ರಾಜಕಾರಣಿಗಳಿಂದ ಹಿಡಿದು ಸಮಾಜದ ವಿವಿಧ ವಿಭಾಗಗಳ, ನಾನಾ ಸ್ಥರಗಳ ಜನರು ಗುರುವಾರ ಬೆಳಿಗ್ಗೆಯಿಂದ ಮಧ್ಯಾಹ್ನದವರೆಗೆ ಮಂಗಳೂರಿನ ಶಿವಭಾಗ್ನಲ್ಲಿರುವ ನಿವಾಸದಲ್ಲಿ ನಿಟ್ಟೆ ಸಮೂಹ ಸಂಸ್ಥೆಗಳ ಅಧ್ಯಕ್ಷ ವಿನಯ ಹೆಗ್ಡೆ ಅವರ ಪಾರ್ಥಿವ ಶರೀರದ ದರ್ಶನ ಪಡೆದು ಕಣ್ಣೀರಾದರು. ಕಾರ್ಕಳದ ನಿಟ್ಟೆ ಎಂಜಿನಿಯರಿಂಗ್ ಕಾಲೇಜಿಲ್ಲಿ ವಿದ್ಯಾರ್ಥಿಗಳು, ಗ್ರಾಮಸ್ಥರು ಮತ್ತು ವಿವಿಧ ವಲಯಗಳ ಜನರು ಗೌರವ ಸಲ್ಲಿಸಿ ಕಣ್ಣೀರಿನೊಂದಿಗೆ ವಿದಾಯ ಹೇಳಿದರು. ವಿನಯ ಹೆಗ್ಡೆ ತಮ್ಮ ತಂದೆ ತಾಯಿ ಚಿರನಿದ್ರೆಗೈದಿರುವ ಕಾರ್ಕಳ ಸಮೀಪದ ನಿಟ್ಟೆ ಶಿಕ್ಷಣ ಸಂಸ್ಥೆಯ ಕ್ರೀಡಾಂಗಣದ ಬಳಿ ಇರುವ ‘ಸನ್ಮತಿ’ಯ ಸಮೀಪ ಪಂಚಭೂತಗಳಲ್ಲಿ ಲೀನವಾದರು. ನಿಟ್ಟೆ ಪರಿಗಣಿತ ವಿಶ್ವವಿದ್ಯಾಲಯದ ಕುಲಾಧಿಪತಿ ವಿನಯ ಹೆಗ್ಡೆ ಅವರು ಸ್ಥಾಪಿಸಿದ ನಿಟ್ಟೆ ಎಜುಕೇಷನ್ ಟ್ರಸ್ಟ್ನ 43 ಸಂಸ್ಥೆಗಳಲ್ಲಿ 29 ಸಾವಿರ ವಿದ್ಯಾರ್ಥಿಗಳು ಕಲಿಯುತ್ತಿದ್ದು, 5,500 ಮಂದಿ ಉದ್ಯೋಗದಲ್ಲಿದ್ದಾರೆ. ಹೀಗಾಗಿ ಶಿವಭಾಗ್ನ ಮನೆಯಲ್ಲೂ ನಿಟ್ಟೆಯ ಕ್ಯಾಂಪಸ್ನಲ್ಲೂ ಅವರನ್ನು ಕೊನೆಯದಾಗಿ ಒಮ್ಮೆ ನೋಡಲು ಬಂದವರ ಸಾಲು ದೊಡ್ಡದಿತ್ತು.

