ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದ ಪರಮಪೂಜ್ಯ ಶ್ರೀ ಗುರುದೇವಾನಂದ ಸ್ವಾಮೀಜಿಯವರು ಅನುಗ್ರಹ ಸಂದೇಶ ನೀಡುತ್ತಾ, “ಭಗವಂತನನ್ನು ನೆನೆಯುವುದೇ ಜಪ. ಜಪ ಆಧ್ಯಾತ್ಮದ ಜೀವಾಳ. ದತ್ತ ಎಂದರೆ ಕೊಡಲ್ಪಟ್ಟದ್ದು ಎಂದರ್ಥ. ಭಗವಾನ್ ದತ್ತಾತ್ರೇಯರು ವಿಶ್ವವನ್ನೇ ವಿದ್ಯಾಲಯವಾಗಿಸಿದವರು. ಭಗವಂತನ ಅವತಾರ ಸಮರಸ ತತ್ವದ ಅವತಾರ. ದತ್ತಾವತಾರ ಜ್ಞಾನದ ಅವತಾರ. ಅಂತರಂಗದ ಅಂಧಕಾರ ದೂರವಾಗಲು ಜ್ಞಾನದ ಬೆಳಕು ಅವಶ್ಯ. ಧ್ಯಾನ, ಜ್ಞಾನ ಮತ್ತು ಮಾನವನ್ನು ಗೌರವಿಸುವುದು ಶ್ರೇಷ್ಠತೆ. ಮಮಕಾರ ಮತ್ತು ಅಹಂಕಾರವನ್ನು ದೂರಗೊಳಿಸಲು ಜ್ಞಾನ ಸಹಕಾರಿ. ನಮ್ಮೊಳಗಿನ ಅಂತರಂಗದ ಕತ್ತಲೆ ದೂರಮಾಡಲು ದೀಪಾವಳಿಯ ಆಚರಣೆ” ಎಂದರು. ಒಡಿಯೂರು ಶ್ರೀ ಗುರುದೇವದತ್ತ ಸಂಸ್ಥಾನದಲ್ಲಿ ನಡೆದ ಶ್ರೀ ದತ್ತ ಜಯಂತಿ ಮಹೋತ್ಸವ, ಶ್ರೀ ದತ್ತ ಮಹಾಯಾಗ ಸಪ್ತಾಹ, ಶ್ರೀ ದತ್ತ ಕೋಟಿ ನಾಮಜಪಯಜ್ಞದ ಸಮಾಪ್ತಿ ಹಾಗೂ ಶ್ರೀ ಗುರುದೇವದತ್ತ ಲಕ್ಷದೀಪಾವಳಿಯ ಸಮಾರಂಭದಲ್ಲಿ ದಿವ್ಯ ಉಪಸ್ಥಿತಿ ನೀಡಿ ಆಶೀರ್ವಚನವಿತ್ತ ಪೂಜ್ಯ ಶ್ರೀಗಳವರು, “ಸಮಾಜದ ಹಿತ ಕಾಪಾಡುವವರು ಸಂತರು. ಸಂತ ಮತ್ತು ಸಮಾಜ ಬದುಕಿನ ಎರಡು ಮುಖಗಳಿದ್ದಂತೆ. ವಿಶ್ವವನ್ನೇ ತನ್ನದೆನ್ನುವವನು ಗುರು. ತ್ಯಾಗ ಮನೋಭಾವ ಎಲ್ಲರಲ್ಲಿರಬೇಕು. ಬದುಕಿನಲ್ಲಿ ಇತಿಮಿತಿಯ ಇಷ್ಟವನ್ನಿಡಬೇಕು. ನಾವು ನಮ್ಮನ್ನು ಸಾತ್ವಿಕತೆಯಲ್ಲಿ ತೊಡಗಿಸಿಕೊಂಡಾಗ ಆರೋಗ್ಯಪೂರ್ಣ ಜೀವನ ನಮ್ಮದಾಗುತ್ತದೆ. ಅಧಿಕಾರ ಕರ್ತವ್ಯವಾದಾಗ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಭ್ರಷ್ಟಾಚಾರ ರಹಿತವಾದಾಗ ಭಾರತ ದೇಶವು ಸದೃಢವಾಗುವುದು” ಎಂದು ಹೇಳಿದರು.

