ದಕ್ಷಿಣ ಕನ್ನಡ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಪ್ರತಿಷ್ಠಿತ ಬಂಟರ ಸಂಘಟನೆ ಬಜಪೆ ವಲಯ ಬಂಟರ ಸಂಘವು ಹಮ್ಮಿಕೊಂಡ ರಾಷ್ಟ್ರೀಯ ಬಂಟರ ಕಲಾ ವೈಭವ ಸಾಂಸ್ಕೃತಿಕ ಸ್ಫರ್ಧೆ ಜೊತೆಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಶ್ರೀ ವೇಣುಗೋಪಾಲ ಎಲ್ ಶೆಟ್ಟಿ ಅವರ ಪದಗ್ರಹಣ ಸಮಾರಂಭವು ಡಿಸೆಂಬರ್ 28ರ ಬೆಳಿಗ್ಗೆ ಆರಂಭಗೊಂಡು, ಕಾರ್ಯಕ್ರಮವು ದಿನಪೂರ್ತಿ ನಡೆಯಲಿದ್ದು, ಬಂಟ ಸಮಾಜದ ಗಣ್ಯಾತಿಗಣ್ಯರು ಪಾಲ್ಗೊಳ್ಳಲಿದ್ದಾರೆ. ಬಂಟರ ಯಾನೆ ನಾಡವರ ಮಾತೃ ಸಂಘದ ಅಧ್ಯಕ್ಷ ಶ್ರೀ ಅಜಿತ್ ಕುಮಾರ್ ರೈ ಮಾಲಾಡಿ ದೀಪ ಪ್ರಜ್ವಲನೆಗೈಯ್ಯುವರು. ಜಾಗತಿಕ ಬಂಟರ ಒಕ್ಕೂಟಗಳ ಅಧ್ಯಕ್ಷ ಶ್ರೀ ಐಕಳ ಹರೀಶ್ ಶೆಟ್ಟಿ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿ, ಗೌರವಾಧ್ಯಕ್ಷ ವಿಜಯನಾಥ್ ವಿಠ್ಠಲ್ ಶೆಟ್ಟಿಯವರು ಧ್ವಜಾರೋಹನೆ ಮಾಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡುವರು. ಬಂಟರ ಸಂಘ ಬಜಪೆ ವಲಯಾಧ್ಯಕ್ಷ ಶ್ರೀ ಬಾಬು ಶೆಟ್ಟಿ ಪೆರಾರ ಸಭಾಧ್ಯಕ್ಷತೆ ವಹಿಸಿಕೊಳ್ಳುತ್ತಾರೆ.

ಇದೇ ಘನಸಿರಿ ಸಭೆಯಲ್ಲಿ ಥಾಣೆ ಬಂಟ್ಸ್ ಅಸೋಸಿಯೇಷನ್ ಮಾಜಿ ಅಧ್ಯಕ್ಷ ಬಹುಶ್ರುತ ಹೊಟೇಲ್ ಉದ್ಯಮಿ, ಸಮಾಜಮುಖಿ ಸಂಘಟಕ ಶ್ರೀ ವೇಣುಗೋಪಾಲ ಎಲ್ ಶೆಟ್ಟಿ ಅವರ ಪದಗ್ರಹಣ ಸಮಾರಂಭ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಮುಖೇನ ನೂತನ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಳ್ಳುತ್ತಾರೆ. ಸಭೆಯಲ್ಲಿ ಮುಂಬಯಿ, ಪುಣೆ ಸೇರಿದಂತೆ ವಿವಿಧ ನಗರಗಳ ಬಂಟರ ಸಂಘಗಳ ಪದಾಧಿಕಾರಿಗಳ ಸಹಿತ ವಿವಿಧ ಕ್ಷೇತ್ರಗಳ ಗಣ್ಯರು, ಸಾಮಾಜಿಕ ಮುಖಂಡರು ಅತಿಥಿಗಳಾಗಿ ಭಾಗವಹಿಸುವ ಮೂಲಕ ಸಭೆಗೆ ವಿಶೇಷ ಮೆರುಗು ದೊರೆಯಲಿದೆ. ಇದೇ ಸಂದರ್ಭದಲ್ಲಿ ಬಲು ಪ್ರತಿಷ್ಠಿತ ಎಂ.ಆರ್.ಜಿ ಗ್ರೂಪ್ ನ ಸಿಎಂಡಿ ಡಾ| ಪ್ರಕಾಶ್ ಕೆ ಶೆಟ್ಟಿ ಹಾಗೂ ಆಳ್ವಾಸ್ ಎಜುಕೇಶನ್ ಫೌಂಡೇಶನ್ ನ ಅಧ್ಯಕ್ಷ ಡಾ. ಮೋಹನ್ ಆಳ್ವ ಅವರನ್ನು ವಿವಿಧ ಕ್ಷೇತ್ರಗಳ ವಿಶೇಷ ವಿಶಿಷ್ಟ ಸಾಧನೆಯನ್ನು ಗುರುತಿಸಿ ಮಾಜಿ ಲೋಕಾಯುಕ್ತ ಜಸ್ಟಿಸ್ ಎನ್ ಸಂತೋಷ್ ಹೆಗ್ಡೆಯವರು ಸನ್ಮಾನಿಸಲಿದ್ದಾರೆ.


