾಯಿ ಮರಿ ಯಾರೂ ಕದ್ದಿಲ್ಲ, ಯಾರ ಮನೆ ಹಾಳಾಗುವುದೂ ಬೇಡ,ನಿನ್ನ ಮನೆಯ ಹಾಳು ಬಾವಿಯಲ್ಲಿ ಬಿದ್ದಿದೆ ನೋಡು” ಎಂದು ತೋರಿಸಿ ಕಂಬಕ್ಕೆ ಹಗ್ಗ ಬಿಗಿದು ಬಾವಿಗಿಳಿಯಲು ಅನುವಾದ. ಸ್ವಲ್ಪ ಬಗ್ಗುತ್ತಲೆ,ಅಬ್ಬಾ ಇಲ್ಲ ಆಗಲ್ಲ ಬೆನ್ನು ನೋವು ಇದೆ ಎಂದು ಅಮ್ಮನಿಗೆ ಹೇಳುತ್ತಾ, ಬುಟ್ಟಿ ಹಗ್ಗಕ್ಕೆ ಕಟ್ಟಿ ಒಂದು ಕೋಲನ್ನು ಕೊಕ್ಕೆಯಾಗಿ ಪರಿವರ್ತಿಸಿ ಅದನ್ನು ಕೆಳಗಿಳಿಸಿ ಕೋಲಿನಿಂದ ನಾಯಿ ಮರಿಯನ್ನು ಬುಟ್ಟಿಗೆ ದೂಡಿ ಮೇಲೆಳೆದು ಇತ್ತ ತಂದು ಅಮ್ಮನಿಗೆ ಕೊಟ್ಟ.ಶಿವನ ಮುಖ ನೋಡುತ್ತಾ ಅಮ್ಮನಿಗೆ ತನ್ನ ತಪ್ಪಿನ ಅರಿವಾದದ್ದು ಮಾತ್ರ ಸತ್ಯ.
ಬಾವಿಗೆ ಬಿಟ್ಟ ಕೊಕ್ಕೆಯನ್ನು ಮೇಲೆತ್ತಬೇಕು ಅನ್ನುವಷ್ಟರಲ್ಲಿ ಆ ಹಳೆಯ ಬಾವಿಯಲ್ಲಿರುವ ಪೊಟರೆಯೊಳಗಿಂದ ಅದ್ಯಾವುದೋ ಜೋರಾಗಿ ಘರ್ಜನೆ ಕೇಳಿದಂತಾಯಿತು. ಅತ್ತಿತ್ತ ನೋಡಿದರೂ ಏನೂ ಕಾಣುತ್ತಿರಲಿಲ್ಲ,ಕೆಳಗೆ ಇಳಿಬಿಟ್ಟ ಕೊಕ್ಕೆಯನ್ನು ತಿರುಗಿಸಿದಾಗ ಒಂದಷ್ಟು ಆರ್ಭಟದೊಂದಿಗೆ ಆ ಕೋಲನ್ನೇ ಹಿಡಿದು ಜೋರಾಗಿ ಗರ್ಜಿಸುತ್ತಾ ಚಿರತೆಯೊಂದು ರಭಸವಾಗಿ ಮೇಲೆ ಹಾರಿ ಶಿವನನ್ನು ದೂಡಿ ಕೆಳಗೆ ಬೀಳಿಸಿತು,ಏನಾಯಿತು ಎಂದರಿಯುವ ಮೊದಲೇ ಅದು ಪಕ್ಕದ ಕಾಡಿನತ್ತ ಶರ ವೇಗದಲ್ಲಿ ಓಡಿಹೋಯಿತು.ನಿಮಿಷಗಳ ಅಂತರದಲ್ಲಿ ಘಟಿಸಿದ ಘಟನೆಯನ್ನು ಕಂಡು ಅಕ್ಕಪಕ್ಕ ಸೇರಿದವರು ದಂಗಾದರು.ಭಯದಿಂದ ಕಂಗೆಟ್ಟ ಶಿವ ಮುಂಜಾನೆಯಿಂದ ನಡೆದ ಎಲ್ಲಾ ಘಟನೆಗಳನ್ನು ನೆನಪಿಸಿಕೊಂಡ,ಬೆಳಿಗ್ಗೆ ಏಳುವ ಮುಂಚೆ ಬೆನ್ನು ನೋವು ಕಾಡಿದ್ದು, ಫ಼್ಯಾನ್ ಕೆಳಗೆ ಬಿದ್ದು ಬಚಾವಾದದ್ದು,
