ಪದವಿ ಬದುಕಿನಲ್ಲಿ ಆರಂಭಿಕ ಅವಕಾಶವನ್ನು ಒದಗಿಸಿದರೆ, ಶ್ರೇಷ್ಠತೆಯ ಶಿಖರ ತಲುಪುವುದು ನಮ್ಮ ನಿಲುವು ಹಾಗೂ ಚಿಂತನೆಯಿಂದ ಎಂದು ಪ್ರೊವಿಟ್ ಫುಡ್ಸ್ ಪ್ರೈವೇಟ್ ಲಿಮಿಟೆಡ್ನ ವ್ಯವಸ್ಥಾಪಕ ನಿರ್ದೇಶಕವಿನ್ಸೆಂಟ್ ಕುಟಿನ್ಹಾ ನುಡಿದರು. ಅವರು ಸೋಮವಾರ ಡಾ. ವಿ.ಎಸ್ ಆಚಾರ್ಯ ಸಭಾಂಗಣದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ಹಾಗೂ ಕಲಾ ವಿಭಾಗದ ವಿದ್ಯಾರ್ಥಿಗಳಿಗಾಗಿ ಆಯೋಜಿಸಿದ್ದ ವಾರ್ಷಿಕ ಬಹುಮಾನ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಯ ನೆಲೆಯಲ್ಲಿ ಮಾತನಾಡಿದರು. ಬದುಕಿನ ಸಫಲತೆ ಕೇವಲ ಹುದ್ದೆ ಅಥವಾ ಪ್ರಮಾಣ ಪತ್ರದಲ್ಲಿಲ್ಲ. ಜ್ಞಾನ ಮೌಲ್ಯವನ್ನು ಉಂಟುಮಾಡಿ, ಕೆಲಸ ಸಮಾಜದ ಮೇಲೆ ಪ್ರಭಾವ ಬೀರಿ, ವ್ಯಕ್ತಿತ್ವದಿಂದ ವಿಶ್ವಾಸ ಬೆಳೆದಾಗ ಬದುಕು ಸಾರ್ಥಕ್ಯದೆಡೆಗೆ ಸಾಗಲು ಸಾಧ್ಯ. ಪ್ರಾಮಾಣಿಕತೆ ಮತ್ತು ಶಿಸ್ತು, ಜೀವನದ ಯಶಸ್ಸಿನ ಕೀಲಿಕೈ ಪ್ರಾಮಾಣಿಕತೆ ಮತ್ತು ಶಿಸ್ತು ಒಂದಕ್ಕೊಂದು ಪೂರಕ. ಪ್ರಾಮಾಣಿಕತೆ ವ್ಯಕ್ತಿತ್ವಕ್ಕೆ ನೈತಿಕ ಬಲ ನೀಡಿದರೆ, ಶಿಸ್ತು ಜೀವನಕ್ಕೆ ವೈಯಕ್ತಿಕ ಬಲ ನೀಡುತ್ತದೆ. ಈ ಎರಡು ಗುಣಗಳು ಬೆರೆತಾಗ ವ್ಯಕ್ತಿ ಯಶಸ್ವಿಯಾಗುತ್ತಾನೆ. ೩೦ ಸಾವಿರದಿಂದ ೪೫೦ ಕೋಟಿಗೆ ಸ್ವಯಂನಂಬಿಕೆ, ಪರಿಶ್ರಮ ಮತ್ತು ನಿಷ್ಠೆಯ ಯಶೋಗಾಥೆ ತನ್ನ ಬದುಕಿನ ಕಥೆಯನ್ನು ವಿದ್ಯಾರ್ಥಿಗಳೊಂದಿಗೆ ಹಂಚಿಕೊಳ್ಳುತ್ತಾ, ಆರಂಭದ ದಿನಗಳಲ್ಲಿ ದೊಡ್ಡ ಕನಸು ಇದ್ದರೂ, ಅದಕ್ಕೆ ಬಲ ನೀಡುವಷ್ಟು ಸಂಪನ್ಮೂಲ ನನ್ನ ಬಳಿ ಇರಲಿಲ್ಲ. ಆದರೆ ಪರಿಶ್ರಮ, ದೃಢನಿಷ್ಠೆ ಮತ್ತು ಆತ್ಮವಿಶ್ವಾಸ ಯಶಸ್ವಿ ಉದ್ಯಮಿಯನ್ನಾಗಿಸಿತು. ಕೇವಲ ₹೩೦,೦೦೦ರಿಂದ ಆರಂಭಿಸಿದ ಉದ್ಯಮ ಇಂದು ವಾರ್ಷಿಕ ೪೫೦ ಕೋಟಿಯ ವ್ಯವಹಾರ ನಡೆಸುವ ಹಂತಕ್ಕೆ ತಲುಪಿದೆ, ೧೪೦೦ ಕ್ಕೂ ಹೆಚ್ಚು ನೌಕರರು ನನ್ನೊಂದಿಗೆ ಕೆಲಸ ಮಾಡುತ್ತಿದ್ದಾರೆ ಎಂದರು.

