
ನವಿ ಮುಂಬಯಿ ಜೂಯಿ ನಗರದಲ್ಲಿರುವ ಬಂಟ್ಸ್ ಸೆಂಟರಿನಲ್ಲಿ ಬಾಂಬೆ ಬಂಟ್ಸ್ ಅಸೋಸಿಯೇಷನ್ ನ ಆಡಳಿತದೊಂದಿಗೆ ನಡೆಸಿಕೊಂಡು ಬರುತ್ತಿರುವ ‘ಬಂಟ್ಸ್ ಉನ್ನತ ಶಿಕ್ಷಣ’ ಹಗಲು ಮತ್ತು ರಾತ್ರಿ ಕಾಲೇಜಿನ ವತಿಯಿಂದ ನಡೆದ 77ನೇ ಗಣರಾಜ್ಯೋತ್ಸವ ದಿನಾಚರಣೆಯನ್ನು ಮತ್ತು ಆಟೋಟ ಸ್ಪರ್ಧೆಯಲ್ಲಿ ಸಾಧನೆಗೈದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣಾ ಕಾರ್ಯಕ್ರಮವನ್ನು ಜನವರಿ 26 ಸೋಮವಾರದಂದು ಬೆಳಿಗ್ಗೆ 9.30 ಗಂಟೆಗೆ ಸರಿಯಾಗಿ ಕಾಲೇಜು ಕಟ್ಟಡದ ಮುಂಭಾಗದ ಸಭಾಂಗಣದಲ್ಲಿ ಅತ್ಯಂತ ಸಡಗರ, ಶಿಸ್ತು ಹಾಗೂ ರಾಷ್ಟೃಭಕ್ತಿಯಿಂದ ಆಚರಿಸಲಾಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಬಾಂಬೆ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ನ್ಯಾಯವಾದಿ ಡಿ.ಕೆ ಶೆಟ್ಟಿಯವರು ಧ್ವಜ ಅನಾವರಣಗೈದು ಕಾರ್ಯಕ್ರಮಕ್ಕೆ ಚಾಲನೆ ನೀಡಿದರೆ, ಸಮಾರಂಭದಲ್ಲಿ ಹಗಲು ಹಾಗೂ ರಾತ್ರಿ ಕಾಲೇಜುಗಳ ಪ್ರಾಂಶುಪಾಲರಾದ ಡಾ| ರಶ್ಮಿ ಚಿತ್ಲಾಂಗೆ, ಡಾ| ಎಸ್.ಎಸ್ ಭಂಡಾರಿ ಮತ್ತು ಉಪಾಧ್ಯಕ್ಷ ಐಕಳ ಕಿಶೋರ್ ಶೆಟ್ಟಿ, ಗೌ. ಕಾರ್ಯದರ್ಶಿ ನ್ಯಾ. ಶೇಖರ ರಾಜು ಶೆಟ್ಟಿ, ಗೌ. ಕೋಶಾಧಿಕಾರಿ ಸಿಎ ವಿಶ್ವನಾಥ ಶೆಟ್ಟಿ, ಉನ್ನತ ಶಿಕ್ಷಣ ಸಮಿತಿ ಕಾರ್ಯಾಧ್ಯಕ್ಷ ನ್ಯಾ. ರತ್ನಾಕರ ವಿ ಶೆಟ್ಟಿ, ಕಾರ್ಯದರ್ಶಿ ಶ್ರೀಧರ ಕೆ ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶ್ರೀಮತಿ ಶಾಂತ ಎನ್ ಶೆಟ್ಟಿ, ಶ್ರೀಮತಿ ಸಹಾನಿ ಶೆಟ್ಟಿ ಉಪ ಕಾರ್ಯಾಧ್ಯಕ್ಷೆ, ಶ್ರೀಮತಿ ಉಷಾ ಶೆಟ್ಟಿ ಕಾರ್ಯದರ್ಶಿ ಭಾಗವಹಿಸಿದ್ದರು.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿ ನ್ಯಾಯವಾದಿ ಡಿ.