ಪಂಜುರ್ಲಿಯ ಗುಡಿಯಿಂದ ಹೊರ ಬರುವಾಗ ಎಡಕಾಲು ತಡವರಿಸಿ ಮುಗ್ಗರಿಸಿದ್ದು, ಮಕ್ಕಳು ಮನೆಯವಳಿಂದ ಕೆಲಸಕ್ಕೆ ಹೋಗಲು ತಡೆ, ಮನೆಯಿಂದ ಹೊರಡುವಾಗ ನಾಗರಹಾವು ಅಡ್ಡ ಬಂದು ಸ್ಕೂಟರಿನಿಂದ ಬಿದ್ದದ್ದು,ನಾಯಿ ಮರಿಯನ್ನು
ಮೇಲೆತ್ತಲು ಬಾವಿಗಿಳಿದಿದ್ದರೆ ಖಂಡಿತವಾಗಿಯೂ ಚಿರತೆಗೆ ಆಹಾರವಾಗುತ್ತಿದ್ದುದು.
ಯಾಕೆ ಹೀಗಾಯಿತು ಈ ಶಿವನೊಲ್ಲ…ಆ ಶಿವನೇ ಬಲ್ಲ.
ನಡೆದ ಘಟನೆಯ ನಂತರ ಮನೆಗೆ ಬಂದು ಕುಳಿತವನ ಪಕ್ಕದಲ್ಲಿ
ಮಕ್ಕಳು ಕುಳಿತಿದ್ದರೆ,ಮನೆಯಾಕೆ ಏನ್ರೀ ಇಂದು ಬೆಳಿಗ್ಗೆಯಿಂದ ಏನಾಗ್ತಾ ಇದೆ?
ಏನೂ ಆಗ್ತಾ ಇಲ್ಲ, ಇನ್ನು ಇದಕ್ಕೆಲ್ಲಾ ಏನೇನೂ ಕಥೆ ಕಟ್ಟಿ ಊರ ದೈವ ದೇವರಿಗೆಲ್ಲ ಹರಕೆ ಹೊರಬೇಡ.ಆ ಕಡೆ ಇರುವ ಅಮ್ಮನಿಗೆ ನನ್ನ ಮೇಲೆ ಹಗೆ ತೀರಿಸಬೇಕು ಅಂತಿದ್ದರೆ ಒಂದಷ್ಟು ದೈವಗಳಿಗೆ ಭೋಗ ಕೊಡುವೆ ಎಂದು ಹರಕೆ ಹೊತ್ತು ಅದಕ್ಕೆ ಬೇಕು-ಬೇಕಾದ ವ್ಯವಸ್ಥೆ ನನ್ನಿಂದಲೇ ಮಾಡಿಸಿ ನನ್ನ ಹಣ್ಣುಗಾಯಿ ನೀರುಗಾಯಿ ಮಾಡ್ತಾಳೆ. ಆಗುವ ಅನಾಹುತಗಳನ್ನು ತಡೆಯುವ ಪಂಜುರ್ಲಿ ಇರುವಾಗ ನಿನಗದರ ಉಸಾಬಾರಿ ಬ್ಯಾಡ.
ನೋಡು ಒಂದು ನೂರೈವತ್ತು ರೂಪಾಯಿ ಕೊಡು,ಬಾಯಮ್ಮನ ಮನೆಗೆ ಹೋಗಿ ಎರಡಟ್ಟಿ ಮಲ್ಲಿಗೆ ತರುವೆ ಈ ಪಾಪಿ ರೋಗದಿಂದಾಗಿ ಹೂವಿಗೂ ದರ ಇಲ್ಲ. ಇವತ್ತಿನ ಸಂಜೆಯ ಸಂಕ್ರಾಂತಿ ಪೂಜೆಗೆ ದೈವ ವನ್ನು ಮಲ್ಲಿಗೆಯಲ್ಲೇ ಮುಳುಗಿಸುವೆ,ಎಂದು ಅವಳಿಂದ ಹಣ ಪಡೆದು ಹೊರಟ.