ರಾಮಕೃಷ್ಣ ಮಿಷನ್ನ ಸ್ವಚ್ಛ ಮಂಗಳೂರು ಅಭಿಯಾನದ ಮುಖ್ಯ ಸಂಯೋಜಕ ರಂಜನ್ ಬೆಳ್ಳರ್ಪಾಡಿ ಮಾತನಾಡಿ, ಸ್ವಯಂ ನಂಬಿಕೆ, ಸ್ಪಷ್ಟ ಗುರಿ ಹಾಗೂ ಸಮಾಜಕ್ಕೆ ಕೊಡುಗೆ ನೀಡುವ ಮನೋವೃತ್ತಿ ವ್ಯಕ್ತಿಯನ್ನು ಶ್ರೇಷ್ಟನನ್ನಾಗಿಸುತ್ತದೆ ಎಂದರು. ಕಸ ಎಸೆಯುವವರು ನಾವು, ಸ್ವಚ್ಛಗೊಳಿಸುವವರು ಅವರು, ಆದ್ದರಿಂದ ಬದಲಾಗಬೇಕಾಗಿರುವವರು ನಾವು. ಸಮಾಜದಲ್ಲಿ ಬೀದಿಗಳನ್ನು ಕಸ ತೆರವು ಮಾಡಿ, ಸಾರ್ವಜನಿಕ ಸ್ಥಳಗಳನ್ನು ಸ್ವಚ್ಛವಾಗಿಡುವವರನ್ನು ನಾವು ಸಾಮಾನ್ಯವಾಗಿ ‘ಕಸದವರು’ ಎಂದು ಕರೆಯುತ್ತೇವೆ. ಆದರೆ ಯಾರು ನಿಜವಾಗಿ ಕಸವನ್ನು ಎಸೆಯುತ್ತಾರೆ? ಯಾರು ರಸ್ತೆಯಲ್ಲಿ ಪ್ಲಾಸ್ಟಿಕ್, ಆಹಾರದ ತ್ಯಾಜ್ಯ, ಬಾಟಲ್, ಪ್ಯಾಕೆಟ್ಗಳನ್ನು ಬಿಸುಟುತ್ತಾರೆ? ಅವರು ನಾವು, ಜನರು. ಹಾಗಿದ್ದರೂ ಸಮಾಜವು ತಪ್ಪು ಪದ ಪ್ರಯೋಗದಿಂದ ಹೊಣೆಗಾರಿಕೆಯನ್ನು ಅವರ ಮೇಲೆ ಹಾಕಿದೆ. ಸ್ವಚ್ಛತಾ ಕಾರ್ಮಿಕರು ಕಸವನ್ನು ಸೃಷ್ಟಿಸುವುದಿಲ್ಲ. ಅವರು ನಮ್ಮ ತಪ್ಪು ವರ್ತನೆಯ ಪರಿಣಾಮವನ್ನು ಸ್ವಚ್ಛಗೊಳಿಸುವವರು. ಅವರು ಸ್ಚಚ್ಛತಾ ಸೇನಾನಿಗಳು ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಟ್ರಸ್ಟಿ ವಿವೇಕ ಆಳ್ವ, ಶಿಕ್ಷಣದಲ್ಲಿ ಯಾವ ಪದವಿಯೂ ದೊಡ್ಡದು ಅಥವಾ ಚಿಕ್ಕದು ಎಂದಿಲ್ಲ. ಪ್ರತಿಯೊಂದು ಪದವಿಗೂ ತನ್ನದೇ ಆದ ಮಹತ್ವ, ಅವಕಾಶ ಮತ್ತು ಸಾಧ್ಯತೆಗಳನ್ನು ಹೊಂದಿದೆ. ವೇಗವಾಗಿ ಬದಲಾಗುತ್ತಿರುವ ಜಗತ್ತಿನಲ್ಲಿ ವಾಣಿಜ್ಯ, ಕಲಾ ಮತ್ತು ವಿಜ್ಞಾನ ಈ ಮೂರು ಕ್ಷೇತ್ರಗಳಿಗೂ ಸಮಾನ ಅವಕಾಶಗಳಿವೆ. ಪ್ರತಿ ಕ್ಷೇತ್ರವೂ ಸಮಾಜದ ಅಭಿವೃದ್ಧಿಗೆ ಅನನ್ಯ ಕೊಡುಗೆ ನೀಡುತ್ತಿದೆ ಎಂದರು. ಕಾರ್ಯಕ್ರಮದಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರು ಪ್ರೊ ಮೊಹಮ್ಮದ್ ಸದಾಕಾತ್, ಆಳ್ವಾಸ್ ಪದವಿಪೂರ್ವ ಕಾಲೇಜಿನ ಉಪ ಪ್ರಾಂಶುಪಾಲೆ ಜಾನ್ಸಿ ಪಿ.ಎನ್, ವಾಣಿಜ್ಯ ವಿಭಾಗದ ಡೀನ್ ಪ್ರಶಾಂತ್ ಎಂ ಡಿ, ಕಲಾ ವಿಭಾಗದ ಡೀನ್ ವೇಣುಗೋಪಾಲ್ ಶೆಟ್ಟಿ, ಆಳ್ವಾಸ್ ಪದವಿಪೂರ್ವ ಕಾಲೇಜಿನ ಸಾಂಸ್ಕೃತಿಕ ಸಮಿತಿಯ ಸಂಯೋಜಕರು, ಸದಸ್ಯರು, ಆಳ್ವಾಸ್ ಪದವಿಪೂರ್ವ ಕಾಲೇಜು ಸಿಬ್ಬಂದಿ ಇದ್ದರು. ಉಪನ್ಯಾಸಕಿ ರಶ್ಮಿನ್ ತನ್ವಿರ್ ನಿರೂಪಿಸಿ, ಪೂರ್ಣಿಮಾ ಸ್ವಾಗತಿಸಿದರು.

















































































