ಕೆ ಶೆಟ್ಟಿ ಮಾತನಾಡಿ, ಭಾರತದ ಸಂವಿಧಾನವೇ ನಮ್ಮ ಬೈಬಲ್. ಆದರೆ ದೌರ್ಭಾಗ್ಯವಶಾತ್ ಸಂವಿಧಾನದಲ್ಲಿ ಅಂಕಿತಗೊಂಡಿರುವ ಮೂಲಭೂತ ಹಕ್ಕುಗಳನ್ನು, ಮಾತಿನ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಕಾನೂನು ರೂಪಿಸುವವರೇ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ. ಆದುದರಿಂದ ದೇಶದ ಮುಂದಿನ ಭವಿಷ್ಯವಾದ ವಿದ್ಯಾರ್ಥಿಗಳು ರಾಜಕೀಯದ ಸಂಚುಗಳಿಗೆ ಒಳಗಾಗದೆ ತಮ್ಮ ತಮ್ಮ ಅಭಿಪ್ರಾಯ ಅನುಭವದಿಂದ ನಡೆಯಬೇಕು. ಯಾಕೆಂದರೆ, ಇಂದಿನ ಜನಾಂಗವೇ ಮುಂದಕ್ಕೆ ದೇಶದ ಭವಿಷ್ಯವಾದ್ದರಿಂದ ದೇಶವು ಯುವ ಪೀಳಿಗೆಯ ಮೇಲೆ ತುಂಬಾ ಆಶಯವನ್ನಿಟ್ಟಿದೆ ಎಂದರು. ಆನಂತರದಲ್ಲಿ ಮಾತನಾಡಿದ ಎಲ್ಲಾ ಅತಿಥಿ ಗಣ್ಯರು ಮತ್ತು ಪ್ರಾಂಶುಪಾಲರುಗಳು ಸಂದರ್ಭೋಚಿತವಾಗಿ ಗಣರಾಜ್ಯೋತ್ಸವದ ಶುಭ ಹಾರೈಕೆಯೊಂದಿಗೆ ಗಣರಾಜ್ಯೋತ್ಸವದ ಅರ್ಥ, ಪ್ರಜಾಪ್ರಭುತ್ವದ ಮೌಲ್ಯ, ಭಾರತ ದೇಶದ ಸಂವಿಧಾನದ ಮೂಲ ಧ್ಯೇಯವನ್ನು ವಿವರಿಸಿದರು. ಅಲ್ಲದೇ ವಿಶ್ವದ ಅತೀ ದೊಡ್ಡ ಪ್ರಜಾಪ್ರಭುತ್ವ ದೇಶ ಭಾರತ ಮತ್ತು ಅದರ ಶ್ರೇಷ್ಠ ಸಂಸ್ಕೃತಿ, ಹಿರಿಮೆ, ಗರಿಮೆ, ಏಕತೆ, ಮೌಲ್ಯಗಳನ್ನು ಅನುಸರಿಸಿ ವಿದ್ಯಾರ್ಥಿಗಳು ಜವಾಬ್ದಾರಿಯುತ ಪ್ರಜೆಗಳಾಗಿ ಬದುಕಬೇಕು ಮತ್ತು ನಡೆಯಬೇಕೆಂದು ಕಿವಿಮಾತುಗಳನ್ನಾಡಿದರು.

ಕೊನೆಯಲ್ಲಿ ಅತಿಥಿ ಗಣ್ಯರು ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಬಹುಮಾನ ವಿತರಣೆ ಮಾಡಿದರೆ, ಧನ್ಯವಾದ ಸಮರ್ಪಣೆಯ ಬಳಿಕ, ರಾಷ್ಟ್ರಗೀತೆಯನ್ನು ಹಾಡಿ, ನಂತರ ಎಲ್ಲರಿಗೂ ಲಘು ಉಪಹಾರದ ವ್ಯವಸ್ಧೆಯನ್ನು ಮಾಡಲಾಗಿತ್ತು.





















































































