ಅಂಗಡಿಗೆ ಹೋಗಿ ಪೂಜೆಯ ಪಂಚಕಜ್ಜಾಯಕ್ಕೆ ಬೇಕಾದ ಸಾಮಾನುಗಳೊಂದಿಗೆ ಲಿಲ್ಲಿ ಬಾಯಿ ಮನೆಗೆ ಹೋದ.ಲಿಲ್ಲಿ ಬಾಯಿಯ ಮನೆಯಲ್ಲಿ ಏನೇ ಕೆಲಸವಾದರೂ ಶಿವನ ಮುಂದಾಳತ್ವ,ಯಾವುದೇ ಕೆಲಸವಿಲ್ಲದೆ ಆತ ಬರುವವನಲ್ಲ…
‘ಏನಾಯಿತು ಶಿವಣ್ಣ ಮನೆಯಲ್ಲಿ ಎಲ್ಲರೂ ಆರೋಗ್ಯವಾ? ಎಲ್ಲೂ ಕೆಲಸಕ್ಕೆ ಹೋಗಿಲ್ವಾ?
ಲಿಲ್ಲಿ ಬಾಯಿ ಮಜ್ಜಿಗೆ ಲೋಟದೊಂದಿಗೆ ಬಂದರು.
‘ಇಲ್ಲಕ್ಕ ಸ್ವಲ್ಪ ಬೆನ್ನು ನೋವು. ಇವತ್ತು
ಕೆಲಸಕ್ಕೆ ಹೋಗಿ ನಾಳೆ ನೋವು ಹೆಚ್ಚಾದರೆ ಏನು ಗತಿ? ಅದಕ್ಕೇ
ಮನೆಯಲ್ಲಿದ್ದೆ.
ಹೇಳಿದ ಹಾಗೆ ಸ್ವಲ್ಪ ಹೂ ಬೇಕಿತ್ತು ಇವತ್ತು ಸಂಕ್ರಾಂತಿ ಪೂಜೆ ಅಲ್ವಾ.ಪೇಪರಿನ ದರದಲ್ಲಿ ಎರಡಟ್ಟಿ ಹೂ ಕೊಡಿಯಕ್ಕ.
‘ಶಿವಣ್ಣ ನಿನ್ನ ದುಡ್ಡು ನೀನೆ ಇಟ್ಕೋ.. ದೈವಕ್ಕೆ ಚೆಂದವಾಗಿ ಹೂ ಮುಡಿಸಿ ಆದಷ್ಟು ಬೇಗ ಈ ಕೊರೋನಾ ದೂರಾಗಲಿ ಅಂತ ಪ್ರಾರ್ಥನೆ ಮಾಡು.ಇವತ್ತಿನ ಪೂಜೆಗೆ ಎಲ್ಲಾ ಹೂವು ನಂದು.
ಅಲ್ನೋಡು ಆ ಸಣ್ಣ ಅಡಕೆ ಮರದ ಹಿಂಗಾರ ಹೂವು ಸಹ ಕೊಯ್ಕೊಂಡು ಹೋಗು,ನೀನಿವತ್ತು ಬರದಿದ್ದರೆ ಮತ್ತೆ ನಾನು ಚರ್ಚಿಗೆ ಹೋಗಿ ಅಲ್ಲಿ ಬಂದವರಿಗೆ ಈ ಮಲ್ಲಿಗೆ ಕೊಡುವವಳಿದ್ದೆ. ಒಳ್ಳೆದೆ ಅಯ್ತು ನೀನು ಬಂದದ್ದು.ಹೇಳಿದ ಹಾಗೆ ಸಂಜೆ ಪೂಜೆಗೆ ಮೊದಲು ಗಂಟೆ ಜೋರಾಗಿ ಬಡಿ, ನಾನು ಬರ್ತೀನಿ.