ಸಂಜೆ 4.30 ಕ್ಕೆ ಸಮಾರೋಪ ಸಮಾರಂಭ ನಡೆಯಲಿದ್ದು, ಹೇರಂಭ ಇಂಡಸ್ಟ್ರೀಸ್ ನ ಸಿಎಂಡಿ ಡಾ| ಕನ್ಯಾನ ಸದಾಶಿವ ಶೆಟ್ಟಿಯವರು ದೀಪ ಪ್ರಜ್ವಲಿಸಿ, ಭವಾನಿ ಶಿಪ್ಪಿಂಗ್ ನ ಸಿಎಂಡಿ ಕೆ ಡಿ ಶೆಟ್ಟಿಯವರು ಸಮಾರಂಭವನ್ನು ಉದ್ಘಾಟಿಸಲಿದ್ದಾರೆ. ‘ವಿದ್ಯಾನಿಧಿ’ಯನ್ನು ಶಶಿ ಕೇಟರಿಂಗ್ ಸರ್ವಿಸಸ್ ಪ್ರೈವೇಟ್ ಲಿಮಿಟೆಡ್ ನ ಸಿಎಂಡಿ ಶಶಿಧರ್ ಶೆಟ್ಟಿ ಬರೋಡ ಉದ್ಘಾಟನೆ ಮಾಡಲಿದ್ದಾರೆ. ‘ಆಸರೆ’ ಯೋಜನೆಯ ಫಲಾನುಭವಿಗಳಿಗೆ ಸಹಾಯಹಸ್ತವನ್ನು ಬಂಟರ ಸಂಘ ಮುಂಬಯಿಯ ಅಧ್ಯಕ್ಷ ಪ್ರವೀಣ್ ಭೋಜ ಶೆಟ್ಟಿ ಹಾಗೂ ‘ಹೊಸಬೆಳಕು’ ಯೋಜನೆಯ ಫಲಾನುಭವಿಗಳಿಗೆ ಸಹಾಯಹಸ್ತವನ್ನು ಯು.ಎ.ಇ ಬಂಟರ ಸಂಘದ ಅಧ್ಯಕ್ಷ ವಕ್ವಾಡಿ ಪ್ರವೀಣ್ ಶೆಟ್ಟಿಯವರು ವಿತರಿಸಲಿದ್ದಾರೆ.
ಈ ಅತೀ ಅದ್ದೂರಿಯ ಬಂಟರ ಮಹೋತ್ಸವದಲ್ಲಿ ಬಂಟ ಸಮಾಜ ಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿ ಕೊಡಬೇಕಾಗಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಕಾರ್ಯಕ್ರಮ ಸಮಿತಿ ಪ್ರಮುಖರು ಪತ್ರಿಕಾ ಪ್ರಕಟಣೆ ಮೂಲಕ ವಿನಂತಿಸಿಕೊಂಡಿದ್ದಾರೆ.

















































































































