ಮುಂಬೈಯ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಒಂದಾದ ಬಾಂಬೆ ಬಂಟ್ಸ್ ಅಸೋಸಿಯೇಷನ್ ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಕಾರ್ಯಗಳಲ್ಲಿ ತನ್ನನ್ನು ತಾನು ಸಮಾಜಸೇವೆಯಲ್ಲಿ ತೊಡಗಿಸಿಕೊಂಡು ಹಲವಾರು ಸಹಯೋಗವನ್ನು ಸಮಾಜಕ್ಕೆ ನೀಡಿದೆ. ಅದರೊಂದಿಗೆ ಸಂಸ್ಥೆಯ ಮಹಿಳಾ ವಿಭಾಗವು ಕೂಡಾ ಮಹಿಳೆಯರಿಗಾಗಿ, ಮಕ್ಕಳಿಗಾಗಿ ಧಾರ್ಮಿಕ, ಶೈಕ್ಷಣಿಕ ಹಾಗೂ ಸಾಮಾಜಿಕ ಕ್ಷೇತ್ರದಲ್ಲಿ ತನ್ನನ್ನು ತೊಡಗಿಸಿಕೊಂಡು ನಿರಂತರ ಕಾರ್ಯಕ್ರಮಗಳನ್ನು ಮಾಡುತ್ತಾ ಬಂದಿದ್ದು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಶಾಂತ ನಾರಾಯಣ ಶೆಟ್ಟಿಯವರು ಚುಕ್ಕಾಣಿಯನ್ನು ಹಿಡಿದ ನಂತರ ಸಂಸ್ಥೆಯ ಅಧ್ಯಕ್ಷರಾದ ನ್ಯಾಯವಾದಿ ಡಿ.ಕೆ ಶೆಟ್ಟಿಯವರ ಮಾರ್ಗದರ್ಶನದಲ್ಲಿ ವಿಭಾಗದ ಎಲ್ಲಾ ಸದಸ್ಯೆಯರ ಸಂಪೂರ್ಣ ಸಹಕಾರ, ಸಹಯೋಗದೊಂದಿಗೆ ಪಾದರಸದಂತೆ ಹುರುಪಿನ ಚಟುವಟಿಕೆಯಲ್ಲಿ ಕಾರ್ಯ ನಿರತವಾಗಿದೆ ಎಂದರೆ ತಪ್ಪಾಗಲಾರದು. ಅದಕ್ಕೆ ಸಾಕ್ಷಿಯಾಗಿ ಇದೇ ಬರುವ ಜನವರಿ 18 ರಂದು ಭಾನುವಾರ ಮಧ್ಯಾಹ್ನ 2 ಗಂಟೆಯಿಂದ ರಾತ್ರಿ 8 ಗಂಟೆಯ ತನಕ ಸಂಸ್ಥೆಯ ಮುಖ್ಯ ಸಭಾಗೃಹದಲ್ಲಿ ಹಳದಿ ಕುಂಕುಮ ಕಾರ್ಯಕ್ರಮವು ಬಹು ವಿಜೃಂಭಣೆಯಿಂದ ನಡೆಯಲಿದ್ದು, ತನ್ಮಧ್ಯೆ ಪ್ರಥಮ ಸಂಸ್ಥೆಯ ಮಹಿಳಾ ವಿಭಾಗದ ವತಿಯಿಂದ ಭಜನೆ, ತದ ನಂತರ ಶ್ರೀ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಭಾಂಡೂಪ್ ಇವರ ವತಿಯಿಂದ ಭಜನೆ ಮತ್ತು ಪ್ರಸಿದ್ಧ ಯಕ್ಷ ಗುರುಗಳಾದ ದೇವಲ್ಕುಂದ ಭಾಸ್ಕರ ಶೆಟ್ಟಿಯವರ ನಿರ್ದೇಶನದಲ್ಲಿ ಶ್ರೀ ಮಹಾಲಕ್ಷ್ಮಿ ಬಂಟ ಮಹಿಳಾ ಬಳಗ ಮುಂಬೈ ಇವರ ವತಿಯಿಂದ “ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ” ಎಂಬ ಮಹಿಳೆಯರ ತಾಳಮದ್ದಲೆ, ನಂದಳಿಕೆ ನಾರಾಯಣ ಶೆಟ್ಟಿಯವರ ತುಳು ಕಿರು ನಾಟಕ “ಮದ್ಮೆದ ಕಾಕಜಿ”, ಪ್ರಖ್ಯಾತ ವೈದ್ಯರಾದ ಡಾ. ಸ್ವರೂಪ್ ಹೆಗ್ಡೆ ಇವರಿಂದ ವೈದ್ಯಕೀಯ ಮಾರ್ಗದರ್ಶನ, ಕುಮಾರಿ ರಿತಿಕಾ ಶೆಟ್ಟಿಯವರಿಂದ ನೃತ್ಯ ಹೀಗೆ ವಿವಿಧ ರೀತಿಯ ಕಾರ್ಯಕ್ರಮಗಳಿದ್ದು, ಸಂಸ್ಥೆಯ ಅಧ್ಯಕ್ಷರಾದ ನ್ಯಾಯವಾದಿ ಡಿ.ಕೆ ಶೆಟ್ಟಿ ಹಾಗೂ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಶಾಂತಾ ಎನ್ ಶೆಟ್ಟಿಯವರ ಮುಂದಾಳತ್ವದಲ್ಲಿ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಸದರಿ ಸಂಸ್ಥೆಯ ಮಾಜಿ ಕಾರ್ಯಾಧ್ಯಕ್ಷೆ ಹಾಗೂ ಕಂಠದಾನ ಕ್ಷೇತ್ರದಲ್ಲಿ ಹೆಸರು ಪಡೆದಂತಹ ಅರುಷಾ ಎನ್ ಶೆಟ್ಟಿ ಇವರನ್ನು ಗೌರವ ಪೂರ್ವಕವಾಗಿ ಸನ್ಮಾನಿಸಲಾಗುವುದು.


ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ “ತ್ರಿವೇಣಿ ಅಂಡ್ ಕ್ಲಾಸಿಕ್ ಗ್ರೂಪ್ಸ್ ಆಫ್ ಹೋಟೆಲ್ಸ್”ನ ಸಂಚಾಲಕಿ ಮನೋರಮ ಎನ್.ಬಿ ಶೆಟ್ಟಿಯವರು ಭಾಗವಹಿಸಲಿದ್ದು, ಮಾನ್ಯ ಅತಿಥಿಗಳಾಗಿ ಸಾಮಾಜಿಕ ಕ್ಷೇತ್ರದಲ್ಲಿ ಸದಾ ಕಾರ್ಯನಿರತರಾದ ರತ್ನಾ ಪ್ರಭಾಕರ ಶೆಟ್ಟಿ, ಮಂಜುಳಾ ಶೇಖರ್ ಶೆಟ್ಟಿ, ಶಶಿಕಲಾ ಶಂಕರ ಪೂಂಜಾ ಭಾಗವಹಿಸಲಿದ್ದಾರೆ. ವೈದ್ಯಕೀಯ ಕ್ಷೇತ್ರದಲ್ಲಿ ಬಂಟ ಸಮುದಾಯದ ಪ್ರಸಿದ್ಧ ವೈದ್ಯರಾದ ಸ್ವರೂಪ್ ಹೆಗ್ಡೆಯವರು ವಿಶೇಷ ಅತಿಥಿಗಳಾಗಿ ಆಗಮಿಸಲಿದ್ದು, ಅಮೂಲ್ಯವಾದ ವೈದ್ಯಕೀಯ ಮಾರ್ಗದರ್ಶನ ಮಾಡಲಿದ್ದಾರೆ. ಈ ಕಾರ್ಯಕ್ರಮಕ್ಕೆ ತಾವೆಲ್ಲರೂ ಬಂದು ನಮ್ಮೊಡನಿದ್ದು ಸಹಕರಿಸಬೇಕಾಗಿ ಮಹಿಳಾ ವಿಭಾಗದ ಕಾರ್ಯಧ್ಯಕ್ಷೆ ಶಾಂತ ಎನ್ ಶೆಟ್ಟಿ, ಜೊತೆ ಕಾರ್ಯಾಧ್ಯಕ್ಷೆ ಸಹಾನಿ ಶೆಟ್ಟಿ, ಕಾರ್ಯದರ್ಶಿ ಉಷಾ ಆರ್ ಶೆಟ್ಟಿ, ಖಜಾಂಚಿ ನಾಗವೇಣಿ ಶೆಟ್ಟಿ, ಜೊತೆ ಕಾರ್ಯದರ್ಶಿ ಮಾಯಾ ಆಳ್ವ, ಜೊತೆ ಖಜಾಂಚಿ ಉಮಾ ಕೆ ಶೆಟ್ಟಿ ಮತ್ತು ಮಹಿಳಾ ವಿಭಾಗದ ಸರ್ವ ಸದಸ್ಯರು ತಮ್ಮೆಲ್ಲರಿಗೂ ಆದರದ ಸ್ವಾಗತವನ್ನು ಬಯಸುತ್ತಿದ್ದಾರೆ.

















































































