ಅನ್ನುತ್ತಾ ಲಿಲ್ಲಿ ಬಾಯಿ ಮಲ್ಲಿಗೆ, ಎರಡು ಸಿಂಗಾರ ಹೂವಿನ ಹಾಳೆ ಎಲ್ಲವನ್ನು ಚೆಂದಕ್ಕೆ ಬಾಳೆ ಎಲೆಯಲ್ಲಿ ಕಟ್ಟಿ ಕೊಟ್ಟರು.
ಮನೆಗೆ ಬಂದ ಶಿವ ಹೂವಿಗೊಂದಿಷ್ಟು ನೀರು ಚಿಮುಕಿಸಿ ಅಲ್ಲೇ ಮೇಜಿನ ಮೇಲಿಟ್ಟು ಕೈಕಾಲು ತೊಳೆದುಕೊಂಡು ಕೂರಲು ಬುಡಾನ್ ಸಾಬ್ರು ಬಂದ್ರು.
‘ಶಿವಣ್ಣ ತಗೋ ಒಂದಷ್ಟು ಹಣ್ಣು ತಂದಿರುವೆ.ಈ ಮಹಾಮಾರಿಯಿಂದಾಗಿ ಎಲ್ಲೂ ಹಣ್ಣಿಗೆ ಗಿರಾಕಿಗಳಿಲ್ಲ.ಈ ಸಮಯದಲ್ಲಿ ಮದುವೆ ಮುಂಜಿ ಹಬ್ಬ ಹರಿದಿನ ಅಂತ ಒಂದೊತ್ತು ಕೂರಲು ಸಮಯ ಸಿಗುತ್ತಿರಲಿಲ್ಲ.
ಎಂದು ತಂದದ್ದನ್ನು ಅವನ ಕೈಗಿತ್ತು, ಸಂಜೆಯ ಪೂಜೆಯ ಹೊತ್ತಿಗೆ ಬರುವೆ ಅನ್ನುತ್ತಾ ಶಿವನ ಮನೆಯಾಕೆಯ ಬೆಲ್ಲ ನೀರು ಕುಡಿದು ಮಾತಿಗೆ ನಿಲ್ಲದೆ ಮನೆಯತ್ತಾ ಹೊರಟರು.
ಪ್ರತಿ ತಿಂಗಳ ಪೂಜೆಗೆ ಯಾರು ಬರಲಿ ಬಾರದೆ ಇರಲಿ ಆರತಿ ಆಗುವಾಗ ಬುಡಾನ್ ಸಾಬ್ರು ,ಪೂಜೆಯ ಆರತಿ ತಗೊಂಡು, ಪ್ರಸಾದ ತಿಂದು ಹೋಗುವುದಲ್ಲದೆ, ಪ್ರತಿ ವರ್ಷ ದೈವದ ನೇಮಕ್ಕೆ ತನ್ನ ಗರ್ನಾಲ್ ಸೇವೆಯನ್ನು ಕೊಡುತ್ತಾ ಬಂದವರು.ಅಂತಹ ಒಂದು ಆತ್ಮೀಯ ಬಂಧುತ್ವ ಅವರೊಂದಿಗೆ ಬೆಸೆದುಕೊಂಡಿತ್ತು.
ಶಿವ ಕೈಕಾಲು ತೊಳೆದು
ಬಂದು ಊಟಕ್ಕೆ ಕೂತ.
ಮಕ್ಕಳೂ ಸಹ ಅಪ್ಪನ ಬರುವಿಕೆಯನ್ನೇ ಕಾಯುತ್ತಾ ಕುಳಿತಿದ್ದು ಅವನೊಟ್ಟಿಗೆ ಕುಳಿತರು.ಕಾಟು ಮಾವಿನ ಹಣ್ಣಿನ ಗೊಜ್ಜು,ಕೊಚ್ಲಕ್ಕಿ ಬಿಸಿ ಗಂಜಿ,ದಪ್ಪ ಮಜ್ಜಿಗೆ,ಸಂಡಿಗೆಯೊಂದಿಗೆ ರುಚಿಯೂಟವಾಯಿತು. ಶಿವನೊಂದು ಆಡಿಕೆ ತೆಗೆದು ಸ್ವಲ್ಪ ಮಗ್ಗಲು ಬದಲಿಸಿ ಮತ್ತೆ ಸಂಜೆಯ ಪೂಜೆಗೆ ದೈವದ ಗುಡಿಯನ್ನು, ಗಂಟೆ, ಜಾಗಟೆ,ದೈವದ ನೀರಿಡುವ ಗಿಂಡೆ,
ಕಡ್ಸಲೆ ಅಲ್ಲಿರುವ ಎಲ್ಲಾ ಪೂಜೆಯ ಪರಿಕರಗಳನ್ನು ತೊಳೆದು ಸ್ವಚ್ಛಗೊಳಿಸಿದ.ಗಂಧದ ಕೊರಡನ್ನು ಕಲ್ಲಿನಲ್ಲಿ ತೇದಿ,ತೇದಿ ಗಂಧ ತೆಗೆದು ಹಲಸಿನ ಎಲೆಗೆ ಹಾಕಿಟ್ಟ.