ಶ್ರೀಧಾಮ ಮಾಣಿಲ ಶ್ರೀ ದುರ್ಗಾಮಹಾಲಕ್ಷ್ಮೀ ಕ್ಷೇತ್ರದ ಪರಮಪೂಜ್ಯ ಶ್ರೀ ಶ್ರೀ ಮೋಹನದಾಸ ಪರಮಹಂಸ ಸ್ವಾಮೀಜಿಯವರು ಆಶೀರ್ವಚನ ನೀಡಿ, “ಭಕ್ತರನ್ನು ಬಹಳ ಎತ್ತರಕ್ಕೆ ಏರಿಸಿದ ಕ್ಷೇತ್ರ ಒಡಿಯೂರು. ಶ್ರೀಗಳ ಹೃದಯ ಶ್ರೀಮಂತಿಕೆ ಅಪಾರ. ವಿದ್ಯಾಪೀಠದ ಮೂಲಕ ಸಂಸ್ಕಾರದ ಮೌಲ್ಯಗಳನ್ನು ಸಮಾಜಕ್ಕೆ ನೀಡುವ ಕೆಲಸವಾಗುತ್ತಿದೆ. ಕಲಿಯುಗದಲ್ಲಿ ಜಪ ಯಜ್ಞ ಅತೀ ಅಗತ್ಯ. ಪ್ರತೀ ಮನೆಗಳಲ್ಲಿ ಜಪ ಯಜ್ಞಗಳು ನಡೆಯಬೇಕು. ವಿಶ್ವಶಾಂತಿಯನ್ನು ಸಾರುವ ಕ್ಷೇತ್ರ ಇದಾಗಲಿ” ಎಂದರು.
ಸಾಧ್ವೀ ಶ್ರೀ ಶ್ರೀ ಮಾತಾನಂದಮಯೀಯವರು ಆಶೀರ್ವಚನ ನೀಡಿ, “ಶ್ರೀಗಳ ದೃಢ ಸಂಕಲ್ಪ ಕ್ಷೇತ್ರದ ಬೆಳವಣಿಗೆಗೆ ಪೂರಕ. ಗುರು ಸಂಕಲ್ಪದಂತೆ ಜ್ಞಾನ ಯಜ್ಞ, ದತ್ತ ಯಜ್ಞ, ಜಪ ಯಜ್ಞ ಇಲ್ಲಿ ಸಾಕಾರವಾಗಿದೆ. ನಮ್ಮ ಉದ್ಧಾರ ನಮ್ಮಿಂದಲೇ ಸಾಧ್ಯ” ಎಂದರು.ವೇದಿಕೆಯಲ್ಲಿ ಮುಂಬೈನ ಉದ್ಯಮಿ ವಾಮಯ್ಯ ಬಿ. ಶೆಟ್ಟಿ, ಕರ್ನಾಟಕ ತುಳು ಅಕಾಡೆಮಿ ಮಾಜಿ ಅಧ್ಯಕ್ಷ ಎ.ಸಿ. ಭಂಡಾರಿ, ಒಡಿಯೂರು ಗುರುದೇವ ಸೇವಾ ಬಳಗ ಮುಂಬೈ ಘಟಕದ ಅಧ್ಯಕ್ಷ ದಾಮೋದರ ಎಸ್. ಶೆಟ್ಟಿ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ಕೆ. ಶೆಟ್ಟಿ ಪೇಟೆಮನೆ, ದಾವಣಗೆರೆ ಘಟಕದ ಅಧ್ಯಕ್ಷ ನ್ಯಾಯವಾದಿ ಹನುಮಂತಪ್ಪ, ಒಡಿಯೂರು ಶ್ರೀ ವಜ್ರಮಾತಾ ಮಹಿಳಾ ವಿಕಾಸ ಕೇಂದ್ರ ಮುಂಬಯಿ ಘಟಕದ ಅಧ್ಯಕ್ಷೆ ಶ್ರೀಮತಿ ಶ್ವೇತಾ ಚಂದ್ರಹಾಸ ರೈ, ಪುಣೆ ಘಟಕದ ಅಧ್ಯಕ್ಷೆ ಶ್ರೀಮತಿ ಜಯಲಕ್ಷ್ಮೀ ಪಿ. ಶೆಟ್ಟಿ, ಮುಂಬಯಿ ಯುವ ಸೇವಾ ಬಳಗದ ಅಧ್ಯಕ್ಷ ಡಾ. ಅದಿಪ್ ಶೆಟ್ಟಿ, ಕೇರಳ ಸರಕಾರದ ಸಾರಿಗೆ ಇಲಾಖೆಯ ವೆಹಿಕಲ್ ಇನ್ಸ್ಪೆಕ್ಟರ್ ಅಜಿತ್ಕುಮಾರ್ ಪಂದಳಂ, ಶ್ರೀ ದತ್ತ ಕೋಟಿ ನಾಮಜಪಯಜ್ಞ ಸಮಿತಿಯ ಅಧ್ಯಕ್ಷ ಸಹಕಾರ ರತ್ನ ಲ| ಎ. ಸುರೇಶ್ ರೈ ಮೊದಲಾದವರು ಉಪಸ್ಥಿತರಿದ್ದರು.