ಮಧ್ಯಾಹ್ನ ತಲುಪಿದ ಸಹೋದರ ನಿವೃತ್ತ ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅಣ್ಣನಿಗೆ ಗೌರವ ಸಲ್ಲಿಸಿದರು. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಕೆ ಅಜಿತ್ ಕುಮಾರ್ ರೈ ಮಾಲಾಡಿ, ಇಂಟರ್ನ್ಯಾಷನಲ್ ಬಂಟ್ಸ್ ವೆಲ್ಫೇರ್ ಟ್ರಸ್ಟ್ ನ ಸ್ಥಾಪಕಾಧ್ಯಕ್ಷ ಡಾ| ಎ ಸದಾನಂದ ಶೆಟ್ಟಿ, ಎಜೆ ಸಮೂಹ ಸಂಸ್ಥೆಗಳ ಛೇರ್ಮನ್ ಡಾ| ಎ ಜೆ ಶೆಟ್ಟಿ, ವಿಧಾನ ಸಭಾಧ್ಯಕ್ಷ ಯು.ಟಿ ಖಾದರ್, ಶಾಸಕರಾದ ಡಿ.ವೇದವ್ಯಾಸ ಕಾಮತ್, ಡಾ ವೈ ಭರತ್ ಶೆಟ್ಟಿ, ರಾಜೇಶ್ ನಾಯ್ಕ್, ಉಮಾನಾಥ ಕೋಟ್ಯಾನ್, ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಮುಖಂಡರಾದ ವೀರಪ್ಪ ಮೊಯಿಲಿ, ರಮಾನಾಥ ರೈ, ಅಭಯಚಂದ್ರ ಜೈನ್, ಜೆ.ಆರ್ ಲೋಬೊ, ಲಾಲಾಜಿ ಮೆಂಡನ್, ಕ್ಯಾಪ್ಟನ್ ಗಣೇಶ್ ಕಾರ್ಣಿಕ್, ಪದ್ಮರಾಜ್ ಪೂಜಾರಿ, ಆರ್ಎಸ್ಎಸ್ ಮುಖಂಡ ಕಲ್ಲಡ್ಕ ಡಾ. ಪ್ರಭಾಕರ ಭಟ್, ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ ಎಂ ಮೋಹನ ಆಳ್ವ, ಎಕ್ಸ್ಪರ್ಟ್ ಕಾಲೇಜು ಅಧ್ಯಕ್ಷ ಪ್ರೊ. ನರೇಂದ್ರ ನಾಯಕ್, ಯೇನೆಪೋಯ ಅಬ್ದುಲ್ಲ ಕುಂಞಿ, ಕಣಚೂರು ಯು.ಕೆ ಮೋನು, ಮಂಗಳೂರು ಧರ್ಮಪ್ರಾಂತ್ಯದ ವಿಕಾರ್ ಜನರಲ್ ಫಾದರ್ ಮ್ಯಾಕ್ಸಿಂ ನರೋನ್ಹ, ಸೇಂಟ್ ಅಲೋಶಿಯಸ್ ವಿವಿ ಕುಲಪತಿ ಫಾ ಪ್ರವೀಣ್ ಮಾರ್ಟಿಸ್, ನಿವೃತ್ತ ಸೇನಾ ಅಧಿಕಾರಿ ನಿಟ್ಟೆಗುತ್ತು ಶರತ್ ಭಂಡಾರಿ ಹೀಗೆ ವಿವಿಧ ಗಣ್ಯರು ಅಂತಿಮ ನಮನ ಸಲ್ಲಿಸಿದರು. ವಿನಯ ಹೆಗ್ಡೆ ಅವರ ಪಾರ್ಥಿವ ಶರೀರವನ್ನು ಅವರ ಕಾರ್ಯಕ್ಷೇತ್ರ ನಿಟ್ಟೆ ವಿದ್ಯಾಸಂಸ್ಥೆಯ ಆವರಣಕ್ಕೆ ಸಂಜೆ ತರಲಾಯಿತು. ಶಾಸಕರಾದ ವಿ. ಸುನಿಲ್ ಕುಮಾರ್, ಯಶಪಾಲ್ ಸುವರ್ಣ, ಗುರ್ಮೆ ಸುರೇಶ್ ಶೆಟ್ಟಿ, ಗುರುರಾಜ್ ಶೆಟ್ಟಿ ಗಂಟಿಹೊಳೆ, ಸಂಸದರಾದ ಬ್ರಿಜೇಶ್ ಚೌಟ, ಕೋಟ ಶ್ರೀನಿವಾಸ ಪೂಜಾರಿ, ಮುಖಂಡರಾದ ಮುನಿಯಾಲು ಉದಯ ಶೆಟ್ಟಿ ಮತ್ತಿತರರು ನಮನ ಸಲ್ಲಿಸಿದರು. ಪುತ್ರ ವಿಶಾಲ ಹೆಗ್ಡೆ ಅಂತಿಮ ಸಂಸ್ಕಾರ ನೆರವೇರಿಸಿದರು. ಊರಿನ ಹೆಮ್ಮೆಯ ಪುತ್ರನಿಗೆ ಗೌರವ ಸಲ್ಲಿಸಿದ ವ್ಯಾಪಾರಸ್ಥರು ನಿಟ್ಟೆ ಗ್ರಾಮದಲ್ಲಿ ಸ್ವಯಂ ಪ್ರೇರಿತರಾಗಿ ಅಂಗಡಿಗಳನ್ನು ಬಂದ್ ಮಾಡಿದರು.

















































































