ಇನ್ನೇನು ಸಂಜೆ ಹೊತ್ತು ಕಂತುವ ಮೊದಲು ಪೂಜೆ ಮುಗಿಸಬೇಕು ಎನ್ನುತ್ತಾ ಮಗಳಿಗೆ ಜೋರಾಗಿ ಗಂಟೆ ಬಡಿಯಲು ಹೇಳಿದ.ಆ ಗಂಟೆಯ ಸ್ವರ ಕೇಳಿ ಅಕ್ಕಪಕ್ಕದವರು ಪೂಜೆಗೆ ಬರುವುದು ವಾಡಿಕೆ.ಅತ್ತ ಬುಡಾನ ಸಾಬ್ರು ಮತ್ತಷ್ಟು ಹಣ್ಣಿನೊಂದಿಗೆ ಬಂದ್ರು.
ಶಿವ
ಮತ್ತೊಮ್ಮೆ ಸ್ನಾನ ಮಾಡಿ ಮಡಿಯುಟ್ಟು ಬಂದು ದೈವದ ಮಂಚವನ್ನು ಬಹಳ ಶ್ರದ್ದಾ ಭಕ್ತಿಯಿಂದ ಶೃಂಗರಿಸಿದ,ಇವತ್ಯಾಕೋ ಬರುವವರೆಲ್ಲಾ ಪಂಜುರ್ಲಿಗೆ ಹೂವ ತಂದಿದ್ದರು. ಲಿಲ್ಲಿ ಬಾಯಿ ಓಡೋಡಿ ಬರುತ್ತಾ
‘ಶಿವಣ್ಣ ಇಲ್ನೋಡು ಆ ಮಲ್ಲಿಗೆಯ ನಡು-ನಡುವೆ ಈ ಗುಲಾಬಿ ಇಡು. ಬಹಳ ಚೆಂದ ಕಾಣುತ್ತೆ.’ ಎಂದು ತಾನು ತಂದಿದ್ದ ಗುಲಾಬಿ ಅವನ ಕೈಗಿತ್ತರು.ಅವರು ಹೇಳಿದಂತೆ ಗುಲಾಬಿಯನ್ನು ಮಲ್ಲಿಗೆ ಮತ್ತು ಹಿಂಗಾರ ಹೂವಿನ ಮಧ್ಯೆ ಮಧ್ಯೆ ಸಿಕ್ಕಿಸಿಟ್ಟ. ಇವತ್ತಿನಂತೆ ಧರ್ಮದೈವ ಯಾವತ್ತೂ ಶೃಂಗಾರ ಗೊಂಡವನಲ್ಲ ಎನ್ನುವುದು ನೆರೆದವರ ಅನಿಸಿಕೆ.ಕ್ರಿಶ್ಚಿಯನ್ ಲಿಲ್ಲಿ ಬಾಯಿಯ ಹೂವು,ಮುಸ್ಲಿಂ ಬುಡಾನ ಸಾಬ್ರ ಹಣ್ಣು ಧರ್ಮದೈವದ ಪೂಜೆ ಸಾಮರಸ್ಯದ ಪ್ರತೀಕವಾಗಿತ್ತು.
ಲಾಕ್ಡೌನ್ ಆದ ಕಾರಣ ಅಕ್ಕಪಕ್ಕದವರು ಹೆಚ್ಚೇ ಅನ್ನುವಂತೆ ನೆರೆದಿದ್ದರು.
