
ಸ್ವಾಮಿ ವಿವೇಕಾನಂದರು ಭಾರತೀಯ ಸಂಸ್ಕೃತಿ ಮತ್ತು ಸಂಸ್ಕಾರದ ಮಹಾನ್ ರಾಯಭಾರಿಯಾಗಿದ್ದರು. ಅವರ ತತ್ವ ಆದರ್ಶಗಳ ಬೆಳಕಿನಲ್ಲಿ ಮಕ್ಕಳು, ಯುವಜನರನ್ನು ಬೆಳೆಸಿ ಭಾರತೀಯ ಧರ್ಮ ಸಂಸ್ಕೃತಿ ಉಳಿಸಬೇಕಾಗಿದೆ ಎಂದು ಕರಿಂಜೆ ಶ್ರೀ ಜಗದ್ಗುರು ರಾಘವೇಂದ್ರ ಪೀಠದ ಶ್ರೀ ಮುಕ್ತಾನಂದ ಸ್ವಾಮೀಜಿ ನುಡಿದರು. ಕಿನ್ನಿಗೋಳಿ ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಆಶ್ರಯದಲ್ಲಿ ಸ್ವಾಮಿ ವಿವೇಕಾನಂದರ 163ನೇ ಜಯಂತೋತ್ಸವದ ಅಂಗವಾಗಿ ಅಳಿಯೂರು ಶ್ರೀ ಶನೈಶ್ವರ ದೇವಸ್ಥಾನದ ಮುಂಭಾಗದಲ್ಲಿ ನಡೆದ ವಿವೇಕ ಕಾಯಕ ರತ್ನ ಪ್ರಶಸ್ತಿ ಪ್ರಧಾನ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಆಶೀರ್ವಚನವಿತ್ತರು. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ ಮೋಹನ ಆಳ್ವ ಕಾರ್ಯಕ್ರಮ ಉದ್ಘಾಟಿಸಿದರು. ಸ್ವಾಮಿ ವಿವೇಕಾನಂದರ ಜೀವನವೇ ತಪಸ್ಸಾಗಿತ್ತು. ಶಿಕ್ಷಣ, ಕೃಷಿ, ಕಲೆ ಯಾವುದೇ ಕ್ಷೇತ್ರವಾಗಲಿ ಸಂಪೂರ್ಣ ಶ್ರದ್ಧೆಯೊಂದಿಗೆ ಮಾಡಿದ ಕೆಲಸವೇ ತಪಸ್ಸು. 54 ಕೋಟಿ ಯುವ ಜನರಿರುವ ಈ ದೇಶದಲ್ಲಿ ವಿಶೇಷವಾಗಿ ಗ್ರಾಮೀಣ ಪ್ರದೇಶದ ಯುವಕರು ಊರು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂದರು.

ಸ್ವಾಮಿ ವಿವೇಕಾನಂದ ಸೇವಾ ಸಂಸ್ಥೆಯ ಅಧ್ಯಕ್ಷ ಡಾ| ಜಗನ್ನಾಥ ಶೆಟ್ಟಿ ನಿಡ್ಡೋಡಿ ಚಾವಡಿ ಮನೆ ಅಧ್ಯಕ್ಷತೆ ವಹಿಸಿದ್ದರು. ಸ್ವಾಮೀ ವಿವೇಕಾನಂದರಿಂದ ಪ್ರಭಾವಿತರಾಗಿ ಮಾನವನ ಸೇವೆಯೇ ದೇವರ ಸೇವೆ ಎಂಬ ತತ್ವವನ್ನು ಜೀವನದಲ್ಲಿ ಅಳವಡಿಸಿಕೊಂಡು ತನ್ನ ದುಡಿಮೆಯ ಒಂದು ಭಾಗವನ್ನು ಬಡವರ ಸೇವೆಗೆ ಮೀಸಲಿರಿಸಿ 2000ನೇ ಇಸವಿಯಲ್ಲಿ ಸಮಾನ ಚಿಂತಕರೊಂದಿಗೆ ವಿವೇಕಾನಂದ ಸೇವಾ ಸಂಸ್ಥೆ ಸ್ಥಾಪಿಸಿದ್ದೇನೆ. ಸಂಸ್ಥೆಯು ಸಾಮಾಜಿಕ, ಸಾಂಸ್ಕೃತಿಕ, ಆಧ್ಯಾತ್ಮಿಕ ಹಾಗೂ ಸೇವಾ ಚಟುವಟಿಕೆಗಳೊಂದಿಗೆ ಕ್ರೀಡೋತ್ಸವ, ಉಚಿತ ರೋಗ ತಪಾಸನೆ ಮತ್ತು ಚಿಕಿತ್ಸಾ ಶಿಬಿರಗಳನ್ನು ವಿವಿಧ ಹಳ್ಳಿಗಳಲ್ಲಿ ನಡೆಸಿಕೊಂಡು ಬರುತ್ತಿದೆ ಎಂದು ಅವರು ಹೇಳಿದರು. ಬೆಂಗಳೂರಿನ ವಕೀಲ ಚಂದ್ರವರ್ಮ ಜೈನ್ ಅಳಿಯೂರು ದಿಕ್ಸೂಚಿ ಭಾಷಣ ಮಾಡಿ, ಸ್ವಾಮಿ ವಿವೇಕಾನಂದರು ಯುವಕರಲ್ಲಿ ಅಪಾರ ಶಕ್ತಿ ಇದೆ ಎಂದು ನಂಬಿದ್ದರು. ಯುವಶಕ್ತಿ ಪ್ರವಾಹದಂತಿದೆ. ಅದಕ್ಕೆ ಸರಿಯಾದ ದಿಕ್ಕು ನೀಡಿದರೆ ಮಹಾಕಾರ್ಯ ಸಾಧ್ಯ ಎಂದರು.
