ಯಕ್ಷಗಾನದಲ್ಲಿ ವಿಶೇಷ ಆಸಕ್ತಿ ಹೊಂದಿದ್ದ ದಾಮೋದರ ನಿಸರ್ಗರು ತಮ್ಮ ತಂದೆಯ ಹೆಸರಿನಲ್ಲಿ ನಡೆಸುತ್ತಿದ್ದ ಬೋಳೂರು ದೋಗ್ರ ಪೂಜಾರಿ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಪ್ರತಿವರ್ಷ ತಾಳಮದ್ದಳೆ ನಡೆಸುತ್ತಿದ್ದರು. ಅಲ್ಲದೆ ತುಳುಕೂಟದ ಆಶ್ರಯದಲ್ಲಿ ತುಳು ಸಂಸ್ಕೃತಿಗೆ ಸಂಬಂಧಿಸಿ ನೂರಾರು ಕಾರ್ಯಕ್ರಮಗಳನ್ನು ಆಯೋಜಿಸಿದ್ದರು. ಇದೀಗ ತುಳು ಕೂಟವು ಗರೋಡಿಯ ಬ್ರಹ್ಮ ಬೈದ್ಯರ್ಕಳ ಪುಣ್ಯಸ್ಥಳದಲ್ಲಿ ನಿಸರ್ಗರ ನೆನಪಿನ ಸಪ್ತಾಹ ನಡೆಸುತ್ತಿರುವುದು ಒಂದು ಸಾರ್ಥಕ ಸಂಸ್ಮರಣೆಯೆನಿಸಿದೆ ಎಂದು ಹಿರಿಯ ವಿದ್ವಾಂಸರಾದ ಡಾ| ಎಂ. ಪ್ರಭಾಕರ ಜೋಷಿ ಹೇಳಿದರು. ಕುಡ್ಲ ತುಳುಕೂಟವು ದಿ| ದಾಮೋದರ ನಿಸರ್ಗರ ಸ್ಮರಣಾರ್ಥ ಕಂಕನಾಡಿ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ನಡೆಸುತ್ತಿರುವ ‘ತುಳು ತಾಳಮದ್ದೊಲಿ’ ಸಪ್ತಾಹ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಅವರು ಮಾತನಾಡಿದರು. ಇದೇ ಸಂದರ್ಭದಲ್ಲಿ ಖ್ಯಾತ ಅರ್ಥಧಾರಿ ಜಬ್ಬಾರ್ ಸಮೋ ಅವರನ್ನು ತುಳುಕೂಟದ ಅಧ್ಯಕ್ಷೆ ಹೇಮಾ ದಾಮೋದರ ನಿಸರ್ಗ ಶಾಲು, ಸ್ಮರಣಿಕೆ ನೀಡಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಯಕ್ಷಗಾನ ಅರ್ಥಧಾರಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ, ನಾಗೇಶ ದೇವಾಡಿಗ, ಮಧುಸೂದನ ಅಲೆವೂರಾಯ, ಶಶಿಧರ ಪೊಯ್ಯತ್ತಬೈಲ್, ನ್ಯಾಯವಾದಿ ಗೋಪಾಲಕೃಷ್ಣ ಭಟ್ ಗುತ್ತಿಗಾರ್ ಉಪಸ್ಥಿತರಿದ್ದರು. ತುಳುಕೂಟದ ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂರಾಯ ಸ್ವಾಗತಿಸಿ, ವಂದಿಸಿದರು. ಸಪ್ತಾಹದ ಅಂಗವಾಗಿ ಸರಯೂ ಯಕ್ಷಗಾನ ಮಂಡಳಿ ವತಿಯಿಂದ ‘ಕಾನದ ಕೌಶಿಕೆ’ ತುಳು ಯಕ್ಷಗಾನ ತಾಳಮದ್ದಳೆ ಜರಗಿತು. ಅತಿಥಿ ಕಲಾವಿದರಾಗಿ ಪ್ರೊ. ಭಾಸ್ಕರ ರೈ ಕುಕ್ಕುವಳ್ಳಿ (ಶ್ರೀ ದೇವಿ) ಮತ್ತು ಜಬ್ಬಾರ್ ಸಮೋ ಸಂಪಾಜೆ (ಶುಂಭ) ಪ್ರಧಾನ ಅರ್ಥಧಾರಿಗಳಾಗಿ ಪಾಲ್ಗೊಂಡರು. ಗೋಪಾಲಕೃಷ್ಣ ಭಟ್ ಗುತ್ತಿಗಾರ್ ಮತ್ತು ತಂಡದವರು ಹಿಮ್ಮೇಳದಲ್ಲಿ ಸಹಕರಿಸಿದರು.
















































































