ಒಂದರ್ಧ ಗಂಟೆ ಪೂಜೆ ನಡೆಯಿತು.ಮಂಗಳಾರತಿ ಮುಗಿಸಿ ಎಂದಿನಂತೆ ಪ್ರಾರ್ಥನೆಯನ್ನು ಪ್ರಾರಂಭಿಸುತ್ತಾ ಹೂವಿನ ಎಸಳುಗಳನ್ನು ನೆರೆದವರ ಕೈಯಲ್ಲಿಕ್ಕುತ್ತಾ ಶಿವ ಮಾತಾದ ಅವನ ಮಾತು ಅಂದರೆ ಕಂಚಿನ ಕಂಠ.
“ಸ್ವಾಮಿ ಧರ್ಮ ದೈವ ಪಂಜುರ್ಲಿ ವಾಡಿಕೆಯಂತೆ ತಿಂಗಳ ಸಂಕ್ರಾಂತಿ ಸೇವೆಯ ಪೂಜೆ ಇಂದು. ಊರಿನ ಹತ್ತು ತಾಯಿಯ ಮಕ್ಕಳು ಒಂದು ತಾಯಿಯ ಮಕ್ಕಳಂತೆ ನಿನ್ನ ಸೇವೆಗೆ ಬಂದಿದ್ದಾರೆ.ಅವರು ಭಕ್ತಿಯಿಂದ ತಂದ ಹಣ್ಣುಕಾಯಿಯಲ್ಲಾಗಲಿ,ನಾನಿಟ್ಟ ತಂಬಿಗೆಯ ನೀರಲ್ಲಾಗಲಿ,ತೇದಿಟ್ಟ ಶ್ರೀಗಂಧದಲ್ಲಾಗಲಿ,
ಹಚ್ಚಿಟ್ಟ ದೀಪದಲ್ಲಾಗಲಿ, ಸುವಾಸನೆಯ ಕಡ್ಡಿಯಲ್ಲಾಗಲಿ,ಶೃಂಗಾರದ ಹೂವಿನಲ್ಲಾಗಲಿ,ಮಾಡಿದ ಪಂಚಕಜ್ಜಾಯ ಪ್ರಸಾದದಲ್ಲಾಗಲಿ,ಮನದೊಳಗಿನ ಭಕ್ತಿಯಲ್ಲಾಗಲಿ ಎಲ್ಲಾದರೂ ಹೆಚ್ಚು ಕಡಿಮೆ ನಿನ್ನ ಗಮನಕ್ಕೆ ಬಂದಿದ್ದರೆ ಅದೆಲ್ಲವನ್ನೂ ನಿನ್ನ ಪಾದದಡಿಯಲ್ಲಿಟ್ಟು.
ಸೇರಿದ ಸಂಸಾರಗಳಿಗೆ ಎಲ್ಲಿಯೂ ಯಾವ ಪರಿಸ್ಥಿತಿಯಲ್ಲಿ ಯೂ ಯಾವುದೇ ಕಷ್ಟ ಬಾರದಂತೆ ಕಾಪಾಡುತ್ತಾ,ಅವರು ನಿಂತಲ್ಲಿ ಕೂತಲ್ಲಿ ನಮ್ಮನ್ನು ಕಾಯಲು ನಮ್ಮ ಪಂಜುರ್ಲಿ ನೆರಳಾಗಿದ್ದಾನೆ.ನಮ್ಮ ಬೇಸಾಯ ವ್ಯಾಪಾರ ವ್ಯವಹಾರ,ಮಕ್ಕಳ ಓದು,ಆರೋಗ್ಯ,