ಜ್ಞಾನರತ್ನ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಭಾಸ್ಕರ್ ದೇವಸ್ಯ, ವಾಲ್ಪಾಡಿ ಗ್ರಾ. ಪಂ ಅಧ್ಯಕ್ಷೆ ವಿಶಾಲಾಕ್ಷಿ, ಅಖಿಲ ಕರ್ನಾಟಕ ಕರಾವಳಿ ಒಕ್ಕೂಟದ ಗೌರವಾಧ್ಯಕ್ಷ ಡಾ| ಎಸ್. ಶ್ರೀನಿವಾಸ ಶೆಟ್ಟಿ ಮಂಡ್ಯ, ಅಳಿಯೂರು ಶ್ರೀ ಶನೈಶ್ವರ ದೇವಸ್ಥಾನದ ಅಧ್ಯಕ್ಷ ಅಶೋಕ್ ಶೆಟ್ಟಿ ಹಾಗೂ ಗರಡಿ ಫ್ರೆಂಡ್ಸ್ ಅಳಿಯೂರು ಅಧ್ಯಕ್ಷ ಗಣೇಶ್ ಕೋಟ್ಯಾನ್ ಕರ್ನಿರೆ, ಸುಚೇತ ಜೆ. ಶೆಟ್ಟಿ ಉಪಸ್ಥಿತರಿದ್ದರು. ಗಣೇಶ್ ಬಿ. ಅಳಿಯೂರು ನಿರೂಪಿಸಿದರು. ಮೂಲ್ಕಿಯ ನವ ವೈಭವ ಕಲಾವಿದರು ಸತ್ಯದ ತುರ್ಡರ್ ಭಕ್ತಿ ಪ್ರಧಾನ ನಾಟಕ ಪ್ರದರ್ಶಿಸಿದರು.
ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿದವರಿಗೆ ‘ವಿವೇಕ ಕಾಯಕ ರತ್ನ’ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಸದಾನಂದ ಪೂಜಾರಿ (ಹೈನುಗಾರಿಕೆ), ಆಚ್ಯುತ ಆಚಾರ್ಯ (ರಂಗಭೂಮಿ), ರವೀಂದ್ರ ಅಮೀನ್ (ಚಿತ್ರಕಲೆ), ಆನಂದ ಸೀತಾರಾಮ ಶೆಟ್ಟಿ (ಕಂಬಳ), ಸಂತೋಷ್ ಆಚಾರ್ಯ (ಶಿಲ್ಪಕಲೆ) ಲೀಲಾ ಮಡಿವಾಳ್ತಿ (ಡೋಬಿ ವೃತ್ತಿ), ವಸಂತಿ ಶೆಟ್ಟಿ (ಅಂಗನವಾಡಿ ಸೇವೆ), ಚಂದ್ರಾವತಿ ಪೂಜಾರಿ (ನಾಟಿ ವೈದ್ಯೆ), ಸುಮನಾ ನೆಲ್ಲಿಕಾರು (ಹೋಟೆಲ್ ಉದ್ಯಮ), ನಾರಾಯಣ ಮಡಿವಾಳ (ಚಾಲಕ), ಮುರಳೀಧರ ಸುವರ್ಣ (ಕ್ಷರ ವೃತ್ತಿ) ಮತ್ತು ದಿನೇಶ್ ದೇವಾಡಿಗ ನಾದಸ್ವರ ಅವರನ್ನು ಗೌರವಿಸಲಾಯಿತು. ಜಿಲ್ಲಾ ರಾಜೋತ್ಸವ ಪ್ರಶಸ್ತಿ ಪುರಸ್ಕೃತ ರುಕ್ಕಯ್ಯ ಪೂಜಾರಿ ಅವರಿಗೆ ವಿಶೇಷ ಅಭಿನಂದನೆ ಸಲ್ಲಿಸಲಾಯಿತು. ಪರುಶುರಾಮ ಸೇವಾ ಟ್ರಸ್ಟ್ ಹಾಗೂ ಪ್ರತಿಭಾ ಮಹಿಳಾ ಸ್ವಸಹಾಯ ಸಂಘಕ್ಕೆ ಅತ್ಯುತ್ತಮ ಸೇವಾ ಸಂಸ್ಥೆ ಪ್ರಶಸ್ತಿ ನೀಡಲಾಯಿತು.





















































































































