ದಕ್ಷಿಣ ಕನ್ನಡ ಜಿಲ್ಲಾಡಳಿತ ವತಿಯಿಂದ ನಗರದ ಕರಾವಳಿ ಉತ್ಸವ ಮೈದಾನದಲ್ಲಿ ನಡೆಯುತ್ತಿರುವ ಜಿಲ್ಲಾ ಕರಾವಳಿ ಉತ್ಸವ – 2025 ಅಂಗವಾಗಿ ಡಿಸೆಂಬರ್ 21ರಂದು ದಕ್ಷಿಣೋತ್ತರ ಕನ್ನಡ ಜಿಲ್ಲೆಗಳ ಪ್ರಸಿದ್ಧ ಕಲಾವಿದರಿಂದ ಯಕ್ಷಗಾನ ತಾಳಮದ್ದಳೆ ಜರಗಿತು. ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ ನೇತೃತ್ವದ ಆಕಾಶವಾಣಿ ಮತ್ತು ದೂರದರ್ಶನ ಖ್ಯಾತಿಯ ಕರ್ನಾಟಕ ಯಕ್ಷ ಭಾರತಿ ಪುತ್ತೂರು ತಂಡವು ಕರಾವಳಿ ಉತ್ಸವದ ವಸ್ತು ಪ್ರದರ್ಶನ ವೇದಿಕೆಯಲ್ಲಿ ‘ವೀರಮಣಿ ಕಾಳಗ’ ಪ್ರಸಂಗವನ್ನು ಪ್ರಸ್ತುತಪಡಿಸಿತು. ಯಕ್ಷಗಾನ ರಂಗದ ಪ್ರಮುಖ ಅರ್ಥಧಾರಿಗಳಾದ ಡಾ. ಎಂ. ಪ್ರಭಾಕರ ಜೋಶಿ, ಭಾಸ್ಕರ ರೈ ಕುಕ್ಕುವಳ್ಳಿ, ಜಬ್ಬಾರ್ ಸಮೋ ಸಂಪಾಜೆ ಮತ್ತು ಪ್ರಸಾದ ಪೂಜಾರಿ ಭಟ್ಕಳ ವಿವಿಧ ಪಾತ್ರಗಳನ್ನು ನಿರ್ವಹಿಸಿದರು. ಭಾಗವತ ಹರೀಶ ಶೆಟ್ಟಿ ಸೂಡ ಅವರ ಹಾಡುಗಾರಿಕೆಗೆ ವಿಕಾಸ್ ರಾವ್ ಕೆರೆಕಾಡ್ , ಶ್ರೀಶ ರಾವ್ ನಿಡ್ಲೆ ಮತ್ತು ಕೀರ್ತನ್ ಹಿಮ್ಮೇಳದಲ್ಲಿ ಸಹಕರಿಸಿದರು.

ಜಿಲ್ಲಾಡಳಿತದ ಪರವಾಗಿ ದ.ಕ ಜಿಲ್ಲಾ ಪಂಚಾಯತ್ ಉಪ ಕಾರ್ಯದರ್ಶಿ ಜಯಲಕ್ಷ್ಮಿ ರಾಯಕೋಡ ಅವರು ಕರ್ನಾಟಕ ಯಕ್ಷ ಭಾರತಿಯ ಸಂಚಾಲಕ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿಯವರಿಗೆ ಸ್ಮರಣಿಕೆಯಿತ್ತು ಗೌರವಿಸಿದರು. ಈ ಸಂದರ್ಭದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ರಾಜೇಶ್ ಜಿ., ಕರಾವಳಿ ಉತ್ಸವ ಸಾಂಸ್ಕೃತಿಕ ಸಮಿತಿಯ ಮಂಜುನಾಥ ನಿಸರ್ಗ, ಉಮೇಶ ಕೆ.ಆರ್, ಡಾ. ಮಂಜುಳಾ ಶೆಟ್ಟಿ ಉಪಸ್ಥಿತರಿದ್ದರು. ಡಾ. ಸಂತೋಷ್ ಆಳ್ವ ಸ್ವಾಗತಿಸಿ, ಕಾರ್ಯಕ್ರಮ ನಿರೂಪಿಸಿದರು.

















































































