ಮನೆಯ ಹಸು ಕರುಗಳ ಒಟ್ಟು ಜವಾಬ್ದಾರಿಗೆ ಅಭಯ ಯಾವತ್ತೂ ನಿನ್ನದಾಗಿರುತ್ತೆ.ಒಂದು ತಿಳಿದು ಒಂಭತ್ತು ತಿಳಿಯದ ನರ ಮನುಷ್ಯರು ನಾವು. ನೀನು ದೈವ ನಿನ್ನ ಕಣ್ಣಿಗೆ ಕಾಣದ್ದು ಯಾವೂದೂ ಇಲ್ಲ.ಜಗತ್ತಿಗೆ ಬಂದ ಈ ರೋಗ ನಮ್ಮನ್ನೆಲ್ಲಾ ನುಜ್ಜುಗುಜ್ಜು ಮಾಡಿದೆ.ಆದಷ್ಟು ಬೇಗ ಈ ಮಹಾಮಾರಿ ದೂರಾಗಬೇಕು ಮತ್ತೆ ಜಗತ್ತಿನ ಜನರು ಮೊದಲಿನಂತೆ ಓಡಾಡಬೇಕು ಎಂಬ ನಮ್ಮ ಆಸೆಯನ್ನು ನಿನ್ನಲ್ಲಿ ಭಿನ್ನವಿಸಿಕೊಳ್ಳುತ್ತಿದ್ದೇವೆ. ಸ್ವಾಮಿ ಧರ್ಮದೈವ ಪಂಜುರ್ಲಿ ನಮ್ಮ ಕೋರಿಕೆಗಳನ್ನು ತೆಂಕು ದಿಕ್ಕಿನಲ್ಲಿ ನೆಲೆಯಾಗಿರುವ ಒಡೆಯ ಮಂಜುನಾಥ ಸ್ವಾಮಿಗೆ ಮುಟ್ಟಿಸುವವನು ನೀನು.ಮತ್ತೆ ಮೊದಲಿನಂತೆ ಸ್ವಾಮಿಯ ಹರಕೆ ಹಾರೈಕೆಗಳನ್ನು ಸಲ್ಲಿಸಲು ನಾವುಗಳು ಆತನಲ್ಲಿಗೆ ತೆರಳುವಂತೆ ಆಗಬೇಕು.ಅರಿತೋ ಅರಿಯದೆಯೋ ನಾವುಗಳು ಯಾವುದಾದರೂ ತಪ್ಪು ಮಾಡಿದ್ದರೆ ಅದನ್ನು ಕ್ಷಮಿಸಿ ಇಂದಿನ ಪೂಜೆಯನ್ನು ಪ್ರೀತಿಯಿಂದ ನೀನು ಸ್ವೀಕರಿಸಬೇಕು. ಎಂಬ ಶಿವನ ದೈವೀಕ ನುಡಿ ಕಟ್ಟಿನ ಪ್ರಾರ್ಥನೆಗೆ ದೈವವೇ ಎದ್ದು ಬಂದರೂ ಆಶ್ಚರ್ಯವಿಲ್ಲ ಎಂಬಂತಿತ್ತು. ಎಲ್ಲರೂ ಕೈಯಲ್ಲಿದ್ದ ಹೂವಿನ ಎಸಳುಗಳನ್ನು ಗುಡಿಯತ್ತಾ ಎಸೆದರು.
ಎದುರು ಬಂದ ಬುಡಾನ್ ಸಾಬ್ರು ಕೈಮುಗಿದು ದೈವಕ್ಕೆ ಸಾಷ್ಟಾಂಗ ಮಾಡಿ ಪ್ರಸಾದಕ್ಕೆ ಮುಂದೆ ನಿಂತರು.
ಲಿಲ್ಲಿ ಬಾಯಿ ತೆರೆದ ಕಣ್ಣಿನ ರೆಪ್ಪೆ ಮುಚ್ಚದೆ ಪಂಜುರ್ಲಿಯ ಎದುರು ನಮ್ರತೆಯಿಂದ ಕೈ ಜೋಡಿಸಿಕೊಂಡಿದ್ದರು. ಪ್ರಾರ್ಥನೆಯಾದ ನಂತರ
ಎಲ್ಲಾ ಪೂಜೆ ಮುಗಿದು ಪ್ರಸಾದ ಹಂಚಿಕೆಯಾಯಿತು.