ಒಡಿಯೂರು ತುಳುಕೂಟ ಅಧ್ಯಕ್ಷ ಯಶವಂತ ವಿಟ್ಲ ಸ್ವಾಗತಿಸಿದರು. ಸಮಿತಿಯ ಪ್ರಧಾನ ಕಾರ್ಯದರ್ಶಿ ಮಾತೇಶ್ ಭಂಡಾರಿ ಕಾರ್ಯಕ್ರಮ ನಿರೂಪಿಸಿದರು. ಕಾರ್ಯದರ್ಶಿ ಸಂತೋಷ್ ಭಂಡಾರಿ ವಂದಿಸಿದರು.ವೈದಿಕ ಕಾರ್ಯಕ್ರಮಗಳು ಬೆಳಗ್ಗೆ ನಿತ್ಯಪೂಜೆ, ನಾಗತಂಬಿಲ, ಶ್ರೀ ದತ್ತಮಾಲಾಧಾರಿಗಳಿಂದ ನಾಮಸಂಕೀರ್ತನಾ ಶೋಭಾಯಾತ್ರೆ, ವೇದ ಮತ್ತು ಶ್ರೀ ಗುರುಚರಿತ್ರೆ ಪಾರಾಯಣ ಸಮಾಪ್ತಿ, ಶ್ರೀ ದತ್ತ ಮಹಾಯಾಗದ ಪೂರ್ಣಾಹುತಿ, ಕಲೋಕ್ತ ಪೂಜೆ, ಮಹಾಪೂಜೆ, ಸಂಪ್ರದಾಯದಂತೆ ಮಧುಕರೀ, ಮಂತ್ರಾಕ್ಷತೆ ಹಾಗೂ ಮಹಾಸಂತರ್ಪಣೆ ಜರುಗಿತು. ಸಾಯಂಕಾಲ ಪ್ರಥಮ ಬಾರಿಗೆ ಐತಿಹಾಸಿಕ ಶ್ರೀ ಗುರುದೇವದತ್ತ ಲಕ್ಷ ದೀಪಾವಳಿ ಸಂಪನ್ನಗೊಂಡಿತು. ರಾತ್ರಿ ರಂಗಪೂಜೆ, ಬೆಳ್ಳಿರಥೋತ್ಸವ ಮತ್ತು ಉಯ್ಯಾಲೆ ಸೇವೆಗಳು ನಡೆದವು. ಈ ಸಂದರ್ಭದಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಪಾಲ್ಗೊಂಡ ಊರ ಪರವೂರ ಭಕ್ತರು ಲಕ್ಷ ದೀಪೋತ್ಸವವನ್ನು ಕಣ್ತುಂಬಿಕೊಂಡರು.

















































































