ಹೊರಗಿಟ್ಟ ಕಾಣಿಕೆಯ ಡಬ್ಬಿ ಹತ್ತಿರ ಇದ್ದ ಶಿವನ ಫ಼ೋನು ಒಂದೇ ಸಮನೆ ರಿಂಗಣಿಸುತ್ತಿತ್ತು.ಫ಼ೋನು
ಎತ್ತಿ ಹಲೋ… ಎಂದ ಶಿವ ಒಮ್ಮೆಲೆ,
ಹೇ…. ಪಂಜುರ್ಲಿ !!!!ಎಂದು ಜೋರಾಗಿ ಬೊಬ್ಬಿಟ್ಟು ದೈವದೆದುರು ಮಂಡಿಯೂರಿದ್ದ. ಅಲ್ಲಿದ್ದವರೆಲ್ಲಾ ಕಕ್ಕಾ ಬಿಕ್ಕಿಯಾದರು?? ಏನಾಯಿತು ಶಿವಣ್ಣ…ಮಾತಾಡು….ಮಾತಾಡು.ಶಿವ ಸಿಡಿಲು ಬಡಿದವನಂತೆ, ಮೌನವಾಗಿ ಪಂಜುರ್ಲಿಯ ಮಂಚವನ್ನೇ ದಿಟ್ಟಿಸುತ್ತಿದ್ದವ, ದೇಹ ವಾಲಿದಂತೆ ನೆಲಕಚ್ಚಿದ.
ಅವನ ಮೈಯೆಲ್ಲಾ ಬೆವರಿನಿಂದ ತೋಯ್ದುಹೋಯ್ತು.
ದೈತ್ಯ ಜೀವ ಗರ್ನಾಲ್ ಬುಡಾನ್ ಸಾಬ್ರು ಉದ್ದದ ಚಡ್ಡಿ ಮೇಲೆ ಕಟ್ಟಿದ್ದ ಲುಂಗಿ ತೆಗೆಯಲು ನಾಚದೆ ಅದರಿಂದಲೇ ಶಿವನಿಗೆ ಗಾಳಿ ಹಾಕ್ತಾ ಇದ್ದರು.ಶಿವನ ಹೆಂಡತಿಯ ಕೈಯಲ್ಲಿದ್ದ ನೀರಿನ ಲೋಟ ಎಳೆದು ತಂದ ಲಿಲ್ಲಿ ಬಾಯಿ ಪಂಜುರ್ಲಿ ನಮ್ಮ ಶಿವಣ್ಣನ ಕಾಪಾಡಪ್ಪಾ ಬರುವ ತಂಬಿಲದ ಮೊದಲು ನಿನ್ನ ಗುಡಿಗೆ ಸುಣ್ಣ- ಬಣ್ಣ ಬಳಿಯುವುದಲ್ಲದೆ ಹೂವಿನ ಶೃಂಗಾರವೂ ನನ್ನದೆ ಕುಡಿಯಣ್ಣ ನೀರು ಎಂದರೆ ಶಿವ ಮಿಸುಕಲಿಲ್ಲ. ಎಲ್ಲರೂ ಕೈ ಮುಗಿದು ಶಿವನ ಮಾತಿಗಾಗಿ ದೈವದಲ್ಲಿ ಪ್ರಾರ್ಥಿಸಿದರು.
ನೋಡ ನೋಡುತ್ತಿದ್ದಂತೆ ದೈವಕ್ಕೆ ಮುಡಿಸಿದ್ದ ಅಷ್ಟೂ ಹೂವು ಬಲಬದಿಯಿಂದ ಉದುರುತ್ತಿರಲು ಭಕ್ತ ಬಂಧುಗಳು ಭಾವ ಪರವಶರಾದರು.
ನಿಧಾನವಾಗಿ ಸಾವರಿಸಿಕೊಂಡ ಶಿವ ಉಸುರಿದ.. ಕೊಡವೂರಿನ ಬಾವಿ ಕೆಲಸಕ್ಕೆ ಇಳಿದಿದ್ದ ನನ್ನ ಮೂವರು ಸಂಗಡಿಗ ಮಿತ್ರರು ಬಾವಿಯ ಮಣ್ಣು ಜರಿದು ಸತ್ತರಂತೆ!!
ಪನರೆನೇ ಬಲ್ಲಿ ಆಂಡ್ಡಾ ಪನಂದೆ ಕುಲ್ಲುಜಿ😃
ಪೇತ್ರಿ ವಿಶ್ವನಾಥ ಶೆಟ್ಟಿ